Monday, June 21, 2021

ಆರ್ಯಸಂಸ್ಕೃತಿ ದರ್ಶನ - 47 - ಬಾಳಿನ ಬೆಲೆ (Arya Samskruti Darshana - 47 - Balina Bele)

ಲೇಖಕರು : ಛಾಯಾಪತಿಗಳು



ಏನು ಜೀವನದ ಬೆಲೆ? ಏನನ್ನು ಪಡೆದಾಗ ಜೀವನದಲ್ಲಿ ಪಡೆಯಬಹುದಾದ ಎಲ್ಲವನ್ನೂ ಪಡೆದಂತಾಗುತ್ತದೆ? ಜೀವನಕ್ಕೆ  ಯಾವ ಬೆಲೆಯೂ ಇಲ್ಲ ಎನ್ನೋಣವೇ? ಈ ಬಗೆಗೆ ಚಿಂತನೆಗಳು ಜೀವನದ ಉಗಮದಿಂದ ಇಂದಿನವರೆಗೆ ನಡೆದುಬಂದಿದೆ.

ಒoದು ವಸ್ತುವಿಗೆ ಬೆಲೆ ನಿರ್ಣಯಿಸುವಾಗ ನಾವು ಪರಿಗಣಿಸುವ ಅಂಶಗಳಾವುವು? ಮೂಲವಸ್ತು, ತಯಾರಿಕೆಯ ವೆಚ್ಚ, ಬಾಳುವೆಯ ಅವಧಿ, ಉಪಯುಕ್ತತೆ, ಇವುಗಳನ್ನು ಆಧಾರವಾಗಿಟ್ಟುಕೊಂಡು ವಸ್ತುವಿನ ಬೆಲೆ ನಿರ್ಧರಿಸುತ್ತೇವೆ.

ಜೀವನವನ್ನು ಹೀಗೆ ಬಿಚ್ಚಿ ನೋಡಿದರೆ ಏನು ಅದರ ಬೆಲೆ? ಬಾಳಿನಲ್ಲಿ ಮೊದಲು ಕಾಣುವುದು ಶರೀರ. ಮಾನವ ಶರೀರವನ್ನು ರಾಸಾಯನಿಕವಾಗಿ ವಿಶ್ಲೇಷಿಸಿ, ಇದರ ಬೆಲೆ ಕಟ್ಟುವ ಯತ್ನವೂ ನಡೆದಿದೆ. ಇಂಗಾಲ, ಆಮ್ಲಜನಕ, ಸಸಾರಜನಕ, ರಂಜಕ, ಗಂಧಕ, ಸುಣ್ಣ, ಕಬ್ಬಿಣ, ಮತ್ತಿತರ ಸಣ್ಣಪುಟ್ಟ ಅಂಶಗಳಿಂದ ರಚನೆಗೊಂಡ ಈ ಶರೀರದ ಬೆಲೆ, ಇಂದಿನ ದುಬಾರಿ ಬೆಲೆಯಲ್ಲಿಯೂ ಬೆರಳೆಣಿಕೆಯಷ್ಟು ರೂಪಾಯಿಗಳನ್ನು ಮೀರದು.


