Sunday, June 13, 2021

ಶ್ರೀರಾಮನ ಗುಣಗಳು - 9 ಆನಂದದಾಯಕ - ಶ್ರೀರಾಮ (Sriramana Gunagalu -9 Anandadayaka - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)


'ರಾಮ' ಎಂಬ ಶಬ್ದವೇ ಸಾಕು ಶ್ರೀರಾಮನು ಎಷ್ಟು ಆನಂದವನ್ನು ಇತರರಿಗೆ ಹಂಚುತ್ತಿದ್ದ ಎಂಬುದನ್ನು ತಿಳಿಯಲು.'ಯಸ್ಮಿನ್ ರಮಂತೇ ಮುನಯೋ ವಿದ್ಯಯಾ ಜ್ಞಾನವಿಪ್ಲವೇ | ತಂ ಗುರುಃ ಪ್ರಾಹ ರಾಮೇತಿ ರಮಣಾದ್ರಾಮ ಇತ್ಯಪಿ'ಎಂಬುದು ಅಧ್ಯಾತ್ಮರಾಮಾಯಣದ ಮಾತು. ಮುನಿಗಳು ಯಾರಲ್ಲಿ ರಮಿಸುತ್ತಾರೋ-ಆನಂದಿಸುತ್ತಾರೋ ಅವನೇಶ್ರೀರಾಮ. ಎಲ್ಲರನ್ನು ರಮಿಸುವುದರಿಂದ-ಸಂತೋಷಪಡಿಸುವುದರಿಂದ ಆತ ರಾಮ. ಶ್ರೀರಾಮನ ಸಹಜಗುಣಗಳಲ್ಲಿಆನಂದದಾಯಕತ್ವ ಗುಣವು ಅತಿವಿಶೇಷವಾದುದು. ಸಾಕೇತರಾಮ, ರಾಮಭದ್ರ, ವಿಶ್ವಾಮಿತ್ರಪ್ರಿಯ, ರಘುನಂದನ,ಆನಂದ, ಆನಂದವಿಗ್ರಹ ಇತ್ಯಾದಿ ಹೆಸರುಗಳು ಶ್ರೀರಾಮನಿಗೆ ಈ ಹಿನ್ನೆಲೆಯಲ್ಲೇ ಬಂದಿವೆ. ವಾಲ್ಮೀಕಿಗಳು 'ರಾಮಸ್ಯಲೋಕರಾಮಸ್ಯ' ಎಂಬುದಾಗಿ ಹೇಳಿದ್ದಾರೆ. ರಾಮನು ಜನನದಿಂದ ಆರಂಭಿಸಿ ಪಟ್ಟಾಭಿಷೇಕಪರ್ಯಂತ ಎಲ್ಲೆಲ್ಲೂಆನಂದದಾಕನಾಗಿದ್ದ.ಅನೇಕವರ್ಷಗಳಿಂದ ಸಂತಾನಭಾಗ್ಯವಿಲ್ಲದೇ ಕೊರಗುತ್ತಿದ್ದ ದಶರಥ ಮಹಾರಾಜನಿಗೆ ಶ್ರೀರಾಮನ ಮುಖದರ್ಶನವುಅನಿತರಸಾಧಾರಣ ಆನಂದವನ್ನು ನೀಡಿತು. ಇದಕ್ಕಿಂತ ಮಿಗಿಲಾಗಿ ದುಷ್ಟನಾದ ರಾವಣನ ಸಂಹಾರಕ್ಕಾಗಿಮಹಾವಿಷ್ಣುವಿನ ಅವತಾರವಾಗಲಿದೆ ಎಂದು ದೇವಾನುದೇವತೆಗಳೂ ಸಂತೋಷಪಟ್ಟಿದ್ದರು. ತಾಯಿ ಕೌಸಲ್ಯೆಗೆ- 'ತನ್ನಗರ್ಭಗೃಹದಲ್ಲಿ ಮಗುವಾಗಿ ರೂಪುಗೊಳ್ಳುತ್ತಿದೆ' ಎಂಬ ಹರ್ಷ. ಪುತ್ರಪ್ರಾಪ್ತಿಯನ್ನು 'ಆನಂದದ ಗ್ರಂಥಿ' ಎಂಬುದಾಗಿ ಕವಿಭವಭೂತಿ ತನ್ನ ಉತ್ತರರಾಮಚರಿತಂ ಎಂಬ ನಾಟಕದಲ್ಲಿ ಹೇಳುತ್ತಾನೆ. ಅಂತೆಯೇ ದಶರಥನ ಕುಟುಂಬದಲ್ಲಿ ಆನಂದರಸವೇಮಡುಗಟ್ಟಿತ್ತು. ಪ್ರಿಯದರ್ಶನನಾದ ಶ್ರೀರಾಮನನ್ನು ನೋಡುವುದೇ ಅಯೋಧ್ಯಾಪುರವಾಸಿಗಳಿಗೆಹಬ್ಬವಾಗಿತ್ತು. ಅವನ ಪಟ್ಟಾಭಿಷೇಕವಾರ್ತೆಯನ್ನು ಕೇಳಿದೊಡನೇ ಇಡೀ ಭೂಮಂಡಲವೇ ಸಂಭ್ರಮಿಸಿತ್ತು.ವಿಶ್ವಾಮಿತ್ರರು ದಾರಿಯುದ್ದಕ್ಕೂ ಅನೇಕ ಕಥೆಯನ್ನು ಹೇಳುತ್ತಾ, ನಾನಾ ಶಸ್ತ್ರಾಸ್ತ್ರಗಳನ್ನು ಅನುಗ್ರಹಿಸಿದರು. ಇದರಿಂದರಾಮನು 'ವಿಶ್ವಾಮಿತ್ರಪ್ರಿಯ'ನಾದ. ಶ್ರೀರಾಮನು ವನಕ್ಕೆ ತೆರಳುವಾಗ, ಋಷಿಜನರು ಹೃದಯದಲ್ಲೇ ರಾಮನನ್ನುಆರಾಧಿಸುತ್ತಾ, ಪ್ರೀತಿಸುತ್ತಾ ಅಯೋಧ್ಯೆಯ, 'ರಾಮನೆಲ್ಲಿರುತ್ತಾನೋ ಅದೇ ಅಯೋಧ್ಯೆ, ರಾಮನಿಲ್ಲದಿರುವುದು ಅದುಕಾಡೇ' ಎಂಬುದಾಗಿ ರಾಮನನ್ನೇ ಹಿಂಬಾಲಿಸುತ್ತಿರುವುದರಿಂದ 'ಋಷಿಜನಪ್ರೀತಮಾನಸ' ಎಂಬ ನಾಮಾಂಕಿತನಾಗುತ್ತಾನೆ.ಗಂಗಾನದಿಯನ್ನು ದಾಟುವಾಗ ಗುಹನನ್ನು ಭೇಟಿಯಾಗುತ್ತಾನೆ. ಗುಹನು ಶ್ರೀರಾಮನನ್ನು ಕಂಡು ಸಾಕ್ಷಾತ್ ಮಹಾಲಕ್ಷ್ಮಿ-ಮಹಾವಿಷ್ಣುವೇ ಪ್ರತ್ಯಕ್ಷರಾದರೋ ಎಂಬಷ್ಟರಮಟ್ಟಿಗೆ ಸಂತೋಷಪಡುತ್ತಾನೆ. ರಾಮನ ಬರುವಿಕೆಗಾಗಿ ಭಕ್ತೆಯಾದಶಬರಿಯು ಪ್ರತಿನಿತ್ಯ ಅವನು ಬರುವ ದಾರಿಯನ್ನು ಸಿಂಗರಿಸುತ್ತಾಳೆ. ಕೊನೆಗೆ ಭಕ್ತಾಗ್ರಣಿ ಕೊಟ್ಟ ಫಲವನ್ನು ಆತ್ಮಸಾತ್ಮಾಡಿಕೊಂಡು 'ಶಬರೀದತ್ತಫಲಾಶನ' ಎಂದು ಪ್ರಸಿದ್ಧನಾಗುತ್ತಾನೆ. ಕೋಸಲೇಂದ್ರದಾಸನಾದ ಹನುಮಂತನು ಸುಗ್ರೀವಸಖ್ಯವನ್ನು ಬೇಡಿ ರಾಮನಿದ್ದಲ್ಲಿಗೆ ಬರುತ್ತಾನೆ. ಆಗ ರಾಮನನ್ನು ಕಂಡ ಹನುಮಂತನೂ ಭಗವದ್ಭಾವದಿಂದಪುಳಕಿತನಾಗುತ್ತಾನೆ. ಸುಗ್ರೀವನಿಗೆ ಶ್ರೀರಾಮನು ಅವನ ಅಣ್ಣನಾದ ವಾಲಿಯನ್ನು ಸಂಹರಿಸಿಕೊಡುವುದಾಗಿಮಾತುಕೊಟ್ಟು, ವಾಲಿಯನ್ನು ಯುದ್ಧದಲ್ಲಿ ಕೊಂದು ಸುಗ್ರೀವನ ರಾಜ್ಯವನ್ನು ಮತ್ತು ಪತ್ನಿಯನ್ನೂ ಹಿಂದಿರುಗಿಸಿ'ಸುಗ್ರೀವಸಖ'ನಾದ. 

