Saturday, October 3, 2020

ರಾಮಮಂದಿರ ನಿರ್ಮಿಸೋಣ - ರಾಮರಾಜ್ಯ ಕಟ್ಟೋಣ (Ramamandira Nirmisona - Ramarajya Kattona)

 

ಲೇಖಕರು : ಡಾII ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)ಅನೇಕ ಶತಮಾನಗಳ ಬಯಕೆಯೊಂದು ಈಡೇರಲಿದೆ.  ಶ್ರೀರಾಮನು ಶಿಶುವಾಗಿ ತನ್ನ ಜನ್ಮಸ್ಥಾನಕ್ಕೆ ಅರ್ಚಾರೂಪದಲ್ಲಿ ಪದನ್ಯಾಸ ಮಾಡಲಿದ್ದಾನೆ. ಕೋಟ್ಯಂತರ ಜನರ ಶತಮಾನಗಳ ಪರಿಶ್ರಮ ಫಲಿಸುವ ಈ ಸುದಿನದಂದು ಮೈಮನಗಳು ಹೆಮ್ಮೆಯಿಂದ ಉಬ್ಬುತ್ತಿವೆ;  ಹೃದಯಗಳು ಭಕ್ತಿಭಾವದಿಂದ ಕರಗುತ್ತಲೂ ಇವೆ. ಅಂತೆಯೇ ಅಲೆಯಲೆಯಾಗಿ ವಿಚಾರಗಳೂ ಮಸ್ತಿಷ್ಕದಲ್ಲಿ ಸುಳಿಯುತ್ತಿವೆ. ಇದು ರಾಮರಾಜ್ಯಕ್ಕೆ ಮೊದಲ ಹೆಜ್ಜೆಯಾಗಬಹುದೇ ? ಗತಕಾಲವೈಭವದ ವೈಭವವು ಇಂದು ಪಲ್ಲವಿಸಿ ಚಿರಕಾಲ ಬಾಳುವುದೇ ? ಎಂತಿರಬಹುದು ರಾಮರಾಜ್ಯ?  ಇದು ಸಾಧ್ಯವೇ?  ಎಂಬೀ ಪ್ರಶ್ನೆಗಳ ಬಗ್ಗೆ ಆಲೋಚಿಸುವುದು ಇಂದು ಪ್ರಸಕ್ತವಾಗಿದೆ.               


"ಶ್ರೀರಾಮ" ಶಬ್ದವು ಪ್ರತಿಯೊಬ್ಬರಲ್ಲೂ ನಾನಾ ರಸ-ಭಾವಗಳನ್ನು ಹೊರಹೊಮ್ಮಿಸುತ್ತದೆ. ದೇವದೇವನೆಂದು, ಅವತಾರಪುರುಷನೆಂದು ಪೂಜಿಸುವವರು ಕೆಲವರಾದರೆ, ಪಟ್ಟಾಭಿಷೇಕದಂದೂ ಧೃತಿಗೆಡದೆ, ತಂದೆಯ ಮಾತನ್ನು ಉಳಿಸಲೋಸುಗ ವನವಾಸಿಯಾದ ಸತ್ಯವಾಕ್ ಎಂದು ಕೊಂಡಾಡುವವರೂ ಕೆಲವರುಂಟು. ಕ್ಲಿಷ್ಟವಾದ ಪರಿಸ್ಥಿತಿಯಲ್ಲೂ ನ್ಯಾಯ-ಧರ್ಮಗಳನ್ನು ಎತ್ತಿಹಿಡಿದ  ಮರ್ಯಾದಾ ಪುರುಷೋತ್ತಮನೆಂದೂ,  ಧರ್ಮಮೂರ್ತಿಯೆಂದೂ, ಅಸಹಾಯಶೂರನಾಗಿ ಸಾವಿರಾರು ರಾಕ್ಷಸರನ್ನು ಎದುರಿಸಿದ ಧೀರನೆಂದೂ ಬಗೆಬಗೆಯಾಗಿ  ಕೊಂಡಾಡುವವರುಂಟು. ಅವನ ಗಾಂಭೀರ್ಯ, ಭ್ರಾತೃಪ್ರೇಮ, ನೇತೃತ್ವ, ವೀರ್ಯ, ಸೌಂದರ್ಯಾದಿ ಗುಣಗಳನ್ನೂ ರುಚಿಗನುಗುಣವಾಗಿ  ಪರಿಪರಿಯಾಗಿ ಕೊಂಡಾಡುತ್ತಾರೆ. 


