Saturday, June 12, 2021

ಯೋಗತಾರಾವಳಿ - 10 ಅಭ್ಯಾಸಶೂರತೆ (Yogataravali - 10 Abhyasa-shurate)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳಿ (ಶ್ಲೋಕ ೯)

ಅನಾಹತೇ ಚೇತಸಿ…


ಆರಂಭಶೂರರೋ ಅಭ್ಯಾಸಶೂರರೋ?

ಕೆಲಸಗಳನ್ನು ದೊಡ್ಡದಾಗಿ ಆರಂಭಿಸುವುದಷ್ಟರಲ್ಲೇ ನಿಪುಣರು, ದಕ್ಷಿಣಭಾರತದವರು - ಎಂದು ಅವರನ್ನು ಲಘುವಾಗಿ ಅಣಗಿಸುವ ಮಾತೊಂದು ಸಂಸ್ಕೃತದಲ್ಲಿದೆ: "ಆರಂಭ-ಶೂರಾಃ ಖಲು ದಾಕ್ಷಿಣಾತ್ಯಾಃ" ಎಂಬುದಾಗಿ.

ಕೆಲಸವನ್ನು ಕಿರಿದಾಗಿಯೇ ಆರಂಭಿಸಿದರೂ ಬಿಡದೇ ಮಾಡಿಕೊಂಡುಹೋಗುವುದಿದ್ದಲ್ಲಿ ಕೆಲಸವು ಗುರಿಮುಟ್ಟುವುದು. ಅದಕ್ಕೂ ಒಂದು ಗಾದೆ ಮಾತಿದೆ, ಸಂಸ್ಕೃತದಲ್ಲಿ: "ಅಲ್ಪಾರಂಭಃ ಕ್ಷೇಮಕರಃ" ಎಂಬುದಾಗಿ.

ಹೀಗಾಗಿ, ಬರೀ "ಆರಂಭಶೂರ"ತ್ವವೆಂದಲ್ಲದೇ, ಹಿಡಿದ ಕಾರ್ಯವನ್ನು ನಿಯತವಾಗಿ ಮಾಡಿಕೊಂಡು ಹೋಗುವವರಾಗಬೇಕು: "ಅಭ್ಯಾಸ-ಶೂರ"ರಾಗಬೇಕು. ಯೋಗವಿದ್ಯೆಯಲ್ಲಿ ಈ ಅಭ್ಯಾಸಶೂರತೆಗೆ ಬಹಳ ಬೆಲೆಯುಂಟು. ಇಲ್ಲಿ ಅದನ್ನು ಸೂಚಿಸಿದೆ. ಬಂಧತ್ರಯಾಭ್ಯಾಸದ ಪ್ರಾಮುಖ್ಯವನ್ನು ಹಲವು ಬಾರಿ ಈ ಮೊದಲು ಹೇಳಿಯಾಗಿದೆ.

ಈ ಬಂಧಾಭ್ಯಾಸವನ್ನು ಮಾಡುವಾಗ ಮನಸ್ಸನ್ನು ಎಲ್ಲೋ ಚೆಲ್ಲಿ ಚೆದರಿಹೋಗಲು ಬಿಟ್ಟಿರುವುದಲ್ಲ. ಅನಾಹತ-ಧ್ವನಿಯ ಬಗ್ಗೆ ಹಿಂದೆ ಹೇಳಿತ್ತಲ್ಲವೆ? ಒಮ್ಮೆ ಅದರ ವರಸೆಯಾರಂಭವಾಗುತ್ತಲೇ ಮನಸ್ಸನ್ನು ಅದರತ್ತಲೇ ಹರಿಸಬೇಕು. ಅತ್ತ ಅವಧಾನ ಬೇಕು. ಮನಸ್ಸು ಒಂದೇ ವಿಷಯದತ್ತಲೇ ದತ್ತವಾಗಿದ್ದಲ್ಲಿ ಅದನ್ನು 'ಸಾವಧಾನ'ವಾದ ಮನಸ್ಸು - ಎನ್ನುತ್ತಾರೆ. ಸಾವಧಾನವೆಂದರೆ ಏನೋ 'ಸಾವಕಾಶವಾಗಿ', 'ಬಿಗಿಯಿಲ್ಲದೆ' ಎಂಬ ಅರ್ಥದಲ್ಲಿ ಬಳಕೆ ಅಲ್ಲಲ್ಲಿ ಕಾಣುತ್ತದೆಯಾದರೂ, ಸ್ಪಷ್ಟ-ಸಂಸ್ಕೃತ-ಮೂಲದ ಪದವನ್ನು ಮೂಲಾರ್ಥದಲ್ಲೇ ಬಳಸುವುದು ಕ್ಷೇಮ.