ಅತ್ತ ಅರಣ್ಯದಲ್ಲಿ ಋಷಿಜೀವನವನ್ನು ಅಣ್ಣ ಮಾಡಿದರೆ, ಇತ್ತ ಅರಣ್ಯದ ಹೊರಗೆ ನಂದೀಗ್ರಾಮದಲ್ಲಿಆಶ್ರಮವಾಸಿಯಾಗಿ ಭರತನು ನಿರ್ಲಿಪ್ತನಾಗಿ ರಾಮನ ಪಾದುಕೆಯನ್ನೇ ಸಿಂಹಾಸನದಲ್ಲಿ ಇರಿಸಿರಾಜ್ಯಭಾರ ಮಾಡುತ್ತಿರುತ್ತಾನೆ. ಕೊನೆಗೆ ಶ್ರೀರಾಮನು ರಾವಣನನ್ನು ಸಂಹರಿಸಿ ನಂದೀಗ್ರಾಮಕ್ಕೆ ಬಂದು ಭರತನನ್ನುಭೇಟಿ ಮಾಡಿ 'ಭರತವತ್ಸಲ'ನಾಗುತ್ತಾನೆ. ಹೀಗೆ ತನ್ನ ಜೀವನದ ಆದಿಯಿಂದ ಅವತಾರದ ಅಂತ್ಯದವರೆಗೂ ಎಲ್ಲರಿಗೂಹರ್ಷವನ್ನುಂಟುಮಾಡುತ್ತಾ ಆನಂದದಾಯಕನಾಗಿ ಸ್ವತಃ ಆನಂದಸ್ವರೂಪನಾಗಿ ಆನಂದನಾಗಿ ಶ್ರೀರಾಮನು ತನ್ನ ಧಾಮಕ್ಕೆಮರಳುತ್ತಾನೆ.


ಸೂಚನೆ : 13/6/2021 ರಂದು ಈ ಲೇಖನವು  ಹೊಸದಿಗಂತ  ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.