Monday, June 14, 2021

ಆರ್ಯಸಂಸ್ಕೃತಿ ದರ್ಶನ - 46 - ಅಂತಃಕರಣಶುದ್ಧಿಯ ಉಪಾಯಗಳು (Arya Samskruti Darshana - 46 - Antahkaranasuddhiya upayagalu)

ಲೇಖಕರು : ಶ್ರೀ ಶೇಷಾಚಲ ಶರ್ಮರು ಸನಾತನವಾದ  ವೈದಿಕಧರ್ಮವೇ ಸಾರ್ವಭೌಮವಾದ ಮಾನವಧರ್ಮ. ವೈದಿಕಧರ್ಮ ಪರಂಪರೆಯಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧಿಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಬಹಿರಂಗಶುದ್ಧಿಯ ಗುರಿಯು ಅಂತಃಕರಣದ ಶುದ್ಧಿಯೇ ಆಗಿದೆ.  ಧರ್ಮದಿಂದ ಶ್ರೇಯಸ್ಸು (ಆತ್ಮಸುಖ) ಮತ್ತು ಪ್ರೇಯಸ್ಸು (ಇಂದ್ರಿಯು ಕಲ್ಯಾಣ) ಎರಡೂ ಸಿದ್ಧಿಸುವುದು. ಆದ್ದರಿಂದಲೇ "ಯತೋಽಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ" ಎಂಬುದಾಗಿ ಧರ್ಮದ ಲಕ್ಷಣವನ್ನು ಮಹರ್ಷಿಗಳು ನಿರೂಪಿಸಿದರು.

ಭಕ್ತಿಯಿಂದ ಭಗವಂತನನ್ನು ಭಜಿಸಿ ಆತ್ಮದರ್ಶನವನ್ನು ಪಡೆಯುವುದೇ ಪರಮಧರ್ಮ. ಪವಿತ್ರತಮನಾದ ಪರಮಾತ್ಮನ ಪಾವನವಾದ ಸ್ಮರಣೆಯಿಂದಲೇ ಪರಮಶುದ್ಧಿಯು ಲಭಿಸುವುದು. ಆದುದರಿಂದಲೇ ಪ್ರತಿದಿನವೂ ಜೀವನದ ಪರಮಶುದ್ಧಿಗಾಗಿ ಆಚರಿಸುವ ಸಂಧ್ಯೋಪಾಸನೆಯ ಆರಂಭದಲ್ಲಿ-

"ಯಃ ಸ್ಮರೇತ್ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ" ಎಂಬುದಾಗಿ ಪವಿತ್ರತಮನಾದ ಪುಂಡರೀಕಾಕ್ಷನನ್ನು ಸ್ಮರಿಸುವುದು. ಸಾಮಾನ್ಯವೂ ಸಾರ್ವತ್ರಿಕವೂ ಆದ ಧರ್ಮದ ಹತ್ತು ಲಕ್ಷಣಗಳು ಮನುವಹರ್ಷಿಯಿಂದ ಹೀಗೆ ಉಕ್ತವಾಗಿವೆ-

