Monday, June 7, 2021

ಆರ್ಯಸಂಸ್ಕೃತಿ ದರ್ಶನ - 45 - ಋಷಿ ಜೀವನ (Arya Samskruti Darshana - 45 - Rusi Jivana)

ಲೇಖಕರು : ಡಾ. ಎಸ್. ವಿ. ಚಾಮುಗಳು 




ಉಪನಿಷತ್ಕಾಲದ ಋಷಿಗಳು ಹೇಗೆ ಜೀವನ ಮಾಡಿದರು, ಅವರು ಯಾವ ಆದರ್ಶಗಳನ್ನು ಅನುಸರಿಸಿದರು? ಎಂಬ ವಿಷಯದಲ್ಲಿ ಬೇರೆ ಬೇರೆ ವಿಧವಾದ ವರ್ಣನೆಗಳನ್ನು ಉಪನಿಷತ್ಸಾಹಿತ್ಯಗಳಲ್ಲಿ ಕಾಣುತ್ತೇವೆ. ತೈತ್ತಿರೀಯೋಪನಿಷತ್ತಿನ ಒಂದು ಅನುವಾಕವು ಅದನ್ನು ಬಹಳ ಸಮಗ್ರವಾಗಿ ವರ್ಣಿಸುತ್ತದೆ ಎಂದು ನಮಗೆ ತೋರುತ್ತದೆ.

ಈ ಅನುವಾಕವು ಈ ರೀತಿ ಇರುತ್ತದೆ : 

"ಋತಂ ಚ ಸ್ವಾಧ್ಯಾಯಪ್ರವಚನೇ ಚ । 

ಸತ್ಯಂ ಚ ಸ್ವಾಧ್ಯಾಯಪ್ರವಚನೇ ಚ । 

ತಪಶ್ಚ ಸ್ವಾಧ್ಯಾಯಪ್ರವಚನೇ ಚ । 

ದಮಶ್ಚ ಸ್ವಾಧ್ಯಾಯಪ್ರವಚನೇ ಚ । 

ಶಮಶ್ಚ ಸ್ವಾಧ್ಯಾಯಪ್ರವಚನ ಚ । 

ಅಗ್ನಯಶ್ಚ ಸ್ವಾಧ್ಯಾಯಪ್ರವಚನೇ ಚ । 

 ಅಗ್ನಿಹೋತ್ರಂಚ ಸ್ವಾಧ್ಯಾಯಪ್ರವಚನೇ ಚ ।

 ಅತಿಥಯಶ್ಚ ಸ್ವಾಧ್ಯಾಯಪ್ರವಚನೆೇ ಚ। 

ಮಾನುಷಂಚ ಸ್ವಾಧ್ಯಾಯಪ್ರವಚನೇ ಚ । 

ಪ್ರಜಾಚ ಸ್ವಾಧ್ಯಾಯಪ್ರವಚನೇ ಚ। 

ಪ್ರಜನಶ್ಚ ಸ್ವಾಧ್ಯಾಯಪ್ರವಚನೇ ಚ । 

ಪ್ರಜಾತಿಶ್ಚ ಸ್ವಾಧ್ಯಾಯಪ್ರವಚನೇ ಚ ।"


ಅನುವಾಕವನ್ನು ಸುಸ್ವರವಾಗಿ ಪಠಣ ಮಾಡಿಬಿಟ್ಟರೆ ಸಾಲದು, ಅದರ ನುಡಿಗಳಲ್ಲಿರುವ ಅರ್ಥಗಾಂಭೀರ್ಯವನ್ನು ಮನಸ್ಸಿನಲ್ಲಿ ವಿಶದವಾಗಿ ಚಿತ್ರಿಸಿಕೊಳ್ಳುವುದು ಅವಶ್ಯಕ ಎಂಬುದನ್ನು ಹೇಳಬೇಕಾಗಿಲ್ಲ. ಆ ರೀತಿ ಮಾಡಿದಾಗ ಉಚ್ಚವಾದ ಧ್ಯೇಯಗಳಿಗೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಸಾಧನಾಪುರುಷರ ಜೀವನ ವಿಧಾನವು ನಮ್ಮ ಕಣ್ಮುಂದೆ ಮಿಂಚಿ ಹೋಗುತ್ತದೆ.