ಅಂತೆಯೇ ಶ್ರೀರಾಮನನ್ನು ಕಾಲ್ಪನಿಕನೆಂದು ಪರಿಗಣಿಸಿ  ರಾಮಮಂದಿರವನ್ನು ಕಟ್ಟುವುದು ಅನಾವಶ್ಯಕ ಎಂದು ಭಾವಿಸುವವರೂ ಉಂಟು. ರಾಮರಾಜ್ಯದ ಹುಚ್ಚು ಅಸಾಂವಿಧಾನಿಕ, ಸಮಾಜವನ್ನು ಅಧೋಗತಿಗೆ ಎಳೆಯುತ್ತಿದೆ, ಅದರ ಬದಲಾಗಿ ಮಾನವೀಯತೆಯನ್ನು ಕಲಿಯಬೇಕೆಂಬ ವಾದವೂ ಉಂಟು. ಇಂತಹ ಸಮಾಜ, ಕಾಲ-ದೇಶಗಳಲ್ಲಿ ರಾಮರಾಜ್ಯವನ್ನು ಕಟ್ಟಬೇಕಾದರೆ, ಭಕ್ತಿ-ನಂಬಿಕೆಗಳ ಜೊತೆಗೆ, ಬೌದ್ಧಿಕ ಚೌಕಟ್ಟೂ ಅವಶ್ಯಕ, ಶ್ರೀರಾಮನ ವಾಸ್ತವಿಕ ಪರಿಚಯ ಅತ್ಯಾವಶ್ಯಕ.        


ಯಾರು ರಾಮ ?

ರಾಮ, ದಶರಥಪುತ್ರ, ಇಕ್ಷ್ವಾಕುವಂಶದ ಪ್ರತಾಪಿ ರಾಜನೆಂದು ತಿಳಿದೇ ಇದೆ. ರಾಮಾಯಣವೇ ಹೇಳುವಂತೆ ರಾಮನ ಚರಿತ್ರೆಯನ್ನು ನಾರದರು ವಾಲ್ಮೀಕಿಗಳಿಗೆ ಪೂರ್ತಿಯಾಗಿ ತಿಳಿಸಿದರು. ಆದರೆ ಈ ಮಾಹಿತಿಗಳನ್ನು ತಿಳಿದುಕೊಂಡಿದ್ದರೂ,  ವಾಲ್ಮೀಕಿಗಳು ನೇರವಾಗಿ ಕಾವ್ಯರಚನೆಗೆ ಕೈಹಾಕಲಿಲ್ಲ. ವಾಲ್ಮೀಕಿರಾಮಾಯಣವೇ ವಿವರಿಸುವಂತೆ, ವಾಲ್ಮೀಕಿಗಳು ಕಾವ್ಯವನ್ನು ಬರೆಯುವ ಮುನ್ನ ಮತ್ತೊಂದು ಅನ್ವೇಷಣೆಯನ್ನು ನಡೆಸಿದರು. ಎಂಥಹ ಅನ್ವೇಷಣೆ ? ದರ್ಭಾಸನದಲ್ಲಿ ಕುಳಿತು, ಆಚಮನಾದಿಗಳನ್ನು ಮಾಡಿ, ಯೋಗಸಮಾಧಿಯಲ್ಲಿ ಮುಳುಗುತ್ತಾರೆ. ಅಲ್ಲಿ ತಮ್ಮೊಳಗೆ, ರಾಮನ ಕಥೆಯನ್ನೂ, ರಾಮನ ನಿಜಸ್ವರೂಪವನ್ನೂ ಅಂಗೈನೆಲ್ಲಿಯಂತೆ ಸುಸ್ಪಷ್ಟವಾಗಿ ಕಾಣುತ್ತಾರೆ. ಆ ರಾಮನ ನಿಜಸ್ವರೂಪವೆಂದರೆ, ಯೋಗಿಗಳು ಹೃದಯದಲ್ಲಿ ಕಂಡು ರಮಿಸುವ ಪರಮಾತ್ಮನೇ ಸರಿ. ಹೃದಯಗುಹೆಯಲ್ಲಿ  ಗುಟ್ಟಾಗಿ ಬೆಳಗುವ  ದೇವರನ್ನು ಯಥಾವತ್ತಾಗಿ ಬಣ್ಣಿಸಬೇಕಾದರೆ, ವಾಲ್ಮೀಕಿಯಂತಹ ತಪಸ್ವಿಗಳೇ ಆಗಬೇಕು. ಇದೇ  ಶ್ರೀರಾಮನ ಗೂಢತತ್ತ್ವ.


