Sunday, June 20, 2021

ಶ್ರೀರಾಮನ ಗುಣಗಳು - 10 ಸ್ಮಿತಪೂರ್ವಭಾಷೀ - ಶ್ರೀರಾಮ (Sriramana Gunagalu - 10 Smitapurvabhashi - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)

ಸ್ಮಿತ ಎಂದರೆ ನಗುವುದು. ಇದನ್ನು ಕನ್ನಡದಲ್ಲಿ ಮುಗುಳುನಗೆ ಎನ್ನುತ್ತಾರೆ. ಹಸಿತ, ವಿಹಸಿತ, ಅವಹಸಿತ, ಅಪಹಸಿತ ಮತ್ತು ಅತಿಹಸಿತ ಎಂದು ಆರು ಬಗೆಯ ನಗು ಇದೆ. ಇವುಗಳಲ್ಲಿ ಸ್ಮಿತ ಮತ್ತುಹಸಿತವು ಉತ್ತಮರ ನಗುವಾಗಿರುತ್ತದೆ. ವಿಹಸಿತ ಮತ್ತು ಅವಹಸಿತವು ಮಧ್ಯಮರ ನಗುವಾಗಿರುತ್ತದೆ. ಉಳಿದೆರಡುಅಧಮರ ನಗುವಾಗಿರುತ್ತದೆ. ಸ್ವಲ್ಪಮಾತ್ರ ಮುಖವು ವಿಕಸಿತವಾಗಿ ಅಧರವು ಸ್ವಲ್ಪ ಕಂಪನವಾದರೆ ಅದನ್ನು 'ಸ್ಮಿತ'ಎನ್ನುತ್ತಾರೆ. ಹಾಸ ಎಂಬ ಸ್ಥಾಯೀಭಾವದಿಂದ ಉತ್ಪನ್ನವಾಗುವ ರಸವೇ ಹಾಸ್ಯವಾಗಿದೆ. ಅದರ ಒಂದು ಪ್ರಭೇದವೇಸ್ಮಿತವಾಗಿದೆ. ಶಬ್ದವನ್ನು ಮಾಡದೆ, ತುಟಿಯನ್ನು ಮಾತ್ರ ಸ್ವಲ್ಪ ವಿಸ್ತರಿಸಿ, ಹಲ್ಲು ಕಾಣದ ರೀತಿಯಲ್ಲಿ ನಕ್ಕರೆ ಅದು'ಸ್ಮಿತ' ವಾಗುತ್ತದೆ. ಇಲ್ಲಿ ಯಾವುದೇ ಮುಖವಿಕಾರವಿಲ್ಲ. ಶಬ್ದದ ಪ್ರಹಸನವಿಲ್ಲ. ನೋಡುವವನಿಗೆ ಅಥವಾಕೇಳುವವನಿಗೆ ಯಾವುದೇ ಬಗೆಯ ಅಸಹ್ಯಕ್ಕೆ ಅವಕಾಶವಿಲ್ಲ. ಆದರೆ ಒಳಗಡೆಯ ಭಾವಾಭಿವ್ಯಕ್ತಿಗೆ ಯಾವುದೇಬಾಧಕವಿಲ್ಲ. ಇದನ್ನು ಅತ್ಯಂತ ಗಂಭೀರವಾದ ನಗು ಎಂಬುದಾಗಿ ಹೇಳಲಾಗಿದೆ. ಇದಕ್ಕೆ ಹೆಚ್ಚಿನ ಬೆಲೆಯಿದೆ.ಈ ನಗುವು ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ತ್ರಿಗುಣಗಳನ್ನು ಅವಲಂಬಿಸಿಯೇ ಬರುತ್ತದೆ. ಅಂದರೆ ವ್ಯಕ್ತಿಯಲ್ಲಿಪ್ರಾಮಾಣಿಕತೆ ಸಾತ್ತ್ವಿಕತೆ,, ಪಾರದರ್ಶಕತೆ ಮುಂತಾದ ಉದಾತ್ತ ಗುಣಗಳಿದ್ದರೆ ಅದರ ಕಾರಣದಿಂದ ಬರುವ ನಗುವುಸಾತ್ತ್ವಿಕವಾಗಿರುತ್ತದೆ. ಆಗ ಅದರ ಪರಿಣಾಮವಾಗಿ ಅವನ ನಗು ಸ್ಮಿತವಾಗುತ್ತದೆ. ಇದು ಎಲ್ಲಾ ಆರ್ಯರ-ಮಹಾತ್ಮರಸಹಜವಾದ ನಗುವಾಗಿರುತ್ತದೆ. ಶ್ರೀರಾಮನು ಮಹಾಪುರುಷನಾದ್ದರಿಂದ ಅವನ ನಗುವೂ ಹಾಗೆಯೇ ಇತ್ತು ಎಂದುವಾಲ್ಮೀಕಿಗಳು ಹೇಳುತ್ತಾರೆ.