ಸ್ವಾಧ್ಯಾಯ ಮತ್ತು ಪ್ರವಚನಗಳು ಆ ಪುರಾತನ ಋಷಿಗಳ ಜೀವನದಲ್ಲಿ ಎಲ್ಲವೂ ಆಗಿದ್ದುವು ಎಂಬುದನ್ನು ಅನುವಾಕವು ಒತ್ತಿ ಹೇಳುತ್ತದೆ. ಸ್ವಾಧ್ಯಾಯ ಎಂದರೆ ವಿಸ್ತಾರವಾದ ವೇದ ಸಾಹಿತ್ಯಗಳ ಅಧ್ಯಯನ. ಇಂದು ಬಹಳ ಮಟ್ಟಿಗೆ ವೇದಗಳನ್ನು ಉರು ಹೊಡೆಯುವುದು ಎಂಬ ಅರ್ಥದಲ್ಲಿ ಆ ಪದವು ಬಳಸಲ್ಪಡುತ್ತದೆ. ಆದರೆ ಸಂಸ್ಕೃತ ಭಾಷೆಯು ಮನೆಮಾತಾಗಿ, ವೇದಸಾಹಿತ್ಯಗಳು ಜನರ ಆಚಾರ, ವಿಚಾರ, ಜ್ಞಾನ, ವಿಜ್ಞಾನ, ಆಚರಣೆ, ದೈವೀದೃಷ್ಟಿ, ನೀತಿ, ಆದರ್ಶ ಮುಂತಾದವುಗಳೆಲ್ಲವನ್ನು ಸಹಜವಾಗಿ ಪ್ರತಿಬಿಂಬಿಸುತ್ತಿದ್ದಾಗ, ಆ ಪದವು ಅವರ ಜೀವನ ಸರ್ವಸ್ವವಾಗಿದ್ದ ಸಾಹಿತ್ಯದ ಅರ್ಥವತ್ತಾದ ಹಾಗೂ ಬಹುಮುಖವಾದ ಅಭ್ಯಾಸವನ್ನು ಹೇಳುತ್ತಿದ್ದಿತು ಎಂದು ಭಾವಿಸಬಹುದು. ವೇದಗಳು ಬ್ರಹ್ಮಜ್ಞರ ಹೃದಯದಿಂದ ಹೊರಬಿದ್ದ ಸಾಹಿತ್ಯಗಳು. ಆದುದರಿಂದ ಅವು ಪುನಃ ತಪಸ್ಸು ಮುಂತಾದ ಸಾಧನೆಗಳ ಸಹಾಯದಿಂದ ಅವುಗಳ ಒಳ ದೈವೀರಹಸ್ಯಗಳನ್ನು ಒಂದು ಪೀಳಿಗೆಯ ನಂತರ ಮತ್ತೊಂದು ಪೀಳಿಗೆಯಲ್ಲಿ ಸಾಧಿಸುವ ಅರ್ಥಾತ್ ಸಾಕ್ಷಾತ್ಕರಿಸುವ ಆವಶ್ಯಕತೆ ಯಿಂದ ಕೂಡಿದ್ದುವು. ಆದುದರಿಂದ ಅವುಗಳನ್ನು ಹೇಳಿ ಅಷ್ಟರಿಂದಲೇ ತೃಪ್ತಿ ಹೊಂದುವುದು ಋಷಿಗಳಿಗೆ  ಸಮ್ಮತವಾಗಿರಲಿಲ್ಲ. ಪ್ರವಚನ ಎಂಬ ಪದವು ಅವುಗಳನ್ನು ಹೇಳಿಕೊಡುವುದು ಎಂಬಷ್ಟರಲ್ಲಿಯೇ ಪರ್ಯವಸಾನಗೊಳ್ಳುತ್ತಿರಲಿಲ್ಲವೆಂಬುದಾಗಿ ನಮಗೆ ತೋರುತ್ತದೆ. ಯಾವ ಜ್ಞಾನವೂ ಸುಲಭವಾಗಿ ಬಂದುಬಿಡುವುದಿಲ್ಲ. ಅದನ್ನು ಕುರಿತು ಕೂಲಂಕಷವಾಗಿ ವಿಚಾರಿಸಬೇಕು. ಅದನ್ನು ಹೇಗೆ ಸಾಧಿಸುವುದು ಎಂಬುದನ್ನು ಪರಿಶೀಲಿಸಬೇಕು. ಪ್ರಯೋಗ ವಿಧಾನಗಳನ್ನು ಹುಡುಕಬೇಕು. ಆ ಬಗ್ಗೆ ಗುರುಕುಲಗಳಲ್ಲಿ ನಡೆಯುತ್ತಿದ್ದ ಚರ್ಚೆ, ಬುದ್ಧಿ ಮಥನ, ಆದೇಶ, ಉಪದೇಶಗಳೆಲ್ಲವನ್ನೂ ಪ್ರವಚನ ಎಂಬ ಪದವು ಸೂಚಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಿದ್ದುದರಿಂದಲೇ ಸ್ವಾಧ್ಯಾಯ ಮತ್ತು ಪ್ರವಚನಗಳು ಋಷಿಜೀವನದ ತಳಹದಿಗಳಾಗಿದ್ದುವು. ಅವರ ಜೀವನದ ಎರಡು ಮುಖ್ಯವ್ಯಾಪಾರಗಳಾಗಿದ್ದುವು. ಅವುಗಳನ್ನು ಒಂದು ಕ್ಷಣಕಾಲವೂ ಮರೆಯದೆ ಅವುಗಳ ಆಸರೆಯಲ್ಲಿ ಋಷಿಗಳು ತಮ್ಮ ಬಾಳಾಟವನ್ನೆಸಗಿದರು.

