Sunday, June 27, 2021

ಶ್ರೀರಾಮನ ಗುಣಗಳು - 11 ನೀತಿಮಾನ್- ಶ್ರೀರಾಮ (Sriramana Gunagalu - 11- Nitimaan Shri Rama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)



ನೀತಿ ಎಂಬ ಅರ್ಥದಲ್ಲಿ ನಯ, ವಿನಯ ಮುಂತಾದ ಪದಗಳನ್ನೂ ಉಪಯೋಗಿಸಲಾಗುವುದು. ನೀತಿಶಾಸ್ತ್ರದಲ್ಲಿಒಂದು ಮಾತಿದೆ- 'ವಿನಯವೆಂದರೆ ಶಾಸ್ತ್ರನಿಶ್ಚಯ, ಇಂದ್ರಿಯಜಯ. ಆದ್ದರಿಂದ ವಿನಯ ಉಳ್ಳವನು ಎಲ್ಲವನ್ನುಪಡೆಯುತ್ತಾನೆ' ಎಂದು. ವಿನಯವೆಂಬುದು ಬಾಗುವಿಕೆ. ಬಾಗಿದಾಗ ಮಾತ್ರ ಮೇಲಿರುವ ಮಹತ್ತಾದ ವಿಷಯ ಕೆಳಗೆಇಳಿಯಲು ಸಾಧ್ಯ. ಫಲಬಂದಾಗ ಗಿಡಮರಗಳು ಬಾಗುತ್ತವೆ. ದೂರದಲ್ಲಿರುವ ಮೋಡಗಳು ಸೇರಿ ಭಾರವಾಗಿ ಬಾಗಿದಾಗಮಳೆಯಾಗುತ್ತದೆ. ಮಹಾತ್ಮರಲ್ಲಿರುವ ಯಾವ ಉನ್ನತವಾದ ವಿಷಯವುಂಟೋ ಅದು ಹರಿಯಲು ಈ ನಯ-ವಿನಯವುಸಾಧನವಾಗುತ್ತದೆ. ಆತ್ಮದ ನೀತಿಗೆ ಅನುಗುಣವಾಗಿ ಮನಸ್ಸು ಮತ್ತು ಇಂದ್ರಿಯಗಳ ನೀತಿಯನ್ನು ಇಟ್ಟುಕೊಳ್ಳುವುದೇನೈತಿಕಜೀವನ. ಇದನ್ನು ತಪ್ಪಿದಾಗ ಅದು ಅವನ ಜೀವನದ ಗುರಿಯನ್ನೇ ಮರೆಸುತ್ತದೆ. ಹಾಗಾಗಿ ಜೀವನಕ್ಕೆ ನೀತಿಯುಅತ್ಯಂತ ಆವಶ್ಯಕ ಎಂಬ ಶ್ರೀರಂಗಮಹಾಗುರುಗಳ ಆಶಯವನ್ನು ಗಮನಿಸಬಹುದು.ಶ್ರೀರಾಮನನ್ನು ನೀತಿಮಾನ್, ನೀತಿಜ್ಞ ಎಂದೆಲ್ಲಾ ಹೇಳಲಾಗುತ್ತದೆ. ಆತನ ನೀತಿ ಲೋಕಕ್ಕೆ ಆದರ್ಶವಾದುದು. ಅವನನಯ- ವಿನಯ ಲೋಕಕ್ಕೆ ಮಾನ್ಯವಾದುದು. ಸರ್ವರೂ ಅನುಸರಿಸಲು ಯೋಗ್ಯವಾದುದು. ಸಾರ್ವಕಾಲಿಕವಾದುದು,ಸತ್ಯವಾದುದು. ಆತನಲ್ಲಿ ನೀತಿಜ್ಞತೆ ಇದ್ದುದರಿಂದ ಅವನ ಬಾಳಾಟದಲ್ಲಿ ಅಂಕುಡೊಂಕುಗಳುಕಾಣುವುದಿಲ್ಲ. 'ತಾನು ಏಕೆ ಈ ಭೂಮಿಗೆ ಅವತರಿಸಿದ್ದೇನೆ' ಎಂಬುದನ್ನು ಎಲ್ಲೂ ಮರೆತಿಲ್ಲ. ಅತಿಮಾನುಷವಾದಯಾವ ಪವಾಡವನ್ನೂ ಮಾಡದೇ ಮಾನವನ ರೂಪದಿಂದಲೇ ದಾನವನ ಸಂಹಾರಕ್ಕಾಗಿ ಅವತರಿಸಿದ್ದು ಎಂಬುದನ್ನುತನ್ನ ಜೀವನದ ಉದ್ದಕ್ಕೂ ತೋರಿಸಿದ್ದಾನೆ. ಕೆಲವೊಮ್ಮೆ, ನಾವು ಯಾವುದೋ ಕಾರ್ಯಾರ್ಥವಾಗಿ ಒಂದೆಡೆಗೆ ಬಂದಾಗ, ಬಂದ ಕಾರಣವೇ ನಮಗೆ ಮರೆತು ಹೋಗಿಬಿಡುತ್ತದೆ.

