Monday, June 28, 2021

ಆರ್ಯಸಂಸ್ಕೃತಿ ದರ್ಶನ - 48 ಭಾಗವತ ಧರ್ಮ (Arya Samskruti Darshana - 48 Bhagavatha Dharma)

ಲೇಖಕರು : ಚಾಮುಗಳುಲೋಕದಲ್ಲಿ ಜನರು ಹುಟ್ಟಿನಿಂದಲೇ ಆಸ್ತಿಕ ಅಥವಾ ನಾಸ್ತಿಕ ಮನೋಧರ್ಮದಿಂದ ಕೂಡಿ ಜನ್ಮವೆತ್ತುತ್ತಾರೆ. ಆದುದರಿಂದಲೇ ಉಪದೇಶದಿಂದ ನಾಸ್ತಿಕನನ್ನು ಆಸ್ತಿಕನನ್ನಾಗಿ ಮಾಡಲಾಗುವುದಿಲ್ಲ ಅಥವಾ ಆಸ್ತಿಕನನ್ನು ನಾಸ್ತಿಕನನ್ನಾಗಿ ಮಾಡಲಾಗುವುದಿಲ್ಲ. ಈ ಸತ್ಯವನ್ನೆ ನಮ್ಮ ಪೂರ್ವಿಕರು

ಜನ್ಮಾಂತರಸಹಸ್ರೇಷು ಯಾ ಬುದ್ದಿಃ ಭಾವಿತಾಪುರಾ । 

ತಾಮೇವ ಭಜತೇ ಜಂತುಃ ಉಪದೇಶೋ ನಿರರ್ಥಕಃ ॥

ಎಂಬ ಶ್ಲೋಕದಲ್ಲಿ ಉಕ್ತಿಸಿರುತ್ತಾರೆ.

ನಮ್ಮ ಪುರಾಣೇತಿಹಾಸಗಳು ಅಂತಹ ಆಸ್ತಿಕ ಅಥವಾ ನಾಸ್ತಿಕರ ಹಲವಾರು ಕಥೆಗಳನ್ನು ಒಳಗೊಂಡಿವೆ. ಪ್ರಹ್ಲಾದ ಮತ್ತು ಹಿರಣ್ಯಕಶಿಪುಗಳ ಕಥೆಯು ಇದಕ್ಕೆ ಒಂದು ನಿದರ್ಶನ. ಅಹಂಕಾರದಿಂದ ತುಂಬಿದ ಹಿರಣ್ಯಕಶಿಪುವು ಭಗವದ್ದ್ವೇಷಿ. ತ್ರಿವರ್ಗಗಳೇ ಎಲ್ಲವೂ ಎಂದು ತಿಳಿದಿದ್ದ ಅಲ್ಪದೃಷ್ಟಿಯಿದ್ದ ಅವನು ತನ್ನ ಪ್ರೀತಿಯ ಪುತ್ರನಾದ ಪ್ರಹ್ಲಾದನೂ ತನ್ನಂತೆಯೇ ಇರಬೇಕೆಂದು ಬಯಸುತ್ತಾನೆ. ಆದರೆ ಪ್ರಹ್ಲಾದನು ಜನ್ಮದಿಂದಲೇ ಅತಿಶಯವಾದ ರೀತಿಯಲ್ಲಿ ಆಸ್ತಿಕ ಮನೋಧರ್ಮದಿಂದ ಕೂಡಿದ ಮಹಾಭಾಗವತ. ಆದುದರಿಂದ ಹಿರಣ್ಯಕಶಿಪುವು ಪ್ರಹ್ಲಾದನ ಮನಸ್ಸನ್ನು ಪರಿವರ್ತಿಸಲು ಮಾಡುವ ಪ್ರಯತ್ನಗಳೆಲ್ಲವೂ ವಿಫಲವಾಗುತ್ತವೆ. ರೋಚ್ಚಿಗೆದ್ದು ಅವನು ಮಗನನ್ನು ಕ್ರೂರವಾದ ಶಿಕ್ಷೆಗಳಿಂದ ದಂಡಿಸುತ್ತಾನೆ. ಆದರೆ ಶಿಕ್ಷೆಗಳಾವುವೂ ಪ್ರಹ್ಲಾದನ ಮನಸ್ಸನ್ನು ಬದಲಾಯಿಸಲು ಸಮರ್ಥವಾಗುವುದಿಲ್ಲ. ಪ್ರತಿಯಾಗಿ ಅವನು ತಾನು ಎಲ್ಲೆಲ್ಲಿಯೂ ಕಂಡ ಭಗವಂತನನ್ನೇ ಇನ್ನೂ ಅಧಿಕವಾಗಿ ಆಶ್ರಯಿಸುತ್ತಾನೆ. ಭಗವದೈಕಾತ್ಮ್ಯದಿಂದ ಶಿಕ್ಷೆಗಳಾವುವೂ ಅವನ ಮೇಲೆ ಸ್ವಲ್ಪವೂ ಕೆಂದುವುದಿಲ್ಲ. ಅವನ ಹೃದಯದಲ್ಲಿ ಗೋಚರನಾದ ಸರ್ವವ್ಯಾಪಿಯಾದ ಭಗವಂತನೇ ಒಂದು ಕಂಬದಲ್ಲಿ ಉದ್ಭವಿಸಿ ಹಿರಣ್ಯಕಶಿಪುವನ್ನು ಕೊಂದು ಪ್ರಹ್ಲಾದನನ್ನು ರಕ್ಷಿಸುತ್ತಾನೆ.

