ನಾವು ತಿಳಿಯಬೇಕಾದ ಎಂಟನೆಯ ಮತ್ತು ಕೊನೆಯ ಆತ್ಮಗುಣ ಅಸ್ಪೃಹಾ. ಸ್ಪೃಹಾ ಎಂದರೆ ಇಚ್ಛೆ, ಆಸೆ, ಆಕಾಂಕ್ಷೆ, ಕಾಮನೆ, ಬಯಕೆ. ಇಚ್ಛೆ ಪಡದಿರುವುದು 'ಅಸ್ಪೃಹಾ' ಎಂದಾಗುತ್ತದೆ. ಇಚ್ಛೆ ಪಡಬಾರದು ಎಂದರೇನು? 'ಬೇಕು' ಎಂದು ಬಯಸುವುದು ತಪ್ಪೇ? ಯಾವುದನ್ನೂ ಬಯಸದೇ ಇರಲು ಹೇಗೆ ಸಾಧ್ಯ? ನಾವು ಯಾವುದೇ ಕಾರ್ಯದಲ್ಲಿ ತೊಡಗಲು ಮೊದಲು ಆ ಕಾರ್ಯವನ್ನು ಇಷ್ಟಪಡಬೇಕು. ಹಾಗೆಯೇ ಜ್ಞಾನ ಮತ್ತು ಇಚ್ಛೆಗೆ ಅನುಗುಣವಾದ ಕಾರ್ಯವನ್ನು ಮಾಡಿದಾಗ ಆ ಕ್ರಿಯೆಯು ಒಳ್ಳೆಯ ಪರಿಣಾಮವನ್ನು ಕೊಡುತ್ತದೆ. ಹೀಗೆ ಒಂದು ಕಾರ್ಯವನ್ನು ಮಾಡಲು ಬೇಕಾದ ಇಚ್ಛೆಯನ್ನು ಎಲ್ಲೂ ಬೇಡವೆಂದು ಹೇಳಿಲ್ಲ. ಹಾಗಾದರೆ ಯಾವ ಆಸೆ ಬೇಡವೆಂದಿದ್ದಾರೆ?
ನಮ್ಮ ಜೀವನವು ಧರ್ಮಾರ್ಥಕಾಮಮೋಕ್ಷ ಎಂಬ ಪುರುಷಾರ್ಥದಿಂದ ಕೂಡಿರಬೇಕು. ಇಲ್ಲೊಂದು ಕಾಮ(ಸ್ಪೃಹಾ)ವನ್ನು ಹೇಳಿದ್ದಾರೆ. ಶ್ರೀರಂಗ ಮಹಾಗುರುಗಳು ಹೀಗೆ ಹೇಳುತ್ತಿದ್ದರು – " ಪುರುಷಾರ್ಥದಲ್ಲಿ ಬರುವ ಕಾಮ ಪೂಜ್ಯ, ಅರಿಷಡ್ವರ್ಗದಲ್ಲಿ ಬರುವ ಕಾಮ ತ್ಯಾಜ್ಯ" ಎಂದು. ಯಾವ ಇಚ್ಛೆಯು ಧರ್ಮದ ಚೌಕಟ್ಟಿನಲ್ಲಿ ಬರುವುದೋ ಅದು ಮಾತ್ರ ಒಳ್ಳೆಯದು. ಅದಕ್ಕೆ ವಿರುದ್ಧವಾದುದು ಕೆಟ್ಟದ್ದು ಎಂದು ಪರಿಗಣಿಸಬಹುದು. ಯಾವ ಕಾಮನೆಯು ನಮ್ಮ ಆರೋಗ್ಯವನ್ನು ಚೆನ್ನಾಗಿಡುವುದೋ ಅದು ಅಸ್ಪೃಹವೇ. ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ನಮಗೆ ಒಂದಿಷ್ಟು ಸಾಮಗ್ರಿಗಳು ಬೇಕು. ಒಬ್ಬನು ಸಾಮಾನ್ಯ ಮಟ್ಟದಲ್ಲಿ ಜೀವನ ನಡೆಸಬೇಕಾದರೆ ಯಾವುದೆಲ್ಲವನ್ನು ಆತ ಬಯಸುತ್ತಾನೋ ಅವುಗಳನ್ನು ಅಸ್ಪೃಹಾ ಎಂದೇ ಪರಿಗಣಿಸಬೇಕಾಗುತ್ತದೆ. ಅದಕ್ಕಿಂತಲೂ ಮೀರಿದ ವಸ್ತುಗಳ ಬಯಕೆಯನ್ನು ಸ್ಪೃಹಾ ಎನ್ನಬಹುದು. ನಮ್ಮ ಋಷಿಗಳು ಹೇಳಿರುವುದು- "ಧರ್ಮಾವಿರೋಧೇನ ಅರ್ಥಕಾಮೌ ಸೇವೇತ, ನ ನಿಃಸುಖಃ ಸ್ಯಾತ್" ಎಂದು. ಈ ಶರೀರವನ್ನು 'ಯೋಗಭೋಗಾಯತನ' ಎಂದು ಕರೆದಿದ್ದಾರೆ. ಯೋಗಕ್ಕೆ ಅವಿರೋಧವಾದ ಭೋಗ, ಸಮ್ಮತವೇ ಆಗಿದೆ.
