ಋಷಿಯುಗ ಮುಗಿದ ಕಥೆಯೇ?
ಲೇಖಕರು :ವಿದ್ವಾನ್||ಶ್ರೀಛಾಯಾಪತಿ
ವಿದ್ಯುದ್ದೀಪಗಳಿಂದ ಥಳಿಥಳಿಸುವ ನಗರಗಳು, ದೂರದರ್ಶನ, ದೂರ ಶ್ರವಣ ಸಾಧನಗಳು-ಮನಮೋಹಕ ಕಟ್ಟಡ ವಿನ್ಯಾಸಗಳು, ವಸ್ತ್ರ, ವೇಷ, ಭೂಷಣ, ಎಲ್ಲೆಡೆಯಲ್ಲಿಯೂ ಕಾಣುವ ಹೊಸತನ, ಕ್ಷಣವೊಂದರಲ್ಲಿ ಯುಗದಲ್ಲಿ ನಾವು ಕಾಣಲಾಗದ ಮಾರ್ಪಾಡು, ಇವನ್ನು ನಾವು ಕಾಣುತ್ತಿದ್ದೇವಲ್ಲವೇ? ಐವತ್ತು ವರ್ಷಗಳ ಹಿಂದೆ ಯಾವುದನ್ನು ಮಾನವ ಕನಸಿನಲ್ಲಿಯೂ ಕಾಣಲಾರದವನಾಗಿದ್ದನೋ ಅಂತಹ ವಿಷಯಗಳು ದಿನಸಾಮಾನ್ಯದ ಘಟನೆಗಳಂತೆ ನಡೆದು ಹೋಗುತ್ತಿವೆ. ಗ್ರಹಾಂತರ ಯಾನ, ಕೃತಕ ಪ್ರಣಾಳ ಶಿಶಿನಿರ್ಮಾಣ, ಒಂದೇ ? ಎರಡೇ? ಈ ಅಸಮ ಸಾಹಸಗಳು ಹೇಗೆ ನಡೆದುವು? ಮಾನವನ ದುಡಿಮೆ, ಶ್ರಮ ಯಾವುದನ್ನು ಸಾಧಿಸಲು ವರ್ಷಗಟ್ಟಲೆ ಶ್ರಮಿಸಬೇಕೋ ಅಂತಹುದನ್ನು ನಿಮಿಷದಲ್ಲಿ ಸಾಧಿಸಬಲ್ಲ ಯಂತ್ರ ಜಾಲಗಳು ಮಾನವ ಮತಿಯಿಂದ ರೂಪುಗೊಂಡಿದೆಯಲ್ಲವೇ ?
ಈ ಎಲ್ಲ ಹೇಗಾಯಿತು? ಮಾನವನ ಅನ್ವೇಷಣೆಯ ಪ್ರವೃತ್ತಿಯೇ ಈ ಎಲ್ಲ ಪ್ರಗತಿಯ ಮೂಲ. ಈ ಅನ್ವೇಷಣಾಪ್ರವೃತ್ತಿ ಒಂದು ಯುಗವನ್ನೇ ನಿರ್ಮಾಣ ಮಾಡಿದೆಯಲ್ಲವೇ? ಅಂತೆಯೇ ನಮ್ಮದು ವೈಜ್ಞಾನಿಕಯುಗ. ವಿಶ್ವದ ಉಳಿವು ಅಳಿವುಗಳನ್ನು ನಿರ್ಣಯಿಸುವಂತಹ ನಿರ್ಣಾಯಕ ಶಕ್ತಿಯೇ ನಮ್ಮದು. ನಿಸರ್ಗವು ಯಾವತರಹ ರಹಸ್ಯವನ್ನೂ ನಮ್ಮಿಂದ ಬಿಚ್ಚಿಟ್ಟುಕೊಳ್ಳುವಂತಿಲ್ಲ. ತೀವ್ರಾನ್ವೇಷಣ ಪ್ರವೃತ್ತಿಯುಳ್ಳ ವಿಜ್ಞಾನಿಯ ಮತಿ, ನಿಸರ್ಗವನ್ನು ಬೆದಕಿ, ಕೆದಕಿ, ತಕ್ಕ ಅಳತೆಗೋಲುಗಳನ್ನು ನಿರ್ಮಿಸಿ, ಅದನ್ನು ಅಳೆಯತೊಡಗಿದಾಗ ಎಂತಹ ರಹಸ್ಯ ತಾನೇ ಉಳಿದೀತು! ಎಂಬಂತಹ ಕಾಲವಿದಾಗಿದೆ.