ಧರ್ಮಾತ್ಮನಾದ ಅಂಗರಾಜನಿಂದ ಹುಟ್ಟಿದ ವೇನನು ಜನ್ಮತಃ ನಾಸ್ತಿಕತೆಯ ಪ್ರತೀಕ. ನಾಸ್ತಿಕವಾದಪ್ರವರ್ತಕರಲ್ಲೊಬ್ಬ. ಚರಕಾಚಾರ್ಯನು, "ಪಾತಕೇಭ್ಯಃ ಪರಂ ಚೈತತ್ ಪಾತಕಂ ನಾಸ್ತಿಕಗ್ರಹಃ" (ನಾಸ್ತಿಕತೆಯೆಂಬ ಪಾಪವು ಎಲ್ಲ ಪಾಪಗಳಿಗಿಂತಲೂ ಮಿಗಿಲಾದುದು) ಎಂದು ನುಡಿಯುತ್ತಾನೆ. ವೇನನಲ್ಲಿ ಅಂತಹ ಪಾಪ ಪುರುಷನನ್ನು ನೋಡುತ್ತೇವೆ.

ಆಸ್ತಿಕಜನರೆಲ್ಲರಲ್ಲಿಯೂ ಆಸ್ತಿಕತೆಯು ಒಂದೇ ವಿಧವಾಗಿರುವುದಿಲ್ಲ. ಬಹು ಜನರಲ್ಲಿ ಅದು ಸಾಮಾನ್ಯವಾದ ರೀತಿಗಳಲ್ಲಿ ತನ್ನನ್ನು ವ್ಯಕ್ತಪಡಿಸಿಕೊಳ್ಳುತ್ತದೆ. ಒಂದು ದೇವಸ್ಥಾನದ ಮುಂದೆ ನಡೆಯುವಾಗ ನಿಂತು ದೂರದಿಂದಲೇ ದೇವರಿಗೆ ಕೈಮುಗಿದು ಮುಂದೆ ಹೋಗುವುದು, ಗುಡಿಗೋಪುರಗಳಲ್ಲಿ ನಡೆಯುವ ಉತ್ಸವಾದಿಗಳಲ್ಲಿ ಪಾಲ್ಗೊಳ್ಳುವುದು, ತೀರ್ಥಯಾತ್ರೆ ಇತ್ಯಾದಿಗಳನ್ನು ಕೈಗೊಳ್ಳುವುದು, ಶ್ರಾದ್ಧಾದಿ ಕರ್ಮಗಳನ್ನು ಮಾಡುವುದು ಇತ್ಯಾದಿಗಳು ಅದಕ್ಕೆ ನಿದರ್ಶನ. ಬಹುಮಂದಿಗಳಲ್ಲಿ ಇವು ಗಾಢವಾದ ಶ್ರದ್ಧೆ, ವಿಚಾರ, ಭಾವನೆಗಳಿಲ್ಲದೆ ಯಾಂತ್ರಿಕವಾಗಿರುತ್ತವೆ. ನಮ್ಮ ಕಾಲದಲ್ಲಿ ಜನರು ತೀರ್ಥ, ಉತ್ಸವಾದಿಗಳಿಗೆ ದಂಡೆದಂಡೆಯಾಗಿ ಹೋಗುವವುದನ್ನು ನೋಡುತ್ತೇವೆ. ಜನರಲ್ಲಿ ತುಂಬ ದುಡ್ಡಿರುತ್ತದೆ. ಅದನ್ನು ಖರ್ಚು ಮಾಡಲು ಹೋಗುತ್ತಾರೆ. ಮನೋವಿನೋದಕ್ಕೋಸ್ಕರ ಹೋಗುತ್ತಾರೆ. ಆದರೆ ಅದರಿಂದ ಯಾವ ವಿಧವಾದ ಆಧ್ಯಾತ್ಮಿಕ ಸಂಸ್ಕಾರವನ್ನು ಪಡೆಯಬೇಕೋ ಅದನ್ನು ಪಡೆಯದೆಯೇ ಅವರು ತಮ್ಮ ತಮ್ಮ ಲೌಕಿಕ ಜೀವನದ ವ್ಯಾಪಾರಗಳಿಗೆ ಹಿಂದಿರುಗುತ್ತಾರೆ. ನಾಸ್ತಿಕತೆಗಿಂತ ಆಸ್ತಿಕತೆಯು ಉತ್ತಮವೆಂದು ಹೇಳಬಹುದಾದರೂ ಸರಿಯಾದ ಲಕ್ಷ್ಯ ಮತ್ತು ಪ್ರಯತ್ನಗಳಿಲ್ಲದ ಆಸ್ತಿಕತೆಯು ಮನುಷ್ಯನ ಆತ್ಮೋದ್ಧಾರಕ್ಕೆ ದಾರಿ ಮಾಡಿಕೊಡುವುದಿಲ್ಲ. ಮನುಷ್ಯರ ಇತರ ವ್ಯಾಪಾರಗಳಂತೆ ಅದೂ ಪರಂಪರೆ, ಅಭ್ಯಾಸ ಇತ್ಯಾದಿಗಳಿಗೆ ವಶರಾಗಿ ಜನರು ಮಾಡುವ ಒಂದು ವ್ಯಾಪಾರವಾಗಿ ಉಳಿಯುತ್ತದೆ. ಭಗವಂತನು ಒಳ್ಳೆಯ ಮನಸ್ಸನ್ನು ಕೊಟ್ಟಿರುವುದರಿಂದ ಅದನ್ನು ಬಳಸಿಕೊಂಡು ಆಧ್ಯಾತ್ಮಿಕಮಾರ್ಗದಲ್ಲಿ ಚೆನ್ನಾಗಿ ಬೆಳೆಯುವುದು ಆಸ್ತಿಕ ಮನೋಧರ್ಮವುಳ್ಳವರೆಲ್ಲರ ಕರ್ತವ್ಯ. ಅದು ಶ್ರದ್ಧೆ ಮತ್ತು ವಿಚಾರಪೂರ್ವಕವಾದ ಪ್ರಯತ್ನಗಳಿಂದ ಆಗುವ ಕೆಲಸ. ವಿಶೇಷವಾಗಿ ಆಸ್ತಿಕತೆಯ ಉನ್ನತೋನ್ನತವಾದ ಗುರಿಯನ್ನು ಮುಟ್ಟಿದ ಮಹಾನುಭಾವರ ಮೇಲ್ಪಂಕ್ತಿಯನ್ನು, ಅವರ ಆದರ್ಶಗಳನ್ನು ಎಡೆಬಿಡದೆ ಮನಸ್ಸಿನಲ್ಲಿಟ್ಟುಕೊಂಡು ಸಾಧಿಸಬೇಕಾದ ಪರಿಪೂರ್ಣತೆ.

ನಮ್ಮ ದೇಶದ ಚರಿತ್ರೆಯಲ್ಲಿ ಆಸ್ತಿಕ ಮನೋಧರ್ಮವು ಪುಷ್ಟವಾಗಿ ಬೆಳೆಯಲು ಆಶ್ರಯವನ್ನಿತ್ತಿರುವ ಶೈವ, ವೈಷ್ಣವ, ಶಾಕ್ತ ಮುಂತಾದ ಸಾಧನಾಪಂಥಗಳು ಬಹಳ ಹಿಂದಿನಿಂದ ಇರುತ್ತವೆ.ಅವುಗಳನ್ನು ಅವಲಂಬಿಸಿ ತಮ್ಮ ಆತ್ಮೋದ್ಧಾರದ ಮಾರ್ಗವನ್ನು ವಿರಚಿಸಿಕೊಂಡಿರುವ ಅನೇಕ ಜನ ಮಹನೀಯರುಗಳು ಇರುತ್ತಾರೆ. ಉದಾಹರಣೆಗೆ ಪಾಶುಪತ ಮಾರ್ಗದಲ್ಲಿ ನಡೆದು ಪರಿಪೂರ್ಣತೆಯನ್ನು ಸಾಧಿಸಿದವರ ಹೆಸರುಗಳನ್ನು ಉಲ್ಲೇಖಿಸುವ ಶ್ಲೋಕವೊಂದು ಈ ರೀತಿ ಇದೆ

