Saturday, October 17, 2020

ಆತ್ಮಗುಣ - ಹಿನ್ನೋಟ (ಉಪಸಂಹಾರ) Atmaguna - Hinnota (Upasanhara)

  ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು

(ಪ್ರತಿಕ್ರಿಯಿಸಿರಿ lekhana@ayvm.in)



ನಾವು ಯಾವುದಾದರೂ ದೇಶದಲ್ಲಿ ಅಥವಾ ರಾಜ್ಯದಲ್ಲಿ ವಾಸಮಾಡಬೇಕಾದರೆ ಅಲ್ಲಿನ ವಾತಾವರಣ, ಭಾಷೆ; ಸಂಸ್ಕೃತಿಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗೆ ಭಗವಂತನ ಸಾಮ್ರಾಜ್ಯದಲ್ಲಿ ನಲಿಯಬೇಕಾದರೆ ಅಲ್ಲಿನ ವಾತಾವರಣ ಮತ್ತು ಗುಣಗಳಿಗೆ ನಮ್ಮನ್ನು ಅಣಿಗೊಳಿಸಿಕೊಂಡಾಗ ಮಾತ್ರ ಸಾಧ್ಯ. ಆ ಸಿದ್ಧತೆಯನ್ನೇ 'ಆತ್ಮಗುಣ' ಎಂದು ಕರೆದಿದ್ದಾರೆ. ಆತ್ಮಗುಣಗಳು ಭಗವಂತನ ಸಹಜಗುಣಗಳಾಗಿವೆ. ಅವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಕಲಿತುಕೊಳ್ಳಬೇಕು. ಆಗ ನಾವೂ ದೇವಭಾವವನ್ನು ಹೊಂದಲು ಸಾಧ್ಯ. ಇದು ಒಂದೆರಡು ದಿನ, ತಿಂಗಳು ಅಥವಾ ವರ್ಷಗಳ ಮಾತಲ್ಲ. ಗುರಿಮುಟ್ಟುವ ತನಕ ಯತ್ನ ಸಾಗಬೇಕು. ಆ ಪ್ರಯತ್ನವು ದೀರ್ಘಕಾಲ, ನಿರಂತರವಾಗಿ, ಅತ್ಯಂತ ಆದರದಿಂದ ನಡೆದಾಗ ಮಾತ್ರ ನಮ್ಮಲ್ಲಿ ಆ ಗುಣಗಳು ಬೆಳೆಯಲು ಸಾಧ್ಯ.  ಇಂತಹ ಸಂಸ್ಕಾರಗಳು ಬ್ರಹ್ಮಸಾಯುಜ್ಯವನ್ನು ದೊರಕಿಸಿಕೊಡುವ ಸಾಧನಗಳು. ಅದಕ್ಕಾಗಿ ಗೌತಮಮಹರ್ಷಿಗಳು ಈ ಆತ್ಮಗುಣಗಳಿಗೆ ಅಷ್ಟೊಂದು ಮಹತ್ತ್ವವನ್ನು ಕೊಟ್ಟಿದ್ದಾರೆ.

1. 'ದಯಾ' ಎಂಬ ಆತ್ಮಗುಣವು ಪ್ರಾಣಿ-ಪಶು-ಪಕ್ಷಿ ಹೀಗೆ ಪ್ರಪಂಚದ ಎಲ್ಲಾ ಎಂಭತ್ತನಾಲ್ಕು ಲಕ್ಷ ಜೀವಜಾತಿಗಳೂ ನಿರ್ಭಯವಾಗಿ ಬದುಕಬೇಕು ಎಂದು ಬಯಸುವ ಗುಣ. ಎಲ್ಲಾ ಭೂತಗಳಿಗೂ ಬದುಕಲು ಪ್ರತಿಯೊಬ್ಬನೂ ಅವಕಾಶ ಮಾಡಿಕೊಡುವ ಭಾವ.  

2. 'ಕ್ಷಾಂತಿ' ಎಂಬ ಆತ್ಮಗುಣವು ಬೇರೆಯವರ ತಪ್ಪನ್ನು ಮನ್ನಿಸುವ ವಿಶೇಷ ಗುಣವಾಗಿದೆ. ಇದು ಒಂದು ಅಸಾಮರ್ಥ್ಯವನ್ನು ಪ್ರದರ್ಶಿಸುವ ರೀತಿಯಲ್ಲ.  ತಿಳಿಯದೇ ಅಥವಾ ಅನಿವಾರ್ಯವಾಗಿ ಮಾಡಿದ ತಪ್ಪನ್ನು ಮನ್ನಿಸುವುದು ಮತ್ತು ಬುದ್ಧಿಪೂರ್ವಕವಾಗಿ ತಪ್ಪನ್ನು ಮಾಡಿದಾಗ ನಿರ್ದಯವಾಗಿ ಶಿಕ್ಷಿಸುವುದು ಉಚಿತವೇ ಆಗಿದೆ