ಅನಾಹತ-ಧ್ವನಿಯತ್ತ ದತ್ತ-ಮನಸ್ಕರೂ ಅಭ್ಯಾಸ-ಶೂರರೂ ಆದವರಿಗೆ ದೊರೆಯುವ ಲಾಭವನ್ನು ಈ ಶ್ಲೋಕದಲ್ಲಿ ಹೇಳಿದೆ.

ಮನಸ್ಸೂ ವಾಯುವೂ

ಉಸಿರಾಟದ ಸಂಚಾರ. ಮನಸ್ಸಿನ ಸಂಚಾರಗಳು ಸುಲಭಕ್ಕೆ ಹತೋಟಿಗೆ ಬರತಕ್ಕವಲ್ಲ.ಭಗವದ್ಗೀತೆಯಲ್ಲಿ ಅರ್ಜುನನು ಕೃಷ್ಣನಿಗೇ ಹೇಳುತ್ತಾನೆ - "ಅಯ್ಯೋ, ಮನಸ್ಸು ಚಂಚಲವಯ್ಯಾ, ಪ್ರಮಾಥವನ್ನು ಉಂಟುಮಾಡುವಂತಹುದು (ಪ್ರಮಾಥವೆಂದರೆ ಕ್ಷೋಭೆ). ಬಲವಾಗಿಯೂ ದೃಢವಾಗಿಯೂ ಅದನ್ನುಂಟುಮಾಡುವಂತಹುದು" ಎಂದು (ಚಂಚಲಂ ಹಿ ಮನಃ ಕೃಷ್ಣ! ಪ್ರಮಾಥಿ ಬಲವದ್ ದೃಢಮ್). ಅದರ ನಿಗ್ರಹವೋ ಗಾಳಿಯ ನಿಗ್ರಹದಂತೆಯೇ ಸರಿ. (ನಿಗ್ರಹವೆಂದರೆ ಹತೋಟಿಯಲ್ಲಿಟ್ಟುಕೊಳ್ಳುವುದು). ಅದು ಆಗದ ಮಾತು. ಬರೀ ದುಷ್ಕರವಲ್ಲ ಸುದುಷ್ಕರವಾದದ್ದು (ಎಂದರೆ ತೀರಾ ದುಸ್ಸಾಧ್ಯವಾದದ್ದು, ಅಸಾಧ್ಯವೆಂದೇ ಹೇಳಬಹುದಾದದ್ದು) - ಎಂಬುದಾಗಿ.

ಎಷ್ಟೋ ವೇಳೆ ಪ್ರಶ್ನೆಯಲ್ಲಿಯೇ ಉತ್ತರವು ನಿಗೂಢವಾಗಿ ಇರುವುದುಂಟು. ಹಾಗೆ ಇಲ್ಲಿ ಮನಸ್ಸು-ವಾಯುಗಳ ಸಮಾಚಾರವಾಗಿದೆ. ಉಸಿರಾಟಕ್ಕೂ ನಿರಂತರ-ಗತಿಯುಂಟು. ಮನಸ್ಸಿಗೂ ಅಂತಹುದೇ ಗತಿಯುಂಟು. "ಬಹಳ ವೇಗವಾಗಿ ಹೋದನು" - ಎಂಬುದಕ್ಕೆ "ವಾಯುವೇಗದಲ್ಲಿ ಹೋದನು" ಎನ್ನುವುದುಂಟು; ಮತ್ತೂ ವೇಗವನ್ನು ಹೇಳಲು "ಮನೋವೇಗದಲ್ಲಿ ಹೋದನು" ಎನ್ನುವುದಿದೆ. ಹೀಗೆ ಮನೋ-ವಾಯುಗಳ ಗತಿಗಳಲ್ಲಿ ಹೋಲಿಕೆಯಿದೆ.