ಅವತಾರ ಎಂದರೇನು ? 

ಹಾಗಾದರೆ ರಾಮನೆಂಬುವವನು ಐತಿಹಾಸಿಕವಾಗಿ ಇರಲೇ ಇಲ್ಲವೇ ? ದಶರಥನ ಪುತ್ರ ರಾಮನಿಗೂ ಯೋಗಿಗಳ ಹೃದಯದಲ್ಲಿ ಬೆಳಗುವ ರಾಮತತ್ತ್ವಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಏಳುತ್ತದೆ. ಈ ಸಂಬಂಧವನ್ನು ಅರಿಯಬೇಕಾದರೆ, ಅವತಾರವೆಂದರೇನು ಎಂದು ತಿಳಿಯಬೇಕು. ಅವತಾರ ಎಂದರೆ ಇಳಿಯುವಿಕೆ. ಒಳಗೆ ಅವ್ಯಕ್ತವಾಗಿಯೂ ಅಮೂರ್ತವಾಗಿಯೂ ಇರುವ ಶಕ್ತಿಗಳು  ನಮ್ಮ ಲೋಕದಲ್ಲಿ ಅಭಿವ್ಯಕ್ತವಾಗುವುದನ್ನು  ಅವತಾರವೆನ್ನಬಹುದು. ಸಿಡುಕುಮೂತಿಯು ಒಳಕೋಪದ ಅವತಾರ. ಮಂದಹಾಸವು ಪ್ರಸನ್ನತೆಯ ಅವತಾರ. ರಾಕ್ಷಸರು ಕೋಪ-ತಾಪ, ಲೋಭ-ಮೋಹ,  ಹಿಂಸೆ-ವಂಚನೆಗಳ ಅವತಾರ. ಈ ಮಾನುಷವಾದ ಭಾವಗಳ ಮೂರ್ತಿಮತ್ತಾದ ಅವತಾರಗಳನ್ನು ಪುಷ್ಕಳವಾಗಿ ಕಾಣುತ್ತೇವೆ. ಆದರೆ ಅಪ್ರಾಕೃತವಾದ ಪರಮಾತ್ಮತತ್ತ್ವದ ಅವತಾರಗಳು ಅತ್ಯಂತ ವಿರಳ. ಈ ತತ್ತ್ವವು ಯೋಗಿಗಳಿಗೆ  ಹೃದಯಗುಹೆಯಲ್ಲಿ, ಯೋಗಸಮಾಧಿಯಲ್ಲಿ ಆನಂದಮೂರುತಿಯಾಗಿ ಕಾಣಿಸುವ ಶಕ್ತಿಯಾಗಿದೆ. ರಾಮ, ಕೃಷ್ಣಾದಿ ಅದ್ಭುತವಾದ ಅವತಾರಗಳು ಉತ್ತಮಶ್ರೇಣಿಗೆ ಸೇರಿದ,  ಪರತತ್ತ್ವದ ಅವತಾರಗಳು. 
ರಾಮಕಥೆಯ ಮನನದಿಂದ ಆತ್ಮ ಪ್ರಬೋಧ  