ಧೃತಿಃ ಕ್ಷಮಾ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ ।

ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ॥

ಇವುಗಳೆಲ್ಲವೂ ಬಾಹ್ಯಶುದ್ಧಿಯ ಮೂಲಕ ಅಂತಃಕರಣಶುದ್ಧಿಯನ್ನು ಪಡೆಯುವ ಸಾಧನಗಳಾಗಿವೆ. ಶುಚಿತತ್ತ್ವಕ್ಕೆ ಮಹತ್ತ್ವವನ್ನು ನೀಡಲು ಶೌಚವನ್ನು ಧರ್ಮ ಸಾಧನಗಳಲ್ಲಿ ಪರಿಗಣಿಸಲಾಗಿದೆ. ಶುಚಿಯಾಗಿ ಇರುವುದೇ ಶೌಚ. ಬಾಹ್ಯ ಮತ್ತು ಆಂತರಿಕಶುಚಿಯು ಧರ್ಮಸಾಧಕನಿಗೆ ಅನಿವಾರ್ಯವಾದುದು. ಶರೀರದ ಕಲ್ಮಶವನ್ನು ಪರಿಹರಿಸಿಕೊಂಡರೆ ಬಾಹ್ಯ ಶುದ್ಧಿಯು ಸಿದ್ಧಿಸುವುದು. ಅಂತಃಕರಣದ ದೋಷಗಳನ್ನು ಹೋಗಲಾಡಿಸಿಕೊಂಡು ಅಂತರಿಕ ಶುದ್ಧಿಯನ್ನು ಪಡೆಯಬೇಕು. ಎರಡು ವಿಧವಾದ ಶುದ್ಧಿಯನ್ನು ಪಡೆಯಲು ಬೋಧಾಯನಧರ್ಮಸೂತ್ರದಲ್ಲಿ ಉಪಾಯಗಳು ಹೀಗೆ ನಿರ್ದಿಷ್ಟವಾಗಿವೆ :-

ಅಬ್ಧಿಃ ಶುದ್ಧ್ಯಂತಿ ಗಾತ್ರಾಣಿ ಬುದ್ಧಿರ್ಜ್ಞಾನೇನ ಶುದ್ಧ್ಯತಿ ।

ಅಹಿಂಸಯಾ ಚ ಭೂತಾತ್ಮಾ ಮನಃ ಸತ್ಯೇನ ಶುದ್ಧ್ಯತಿ ॥

ಮನುಮಹರ್ಷಿಯು ಈ ವಿಷಯವನ್ನೇ ಸ್ವಲ್ಪ ವಿಸ್ತರಿಸಿ ಈ ರೀತಿ ಹೇಳಿದ್ದಾನೆ -

ಜ್ಞಾನಂ ತಪೋsಗ್ನಿರಾಹಾರೋ ಮೃನ್ಮನೋ ವಾರ್ಯುಪಾಂಜನಮ್ । 

ವಾಯುಃ ಕರ್ಮಾರ್ಕಕಾಲೌಚ ಶುದ್ಧೇಃ ಕರ್ತ್ಯಣಿ ದೇಹಿನಾಮ್ ॥

 (ಜ್ಞಾನ, ತಪಸ್ಸು, ಅಗ್ನಿ, ಆಹಾರ, ಮೃತ್ತಿಕೆ, ಮನಸ್ಸು, ನೀರು, ಉಪಲೇಪನ, ವಾಯು, ಕರ್ಮ, ಸೂರ್ಯ, ಕಾಲ - ಇವು ದೇಹಿಗಳಿಗೆ ಶುದ್ಧಿ ಸಾಧನಗಳು)