ಯೋಗ-ವಿದ್ಯೆಯಲ್ಲಿ ನಾವು ಗಮನಿಸಬೇಕಾದುದು ಮನೋಗತಿ-ವಾಯುಗತಿಗಳನ್ನು. ಇಲ್ಲಿಯ ವಾಯುಗತಿಯೆಂದರೆ ಪ್ರಾಣ-ವಾಯುವಿನ ಗತಿ. 'ಚಾರ'ವೆಂದರೆ ಗತಿಯೆಂದೇ . ಈ ಚಾರವೇ ಅಧಿಕವಾದಾಗ ಅದು 'ಪ್ರ-ಚಾರ'ವಾಗುತ್ತದೆ. ನಮ್ಮ ಉಸಿರಿನಾಟವೂ ಅಪ್ರತಿಹತ, ಮನಸ್ಸಿನಾಟವೂ ಅಪ್ರತಿಹತ. ಹಾಗೆಂದರೆ ಅಡೆತಡೆಯಿಲ್ಲದೆ ಚರಿಸುತ್ತಿರುವುದು, ಸಂಚರಿಸುತ್ತಿರುವುದು, ಪ್ರಚರಿಸುತ್ತಿರುವುದು.  ಎಂದೇ ಅವನ್ನು "ಶ್ವಾಸ-ಪ್ರಚಾರ", "ಮನಃಪ್ರಚಾರ" ಎಂದು ಇಲ್ಲಿ ಕರೆದಿದೆ. 

ಅವೆರಡರ ನಡೆಯನ್ನೂ ಸ್ತಂಭನಗೊಳಿಸಬೇಕು, ಇದಾದರೂ ಚೆನ್ನಾಗಿಯೇ ಆಗಬೇಕು; ಒಟ್ಟಿಗೇ ಆಗಬೇಕು - ಇದನ್ನೇ ಇಲ್ಲಿ ಮನಃಪ್ರಚಾರ(ಸಂ)ಸ್ತಂಭನ-ಶ್ವಾಸಪ್ರಚಾರ(ಸಂ)ಸ್ತಂಭನ - ಎಂದಿರುವುದು.

ಹೀಗೆ ಇವೆರಡನ್ನೂ ಸ್ತಂಭೀಭೂತವಾಗಿಸುವುದೇ ಕೇವಲಕುಂಭಕ. ಅದು ಜಿತವಾದಾಗ ಬರುವ ಸೊಗಸೇ ಬೇರೆ. ಕಂಗೊಳಿಸುವ ಕೇವಲ-ಕುಂಭಕವನ್ನು "ಕೇವಲ-ಕುಂಭಕ-ಶ್ರೀ" -ಎಂದು "ಶ್ರೀ"-ಪದವನ್ನು ಸೇರಿಸಿ ಹೇಳಿ, ಅದಕ್ಕೆ ಗೌರವವನ್ನೂ ಇಲ್ಲಿ ತೋರಿಸಲಾಗಿದೆ.

ಶಿಷ್ಯನು ಇದನ್ನು ಸಾಧಿಸಿರಲು ಆತನಲ್ಲಿ ಆ ಕೇವಲ-ಕುಂಭಕವೂ ಅದರ ಪರಿಣಾಮಗಳೂ ಎದ್ದುಕಾಣುವುವಾಗಿ, ಅದನ್ನು "ಕೇವಲಕುಂಭಕದ ಸಿರಿಯು (ವಿ)ಜೃಂಭಿಸುತ್ತಿದೆ" ಎಂಬ ಮಾತಿನಲ್ಲಿ ಆಚಾರ್ಯರು ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಅನಾಹತೇ ಚೇತಸಿ ಸಾವಧಾನೈಃ

      ಅಭ್ಯಾಸಶೂರೈರನುಭೂಯಮಾನಾ |

ಸಂಸ್ತಂಭಿತ-ಶ್ವಾಸ-ಮನಃಪ್ರಚಾರಾ

      ಸಾ ಜೃಂಭತೇ ಕೇವಲಕುಂಭಕಶ್ರೀಃ ||೯||

ಸೂಚನೆ : 12/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