ಆಹಾರ, ವಿಹಾರ, ನುಡಿ, ಸಮಾಜ, ವಿದ್ಯೆ, ರಾಜನೀತಿ ಎಲ್ಲ ಕ್ಷೇತ್ರಗಳಲ್ಲಿಯೂ ಈ ವೈಜ್ಞಾನಿಕತೆಯ ಪ್ರಭಾವ ಒಡಮೂಡಿದೆ. ಪ್ರತಿಭಾಪೂರ್ಣರಾದ ಅನ್ವೇಷಣಾ ಪ್ರವೃತ್ತಿಯುಳ್ಳ ಹಲವೇ ಮಂದಿ ವಿಜ್ಞಾನಿಗಳು ಯುಗ ನಿರ್ಮಾಣಕ್ಕೆ ಕಾರಣರಾಗಿದ್ದಾರೆಂಬುದು ಇಂದು ರಹಸ್ಯವೇನೂ ಇಲ್ಲ.
ಆಂತೆಯೇ ಮನುಕುಲದ ಇತಿಹಾಸವನ್ನು ಗಮನಿಸಿದಾಗ ನಿಸರ್ಗದ ಒಳಮೈಯನ್ನು ಅನ್ವೇಷಿಸುವ ಪ್ರಯತ್ನಗಳು ನಡೆದಿರುವುದೂ ಕಂಡುಬರುತ್ತದೆ. ಈ ವಿಶ್ವವೆಲ್ಲವೂ ಎಲ್ಲಿಂದ ವಿಸ್ತಾರವಾಗುತ್ತಿದೆ ? ನಮ್ಮ ಜೀವನ ಹೇಗೆ ವಿಕಾಸವಾಗುತ್ತಿದೆ ? ಇದರ ಹಿಂದು ಮುಂದುಗಳೇನು ? ಎಂಬಂಶವೂ ಮಾನವ ಮತಿಗೆ ಸವಾಲನ್ನೆಸೆದು ಅತ್ತಲೂ ಅನ್ವೇಷಣೆಗಳು ನಡೆದಿರುವುದು ಕಂಡುಬರುತ್ತದೆ.