ಸಿಡುಕುಮೂತಿಯನ್ನು ನಿಟ್ಟಿಸುತ್ತಿದ್ದರೆ, ಕೊಂಚಕಾಲದಲ್ಲಿಯೇ ನಮ್ಮಲ್ಲಿಯೂ ಕೋಪ ಕೆರಳುತ್ತದೆ. ಆದರೆ ರಾಮನ ರೂಪವನ್ನು ಮನದಲ್ಲಿ ಧ್ಯಾನಿಸಿದರೆ ಒಳಗೆ ಬೆಳಗುವ ಆತ್ಮತತ್ತ್ವದ ಅನುಭವ ಉಂಟುಮಾಡುತ್ತದೆ. ಎಣೆಯಿಲ್ಲದ ಸಂತೋಷ-ತೃಪ್ತಿಗಳು ಉಂಟಾಗುತ್ತವೆ. ವಸಿಷ್ಠಾದಿ ಮಹರ್ಷಿಗಳು ಆ ಸೌಭಾಗ್ಯಕ್ಕೆ ಪಾತ್ರರಾದರು. ರಾಮನಲ್ಲಿ ಆತ್ಮತತ್ತ್ವದ ಸಹಜ ಗುಣಗಳು ಮೈವೆತ್ತಿ ಬರುತ್ತವೆ. ರಾಮನು ಆಹ್ಲಾದವನ್ನು ಉಂಟುಮಾಡುವನು. ಎನಿತು  ಎನಿತು ನೋಡಿದರೂ ನಯನ ತಣಿಯದ ಸೊಬಗು. ಮೃದು ಮಧುರಭಾಷಿತ್ವ, ಎಲ್ಲ ಜೀವಿಗಳಲ್ಲಿಯೂ ಅಪಾರಕರುಣೆ, ಸಮುದ್ರದಂತೆ ಗಾಂಭೀರ್ಯ, ಕ್ಷಣಕಾಲದಲ್ಲಿ ಸಿಂಹಾಸನಾದಿ ಸಕಲೈಶ್ವರ್ಯಗಳನ್ನೂ ತ್ಯಜಿಸುವ ವೈರಾಗ್ಯ, ಇವೆಲ್ಲವೂ ಪರಿಪೂರ್ಣಪರಬ್ರಹ್ಮ ಅವತಾರದ ಗುಣಗಳು. ಈ ಗುಣಗಳನ್ನೂ ಅವುಗಳ ಮೂಲ ಸ್ರೋತಸ್ಸನ್ನೂ ಅರ್ಥೈಸಿಕೊಳ್ಳಲೋಸುಗ ವಾಲ್ಮೀಕಿಗಳು ತಪಸ್ಸಿನಿಂದಲೇ ಕಾವ್ಯರಚನೆಗೆ ನಾಂದಿಯನ್ನು ಹಾಡುತ್ತಾರೆ. ಶ್ರೀರಾಮನ ಪ್ರತಿಯೊಂದು ವ್ಯವಹಾರದಲ್ಲೂ ಜ್ಞಾನಿಗಳಿಗೆ ಆತ್ಮಧರ್ಮದ ಅಭಿವ್ಯಕ್ತಿ ಸ್ಪಷ್ಟವಾಗಿ ಕಂಡಿದ್ದರಿಂದ ಅವನನ್ನು 'ಧರ್ಮಮೂರ್ತಿ' ಎಂದು ಕರೆದರು. ಸತ್ಯವನ್ನು ನುಡಿಯುವುದು, ಕೊಟ್ಟಮಾತನ್ನು ಯಾವುದೇ ಸನ್ನಿವೇಶದಲ್ಲೂ ಉಳಿಸಿಕೊಳ್ಳುವುದು ಇವೆಲ್ಲವೂ ಧರ್ಮಮೂರ್ತಿಯ ಸಹಜಲಕ್ಷಣಗಳು. ಇಂತಹ ರಾಮಾಯಣವನ್ನು ಹೇಳಿ-ಕೇಳಿದರೆ,  ರಾಮನ ನಡೆ-ನುಡಿಗಳನ್ನು ಆಲಿಸಿದರೆ, ಅನುಕರಿಸಿದರೆ, ನಮ್ಮಲ್ಲೂ ನೆಮ್ಮದಿ-ಶಾಂತಿಗಳು ತುಂಬುತ್ತವೆ. ರಾಮನ ಮೂಲರೂಪವಾದ ಆತ್ಮತತ್ತ್ವವು ಪ್ರಬೋಧಗೊಳ್ಳುತ್ತದೆ. ರಾಮನ ಆದರ್ಶವಾದ ಆತ್ಮಗುಣಗಳು ನಮ್ಮಲ್ಲಿ ಮೂಡಿಬರುತ್ತವೆ.   