ತತ್ತ್ವಸಾಕ್ಷಾತ್ಕಾರವನ್ನು ಪಡೆಯಲು ಸಮರ್ಥವಾಗಿ ನಿತ್ಯಯಾತ್ಮಕವಾಗಿರುವ ಪರಿಶುದ್ಧವಾದ ಅಂತಃಕರಣವೃತ್ತಿಯೇ ಬುದ್ಧಿ ಎನಿಸುವುದು. ಪರಮಾತ್ಮಜ್ಞಾನ (ಬ್ರಹ್ಮಜ್ಞಾನ) ದಿಂದ ಇಂತಹ ಪರಿಪೂರ್ಣ ಶುದ್ಧಿಯು ಪ್ರಾಪ್ತವಾಗುತ್ತದೆ. ಬಹಿರಿಂದ್ರಿಯಗಳ ಮೂಲಕ ವಿಷಯಗಳ ಸಂಬಂಧವನ್ನು ಹೊಂದಿ ಕರ್ಮ ಪ್ರವೃತ್ತವಾದ ಅಂತಃಕರಣ ಅಧವಾ ಇಂತಹ ಅಂತಃಕರಣವನ್ನು ಉಪಾಧಿಯಾಗಿ ಉಳ್ಳ ಜೀವನನ್ನು ಭೂತಾತ್ಮಾ ಎಂದು ಕರೆಯುತ್ತಾರೆ. ಸರ್ವ ಭೂತಗಳಲ್ಲಿ ಸಮದರ್ಶನವನ್ನು ಬೆಳೆಸಿಕೊಂಡು ಕಾಯ, ವಾಕ್, ಮನಸ್ಸುಗಳಿಂದ ಯಾರಿಗೂ ಹಿಂಸೆಯನ್ನುಂಟುಮಾಡದಿರುವುದರಿಂದ ಈ ರೀತಿಯ ಅಂತಃಕರಣ ಶುದ್ಧಿಯು ಉಂಟಾಗುತ್ತದೆ. ಸಂಕಲ್ಪ-ವಿಕಲ್ಪರೂಪವಾದ ವೃತ್ತಿಗಳಿಂದ ಕೂಡಿದ ಅಂತಃಕರಣವೇ ಮನಸ್ಸು. ಸಂಕಲ್ಪಾವಸ್ಥೆಯಲ್ಲೇ ಮನಸ್ಸು ಪರಿಶುದ್ಧವಾಗಬೇಕು. ಇಲ್ಲದಿದ್ದರೆ ಅಂತರಂಗ-ಬಹಿರಂಗ ಶುದ್ಧಿಗಳು ಸಿದ್ಧಿಸುವುದಿಲ್ಲ. ಶರೀರ, ಮಾತು, ಮನಸ್ಸುಗಳಿಂದ ಸತ್ಯವನ್ನು ಅವಲಂಬಿಸುವುದರಿಂದ ಮನಸ್ಸು ಸಂಕಲ್ಪಾವಸ್ಥೆಯಲ್ಲೇ ಪರಿಶುದ್ಧವಾಗುತ್ತದೆ. ಭೂತಾತ್ಮನ ಪರಿಶುದ್ಧಿಗೆ ವಿದ್ಯೆ ಮತ್ತು ತಪಸ್ಸುಗಳೂ ಸಾಧನಗಳೆಂದು ಮನುವು ಒತ್ತಿಹೇಳಿದ್ದಾನೆ. ಅರ್ಥಶುದ್ಧಿ, ಕ್ಷಮೆ, ದಾನ, ಜಪ, ತಪಸ್ಸು - ಮುಂತಾದವುಗಳೂ ಅಂತಃಕರಣ ಶುದ್ಧಿಯ ಸಾಧನಗಳು.

ಚಿತ್ತವೃತ್ತಿಯ ನಿರೋಧದಿಂದ ಚಿತ್ತವು ಪರಿಶುದ್ಧವಾಗಿ ಸಮಾಧಿಸಿದ್ಧಿಯುಂಟಾಗುತ್ತದೆ. ಅಂತಃಕರಣವೇ ಯೋಗಶಾಸ್ತ್ರದಲ್ಲಿ ಚಿತ್ತವೆಂಬುದಾಗಿ ಉಕ್ತವಾಗಿದೆ. ಸಮಾಧಿಸಿದ್ಧಿಯಿಂದ ಪರಮಾತ್ಮದರ್ಶನ ಪ್ರಾಪ್ತವಾಗುತ್ತದೆ. ಚಿತ್ತಶುದ್ಧಿಯನ್ನು ಹೊಂದಿ ಸಮಾಧಿಯನ್ನು ಸಾಧಿಸಲು ಯೋಗಶಾಸ್ತ್ರವು ಅಷ್ಟಾಂಗಯೋಗವನ್ನು ಪರಮಸಾಧನವನ್ನಾಗಿ ವಿಧಿಸುತ್ತದೆ. ಸರ್ವವಿಧವಾದ ಧರ್ಮಾಚರಣೆಯ ಪ್ರಾರಂಭದಲ್ಲಿ ಪ್ರಾಣಾಯಾಮವು ವಿಹಿತವಾಗಿದೆಯಷ್ಟೆ. ಚಿತ್ತಶುದ್ಧಿಯನ್ನು ಪಡೆಯಲು ಇದು ಅತ್ಯಂತ ಪ್ರಧಾನವಾದ ಸಾಧನ. ಪ್ರಾಣಾಯಾಮವು ಭಗವದ್ಧ್ಯಾನಕ್ಕೆ ಉತ್ತಮ ಸೋಪಾನ. ಭಗವದ್ಧ್ಯಾನದಿಂದ ಸಕಲದೋಷಗಳೂ ನಿವಾರಣೆಯಾಗಿ ಪರಿಪೂರ್ಣವಾದ ಅಂತರಂಗ-ಬಹಿರಂಗ ಶುದ್ಧಿಯು ಉಂಟಾಗುತ್ತದೆ. ವೃದ್ಧ ಶಾಖಾತಪಸ್ಮೃತಿಯಲ್ಲಿ ಭಗವದ್ಧ್ಯಾನದ ಮಹಿಮೆಯು ಹೀಗೆ ಉಕ್ತವಾಗಿದೆ :-