ನಿಸರ್ಗದಿಂದಲೇ ರೂಪಗೊಂಡ ಇದರ ತಯಾರಿಕೆಯ ವೆಚ್ಚ ಅಗಣ್ಯ. ಶರೀರವು ಅತಿ ಜಟಿಲವೂ, ಅತ್ಯದ್ಭುತವೂ ಆದ ಯಂತ್ರವೆಂಬುದು ನಿರ್ವಿವಾದ. ಈವರೆಗೆ ದೊರಕಿರುವ ಅತಿಸೂಕ್ಷ್ಮ ವೈಜ್ಞಾನಿಕ ಉಪಕರಣಗಳಿಂದಲೂ, ಸಂಶೋಧನೆಯ ಬಗೆಬಗೆಯ ವಿಧಾನಗಳಿಂದಲೂ ಬಯಲಾಗದ ಅನೇಕ ರಹಸ್ಯಗಳನ್ನೊಳಗೊಂಡ ಯಂತ್ರವಿದಾಗಿದೆ ಎಂಬುದೇ ಇದರ ಜಟಿಲತೆಗೆ ಸಾಕ್ಷಿ. ಬಾಳುವೆಯ ದೃಷ್ಟಿಯಿಂದ ಮಾನವಶರೀರ ಸುಮಾರು ಒಂದು ನೂರು ಅಥವಾ ನೂರಿಪ್ಪತ್ತು ವರ್ಷಗಳು ಬಾಳಬಹುದು. ಅಪರೂಪವಾಗಿ ಈ ಅವಧಿಯನ್ನು ಮೀರಿರುವ ಜನರೂ ಉಂಟು. ಕಾಣುವ ಶರೀರವಷ್ಟೇ ಜೀವನದ ಸಾರಸರ್ವಸ್ವವಲ್ಲ. ಈ ಶರೀರವನ್ನು ತುಂಬಿಕೊಂಡು ಆಡುವ ಜೀವಶಕ್ತಿಯಿಲ್ಲದಿದ್ದರೆ ಈ ಅದ್ಭುತಯಂತ್ರವೂ ಜಡವೇ. ಇದನ್ನು ತುಂಬಿ ಆಡುವ ಜೀವವಿದ್ದಾಗ ಮಾತ್ರ ಜೀವನಕ್ಕೆ ಬೆಲೆ. ಆ ಜೀವರಹಿತವಾದರೆ ಇದು ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ. 


ಹೀಗೆ ಕಾಣದ ಜೀವಶಕ್ತಿ, ಕಾಣುವ ಮೈ ಎರಡರಿಂದೊಡಗೂಡಿದ ಬಾಳಾಟದಲ್ಲಿ ಪಡೆಯಬಹುದಾದ ಉಪಯೋಗವೇನು ಎಂಬುದು ಇದರ ಬೆಲೆಯ ನಿರ್ಣಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಏನು ಇದರ ಉಪಯೋಗ? ವಿಶ್ವದಲ್ಲಿ ತುಂಬಿರುವ ಭೋಗಸಾಮಗ್ರಿಗಳನ್ನು ಶರೀರವು ಬೀಳುವವರೆಗೂ ಅನುಭವಿಸುವುದು ಅಷ್ಟೆೇ. ದೇಹವನ್ನು ತುಂಬಿರುವ ಜೀವವು ಯಾವಾಗ ಇದರಿಂದ ಬೇರ್ಪಡುತ್ತದೆಯೋ ಯಾರೂ ತಿಳಿಯರು. ಅದಕ್ಕಾಗಿ ಜೀವವಿರುವುದರೊಳಗೆ ಅನುಭವಿಸಲು ಸಾಧ್ಯವಾದ ಎಲ್ಲ ಸುಖಗಳನ್ನೂ ಅನುಭವಿಸಿಬಿಡುವುದೇ ಇದರಿಂದ ಪಡೆಯಬಹುದಾದ ಉಪಯೋಗ. ಅನುಭವಿಸಲು ಸಾಧ್ಯವಾದ ಸುಖಾಗಳಾವುವು? ಈ ಬಗ್ಗೆ ಏಕೆ ಚಿಂತೆ? "Let us eat, drink and make merry. This is the be all and end all of life." ತಿನ್ನೋಣ, ಕುಡಿಯೋಣ, ಸುಖಿಸೋಣ - ಇದೇ ಜೀವನದ ಪರಮಸಾರ. ಇದೇ  ಕೊನೆ - Epicurean philosophy; ಜೀವನವನ್ನು ಗಸಿ ಉಳಿಯುವವರೆಗೆ ಹೀರೋಣ (Let us drink the life to lees - Tennyson); ನಿಂಬೆ ರಸವನ್ನು ನಾವು ತುಂಬಿ ಹೀರೋಣ (Let us squeeze the lemon to the full); ಸಾಲಮಾಡು, ತುಪ್ಪ ತಿನ್ನು - ಎಂಬ ಮಾದರಿಯ ಮಾತುಗಳಿಲ್ಲವೆ? ಅದರಂತೆ ನಡೆದರೆ ಸರಿ. 