 ರಾಮರಾಜ್ಯ ಮತ್ತು ಧರ್ಮ ಸಂರಕ್ಷಣೆ 

ಮೃದುಮಧುರ ಭಾಷಿಯಾದ ರಾಮನೂ ರಾವಣನ ಸಮ್ಮುಖದಲ್ಲಿ ರೌದ್ರಾವತಾರವನ್ನು ತೋರುತ್ತಾನೆ. ಆತ್ಮಧರ್ಮವನ್ನು ತನ್ನ ವ್ಯಕ್ತಿತ್ವದಿಂದ ಹರಡುವ ರಾಮ, ಆತ್ಮಗುಣಗಳನ್ನು ನಾಶಮಾಡುವ ಆಸುರೀ ಶಕ್ತಿಗಳನ್ನು ಸಹಿಸುವುದಿಲ್ಲ. ಆರೋಗ್ಯವನ್ನು ಬಯಸುವವನು, ಕೀಟಾಣುಗಳ ನಾಶ ಮಾಡಲೇಬೇಕು. ಯಜ್ಞ-ದಾನ-ತಪಸ್ಸು-ಪೂಜೆಗಳಿಗೆ ಉದ್ದೇಶಪೂರ್ವಕವಾಗಿ ತೊಡಕು ಉಂಟುಮಾಡುವವರ ಸಂಹಾರ ಮಾಡಲೇಬೇಕು. ಕಾಮ-ಕ್ರೋಧ ಮುಂತಾದ ಆಸುರೀ ಶಕ್ತಿಗಳು ತಲೆದೋರಿದಾಗ, ಅವುಗಳನ್ನು ಅಳಿಸಿ, ಆತ್ಮಗುಣಗಳನ್ನೂ ಆತ್ಮಧರ್ಮವನ್ನೂ ನೆಲೆಸುವಂತೆ ಮಾಡುವುದೇ ರಾಮ,ಕೃಷ್ಣಾದಿ ಅವತಾರಗಳ ಕೆಲಸ. ರಣರಂಗದಲ್ಲಿ ಅಸುರಶತ್ರುವಿನ ಸಂಹಾರ ಸುಲಭವಾದರೂ, ಜನರ ಮನದಲ್ಲಿ ನೆಲೆಸುವ ದುಷ್ಟಗುಣಗಳನ್ನು ನೀಗಿಸಿ, ಅವರ ಪ್ರವೃತ್ತಿಯನ್ನು ಪರಿವರ್ತಿಸುವುದು ಸಾಮಾನ್ಯರಿಗೆ ಅಸಾಧ್ಯ. ಸೀತಾರಾಮರು, ತಮ್ಮ ವ್ಯಕ್ತಿತ್ವದಿಂದಲೂ, ಸಾನ್ನಿಧ್ಯದಿಂದಲೂ ಜನರ ಹೃದಯದಲ್ಲಿ ಕಟ್ಟುವ ರಾಜ್ಯವೇ ರಾಮರಾಜ್ಯದ ಅಡಿಪಾಯ. ಮೂರ್ತಿಮದ್ಧರ್ಮನಾದ ಆದರ್ಶರಾಜ ರಾಮನ  ಆಳ್ವಿಕೆಯಲ್ಲಿ ಪ್ರಜೆಗಳು, ಬಹುಪಾಲು ಲೋಭವನ್ನು ಬಿಟ್ಟು ತೃಪ್ತರಾಗಿರುತ್ತಿದ್ದರು. ಮನುಷ್ಯನು ತನ್ನ ಜೀವಿಕೆಗೆ ಬೇಕಾದಷ್ಟೇ ಅಂಶವನ್ನು ಪ್ರಕೃತಿಯಿಂದ ಸ್ವೀಕರಿಸಿದರೆ,  ಸೃಷ್ಟಿಯಲ್ಲಿ ಇರಬೇಕಾದ ಸಂತುಲನ ಉಳಿಯುತ್ತದೆ. ಪಶು-ಪಕ್ಷಿಗಳು ಕಾಲೋಚಿತವಾದ ನಡೆಯನ್ನು ಹೊಂದಿರುತ್ತವೆ. ಮಳೆ-ಬೆಳೆಗಳು ಸುವ್ಯವಸ್ಥಿತವಾಗಿರುತ್ತವೆ. ಧನಧಾನ್ಯ ಸಮೃದ್ಧಿ ಇರುತ್ತದೆ. ಇದು ಆದರ್ಶವಾದ ರಾಮರಾಜ್ಯ. ಕಟುವಾದ ಪ್ರಸಂಗಗಳು ಒದಗಿದಾಗಲೂ, ಸೀತಾರಾಮರ ವೈಯಕ್ತಿಕ, ಕೌಟುಂಬಿಕ ಜೀವನಗಳು ಅನ್ಯಾಯವಾಗಿ ಬಾಧಿಸಲ್ಪಟ್ಟರೂ, ಧರ್ಮದ ಮೇಲಿನ ಶ್ರದ್ಧೆ ಜನಸಮೂಹದಲ್ಲಿ ಕೆಡದಂತೆ ಅವರು ನೋಡಿಕೊಂಡರು. ಜನಮನಗಳಲ್ಲಿ, ಜನಜೀವನದಲ್ಲಿ ಆತ್ಮಗುಣಗಳ ಬೀಜವನ್ನು ಬಿತ್ತಿ, ಬೆಳೆಸಿ ಫಲಿಸುವಂತೆ ಮಾಡಿದರು. ಇಂತಹ ಆದರ್ಶರಾಜ್ಯ ವ್ಯವಸ್ಥೆಯನ್ನೇ ರಾಮರಾಜ್ಯವೆಂದು ಕರೆದಿರುವುದು. 
ರಾಮಾವತಾರ ಮತ್ತು ರಾಮಮಂದಿರ  

