Saturday, June 26, 2021

ಭರವಸೆಯಿಂದ ಬದುಕೋಣ (Bharavaseyinda Badukona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in




ಮಹಾಭಾರತದ ಬಗ್ಗೆ ಒಂದು ಮಾತಿದೆ-"ಇಲ್ಲಿ ಏನು ಇದೆಯೋ ಅದೇ ಬೇರೆಡೆ ಇರುವುದು; ಇಲ್ಲಿ ಏನಿಲ್ಲವೋ ಅದಿನ್ನೆಲ್ಲೂ ಇಲ್ಲ" ಎಂದು. ಹೌದು. ಒಂದು ಲಕ್ಷ ಶ್ಲೋಕಗಳನ್ನೊಳಗೊಂಡ ಮಹಾಭಾರತದಲ್ಲಿನ ಪ್ರಸಂಗಗಳು, ಉಪಕಥೆಗಳು ಹಾಗೂ ತತ್ತ್ವೋಪದೇಶಗಳನ್ನು ನೋಡಿದರೆ ಯಾರಿಗಾದರೂ ಈ ಮಾತು ನಿಜವೆನಿಸದೆ ಇರದು. ಆದ್ದರಿಂದ ಜೀವನದಲ್ಲಿ ನಮಗೆ ಕಷ್ಟ ಬಂದಾಗಲಾದರೂ ಒಮ್ಮೆ ಮಹಾಭಾರತವನ್ನು ಓದಲೇಬೇಕು. ಅದರಲ್ಲಿ ಎಲ್ಲೋ ಒಂದೆಡೆ ನಮಗೆ ಬೇಕಾದ ಸಾಂತ್ವನ, ಸತ್ಕಾರ್ಯಕ್ಕೆ ಬೇಕಾದ ಧೈರ್ಯದ ಆಸರೆ ಸಿಗುತ್ತದೆ. 


ಪಾಂಡವರು ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದು ಪ್ರಸಿದ್ಧ ಕಥೆಯೇ. ಪಾಂಡವರು ಧರ್ಮಿಷ್ಠರಾಗಿದ್ದರೂ, ಜೂಜಾಟದಲ್ಲಿ ತೊಡಗಿ ಜೀವನವೆಲ್ಲ ಜಂಜಾಟಕ್ಕೆ ಸಿಲುಕಿತು. ನಮ್ಮ ಜೀವನದಲ್ಲೂ ಹೀಗೆ ನಾವು ಮಾಡುವ ಯಾವುದೋ ಒಂದು ತಪ್ಪು, ಕಷ್ಟಗಳ ಸರಮಾಲೆಯನ್ನೇ ತಂದೀತು. ಧರ್ಮಕ್ಕೆ ಕಟ್ಟುಬಿದ್ದು ಕಾಡಿಗೆ ತೆರಳಿದರೂ, ಪಾಂಡವರಿಗೂ ಅನ್ನಿಸಿತು- ತಮ್ಮಷ್ಟು ಯಾರೂ ಕಷ್ಟಪಟ್ಟಿಲ್ಲವೆಂದು. ಆಗ ಕಾಡಿನಲ್ಲಿದ್ದ ಋಷಿಗಳು ಬಗೆಬಗೆಯಾಗಿ ಇವರನ್ನು ಸಮಾಧಾನಗೊಳಿಸಿದರು. ನಳಮಹಾರಾಜನ ವೃತ್ತಾಂತ, ಸಾವಿತ್ರಿಯ ಉಪಾಖ್ಯಾನ ಮುಂತಾದುವುಗಳನ್ನು ಹೇಳಿದರು. ಆಗ ಪಾಂಡವರಿಗೆ ಅರಿವಾಯಿತು-ತಮಗಿಂತ ಕಷ್ಟಪಟ್ಟವರೂ ಎಷ್ಟೋ ಮಂದಿ ಇದ್ದರೆಂದು. ಅವರು ಕಾಡಿನಲ್ಲಿದ್ದಾಗಿನ ಸ್ಥಿತಿಯನ್ನು ಯೋಚಿಸಿದರೆ ಅವರ ಭವಿಷ್ಯ ಅಸ್ಪಷ್ಟವಾಗಿಯೇ ಇದ್ದಿತು.  ಒಂದು ವೇಳೆ ಅಜ್ಞಾತವಾಸದಲ್ಲಿ ಅವರು ಪತ್ತೆಯಾಗಿಬಿಟ್ಟಿದ್ದರೆ ಅವರ ಜೀವನ ಮತ್ತೆ ದುಸ್ತರವೇ ಆಗುತ್ತಿದ್ದಿತು. ಆದರೂ ಅವರು ಧೈರ್ಯವನ್ನು ತಂದುಕೊಂಡಿದ್ದರಿಂದಲೇ ದೊಡ್ಡ ಸೇನೆಯನ್ನು ಒಗ್ಗೂಡಿಸಿಕೊಂಡು, ಕೌರವರನ್ನು ನಿರ್ಮೂಲಮಾಡಿ ಧರ್ಮರಾಜ್ಯವನ್ನು ಸ್ಥಾಪಿಸುವಂತಾಯಿತು. ದೈವವು ತನ್ನದೇ ಆದ ಲೆಕ್ಕಾಚಾರದಂತೆ ಕೃಷ್ಣನ ರೂಪದಲ್ಲಿ ತನ್ನ ಸಹಾಯಹಸ್ತವನ್ನು ಅವರಿಗೆ ನೀಡಿತು. ಸಹಜವಾಗಿ ವೀರಕ್ಷತ್ರಿಯರಿಗಿದ್ದ ದೇಹಬಲ, ಮನೋಬಲಗಳಲ್ಲದೆ, ಕೃಷ್ಣನಲ್ಲಿ ಅವರಿಗಿದ್ದ ನಂಬಿಕೆ, ಪಾಂಡವರನ್ನು ಖಿನ್ನತೆಯಿಂದ ಮೇಲೇಳುವಂತೆ ಮಾಡಿತು.