ಮಾತುಗಳೇನೋ ಕೇಳಲು ಚೆನ್ನಾಗಿವೆ; ಆದರೆ ಅನುಭವಿಸಲು ಸಾಧ್ಯವಾದ ಸುಖಗಳ ಬಗೆಗೆ ನಿರ್ಣಯ ನೀಡುವ ಮಾತುಗಳಲ್ಲ ಇವು. ಕಂಡದ್ದನ್ನು ಹಿಂಡು ಅದಕ್ಕೇಕೆ ಅನ್ವೇಷಣೆ?  ಎಂಬುದು ಜಡವಾದವೇ ಹೊರತು, ನಿಜದ ಪರಿಚಯ

ನೀಡುವ ನಿರ್ಣಯದ ಹೇಳಿಕೆಯಲ್ಲ. ಕೇವಲ ಮೇಲ್ಮೈಯಲ್ಲಿ ಕಾಣುವ ಕಲ್ಲು-ಮಣ್ಣುಗಳೇ ಸಾಕು. ಚಿನ್ನ - ರತ್ನಗಳಿಗಾಗಿ ಭೂಗರ್ಭವನ್ನೇಕೆ ಶೋಧಿಸಬೇಕು? ತಾನಾಗಿಯೇ ಬೆಳೆಯುವ ಗಿಡಮರಗಳೇ ಸಾಕು. ಏಕೆ ಈ ವ್ಯವಸಾಯದ ಉದ್ಯಮ? ಎಂಬ ಹೇಳಿಕೆಗಳು ಜಡಪ್ರವೃತ್ತಿಗೆ ಪೋಷಕವಾಗಬಹುದೇ ಹೊರತು ನಿಜದತ್ತ ಸೆಳೆಯುವ ಮಾತುಗಳಲ್ಲ. ಅನ್ವೇಷಣೆಯಿಂದ ನಿಜವರಿತು ಹಾದಿ ತೋರಿಸುವ ಸಾಹಸಿಗಳು ವಿಶ್ವಕ್ಕೆ ನೀಡುವ ಕೊಡುಗೆ ಅಪಾರವಾದುದು. ಸಿಕ್ಕಿದ್ದನ್ನು ಮುಕ್ಕಿ ಮುಗಿಸುವ ಸೋಮಾರಿಗಳು ವಿಶ್ವಕ್ಕೆ ನೀಡುವ ಕಾಣಿಕೆ ಸೊನ್ನೆ. 


ಆದ್ದರಿಂದ ಬಾಳಿನಲ್ಲಿ ಅನುಭವಿಸಲು ಸಾಧ್ಯವಾದ ಸುಖಗಳಾವುವು? ಆ ಸುಖಗಳ ಪರಮಾವಧಿ ಯಾವುದು? ಎಂಬತ್ತ ಹುಡುಕುನೋಟ ಹರಿಸಿ ಅದನ್ನು ಪಡೆದವರುಂಟೇ? ಎಂಬದನ್ನು ಗಮನಿಸಬೇಕು. ಬಾಳನ್ನು ತುಂಬಿ ಆಡುವ ಜೀವವೇ ಬಾಳಿಗೆ ಬೆಲೆ ನೀಡುವ ಬದುಕು ಎಂಬುದನ್ನು ಗಮನಿಸಿದ್ದೇವೆ. ಆ ಜೀವನದ ನೆಲೆಯಲ್ಲಿ? ಅದು ಮೈಯನ್ನು ಏಕೆ ತುಂಬಿಕೊಂಡಿದೆ? ಎಂಬತ್ತಲೂ ಅನ್ವೇಷಣೆ ನಡೆಸಿದವರುಂಟು.