" ಪ್ರಾಣಾಯಾಮಸಹಸ್ರೇಣ ಯತ್ ಪಾಪಂ ನಶ್ಯತೇ ನೃಣಾಮ್ ।

ಕ್ಷಣಮಾತ್ರೇಣ ತತ್ಪಾಪಂ ಹರೇರ್ಧ್ಯಾನಾತ್ ಪ್ರಣಶ್ಯತಿ ॥"

(ಸಾವಿರ ಪ್ರಾಣಾಯಾಮಗಳಿಂದ ನಾಶವಾಗಬಲ್ಲ ಪಾಪವು ಭಗವಂತನ ಧ್ಯಾನದಿಂದ ಕ್ಷಣ ಮಾತ್ರದಲ್ಲಿ ನಾಶವಾಗುತ್ತದೆ.)

  ಧರ್ಮಕ್ಕೆ ವಿರೋಧವಿಲ್ಲದಂತೆ ಅರ್ಥ-ಕಾಮಗಳನ್ನು ಸೇವಿಸಿದರೆ ಚಿತ್ತಶುದ್ಧಿಗೆ ಕಾರಣವಾದ ಧರ್ಮಸಿದ್ಧಿಯುಂಟಾಗುತ್ತದೆ. ಇದರಿಂದ ಆತ್ಮ ದರ್ಶನ ಲಾಭವುಂಟಾಗುತ್ತದೆ. ಧರ್ಮಕ್ಕೆ ವಿರುದ್ಧವಾಗಿ ವಿಷಯಗಳನ್ನು ಸೇವಿಸುವುದರಿಂದ ಪ್ರಜ್ಞಾನಾಶವುಂಟಾಗಿ ಮನುಷ್ಯನು ಸ್ವರೂಪಜ್ಞಾನವನ್ನು ಕಳೆದುಕೊಳ್ಳುತ್ತಾನೆ. ಆದ ಕಾರಣ ವಿಷಯಾಸಕ್ತಿಯಿಂದ ದೂರವಿರುವುದು ಚಿತ್ತಶುದ್ಧಿಯ ಉಪಾಯಗಳಲ್ಲಿ ಬಹುಮುಖ್ಯವಾದುದು. ಮನಸ್ಸಿನ ದೋಷಗಳ ಪರಿಹಾರಕ್ಕೆ ಧೀ, ಧೈರ್ಯ, ಆತ್ಮಜ್ಞಾನ - ಮುಂತಾದವುಗಳು ಪರಮೌಷಧವೆಂದು ಜ್ಞಾನಿಗಳು ಬೋಧಿಸುತ್ತಾರೆ :-

" ಧೀ ಧೈರ್ಯಾತ್ಮಾದಿವಿಜ್ಞಾನಂ ಮನೋದೋಷೌಷಧಂ  ಪರಮ್ ।

ಚಿತ್ತಶುದ್ಧಿಯನ್ನು ಪಡೆಯಲು ಅಹಾರಶುದ್ಧಿಯೂ ಅತ್ಯಂತ ಪ್ರಮುಖವಾದ ಸಾಧನ.

