Saturday, October 17, 2020

ನಾವು ನಿಜವಾಗಲೂ ಸ್ವತಂತ್ರರೇ ? ( Navu Nijavagalu Svatantrare?)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)




ಒಂದು ಕಪಿಗಳ ಗುಂಪು, ಹಳ್ಳಿಯ ಪಕ್ಕದಲ್ಲಿದ್ದ ಕಾಡಿನಂಚಿನಲ್ಲಿ ವಾಸವಾಗಿತ್ತು. ಅಲ್ಲಿಗೆ ದೇವಸ್ಥಾನವನ್ನು ಕಟ್ಟಲು ಜನರ ಗುಂಪೊಂದು ಸೇರಿತು. ಹಿರಿಯ ಕಪಿಯು, "ಅವರಿಗೆ ತೊಂದರೆ ಕೊಡಬೇಡಿ. ಮುಂದೆ ದೇವರಿಗೆ ಸಮರ್ಪಿಸುವ ಸಿಹಿ ತಿಂಡಿಗಳು ನಮಗೆ ಸಿಗುತ್ತವೆ" ಎಂದಿತು. ಕಪಿಗಳೂ ಒಪ್ಪಿದವು. ಆದರೆ ತುಂಟ ಕಪಿಯೊಂದು, ಹಿರಿಯ ಕಪಿಯ ಮಾತನ್ನು ಕೇಳದೆ, ತನ್ನಿಚ್ಛೆಯಂತೆ ದೇವಸ್ಥಾನವನ್ನು ಕಟ್ಟುವ ಸಲಕರಣೆಗಳು ಮತ್ತು ಹಲಗೆಗಳನ್ನು ಕಪಿಬುದ್ಧಿಯಿಂದ ಅಲುಗಾಡಿಸಲು ಆರಂಭಿಸಿತು. ಆಧಾರಕ್ಕಾಗಿ ನೀಡಿದ್ದ ಹಲಗೆಯೊಂದನ್ನು ಅಲುಗಾಡಿಸಿದಾಗ, ಗೋಡೆಯೊಂದು ಕುಸಿದು, ದೇಹ ನುಜ್ಜುಗುಜ್ಜಾಗಿ, ಕೋತಿ ಸಾವನ್ನಪ್ಪಿತು.

ಇಂದು ನಾವು ಬ್ರಿಟಿಷರಿಂದ ಸ್ವತಂತ್ರರು. ಪ್ರತಿಯೊಬ್ಬರಿಗೂ ತನ್ನಿಚ್ಛೆಯಂತೆ ಬದುಕಲು ಮುಕ್ತ ಅವಕಾಶವಿದೆ.  ಆದರೆ ನಿಜವಾಗಲೂ ನಾವು ಸ್ವತಂತ್ರರೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಒಳಿತು.  ಮೇಲಿನ ಕಥೆಯನ್ನು ಅವಲೋಕಿಸಿದರೆ, ಕಪಿಗೆ ತುಂಟತನದ ಸ್ವಾತಂತ್ರ್ಯವಿತ್ತು. ಎಲ್ಲರಿಗೂ ಹಿತವನ್ನುಂಟು ಮಾಡುವಂತಹ ಹಿರಿಯ ಕಪಿಯ ವಿವೇಕದ ಮಾತನ್ನು ಮೀರಿ ತನ್ನ ತುಂಟತನದ ಸ್ವಾತಂತ್ರ್ಯದ ಬಳಕೆಯಿಂದಾಗಿ  ಪ್ರಾಣ ಕಳೆದುಕೊಂಡಿತು.  ಅಂತೆಯೇ ಇಂದು, ಸ್ವಾತಂತ್ರ್ಯವಿದೆಯೆಂದು,ಲೈಸೆನ್ಸ್ ಇಲ್ಲದೆ ಅಥವಾ  ಭಾರತದ ರಸ್ತೆಗಳ  ಬಲಭಾಗದಲ್ಲಿ ವಾಹನ ಚಾಲನೆ ಮಾಡಬಹುದೇ? ಈಗಿನ ದಿನಗಳಲ್ಲಿ ಮಾಸ್ಕ್ ಧರಿಸದೇ ನಮ್ಮಿಚ್ಛೆಯಂತೆ ಓಡಾಟ ಮಾಡಬಹುದೇ? ಇಲ್ಲ! ದಂಡನಾರ್ಹ ಅಪರಾಧಗಳಿವು. ಹಾಗಾದರೆ ಸ್ವಾತಂತ್ರ್ಯಕ್ಕೇನು ಅರ್ಥವೆಂದೆನಿಸುವುದು ಸಹಜ.

