Monday, October 26, 2020

ಯೋಗವು ಭಾರತೀಯ ಸಂಸ್ಕೃತಿಯ ಬೆನ್ನೆಲುಬು ( Yogavu Bharatiya Sanskrtiya Bennelubu )

  ಲೇಖಕರು: ಶ್ರೀ ಜಿ. ನಾಗರಾಜ. 

 (ಪ್ರತಿಕ್ರಿಯಿಸಿರಿ lekhana@ayvm.in)


ಯೋಗವೆಂದು ಪ್ರಸಿದ್ಧವಾಗಿರುವ ಅಷ್ಟಾಂಗಯೋಗವು ಭಾರತೀಯ ಸಂಸ್ಕೃತಿಯ ಅಂಗವೆನ್ನುವುದು ಇಂದಿನ ಜನಾಭಿಪ್ರಾಯವಾಗಿದೆ. ಆದರೆ, ಒಳಹೊಕ್ಕು ನೋಡಿದರೆ, ಯೋಗವು ಭಾರತೀಯ ಸಂಸ್ಕೃತಿಯ ಅಂಗವಷ್ಟೇ ಅಲ್ಲಾ, ಜೀವಾಳವಾಗಿದೆ, ಬೆನ್ನೆಲುಬಾಗಿದೆ ಎನ್ನುವುದನ್ನು ಶ್ರೀರಂಗಮಹಾಗುರುಗಳು ಎತ್ತಿ ತೋರಿಸಿಕೊಟ್ಟಿದ್ದಾರೆ. ಯೋಗದ ಅಂಗಗಳಾವುವು ಮತ್ತು ಅವು ಹೇಗೆ ಜೀವನದಲ್ಲಿ ಹಾಸುಹೊಕ್ಕಾಗಿ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸೂತ್ರಗಳಿಂದ ಕೂಡಿದೆಯೆಂಬುದನ್ನು ವಿವರಿಸುವುದು ಈ ಲೇಖನ ಮಾಲೆಯ ಉದ್ದೇಶ.

ಮೊದಲನೆಯದಾಗಿ ಅಷ್ಟಾಂಗಯೋಗದ ಒಟ್ಟಾರೆ ನೋಟವನ್ನು ಗಮನಿಸೋಣ. ಅಷ್ಟಾಂಗ ಯೋಗವೆಂದರೆ, ಎಂಟು ಅಂಗಗಳುಳ್ಳ ಯೋಗ ಎಂದರ್ಥ. ಈ ಎಂಟು ಅಂಗಗಳಾವುವೆಂದರೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಪತಂಜಲಿ ಮಹರ್ಷಿಗಳ ಯೋಗಸೂತ್ರದ ಪ್ರಕಾರ ಈ ಅಂಗಗಳ ವಿವರಗಳನ್ನು ಈಗ ಗಮನಿಸೋಣ.

"ಯಮ"ವು ಮೊದಲನೆಯ ಅಂಗವಾಗಿರುತ್ತದೆ. ಯಮ ಎಂದರೆ ಸಂಯಮ ಅಥವಾ ಹತೋಟಿಯಲ್ಲಿಟ್ಟುಕೊಳ್ಳುವಿಕೆ ಎಂದರ್ಥ. ನಮ್ಮ ದೇಹ, ಮನಸ್ಸು, ಬುದ್ಧಿಗಳಲ್ಲಿ ವೇಗಗಳಿದ್ದು ಅದು ಯೋಗ ಸಾಧನೆಗೂ ಮತ್ತು ಏಕಾಗ್ರಚಿತ್ತರಾಗಿ ಮಾಡಬೇಕಾದ ಲೌಕಿಕ ಕೆಲಸಗಳಿಗೂ ತೊಡಕನ್ನುಂಟುಮಾಡುತ್ತಿರುತ್ತದೆ. ಈ ವೇಗವನ್ನು ನಿಯಂತ್ರಿಸಲು ಇರುವ ಉಪಾಯಗಳಾದ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹಗಳೇ ಯಮ.

ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನಗಳೇ "ನಿಯಮ" ಎಂಬ ಎರಡನೆಯ ಅಂಗ. ಮೂರನೆಯ ಅಂಗವಾದ "ಆಸನ" ಎಂದರೆ ಇರಿಸುವುದು ಎಂದರ್ಥ. ಶರೀರವನ್ನು ಸ್ಥಿರವಾಗಿ ಸುಖವಾಗಿ ಇರಿಸುವ ಭಂಗಿಯನ್ನು ಆಸನ ಎನ್ನುತ್ತಾರೆ. ನಾಲ್ಕನೇ ಅಂಗ "ಪ್ರಾಣಾಯಾಮ". ನಮ್ಮ ಉಸಿರಾಟದ ಹಿಂದಿರುವ ಶಕ್ತಿಯೇ ಪ್ರಾಣ. ಉಸಿರಾಟವನ್ನು ನಿಯಂತ್ರಿಸುವ ಮೂಲಕ ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉಪಾಯವೇ ಪ್ರಾಣಾಯಾಮ. ಐದನೆಯ ಅಂಗವಾದ "ಪ್ರತ್ಯಾಹಾರ" ಎಂದರೆ ಹಿಂದಕ್ಕೆಳೆದುಕೊಳ್ಳುವುದು ಎಂದರ್ಥ. ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ ಹಿಂದೆಗೆದುಕೊಂಡು ಅಂತರ್ಮುಖವಾಗಿಸುವ ಉಪಾಯವನ್ನು ಪ್ರತ್ಯಾಹಾರ ಎನ್ನುತ್ತಾರೆ. ಆರನೆಯ ಅಂಗವೇ "ಧಾರಣ". ಧಾರಣವೆಂದರೆ ಧರಿಸುವುದು ಎಂದರ್ಥ. ಮುಂದಿನ ಹೆಜ್ಜೆಯಾದ ಧ್ಯಾನದಲ್ಲಿ ಒಂದೇ ವಸ್ತುವನ್ನು ಸ್ಮರಿಸಿಕೊಳ್ಳುತ್ತಿರಬೇಕಾಗುತ್ತದೆ. ಆ ವಸ್ತುವನ್ನು ಚಿತ್ತದಲ್ಲಿ ಧರಿಸುವುದೇ ಧಾರಣ. ಧರಿಸಿದ ವಸ್ತುವೊಂದನ್ನೇ ಸ್ಮರಿಸುವ ಸ್ಥಿತಿಯು ಧ್ಯಾನ. ಇದರ ಪರಿಣಾಮವಾಗಿ ಮನಸ್ಸು ಧಾರಣ ಮಾಡಿದ ವಸ್ತುವಿನಲ್ಲಿ ಲಯಹೊಂದಿ ಬಾಹ್ಯ ಪ್ರಜ್ಞೆಯು ಇಲ್ಲವಾದಾಗ ಆ ಸ್ಥಿತಿಯನ್ನು "ಸಮಾಧಿ"ಯೆನ್ನುತ್ತಾರೆ. ಇದೇ ಎಂಟನೆಯ ಅಂಗವಾಗಿದೆ.

ಈ ಎಂಟೂ ಅಂಗಗಳ ವಿವರವನ್ನು ಮುಂದಿನ ಪ್ರಕರಣಗಳಲ್ಲಿ ಗಮನಿಸೋಣ

ಸೂಚನೆ: 24/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.