"ಆಹಾರಶುದ್ಧೌ ಸತ್ತ್ವಶುದ್ಧಿಃ, ಸತ್ತ್ವಶುದ್ಧೌ ಧ್ರುವಾಸ್ಮೃತಿಃ, ಸ್ಮೃತಿಲಂಭೇ ಸರ್ವಗ್ರಂಥೀನಾಂ ವಿಪ್ರಮೋಕ್ಷಃ" ಎಂದು ಛಾಂದೋಗ್ಯ ಉಪನಿಷತ್ತು ತಿಳಿಸುತ್ತದೆ. ಆಹಾರಶುದ್ಧಿಯಿಂದ ಅಂತಃಕರಣಶುದ್ಧಿಯುಂಟಾಗುತ್ತದೆ. ಅಂತಃಕರಣಶುದ್ಧಿಯಿಂದ ತಡೆಯಿಲ್ಲದ ಆತ್ಮಸ್ವರೂಪಾನುಸಂಧಾನವುಂಟಾಗುತ್ತದೆ. ಆತ್ಮಸ್ವರೂಪಾನುಸಂಧಾನದಿಂದ ಹೃದಯಗ್ರಂಥಿಮೋಕ್ಷವುಂಟಾಗುತ್ತದೆ. ಇಲ್ಲಿ ಆಹಾರವೆಂದರೆ ಬಾಯಿಂದ ತಿನ್ನುವ ಆಹಾರವೆಂದಷ್ಟೇ ಅರ್ಥವಲ್ಲ. ಭೋಕ್ತೃವೆನಿಸಿದ ಜೀವನು ತನ್ನ ಭೋಗಕ್ಕಾಗಿ ಆಹರಣ ಮಾಡುವ ಅಂದರೆ ತೆಗೆದುಕೊಳ್ಳುವ ಶಬ್ದಾದಿ ವಿಷಯವಿಜ್ಞಾನವೆಲ್ಲವೂ ಆಹಾರವೆನಿಸುತ್ತದೆ ಎಂದು ಶ್ರೀಶಂಕರಭಗವತ್ಪಾದರು ವಿವರಿಸಿದ್ದಾರೆ. ಅನ್ನವೂ ಬ್ರಹ್ಮಸ್ವರೂಪ. ಅನ್ನವನ್ನು ಭುಂಜಿಸುವವನೂ ಬ್ರಹ್ಮಸ್ವರೂಪ. ವಿಷ್ಣು ಸಹಸ್ರನಾಮದಲ್ಲಿ ಅನ್ನ ಮತ್ತು ಅನ್ನಾದ - ಎರಡೂ ಭಗವಂತನ ನಾಮಗಳೇ ಆಗಿವೆ. ತಿನ್ನಲ್ಪಡುವುದೂ ಅನ್ನವೇ. ತಿನ್ನುವವನೂ ಅನ್ನವೇ. "ಅದ್ಯತೇಽತ್ತಿಚ ಭೂತಾನಿ । ತಸ್ಮಾದನ್ನಂ ತದುಚ್ಯತ ಇತಿ ।"  ಎಂಬುದಾಗಿ ಉಪನಿಷತ್ತು ಅನ್ನಬ್ರಹ್ಮವನ್ನು ಕೊಂಡಾಡುತ್ತದೆ.