ಮತ್ತು ಅವುಗಳ ಜೊತೆಗೆ, ಅವುಗಳಿಗೆ ಪೋಷಕವಾಗಿರುವ ರೀತಿಯಲ್ಲಿ ಋತ, ಸತ್ಯ, ತಪಸ್ಸು, ದಮ,  ಶಮ ಮುಂತಾದ ಸಾಧನಾ ವಿಧಾನಗಳನ್ನು ಅವರು ಅನುಸರಿಸಿದರು. ಆ ಪದಗಳ ಅರ್ಥಸಂಪತ್ತನ್ನು ಸ್ವಲ್ಪದರಲ್ಲಿ ತಿಳಿಯಲಾಗುವುದಿಲ್ಲ. ಪರಿಪೂರ್ಣಸತ್ಯದ ಸಾಕ್ಷಾತ್ಕಾರವೇ ಋತ. ಆ ರೀತಿ ಮಾಡಿದ ಸತ್ಯ ವಸ್ತು ದರ್ಶನಕ್ಕೆ ಅಡಚಣೆಯುಂಟಾಗದಂತೆ ಕಾಯಾ ವಾಚಾ ಮನಸಾ ವ್ಯವಹಾರಮಾಡುವುದೇ ಸತ್ಯ. ಶೀತೋಷ್ಣ ಸುಖದಃಖಾದಿಗಳನ್ನು ಜಯಿಸುವ ರೀತಿಯಲ್ಲಿ ಕಠಿಣವಾದ ಪ್ರಯತ್ನಗಳ ಮೂಲಕ ಶರೀರ ಮತ್ತು ಮನಸ್ಸುಗಳನ್ನು ಪಳಗಿಸುವುದೇ ತಪಸ್ಸು. ಮನಸ್ಸು ಮತ್ತು ಶರೀರಗಳಲ್ಲಿ ವ್ಯಾಪಾರ ಮಾಡುವ ಕಾಮ ಕ್ರೋಧಾದಿ ವೇಗಗಳನ್ನು ದಮನಮಾಡಿ, ಅವುಗಳಮೇಲೆ ಹತೋಟಿಯನ್ನು ಹೊಂದುವುದು ದಮ. ಮನಸ್ಸಿನ ವಿಕಾರಗಳೆಲ್ಲವನ್ನೂ ತೊಡೆದು ಹಾಕಿ ಹೃದಯಾಂತರಾಳದಲ್ಲಿರುವ ಶಾಂತಿಯನ್ನು ಕರಗತಮಾಡಿಕೊಳ್ಳುವುದೇ ಶಮ. ಮಾನವನ ಪ್ರಕೃತಿಯಲ್ಲಿ ಸಹಜವಾಗಿರುವ ವೈಷಮ್ಯಗಳ ದೆಸೆಯಿಂದ ಅಂತಹ ಸಮರಸವಾದ ಸ್ಥಿತಿಯನ್ನು ಸಂಪಾದಿಸುವುದು ವಿವೇಕ, ವಿಚಾರ, ಪ್ರಯತ್ನ ಮುಂತಾದವುಗಳಿಂದ ಮಾತ್ರ ಸಾಧ್ಯವಾಗುವ ವಿಷಯ. ಬಾಯಲ್ಲಿ ಹೇಳಿದ್ದರಿಂದ ಅವು ಸಿದ್ಧಿಸಿಬಿಡುವುದಿಲ್ಲ.

ಹಾಗೆಯೇ ಅಗ್ನಿಗಳು, ಅಗ್ನಿಹೋತ್ರ, ಅತಿಥಿ ಪೂಜೆ, ಮನುಷ್ಯಹಿತಸಂಬಂಧವಾದ ಆಚರಣೆಗಳೂ ಅವರ ಮನಸ್ಸನ್ನು ಸೆಳೆದಿದ್ದುವು. ತಮ್ಮಂತೆ ಸತ್ಯನಿರತರಾದ ಪ್ರಜೆಗಳನ್ನು ಪಡೆಯುವುದೂ ಸಹ ಅವರ ಆಶಯಗಳಲ್ಲಿ ಸೇರಿದ್ದುವು. ಅವೆಲ್ಲವನ್ನೂ ಒಟ್ಟಿಗೆ ಮನಸ್ಸಿನಲ್ಲಿ ಚಿತ್ರಿಸಿಕೊಂಡಾಗ, ಋಷಿಗಳದು ಎಂತಹ ಧ್ಯೇಯವುಳ್ಳ ಜೀವನವಾಗಿದ್ದಿತು ಎಂಬುದು ಅವಶ್ಯವಾಗಿ ಮನಸ್ಸಿನಲ್ಲಿ ಹೊಳೆದು ಅವರ ಬಗ್ಗೆ ನಮ್ಮ ತಲೆಯು ಗೌರವದಿಂದ ಬಾಗುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:13 ಸಂಚಿಕೆ:10, ಆಗಸ್ಟ್ 1991 ತಿಂಗಳಲ್ಲಿ  ಪ್ರಕಟವಾಗಿದೆ.