ಹೃದಯದ ಬಡಿತವನ್ನು ಹೃದಯದಲ್ಲಿ ಕಾಣುವಂತೆ, ಜೀವನದ ನೆಲೆಯನ್ನು ಜೀವವು ಎಲ್ಲಿ ಆಡುತ್ತಿದೆಯೋ ಆ ಮೈಯ ಒಳಗೆ ತಾನೇ ಹುಡುಕಬೇಕು? ಇಂದ್ರಿಯ, ಮನಸ್ಸು ಮತ್ತು ಬುದ್ಧಿಗಳೆಲ್ಲಕ್ಕೂ ಚೈತನ್ಯವನ್ನು ತುಂಬುವ ಜೀವವು ಅವುಗಳ ಹಿಂದೆ ತಾನೇ ಇರಬೇಕು? ಆದ್ದರಿಂದ ಹೊರಮುಖವಾಗಿ ಹರಡಿಕೊಂಡಿರುವ ಇಂದ್ರಿಯ ಮನಸ್ಸು-ಬುದ್ಧಿಗಳ ಶಕ್ತಿಯನ್ನು ಹಿಮ್ಮುಖವಾಗಿ ಮಾಡಿ ಹಿಂದಕ್ಕೆ ಹಿಂದಕ್ಕೆ ಸೆಳೆದು ಹುಡುಕಿದವರೂ ಉಂಟು. ಹಾಗೆ ಹುಡುಕಿದಾಗ ಶರೀರದ ಒಳಕೇಂದ್ರವೊಂದರಲ್ಲಿ ಜೀವನನೆಲೆಯೆಂದು ಗುರುತಿಸಲಾದ ಒಂದು ಬೆಳಕನ್ನು ಅನುಭವಿಸಿ, ಪರಮಾನಂದದಲ್ಲಿ ಮುಳುಗಿದವರೂ ಉಂಟು. ಅಂತಹ ನೋಟ ಪಡೆದವರನ್ನೇ 'ಋಷಿ' - ಎಂಬ ಪದದಿಂದ ಕರೆಯುತ್ತೇವೆ. ಆಮೆಯು  ತನ್ನ ಅವಯವಗಳನ್ನು ಚಿಪ್ಪಿನಲ್ಲಿ ಅಡಗಿಸಿಕೊಳ್ಳುವಂತೆ ಇಂದ್ರಿಯಗಳನ್ನು ಹಿಂಸೆಳೆದುಕೊಂಡರೆ ಒಳಗೆ ಆತ್ಮಜ್ಯೋತಿಯು ಕಾಣುವುದು ಎಂಬ ಅನುಭವಿಗಳ ಮಾತನ್ನೂ ನಾವು ನೋಡುತ್ತೇವೆ.


ಹಾಗೆ ಹಿನ್ನೋಟದಿಂದ ನೋಡಿದಾಗ ಪಡೆದ ಪರಮಾನಂದವನ್ನು ಹೊರ ಸಾಮಗ್ರಿಗಳ ಮೂಲಕ ಜೀವಿಯು ಅನುಭವಿಸಬಹುದಾದ ಸುಖಭೋಗಗಳೊಡನೆ ತೂಗಿ ನೋಡಿ-ಈ ಸುಖಕ್ಕಿಂತಲೂ ಓಳ ಆನಂದವು ಶತಕೋಟಿ ಪಾಲಿಗಿಂತಲೂ ಹೆಚ್ಚು ಸುಖದಾಯಕವೆಂದು ಅಳೆದಿದ್ದಾರೆ. ಅಂತಹ ಪರಮಾನಂದವೇ ಜೀವಿಯು ಅನುಭವಿಸಬಹುದಾದ ಪರಮಾವಧಿಯಸುಖ - ಎಂಬ ನಿರ್ಣಯಕ್ಕೆ ಬಂದು ಮುಟ್ಟಿ, ಅದನ್ನು ಪಡೆದಾಗ ಜೀವನವು ಬೆಲೆಯುಳ್ಳದ್ದಾಗುವುದೆಂಬ ನಿರ್ಣಯವನ್ನೂ ಸಾರಿದ್ದಾರೆ. ಪ್ರತಿಮಾನವನ ಒಳ ಮೈಯಲ್ಲೂ ಆನಂದದ ಅಕ್ಷರ ನಿಧಿಯಿದೆ. ಅದನ್ನು ಅನುಭವಿಸುವ ಸಾಮರ್ಥ್ಯವೂ ಉಂಟು. ಹೀಗಿದ್ದರೂ ಆ ಪರಮಾನಂದವನ್ನು ಪಡೆದು ಅನುಭವಿಸದಿದ್ದರೆ ಮಹತ್ತಾದ ಹಾನಿ. ಆದೇ ಆತ್ಮಹತ್ಯೆ ಎಂದು ಸಾರಿರುವವರೂ ಉಂಟು.  ಅವರು ಬಾಳ ಒಳ ಮೈಯಲ್ಲಿ ಪಡೆದ ಅನುಭವವೇ ಆ ಮಾತನ್ನಾಡಿಸಿದೆ ಎಂಬುದಕ್ಕೆ ಬೇರೆ ಬೇರೆ ದೇಶ ಕಾಲಗಳಲ್ಲಿದ್ದು ಅನುಭವವನ್ನು ಪಡೆದ ಜ್ಞಾನಿಗಳ ಏಕಕಂಠದ ಉದ್ಘೋಷವು ಸಾಕ್ಷಿಯಾಗಿದೆ.