ಅವತಾರ ಪುರುಷರ ಪ್ರಕೃತಿಯು ಶುದ್ಧವಾದ ಅಯಸ್ಕಾನ್ತದಂತೆ ತಮ್ಮ ಸಂಪರ್ಕಕ್ಕೆ ಬರುವ ಯೋಗ್ಯಪದಾರ್ಥಗಳ ಗುಣವನ್ನು ಪರಿವರ್ತಿಸುತ್ತದೆ. ದೀರ್ಘಕಾಲ ಅವತಾರ ಪುರುಷರ ಸಂಪರ್ಕದಿಂದಲೂ, ಹಾಗೂ ಅವರ ಸಂಕಲ್ಪದಿಂದಲೂ ಕಲ್ಲು, ಮಣ್ಣು ಮುಂತಾದ ಜಡವಸ್ತುಗಳೂ ಆತ್ಮಧರ್ಮದಿಂದ ಕೂಡಿ ಪವಿತ್ರವೆಂದೆನಿಸಿಕೊಳ್ಳುತ್ತವೆ ಎಂಬುದು ಶ್ರೀರಂಗಮಹಾಗುರುಗಳ ಪ್ರಯೋಗಬದ್ಧವಾದ ತೀರ್ಮಾನ. ರಾಮನು ಸ್ಪರ್ಶಮಣಿಯಂತೆ. ಅವನು ನಡೆದ ಮಣ್ಣೆಲ್ಲವೂ ಪವಿತ್ರವಾಗಿ, ಪೂಜೆಗೆ ವಿಷಯವಾಗಿ, ನೆಮ್ಮದಿಗೆ ನೆಲೆವೀಡಾಗಿವೆ. ತಮ್ಮ ಪದನ್ಯಾಸದಿಂದಲೂ ಸಂಕಲ್ಪದಿಂದಲೂ ಭಾರತದ ಉದ್ದಗಲದಲ್ಲಿ ಅಯೋಧ್ಯಾ, ಪ್ರಯಾಗ, ಚಿತ್ರಕೂಟ, ದಂಡಕಾರಣ್ಯ, ಪಂಚವಟಿ, ಹಂಪೆ-ಕಿಷ್ಕಿಂಧಾ, ರಾಮೇಶ್ವರ, ಧನುಷ್ಕೋಟಿ, ಲಂಕೆ ಮುಂತಾದ ನೂರಾರು ಕ್ಷೇತ್ರಗಳನ್ನು ತೀರ್ಥಗಳನ್ನಾಗಿಸಿದ್ದಾರೆ ಸೀತಾರಾಮರು.  ಧರ್ಮದ ಸೇತುವೆಯನ್ನು ಕಟ್ಟಿ, ಆಸುರೀ ಲೋಕದಲ್ಲಿ ಬಂಧಿಸಲ್ಪಟ್ಟ, ನಮ್ಮನ್ನು ಬಿಡಿಸಿ, ಜ್ಞಾನದ ಬೆಳಕು ಬೆಳಗುವ ಅಭೇದ್ಯವಾದ ಹೃದಯಗುಹೆ  ಎಂಬ ಅಯೋಧ್ಯೆಗೆ  ಕರೆದೊಯ್ವ ಅವತಾರ, ರಾಮಾವತಾರ.     

