ಲೇಖಕರು: ಶ್ರೀಮತಿ ರತ್ನಾಸುರೇಶ
(ಪ್ರತಿಕ್ರಿಯಿಸಿರಿ lekhana@ayvm.in)
ಜ್ಯೋತಿಷಿಯೊಬ್ಬನ ಪ್ರಸಿದ್ಧಿಗೆ ಪ್ರಭಾವಿತನಾಗಿ ಯುವಕನೊಬ್ಬ ತುಂಬಾ ಹೊತ್ತು ಕಾದು ದರ್ಶನ ಪಡೆದನು. ಯುವಕನ ಪ್ರಾರ್ಥನೆಯಂತೆ ಜ್ಯೋತಿಷಿ ಯುವಕನ ಅಂಗೈ ನೋಡಿ ನಾಳೆ ಬಾ ಎಂದರು. ಕತ್ತಲಾದ್ದರಿಂದ ಆ ರಾತ್ರಿ ಊರಿನ ಆಚೆಯಿರುವ ಪಾಳು ಶಿವದೇವಾಲಯದಲ್ಲಿ ತಂಗಿದ. ದೇವಸ್ಥಾನದ ದುಃಸ್ಥಿತಿ ನೋಡಿ ದುಃಖಿತನಾಗಿ, ಭಗವಂತ ಆಯುಸ್ಸು ಕೊಟ್ಟರೆ ಈ ದೇವಾಲಯದ ಜೀರ್ಣೋದ್ಧಾರ ಮಾಡುತ್ತೇನೆ ಎಂಬ ಸತ್ಸಂಕಲ್ಪಮಾಡಿ ನಿದ್ರಿಸಿದ. ಮಧ್ಯರಾತ್ರಿ ಭಾರೀ ಶಬ್ದದೊಂದಿಗೆ ಯುವಕನ ಪಕ್ಕದಲ್ಲಿಯೇ ಕಲ್ಲಿನ ತೊಲೆಯೊಂದು ಬಿದ್ದುಬಿಟ್ಟಿದೆ. ಯುವಕನಿಗೆ ಗಾಬರಿ, ಆಶ್ಚರ್ಯ. ಭಗವಂತನೇ ತನ್ನನ್ನು ಕಾಪಾಡಿದನೆಂಬ ಕೃತಜ್ಞತೆಯಿಂದ ವಿಶ್ರಾಂತಿ ಪಡೆದು ಪ್ರಾತಃಕಾಲ ಎದ್ದು ಜ್ಯೋತಿಷಿಯಲ್ಲಿಗೆ ಹೋದನು. ಜ್ಯೋತಿಷಿಗೆ ಆಶ್ಚರ್ಯ. ಹಿಂದಿನ ದಿನವೇ ಯುವಕನ ಆಯುಸ್ಸು ಮುಗಿದಿದೆ ಎಂಬುದು ತಿಳಿದಿತ್ತು. ತನ್ನ ಲೆಕ್ಕಾಚಾರ ತಪ್ಪದಿರುವ ಆತ್ಮವಿಶ್ವಾಸದಿಂದ ಜ್ಯೋತಿಷಿಯು- ನೀನು ನಿನ್ನೆ ಇಲ್ಲಿಂದ ಹೋದ ಮೇಲೆ ಏನೇನು ಮಾಡಿದೆ ಎಂಬುದನ್ನು ಸವಿಸ್ತಾರವಾಗಿ ಹೇಳು ಎನ್ನಲು, ಯುವಕನು ನಡೆದಿದ್ದೆಲ್ಲವನ್ನೂ ತಿಳಿಸಿದ. ಅದಕ್ಕೆ ಜ್ಯೋತಿಷಿಗಳು-ನಿನ್ನ ಆಯುಸ್ಸು ನಿನ್ನೆಗೆ ಮುಗಿದಿತ್ತು. ನೀನು ಮಾಡಿದ ಸತ್ಸಂಕಲ್ಪ ನಿನ್ನ ಆಯುಸ್ಸನ್ನು ವೃದ್ಧಿಸಿದೆ ಎಂದರು. ಗಭೋ೯ಪನಿಷತ್ತು ಸಾರುವಂತೆ ಪ್ರತಿ ಜೀವಿಯು ತಾಯಿಯ ೭-೮ ತಿಂಗಳಿನ ಗರ್ಭದಲ್ಲಿರುವಾಗ ಭಗವಂತನ ದರ್ಶನ ಪಡೆಯುತ್ತೆ. ಅದಕ್ಕೆತನ್ನ ಹಿಂದಿನ ಜನ್ಮಗಳ ಸ್ಮರಣೆಯು ಉಂಟಾಗಿ ಅದೊಂದು ಸಂಕಲ್ಪ ಮಾಡುತ್ತೆ.
"ನಾನು ಗರ್ಭದಿಂದ ಆಚೆ ಬಂದ ಮೇಲೆ ಭಗವಂತ ನಿನ್ನನ್ನು ಮರೆಯದೇ ಬಾಳುತ್ತೇನೆ" ಎಂದು. ಆದರೆ ಭೂಪತನವಾಗುತ್ತಿದ್ದಂತೆಯೇ ಮಾಯೆಗೆ ಒಳಗಾಗಿ ತನ್ನ ಸಂಕಲ್ಪವನ್ನು ಮರೆತುಬಿಡುತ್ತೆ. ಹಾಗಾಗದಿರಲೆಂದೇ ಮಗು ಹುಟ್ಟಿದಾಗ ಪ್ರಸೂತಿಗೃಹದಲ್ಲಿ ತ್ರಿಕೋಣಾಕಾರದ ಹಣತೆ ಹಚ್ಚುವುದು,ಮತ್ತು ಘಂಟಾನಾದ ಮಾಡುವುದ. ಒಟ್ಟಿನಲ್ಲಿ, ಷೋಡಶ ಸಂಸ್ಕಾರಗಳು ಇತ್ಯಾದಿ ಎಲ್ಲವೂ ಜೀವಿಗೆ ತನ್ನ ಸತ್ಸಂಕಲ್ಪವನ್ನು ನೆನಪಿಸುವ ಅಭಿಜ್ಞಾನಗಳನ್ನಾಗಿ ಆರ್ಯ ಮಹರ್ಷಿಗಳು ನಮ್ಮ ಸಂಸ್ಕೃತಿಯಲ್ಲಿ ತಂದಿದ್ದಾರೆ.ಶ್ರೀರಂಗಮಹಾಗುರುಗಳು ಹೇಳುವಂತೆ- "ಸಂಕಲ್ಪವು ಸುದೃಢವಾಗಿ ಶಕ್ತಿಯುತವಾಗಿದ್ದರೆ ಆ ಸಂಕಲ್ಪವನ್ನು ಹರಿಸಿಬಿಟ್ಟರೂ ಪರವಾಗಿಲ್ಲ. ಆ ಸಂಕಲ್ಪವೇ ಕೆಲಸ ಮಾಡಿಕೊಳ್ಳುತ್ತೆ" ಎಂಬುದಾಗಿ ಸತ್ಸಂಕಲ್ಪ ಮಾಡಿ ಭಗವಂತನೆಡೆಗೆ ಸಾಗೋಣ.