ಕಿಂಕಾರಣಂ ಕೇನ ಕುತಃ ಸ್ಮಜಾತಾಃ |
ಜೀವಾಮ ಕೇನ ಕ್ವಚ ಸಂಪ್ರತಿಷ್ಠಾ||
ನಮ್ಮ ಹುಟ್ಟಿನ ಕಾರಣವೇನು? ಎಲ್ಲಿಂದ ಹೇಗೆ ಹುಟ್ಟಿದೆವು? ಯಾರಿಂದ ನಾವು ಬದಕುತಿದ್ದೇವೆ? ನಮ್ಮ ನೆಲೆಯೆಲ್ಲಿದೆ? ಎಂಬತ್ತಲೂ ಅನ್ವೇಷಣೆ ನಡೆದಿವೆ. ಈ ಅನ್ವೇಷಣೆಯ ದಿಕ್ಕು ಮನಸ್ಸನ್ನು ಮುಂದಕ್ಕೆ ಹರಿಸುವುದಾಗಿರದೆ ಹಿಂದಕ್ಕೆ ಹರಿಸುವುದಾಗಿದ್ದು, ಆ ದಿಶೆಯಲ್ಲಿಯೂ ಸಫಲತೆಯನ್ನು ಮಾನವ ಮತಿ ಮುಟ್ಟಿರುವುದು ಕಂಡುಬರುತ್ತದೆ. ಅಣುವಿಗೆ ಅಣುವಾಗಿ, ಮಹತ್ತಿಗೆ ಮಹತ್ತಾಗಿರುವ ಒಂದು ಶಕ್ತಿ ನಮ್ಮ ಜೀವನವನ್ನು ತುಂಬಿಕೊಂಡಿದೆ. ಅದೇ ಆತ್ಮ. ಅದರ ನೋಟ ಪರಮಾನಂದ ಪರಿಪೂರ್ಣ. ಅದೇ ಜೀವನದ ನೆಲೆ –ಎಂಬಂಶ ಬೆಳಕಿಗೆ ಬಂದಿದೆ. ಅಂತೆಯೇ ಅಂತರ್ಮುಖವಾದ ಅನ್ವೇಷಣಾ ಪ್ರವೃತ್ತಿಗಳು ತೀವ್ರಗೊಂಡು ಒಳಸತ್ಯಗಳು ಬೆಳಕಿಗೆ ಬಂದಂತೆಲ್ಲಾ ಅದಕ್ಕನುಗುಣವಾಗಿ ಬಾಳನ್ನಳವಡಿಸಿಕೊಳ್ಳುವ, ಅದರಿಂದೊದುಗುವ ಸೌಖ್ಯದಿಂದ ಬಾಳನ್ನು ತುಂಬಿಕೊಳ್ಳುವ ಯತ್ನಗಳೂ ಸಹಜವಾಗಿಯೇ ನಡೆದಿವೆ. ಅಂತರ್ಮುಖವಾದ ಅನ್ವೇಷಣಾ ಪ್ರವೃತ್ತಿಯಿಂದ ಒಳಸತ್ಯಗಳನ್ನು ಕಂಡವರೇ ಋಷಿಗಳೆನಿಸಿಕೊಂಡವರು. ಅವರೂ ತೀವ್ರಗತಿಯ ಅನ್ವೇಷಣೆಯಿಂದ ಬಾಳನ್ನು ತುಂಬಿದರು. ಜೀವನ, ವಿದ್ಯೆ, ಸಮಾಜ, ರಾಜನೀತಿ ಎಲ್ಲವನ್ನೂ ತಮ್ಮ ಅಂತರ್ಲಕ್ಷ್ಯಕ್ಕೆ ಅಳವಡಿಸಿಕೊಂಡು ಯುಗ ನಿರ್ಮಾಪಕರಾದರು. ಅಂತೆಯೇ ಅಂತಃಸ್ಫೂರ್ತಿಯಿಂದ ಸಮೃದ್ಧವಾದ ಋಷಿಯುಗವೊಂದು ಜೀವನವನ್ನು ಬೆಳಗಿತು.
ಆದರೆ ಆ ಅಂತರ್ಮುಖ ಅನ್ವೇಷಣಾ ಪ್ರವೃತ್ತಿ ಮರೆಯಾಗಿ ಒಳನೋಟದಿಂದ ಬೆಳಗಿದ ಸತ್ಯಗಳ ಆಧಾರದ ಮೇಲೆ ರೂಪುಗೊಂಡ ಸಂಸ್ಕೃತಿಯ ನೆಲಗಟ್ಟು ಸಡಿಲವಾದಂತಾಗಿದೆ. ಒಳಮುಖ ಅನ್ವೇಷಣಾ ಪ್ರವೃತ್ತಿ ಶೂನ್ಯರಾದ ಜನರಿಗೆ ಅವು ಅಜ್ಞರಿಂದ ರೂಪುಗೊಂಡ ನಡೆವಳಿಕೆಗಳೆಂಬಂತೆ ಕಾಣುತ್ತಿವೆ. ಅಂತೆಯೇ ಋಷಿಯುಗದ ವ್ಯವಸ್ಥೆಗಳೆಲ್ಲವೂ ಇಂದು ಆ ಪ್ರವೃತ್ತಿಯಿಲ್ಲದ ಜನಗಳ ಮೂದಲಿಕೆಗೆ ಗುರಿಯಾಗಿವೆ. ಇಂದಿನ ಪ್ರವೃತ್ತಿಯನ್ನು ನೋಡಿದರೆ ಋಷಿಯುಗವು ಮುಗಿದ ಕಥೆಯೆಂದೇ ಭಾಸವಾಗುವಂತಿದೆ.