ರಾಮನು ಹುಟ್ಟಿಬೆಳೆದು ಪ್ರೀತಿಸಿದ ಆ ಪವಿತ್ರ ಭೂಮಿಯಲ್ಲಿ ಆಲಯವನ್ನು ಕಟ್ಟಿ, ಅವನ ಪೂಜೆ, ಧ್ಯಾನ ತಪಸ್ಸುಗಳಿಗೆ ಬಳಸಿದರೆ ಕೋಟ್ಯನ್ತರ ಜನರ ಹೃದಯಕ್ಕೆ ತಂಪನ್ನುಂಟುಮಾಡುತ್ತದೆ. ಆಸ್ಪತ್ರೆ, ಶಾಲೆಗಳೂ ಬೇಕು, ಆದರೆ ಅವು ಯಾವುದೇ ಜಾಗದಲ್ಲಾದರೂ ಆದೀತು. ಇಂತಹ ತೀರ್ಥಕ್ಷೇತ್ರದಲ್ಲಿ ರಾಮನ ಆಲಯ  ಕಟ್ಟುವುದರಿಂದ ಮಹಾಲಾಭ ನಮಗೆ; ರಾಮನಿಗಲ್ಲ. ಇಂತಹ  ಆಲಯಗಳು ರಾಮನ ಮನೋಧರ್ಮವನ್ನು ಹೃದಯಕ್ಕೆ ಮುಟ್ಟಿಸುವ  ಕೇಂದ್ರಗಳಾಗಲಿ. ಸೀತಾರಾಮರಂತೆ ಆತ್ಮಗುಣಗಳಿಂದ ಕೂಡಿದ ರಾಮರಾಜ್ಯವನ್ನು ನಮ್ಮೊಳಗಿನ  ಹೃದಯಗುಹೆಗಳಲ್ಲಿ ಬೆಳಗಿಸಲಿ. ಶಿಕ್ಷಣ, ಅಧ್ಯಯನಗಳಿಂದ ಸಮಾಜ-ರಾಷ್ಟ್ರಗಳಲ್ಲಿ ಶಾಂತಿ-ತೃಪ್ತಿ-ನೆಮ್ಮದಿಗಳ ಧರ್ಮರಾಜ್ಯ ನಿರ್ಮಿಸುವಂತಾಗಲಿ. ರಾಮಮಂದಿರವು ರಾಮರಾಜ್ಯಕ್ಕೆ ಮೊದಲ ಹೆಜ್ಜೆಯಾಗಲೆಂದು ಪ್ರಾರ್ಥಿಸಿ, ಅದಕ್ಕಾಗಿ ಪರಿಶ್ರಮಿಸೋಣ.


ಸೂಚನೆ: 01/10/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.