ಸ್ವ-ತಂತ್ರಕ್ಕೆ ಕಟ್ಟುಪಾಡುಗಳು ಇಲ್ಲದಿಲ್ಲ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು, ತಿಳಿದವರು ಹಾಕಿದ ಕಟ್ಟುಪಾಡಿನ ಚೌಕಟ್ಟಿನೊಳಗೆ ಸ್ವಾತಂತ್ರ್ಯವನ್ನು ಬಳಸುವುದು ಲೇಸು. ಅಂತಹ ಚೌಕಟ್ಟನ್ನು ಹೇಳುವ ಭಾರತ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಅದರಲ್ಲಿ ಮೂಲಭೂತ ಹಕ್ಕುಗಳಲ್ಲಿಯೇ ಸ್ವಾತಂತ್ರ್ಯವೆಂಬುದನ್ನು ಸೇರಿಸಿದ್ದರೂ, ಸಂವಿಧಾನವನ್ನು ಮೀರಿ ನಡೆದಾಗ ಶಿಕ್ಷೆಯಿದೆ.

ಇನ್ನು ಬೆಳಗ್ಗೆ ಎದ್ದು ಹಲ್ಲುಜ್ಜಬೇಕು, ಕಸವನ್ನು ಬಾಯಿಗೆ ಹಾಕಬಾರದೆಂಬ ನಿಯಮಗಳು ಸಂವಿಧಾನದಲ್ಲಿವೆಯೇ? ಭಾರತದ ಸಂವಿಧಾನದಲ್ಲಿಲ್ಲದಿದ್ದರೂ ಇಂತಹ ಅನೇಕ ಕಟ್ಟುಪಾಡುಗಳು ಪ್ರಕೃತಿಮಾತೆಯ ಸಂವಿಧಾನದಲ್ಲಿರುವ ಕಾರಣ, ಆ ನಿಯಮಗಳಿಗೆ ಬದ್ಧರಾಗಿರಬೇಕು. ಅಂತೆಯೇ ನಮ್ಮೊಳಗೆ ಆತ್ಮಸಾಮ್ರಾಜ್ಯದ ಸಂವಿಧಾನವೂ ಒಂದಿದೆ. ಬೀಜದಿಂದ ಹೊರಟು, ಕಾಂಡ, ಶಾಖೆ, ಪುಷ್ಪ, ಕಾಯಿ, ಹಣ್ಣಾಗಿ ಮುಂದೆ ಬೀಜದಲ್ಲಿ ಬಂದು ನಿಂತಾಗ, ವೃಕ್ಷಕ್ಕೆ ಒಂದು ಸಾರ್ಥಕತೆ; ಪರಿಪೂರ್ಣವೆಂಬ ಭಾವ. ಹಾಗೆಯೇ ನಮ್ಮ ಜೀವ, ಪ್ರಕೃತಿಯಲ್ಲಿ ಹುಟ್ಟಿ ಬೆಳೆದರೂ ತನ್ನೊಳಗಿನ ಆತ್ಮಾನಂದವೆಂಬ ಫಲವನ್ನು ಅನುಭವಿಸಿದರೆ ಜೀವನ ಪರಿಪೂರ್ಣವೆನಿಸುತ್ತದೆ. ಅದನ್ನು ಪಡೆಯಬೇಕಾದರೆ, ಆತ್ಮರಾಜ್ಯದ ಸಂವಿಧಾನವನ್ನು ಮೀರದೆ ಸ್ವಾತಂತ್ರ್ಯವನ್ನು ಬಳಸಬೇಕು. ಸಮಾಜ, ರಾಷ್ಟ, ಪ್ರಕೃತಿ ಮತ್ತು ಆತ್ಮ ಹಿತಗಳನ್ನೂ ಗಮನದಲ್ಲಿಟ್ಟುಕೊಂಡು ರಚಿಸಿದ ಸಂವಿಧಾನವೇ ಭಾರತ ಮಹರ್ಷಿಗಳು ತಂದುಕೊಟ್ಟ ಶಾಸ್ತ್ರ-ಸಂಪ್ರದಾಯಗಳು.    

೧೮ ವರ್ಷ ತುಂಬಿದ ಕೂಡಲೆ ಮತದಾನದ ಹಕ್ಕು ಬರುವಂತೆ ಭಗವತ್ಸಾಕ್ಷಾತ್ಕಾರವು ಪ್ರತಿಯೊಬ್ಬ ಮಾನವನಿಗೂ ಜನ್ಮಸಿದ್ಧ ಹಕ್ಕೆಂಬುದು ಶ್ರೀರಂಗಮಹಾಗುರುಗಳ ಅಭಿಪ್ರಾಯವಾಗಿತ್ತು. ಈ ಹಕ್ಕನ್ನು ನಮ್ಮದಾಗಿಸಿಕೊಂಡು ಆ ಪರಮ ಸುಖವನ್ನು ಪಡೆಯಲು, ಆತ್ಮಸಂವಿಧಾನದ ಚೌಕಟ್ಟಿನೊಳಗೆ ವೀರಯೋಧರಂತೆ ವರ್ತಿಸಬೇಕಾಗಿದೆ.  ಭಗವಂತನ ಕರುಣೆಯಿಂದ ಆತ್ಮರಾಜ್ಯದ ಸಂವಿಧಾನಕ್ಕೆ ಒಳಪಟ್ಟು, ಆತ್ಮಸುಖದ ಸ್ವಾತಂತ್ರ್ಯವು ನಮಗೂ ಒಲಿಯಲಿ ಎಂದು ಪ್ರಾರ್ಥಿಸೋಣ.

ಸೂಚನೆ: 17/10/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.