ದೈವವನ್ನು ನಂಬಿದವನು, ತಾನೆಣಿಸಿದಂತೆ ಅದು ಕಾಪಾಡದಿದ್ದರೂ, ಮುಂದೇನೋ ಇನ್ನೂ ಒಳ್ಳೆಯದಾಗುವುದಕ್ಕಾಗಿಯೇ ಕಷ್ಟಗಳು ಇನ್ನೂ ಕರಗಿಲ್ಲವೆಂದು ನಂಬುತ್ತಾನೆ. ದೇವರ ಮೇಲೆ ಭಾರ ಹಾಕಿದವನ ಮನಸ್ಸು, ಮೊದಲು ಹಗುರವಾಗುತ್ತದೆ. ಆಗ ಯಾವುದೇ ಕಾರ್ಯಸಾಧನೆಗೆ ತನ್ನ ಪ್ರಯತ್ನವನ್ನು ಮತ್ತಷ್ಟು ಚೆನ್ನಾಗಿ ಮಾಡಬಲ್ಲ. ದೇವರನ್ನು ನಂಬಿ ಪುರುಷಪ್ರಯತ್ನವನ್ನು ಕೈಬಿಡಬೇಕೆಂದು ನಮ್ಮ ಆರ್ಷಸಾಹಿತ್ಯ ಎಲ್ಲೂ ಹೇಳಿಲ್ಲ. ಆತಂಕಕ್ಕೊಳಗಾದವನು ಭೀಮಬಲವುಳ್ಳವನಾಗಿದ್ದರೂ ಕುಸಿದು ಹೋಗುತ್ತಾನೆ. ಆದ್ದರಿಂದ ಕಷ್ಟದಲ್ಲಿರುವವನ ಬಂಧುಮಿತ್ರರು, ಆತನಿಗೆ ದೈವದ ಮೇಲೆ ಭರವಸೆಯನ್ನಿಡಬೇಕೆಂದು ತಿಳಿಹೇಳಬೇಕು; ಕಷ್ಟಕಾಲಕ್ಕೆ ನಾವಿದ್ದೇವೆ ಎಂಬ ಆಶ್ವಾಸನೆಯನ್ನು ನೀಡಬೇಕು. 


ಯುದ್ಧಭೂಮಿಯಲ್ಲಿರುವ ಸೈನಿಕನ ಮನಃಸ್ಥಿತಿಯಿಂದ ನಾವು ಪಾಠ ಕಲಿಯಬಹುದು. ಸಾಯುವುದಕ್ಕೆ ಹೆದರದಿರುವುದರಿಂದಲೇ ಆತ ದೇಶಕ್ಕಾಗಿ ಯುದ್ಧಮಾಡಬಲ್ಲ. ರೋಗಿಗೆ ಸಾವು ಸನ್ನಿಹಿತವೆಂದು ತಿಳಿದಿದ್ದರೂ ಸದ್ವೈದ್ಯನು ರೋಗಿಯ ಕೊನೆಯುಸಿರು ಇರುವವರೆಗೂ ಚಿಕಿತ್ಸೆ ನೀಡುತ್ತಲೇ ಇರುತ್ತಾನೆ. ಹಾಗೆ ಕೊನೆ ಗಳಿಗೆಯವರೆಗೂ ನಮಗೆ ತಿಳಿದಷ್ಟೂ ಪ್ರಯತ್ನಗಳನ್ನು ಮಾಡಬೇಕು. ಆತಂಕವಿರುವವನು ಪ್ರತಿಕ್ಷಣದಲ್ಲೂ ಸಾಯುತ್ತಾನೆ. ಧೈರ್ಯವಿರುವವನು ಒಮ್ಮೆ ಮಾತ್ರ ಸಾಯುತ್ತಾನೆ. ಸಾವು ಅನಿವಾರ್ಯವೆಂದು ತಿಳಿದೂ ಕೊನೆಯ ಕ್ಷಣದವರೆಗೆ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇದ್ದವರಿದ್ದಾರೆ. ಮನೋಬಲದಿಂದ ಮೃತ್ಯುವನ್ನು ವರ್ಷಗಟ್ಟಲೆ ಮುಂದೂಡಿದವರಿದ್ದಾರೆ. ಇಂತಹ ಮನೋಬಲ ನಮಗೆ ಬರಲೆಂದು ದೇವರನ್ನು ಪ್ರಾರ್ಥಿಸೋಣ. "ಬಂದದ್ದೆಲ್ಲ ಬರಲಿ; ಗೋವಿಂದನ ದಯೆಯಿರಲಿ" ಎನ್ನುವ ಧೈರ್ಯ, ನಂಬಿಕೆ ನಮ್ಮದಾಗಲಿ.


ಸೂಚನೆ : 26/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.