ಶರೀರವನ್ನು ತುಂಬಿರುವ ಜೀವವು ಹೊರನೋಟದಿಂದ ಕಾಣದಿದ್ದರೂ, ಒಳ ನೋಟಕ್ಕೆ ಕಾಣುವ ವಸ್ತು. ಜೀವನವನ್ನೂ, ಆದರ ನೆಲೆಯನ್ನೂ ಕಂಡಾಗ ಪರಮಾವಧಿಯ ಆನಂದವನ್ನು ಜೀವಿ ಪಡೆಯುತ್ತಾನೆ ಎಂಬುದೇ ಅವರ ಉದ್ಘೋಷ.  ಜೀವನದ ನೆಲೆಯಾದ ಜ್ಯೋತಿಯ ಅರಿವು ಪ್ರತಿ ಚೇತನದ ಜನ್ಮಸಿದ್ಧ ಹಕ್ಕು. ನಿದ್ದೆಯು ಪ್ರತಿಜೀವಿಗೂ ಎಷ್ಟು ಸಹಜವೋ, ಪರಮಾನಂದಮಯವಾದ ಜ್ಯೋತಿಯನ್ನು ಅನುಭವಿಸುವ ಸ್ಥಿತಿಯಾದ ಯೋಗನಿದ್ರೆಯೂ ಆಷ್ಟೇ ಸಹಜವಾದುದು. ಅದನ್ನು ಪಡೆದಾಗ ಮಾತ್ರ ಬಾಳಬೆಲೆಯರಿತಂತಾದೀತು. ಆದ್ದರಿಂದಲೇ ಆತ್ಮಯೋಗ, ಅದಕ್ಕೆ ಅವಿರೋಧವಾದ ಇಂದ್ರಿಯಭೋಗ ಎರಡೂ ಬಾಳಿನಲ್ಲಿ ಪಡೆಯಬಹುದಾದ ಸುಖಗಳು. ಭೋಗಯೋಗಗಳೆರಡನ್ನೂ ಪಡೆದಾಗ ಬಾಳಿನ ಪೂರ್ಣಬೆಲೆ ಪಡೆದಂತಾಗುತ್ತದೆ. 


ಭೋಗವೆಂದರೆ ಅರ್ಥಕಾಮಗಳು. ಇವುಗಳು, ಯೋಗ ಎಂದರೆ ಧರ್ಮ ಮತ್ತು ಮೋಕ್ಷಗಳಿಗೆ ಅವಿರೋಧವಾಗಿರಬೇಕು. ಹಾಗಿದ್ದಾಗ ಧರ್ಮ-ಅರ್ಥ-ಕಾಮ-ಮೋಕ್ಷ- ಎಂಬ ಎಲ್ಲ ಪುರುಷಾರ್ಥಗಳ ಫಲವನ್ನೂ ಜೀವಿಯು ಪಡೆಯುತ್ತಾನೆ. ದೇಹವೆಂಬ ಪುರವನ್ನು ತುಂಬಿರುವ ಜೀವಿಯೇ ಪುರುಷ. ಅರ್ಥವೆಂದರೆ ಅವನ ಪ್ರಯೋಜನ. ಪುರುಷಾರ್ಥಗಳನ್ನು ಸಮಗ್ರವಾಗಿ  ಪಡೆದರೆ ಇಂದ್ರಿಯ ಭೋಗ, ಆತ್ಮಯೋಗಗಳೆರಡನ್ನೂ ಪಡೆದರೆ ಬಾಳಬೆಲೆ ಪಡೆದಂತಾಯಿತು.  ಬಾಳಿಗೆ  ನೆಲೆಯೂ  ಸಿಕ್ಕಿದಂತಾಯಿತು.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೬ ಸಂಚಿಕೆ:೮, ಆಗಸ್ಟ್ ೧೯೯೨ ತಿಂಗಳಲ್ಲಿ  ಪ್ರಕಟವಾಗಿದೆ.