ಈ ರೀತಿಯಾಗಿ ಅಹಾರ, ವಿಹಾರ, ವಿಚಾರ, ವ್ಯವಹಾರ, ವ್ಯಾಪಾರ - ಇವೆಲ್ಲವುಗಳ ಶುದ್ಧಿಯಿಂದ ಅಂತಃಕರಣಶುದ್ಧಿಯು ಸಿದ್ಧಿಸುತ್ತದೆ. ಅಂತಃಕರಣಶುದ್ಧಿಯ ಗುರಿ ಸ್ವರೂಪಜ್ಞಾನ ಪ್ರಾಪ್ತಿ.

"ಪಂಚೇಂದ್ರಿಯ, ದೇಹ, ಬುದ್ಧಿ, ಮನಸ್ಸು, ದ್ರವ್ಯ, ದೇಶ, ಕ್ರಿಯೆ - ಇವುಗಳ ಶುದ್ಧಿಯೇ ಆಚಾರ. ಒಂದು ವಸ್ತುವಿನ ಸಹಜಸ್ವರೂಪವು ಕಾಲ, ದೇಶ, ಸನ್ನಿವೇಶಗಳಿಗೆ ಸಿಕ್ಕಿ ವಿಕೃತವಾದಾಗ ಆ ವಿಕಾರವನ್ನು ಹೋಗಲಾಡಿಸಿ ಅದನ್ನು ತನ್ನ ಸಹಜ ಸ್ಥಿತಿಯಲ್ಲಿಡಲು ಮಾಡುವ ಕ್ರಿಯೆಯೇ ಆಚಾರ. ಋಷಿಗಳು ನಮಗೆ ಆಚಾರವನ್ನು ಕೊಟ್ಟರು. ಜ್ಞಾನ, ಆನಂದ, ಸಮಾಧಿಯ ಸ್ಥಿತಿಯನ್ನು ಅಷ್ಟು ಏತಕ್ಕೆ ಪುನಃ ಪುನಃ ಮಹರ್ಷಿಗಳು ಹೊಗಳುತ್ತಾರೆ? ಎಂದರೆ ಅದು ಮನುಷ್ಯನ ಸಹಜ ಸ್ಥಿತಿ. ಅದನ್ನು ಅವನು ಕಳೆದುಕೊಂಡಿದ್ದಾನೆ. ಆ ಸಹಜ ಸ್ಥಿತಿಯನ್ನು ಅವನು ಮತ್ತೆ ಸಂಪಾದಿಸಲಿ ಎಂದು ಅದರ ನೆನಪನ್ನುಂಟುಮಾಡಲು ಹಾಗೆ ಹೊಗಳುತ್ತಾರೆ. "ಆತ್ಮನ ಹಿತಕ್ಕೆ ಅನುಕೂಲವಾದುದೆಲ್ಲವೂ ಶುದ್ಧಿಯೇ. ಶಿಷ್ಟರೂ, ಆಪ್ತರೂ, ವಿಜ್ಞಾನಿಗಳೂ ಆದ ಮಹರ್ಷಿಗಳ ಕಡೆಯಿಂದ ಆಚಾರ ವಿಜ್ಞಾನವನ್ನು ತಿಳಿಯಬೇಕು" - ಶ್ರೀರಂಗಮಹಾಗುರುಗಳ ಈ ಅಮೃತವಚನಗಳನ್ನು ಉಲ್ಲೇಖಿಸಿ ಅಂತಃಕರಣಶುದ್ಧಿ ತತ್ತ್ವದ ಈ ವಿಚಾರವನ್ನು "ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ" ಎಂಬಂತೆ ಧರ್ಮ ಪ್ರಭುವಾದ ಪರಮಾತ್ಮನ ಪರಮಶುದ್ಧವಾದ ಪಾದಾರವಿಂದಗಳಲ್ಲಿ ಅರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೪ ಸಂಚಿಕೆ:೫, ಆಗಸ್ಟ್ ೧೯೯೨ ತಿಂಗಳಲ್ಲಿ  ಪ್ರಕಟವಾಗಿದೆ.