ಶ್ರೀರಾಮನು ಹೇಗೆ ಮಾತನಾಡುತ್ತಿದ್ದ? ಎಂದರೆ ಮಾತಿಗಿಂತ ಮೊದಲು ಸ್ವಲ್ಪ ಮುಗುಳು ನಕ್ಕು ಮಾತನಾಡುತ್ತಿದ್ದ.ಅದನ್ನೇ ರಾಮಾಯಣದಲ್ಲಿ ವಾಲ್ಮೀಕಿಗಳು 'ಸ್ಮಿತಪೂರ್ವಭಾಷೀ' ಎಂಬುದಾಗಿ ಹೇಳಿದ್ದಾರೆ. ಕೆಲವರುಮಾತನಾಡುವಾಗ ಅತಿಯಾಗಿ ನಗುತ್ತಾರೆ. ಇನ್ನು ಕೆಲವರು ಮೊದಲು ನಕ್ಕು ಆಮೇಲೆ ಮಾತನಾಡುತ್ತಾರೆ. ಮತ್ತೆಕೆಲವರು ಮೊದಲು ಮಾತನ್ನಾಡಿ ಆಮೇಲೆ ನಗುತ್ತಾರೆ. ಈ ಮೂರರಲ್ಲಿ, ಮಾತನಾಡುವಾಗ ಮಿತವಾಗಿ ನಗುವುದು ಬಹಳ ಶ್ರೇಷ್ಠವಾದುದು.ಮಾತಿಗೆ ಬಹಳ ಸಾಮರ್ಥ್ಯವಿದೆ. ಆಡುವ ಮಾತು ಎದುರಿಗಿರುವ ವ್ಯಕ್ತಿಯನ್ನು ಕೆರಳಿಸಲೂ ಬಹುದು,ಸಮಾಧಾನವಾಗಿ ಕೂರಿಸಲೂಬಹುದು. ಮಾತು ಮತ್ತು ನಗು ಎರಡೂ ಹಿತ-ಮಿತವಾಗಿ ಮೇಳೈಸಿ ಬಂದಾಗ ಕೇಳುವವರಿಗೆ ಶಾಂತ- ಗಂಭೀರವಾದ ಭಾವಮೂಡುತ್ತದೆ. ಮನಸ್ಸಿನಲ್ಲಿ ಯಾವುದೇ ಬಗೆಯ ಉದ್ವೇಗ ಉಂಟಾಗುವುದಿಲ್ಲ. ಆದರೆ ಬಹಳ ಗಡಿಬಿಡಿಯಿಂದಮಾತನಾಡುವುದರಿಂದ ಅಥವಾ ವಿಕಾರವಾಗಿ ನಗುತ್ತಾ ಮಾತನಾಡುವುದರಿಂದ ಅಥವಾ ಗಹಗಹಿಸಿ ನಕ್ಕುಮಾತನಾಡುವುದರಿಂದಲೂ ಕೇಳುವವನಲ್ಲಿ ಭಾವೋದ್ರೇಕ ಉಂಟಾಗುತ್ತದೆ. ಆದ್ದರಿಂದ ಯಾವಾಗಲೂ ನಾವು ಆಡುವಮಾತು ಮತ್ತು ನಮ್ಮ ನಗುವು ಮತ್ತೊಬ್ಬನ ಮನಸ್ಸಿಗೆ ಸಂತೋಷವಾಗುವಂತಿರಬೇಕು. ಶ್ರೀರಾಮನು ಆಡುವಮಾತಿನಲ್ಲಿ ಅಂತಹ ಸಂತೋಷ ಮತ್ತು ಶಾಂತಭಾವ ಮೂಡುವಂತಿತ್ತು. 'ಸಮಾಧಾನವಾಗಿ ಇರಬೇಕು' ಎಂಬುದು ಭಾರತೀಯರಮೂಲಾಪೇಕ್ಷೆಯಷ್ಠೆ!. ಹಾಗಾಗಿ ಮಾತನ್ನು ಹೇಗೆ ಆಡಬೇಕು ಎಂಬುದಕ್ಕೆ ಶ್ರೀರಾಮನ ಸ್ಮಿತಪೂರ್ವಭಾಷಿತ್ವವೇ ಆದರ್ಶ.

ಸೂಚನೆ : 20/6/2021 ರಂದು ಈ ಲೇಖನವು  
ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.