3. 'ಅನಸೂಯಾ' ಬೇರೆಯವರ ಉನ್ನತಿಯನ್ನು ನೋಡಿ, ನೊಂದು ಬೆಂದು ನಮ್ಮ ಮನಸ್ಸನ್ನು ಹಾಳುಮಾಡಿಕೊಳ್ಳದೇ ಅವರಂತೆಯೇ ನಾವೂ ಬೆಳೆಯಬೇಕು, ಅವರಂತೆಯೇ ನಾವೂ ಎತ್ತರಕ್ಕೆ ಬೆಳೆಯಬೇಕು ಎಂಬ ಬಯಕೆ. ಮತ್ತೊಬ್ಬರ ಗುಣವನ್ನು ಗ್ರಹಿಸುವುದು ಮತ್ತು ದೋಷವನ್ನು ಬಿಡುವುದು.

4. 'ಶೌಚ' ಎಂಬುದು ನಮ್ಮ ಮೈ ಮನಸ್ಸುಗಳನ್ನು ಶುದ್ಧಿಮಾಡಿಕೊಳ್ಳುವ ವಿಧಾನ. ನಮ್ಮತನವನ್ನು ಅದರದರ ಸ್ವಭಾವ ಕೆಡದಂತೆ ಉಳಿಸುವ ಪ್ರಕ್ರಿಯೆ.

5. ಅನಾಯಾಸ - ಮಾಡಬೇಕಾದ ಕಾರ್ಯವನ್ನು ಬಹಳ ನಾಜೂಕಾಗಿ ಮಾಡುವುದರ ಮೂಲಕ  ಶಾರೀರಿಕವಾಗಲೀ, ಮಾನಸಿಕವಾಗಲೀ ಮಿತಿ ಮೀರಿದ  ಬಳಲಿಕೆ ಆಗದ ರೀತಿಯಲ್ಲಿ ಸಮಾಪ್ತಿಗೊಳಿಸುವುದು.

6. ಮಂಗಲ-ದೇಹಧರ್ಮ, ಮನೋಧರ್ಮ ಮೊದಲಾದವುಗಳನ್ನು ಅದರದರ ಸ್ಥಿತಿಯನ್ನು(condition) ಉಳಿಸಲು ನಮ್ಮ ಸುತ್ತಮುತ್ತಲಿನ ದ್ರವ್ಯ ದೇಶಾದಿಗಳನ್ನು ಬಳಸಿಕೊಂಡು ಪ್ರಶಸ್ತವಾದುದನ್ನು ಆಚರಿಸುತ್ತಾ ಅಪ್ರಶಸ್ತವಾದುದನ್ನು ಬಿಡುವುದೇ ಮಂಗಲ.

7. ಅಕಾರ್ಪಣ್ಯ- 'ಕಾರ್ಪಣ್ಯ' ಎಂದರೆ ಜಿಪುಣತನ, ದೀನಭಾವ, ಬೇಡುವಸ್ವಭಾವ, ತನ್ನಲ್ಲಿರುವುದನ್ನು ಮತ್ತೊಬ್ಬರಿಗೆ ಕೊಡದಿರುವುದು. ಈ ಸ್ವಭಾವಕ್ಕೆ ವಿರುದ್ಧವಾದುದನ್ನೇ 'ಅಕಾರ್ಪಣ್ಯ' ಎಂದು ಕರೆಯುತ್ತಾರೆ.8. ಅಸ್ಪೃಹಾ – ಸತ್ಪರಿಣಾಮವನ್ನು ಕೊಡುವಂತಹ ಕಾರ್ಯಕ್ಕೆ ಬೇಕಾದುದನ್ನು ಬಯಸುವುದು ಮತ್ತು ದುಷ್ಪರಿಣಾಮವನ್ನು ಉಂಟುಮಾಡುವ ಬಯಕೆಯನ್ನು ಬಿಡುವುದು.

ಹೀಗೆ ಎಂಟು ಆತ್ಮಗುಣಗಳು ಬೆಳೆಯುವ ರೀತಿಯಲ್ಲಿ ನಮ್ಮ ನಿತ್ಯಜೀವನವನ್ನು ರೂಢಿಸಿಕೊಂಡು ನಮ್ಮ ಮೂಲವಾದ ಭಗವಂತನನ್ನು- ಬ್ರಹ್ಮಸಾಯುಜ್ಯವನ್ನು ಪಡೆಯುವಂತಾಗಲಿ. ಈ ಲೇಖನಕ್ಕೆ ಬೌದ್ಧಿಕವಾಗಿ ಕಾರಣಕರ್ತರಾದ ಎಲ್ಲಾ ಗುರುಪರಂಪರೆಗೆ ನಮಸ್ಕಾರ ಸಲ್ಲಿಸುತ್ತಾ ಈ ಲೇಖನಕ್ಕೆ ಮಂಗಲವನ್ನು ಮಾಡುತ್ತೇನೆ.


ಸೂಚನೆ: 10/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.