ನಮ್ಮ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಬಯಸುವುದರಿಂದ ಅನರ್ಥಗಳು ಉಂಟಾಗುವುವು. ಯಾವುದು ಅಯಾಚಿತವಾಗಿ ಸಿಗುವುದೋ ಅದನ್ನು ಸಂತೋಷವಾಗಿ ಸ್ವೀಕರಿಸಬೇಕು. 'ಯದೃಚ್ಛಾಲಾಭಸಂತುಷ್ಟಃ' ಎಂದು ಗೀತಾಚಾರ್ಯನು ಹೇಳುವಂತೆ 'ನಮಗೆ ಪ್ರಾಮಾಣಿಕವಾಗಿ ಎಷ್ಟು ಸಿಕ್ಕಿದೆಯೋ ಅದರಲ್ಲಿ ತೃಪ್ತಿಯನ್ನು ಕಾಣಬೇಕು'. ಶ್ರೀಶಂಕರ ಭಗವತ್ಪಾದರು ಅಪ್ಪಣೆ ಕೊಡಿಸಿದಂತೆ "ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್" ನಾವು ಮಾಡಿದ ಕರ್ಮದಿಂದ ಯಾವ ಹಣವು ಲಭಿಸುವುದೋ ಅದರಲ್ಲೇ ಸಂತೋಷವನ್ನು ಪಡಬೇಕು. "ನಮ್ಮ ಕಾಮನೆಗಳು ಪೂರ್ಣವಾಗದಿದ್ದಾಗ ಸಿಟ್ಟು ಬರುತ್ತದೆ. ಸಿಟ್ಟು ಬಂದಾಗ ನಾವು ನಮ್ಮ ಬುದ್ಧಿಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತೇವೆ. ವಿಚಾರಮೂಢತೆಯಿಂದ ಸ್ಮರಣಶಕ್ತಿಯೂ ನಷ್ಟವಾಗುತ್ತದೆ. ಸ್ಮೃತಿಶಕ್ತಿ ನಾಶವಾದಮೇಲೆ ಜ್ಞಾನಶಕ್ತಿಯೂ ಕ್ಷೀಣಿಸುತ್ತದೆ. ಯಾವಾಗ ಬುದ್ಧಿಶಕ್ತಿ ನಾಶವಾಗುವುದೋ ಆಗ ಮನುಷ್ಯನ ಪತನ ನಿಶ್ಚಿತ" ಎಂದು ಕಾಮದ ದುಷ್ಪರಿಣಾಮವನ್ನು ಗೀತಾಚಾರ್ಯನಾದ ಶ್ರೀಕೃಷ್ಣನು ಸುಂದರವಾಗಿ ವಿವರಿಸಿದ್ದಾನೆ. ಅತಿಯಾದ ಕಾಮವಿಲ್ಲದೆ ಮಿತವಾದ ಕಾಮನೆಯಿಂದ, ನೆಮ್ಮದಿಯಿಂದ ಇರಲು ಸಾಧ್ಯ. ನಾವು ನಮ್ಮ ಪರಿಮಿತಿಯನ್ನು ಮೀರಿ ಎಷ್ಟೆಷ್ಟು ಪದಾರ್ಥಗಳನ್ನು ಬಯಸುತ್ತೇವೋ ಅಷ್ಟಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಪದಾರ್ಥಗಳ ಮೇಲಿನ ಅಂಟನ್ನು ಬಿಡುವುದೇ 'ಅಸ್ಪೃಹಾ'. ಪುಟ್ಟ ಮಗುವಿಗೆ ಸುಖನಿದ್ದೆ ಬರಲು ಕಾರಣ ವಿಷಯಾಸಕ್ತಿವಿಲ್ಲದಿರುವುದು ತಾನೇ! ಅದೇ ಮಗು ಬೆಳೆಯುತ್ತಾ ಬೆಳೆಯುತ್ತಾ ಪ್ರಾಪಂಚಿಕ ವಿಷಯಾಸಕ್ತಿಯನ್ನು ಬೆಳೆಸಿಕೊಂಡಂತೆ ಸುಖನಿದ್ದೆಯನ್ನು ಕಳೆದುಕೊಳ್ಳುವುದು. ಆತ್ಮಸುಖಕ್ಕೆ ಕಾಮನೆಗಳ ಮೇಲಿನ ಅಂಟನ್ನು ಬಿಡುವುದೇ ಉತ್ತಮಮಾರ್ಗ. ಅದೇ ಅಸ್ಪೃಹಾ..
ಸೂಚನೆ: 10/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.