ಆದರೆ ನಿಜವು ಇದಕ್ಕಿಂತಲೂ ಬೇರೆಯಾಗಿದೆ. ಜೀವಿ ಸಹಜವಾದ ಒಳ ಮುಖ ಅನ್ವೇಷಣೆಯ ಪ್ರವೃತ್ತಿ ಮತ್ತೆ ಪ್ರಬಲವಾಗುವುದು ಅಸಹಜವೇನೂ ಅಲ್ಲ. ಆ ಪ್ರವೃತ್ತಿ ಪ್ರಬಲಗೊಂಡಾಗ ಒಳಮುಖವಾದ ಅನ್ವೇಷಣೆಯತ್ತ ತಿರುಗುವುದು ಅಷ್ಟೇ ಸಹಜವಾಗಿದೆ. ಹಾಗೆ ತಿರುಗಿದಾಗ ಒಳ ಸತ್ಯದತ್ತ ಧಾವಿಸುವುದೂ ಅನಿವಾರ್ಯವಾಗುತ್ತದೆ. ನಿಗೂಢ ಸತ್ಯಗಳು ಮಾನವ ಮತಿಯಲ್ಲಿ ಮತ್ತೆ ಮಿಂಚಿದರೆ ಆ ಅರಿವಿನ ಫಲವಾಗಿ ಆ ದರ್ಶನದ ಆಧಾರದ ಮೇಲೆ ರೂಪುಗೊಂಡ ವ್ಯವಸ್ಥೆಗಳು ಪುನಃ ರೂಪುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಭೌಗೋಳಿಕ ಪ್ರಜ್ಞೆಯಿಂದ ರೂಪುಗೊಂಡ ನಕ್ಷೆ ಮರೆಯಾದ ಮಾತ್ರಕ್ಕೆ ಮತ್ತೆ ಭೌಗೋಳಿಕ ರಹಸ್ಯವನ್ನರಿತವನು ಅದನ್ನು ರೂಪುಗೊಳಿಸಲಾರನೇ? ಅಂತೆಯೇ ನಿಸರ್ಗ ನಿಗೂಢ ಸತ್ಯದ ತಳಹದಿಯ ಮೇಲೆ ಕಟ್ಟಲ್ಪಟ್ಟ, ಋಷಿಯುಗ ಸೃಷ್ಟಿಯ ಇತಿಹಾಸದಲ್ಲಿ ಮುಗಿದ ಕಥೆಯಲ್ಲ. ಅಂತರ್ಮುಖ ಅನ್ವೇಷಣಾ ಪ್ರವೃತ್ತಿಯ ತೀವ್ರತೆ ಹುಟ್ಟಿದಾಗ ಅಲ್ಲಿ ಗೋಚರಾಗುವ ಸತ್ಯಗಳೇ ಆ ಯುಗವನ್ನು ಮತ್ತೆ ಬೆಳಕಿಗೆ ತರಬಲ್ಲವು.
ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1980 ಸಂಪುಟ:2 ಸಂಚಿಕೆ:7 ರಲ್ಲಿ ಪ್ರಕಟವಾಗಿದೆ.