ಆದರೆ ರಾಮನು ತಾನು ಬಂದ ಉದ್ದೇಶವನ್ನು ಎಂದೂ ಮರೆತವನಲ್ಲ. ಶ್ರೀರಾಮನ ಪ್ರತಿಜ್ಞೆಯೇ ವಿಶಿಷ್ಟವಾದುದು. ಆದರ್ಶ ರಾಜ್ಯ ವ್ಯವಸ್ಥೆಯ ದೃಷ್ಟಿಯಿಂದ ಶ್ರೀರಾಮನು ತನ್ನಮಡದಿಯನ್ನೇ ತ್ಯಾಗಮಾಡಿದ ಮಹಾನ್ ಆದರ್ಶಪುರುಷ. ಕೊಟ್ಟ ಮಾತನ್ನು ತಪ್ಪದಿರುವುದು ಅವನ ನೀತಿಮತ್ವಕ್ಕೆಸಾಕ್ಷಿ. ಭರವಸೆಗಳ ಮಹಾಪೂರವನ್ನೇ ಹರಿಸಿ, ಅವುಗಳಲ್ಲಿ ಯಾವುದೊಂದನ್ನೂ ಈಡೇರಿಸದೆ, ಜನರಿಗೆ ಮೋಸಮಾಡುವ ವಿಚಾರ ಶ್ರೀರಾಮನ ಚರಿತೆಯಲ್ಲಿ ಎಲ್ಲೂ ನೋಡಲಾರೆವು. ಈ ದೃಷ್ಟಿಯಿಂದಲೇ ಅವನ ರಾಜ್ಯವು 'ರಾಮರಾಜ್ಯ'ವೆಂದೇಪ್ರಸಿದ್ಧಿ ಪಡೆದಿದೆ.ಗುರುಹಿರಿಯರಲ್ಲಿ ತೋರುವ ವಿನಯವು ಶ್ರೀರಾಮನ ನೀತಿವಂತಿಕೆಗೆ ಉದಾಹರಣೆ. ಕೈಕೇಯಿಯು ಶ್ರೀರಾಮನಿಗೆ ವನಕ್ಕೆತೆರಳಲು ಹೇಳಿದಾಗ ಅದಕ್ಕೆ ಮರುಮಾತಾಡದೆ, ಅದನ್ನು ಹಾಗೆಯೇ ಸ್ವೀಕರಿಸಿ, ತಂದೆತಾಯಿಯರ ಎಲ್ಲಾಮಾತುಗಳನ್ನು ಸಗೌರವವಾಗಿ ಹೇಗೆ ನಡೆಸಿಕೊಡಬೇಕೆಂಬುದನ್ನು ತೋರಿಸಿದ ಶ್ರೀರಾಮ. ತಾನು ಭಗವಂತನ ಅವತಾರ ಎಂದುತಿಳಿದಿದ್ದರೂ, ತನ್ನ ಸ್ಥಾನದ ಮಹತ್ತ್ವವನ್ನು ಎತ್ತಿಹಿಡಿಯಲು ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯಾದಿ ಮಹರ್ಷಿಗಳಆಶೀರ್ವಾದವನ್ನು ಬೇಡಿದ. ಕೊನೆಗೆ ಯುದ್ಧದಲ್ಲಿ ಅಗಸ್ತ್ಯರಿಂದ ಆದಿತ್ಯಹೃದಯ ಮಂತ್ರೋಪದೇಶವನ್ನೂ ಪಡೆದುತಾನೊಬ್ಬ ಸಾಮಾನ್ಯ ಮಾನವನಂತೆ  ವರ್ತಿಸಿದ. ಹೀಗೆ ಅನೇಕ ಕಡೆ ತನ್ನ ಆದರ್ಶವಾದ ನೀತಿಯನ್ನುಪ್ರಕಟಪಡಿಸಿ ಆದರ್ಶನಾದ ಶ್ರೀರಾಮ. 

ಸೂಚನೆ : 27/6/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.