ದುರ್ವಾಸ ಕೌಶಿಕ ಸುರೇಶ ಮೃಕಂಡುಪುತ್ರ ದೇವೇಜ್ಯ

ಬಾಣ ವಿಧಿಶಕ್ತಿ ದಧೀಚಿ ರಾಮಾನ್ ।

ವಾಮದೇವ ಕವಿ ಕುಂಭಜ ಗೌತಮಾದೀನ್ 

ಪುಣ್ಯಾನಿಮಾನ್ ಪರಮ ಪಾಶುಪತಾನ್ ಸ್ಮರಾಮಿ ॥ 

ಅದೇ ರೀತಿ ವೈಷ್ಣವಧರ್ಮದಲ್ಲಿ ಅಗ್ರೇಸರರಾದ ಮಹಾನುಭಾವರ ಹೆಸರುಗಳನ್ನು ನಿರ್ದೇಶಿಸುವ ಶ್ಲೋಕವೊಂದು ಈ ರೀತಿ ಇದೆ -

ಪ್ರಹ್ಲಾದನಾರದ ಪರಾಶರ ಪುಂಡರೀಕ 

ವ್ಯಾಸಾಂಬರೀಶ ಶುಕ ಶೌನಕ ಭೀಷ್ಮ ದಾಲ್ಭ್ಯಾನ್ ।

ರುಕ್ಮಾಂಗದಾರ್ಜುನ ಬಲೀಂದ್ರ ವಿಭೀಷಣಾದೀನ್ 

ಪುಣ್ಯಾನಿಮಾನ್ ಪರಮಭಾಗವತಾನ್ ಸ್ಮರಾಮಿ ॥

ವಾಸ್ತವದಲ್ಲಿ ಈ ಸಾಧನಾ ಪಂಥಗಳನ್ನು ಅನುಸರಿಸಿ ಅಧ್ಯಾತ್ಮ ಮಾರ್ಗದ ಕೊನೆ ಮುಟ್ಟಿದವರು ಅಸಂಖ್ಯಾತವಾಗಿರುತ್ತಾರೆ. ಶ್ಲೋಕಗಳು ಅವರಲ್ಲಿ ಗಣ್ಯರಾದವರ ಹೆಸರುಗಳನ್ನು ಮಾತ್ರ ಉಲ್ಲೇಖಿಸುತ್ತವೆ.

ಪ್ರಸಕ್ತ ಲೇಖನದಲ್ಲಿ ಆ ಸಾಧನಾಪಂಥಗಳ ಪೈಕಿ ಪ್ರಮುಖವಾದ ವೈಷ್ಣವ ಅಥವಾ ಭಾಗವತಧರ್ಮದ ಮೂಲದೃಷ್ಟಿಗಳನ್ನು ಕುರಿತು ಒಂದು ಸಂಗ್ರಹವಾದ ಪರಿಚಯವನ್ನು ಕೊಡಲು ಯತ್ನಿಸುತ್ತೇವೆ.

ನಮ್ಮ ದೇಶದ ಪ್ರಾಚೀನ ಋಷಿಗಳು ಜಟಿಲವಾದ ಯಜ್ಞಯಾಗಾದಿಗಳ ಮೂಲಕ ಮೂವತ್ತಮೂರು ದೇವತೆಗಳನ್ನು ಪೂಜಿಸಿದರು. ಆ ದೇವತೆಗಳ ಬಹುಮುಖವಾದ ಮಹಿಮೆಗಳನ್ನು ಹೊಗಳಿರುವುದೇ ವೇದಗಳು ಮಾಡಿರುವ ಕೆಲಸ. ಅನೇಕ ಚಾರಿತ್ರಿಕವಾದ ಮತ್ತು ಬೌದ್ಧಿಕವಾದ ಕಾರಣಗಳಿಂದ ಕಾಲಕ್ರಮದಲ್ಲಿ ವೇದದರ್ಮದ ಅನೇಕ ಪಾರ್ಶ್ವಗಳು ಲುಪ್ತವಾದುವು. ಕೆಲವು ಪಾರ್ಶ್ವಗಳು ಲುಪ್ತವಾಗದೆ ಉಳಿದು ನಮ್ಮ ಕಾಲದವರೆಗೆ ಮುಂದುವರಿದುಕೊಂಡು ಬಂದಿರುತ್ತವೆ ಮತ್ತು ಇಂದಿಗೂ ನಮ್ಮ ಜೀವನದ ಅಮೂಲ್ಯವಾದ ಅಂಗಗಳಾಗಿರುತ್ತವೆ. ಅದೇ ಸಮಯದಲ್ಲಿ ವೇದಗಳ ಹಲವು ದೇವತೆಗಳನ್ನು ಕೇಂದ್ರೀಕರಿಸಿಕೊಂಡು ಹಲವಾರು ಆರಾಧನಾ ಪಂಥಗಳು ಬಹುಮುಖವಾಗಿ ಬೆಳೆದು ನಮ್ಮ ಜನರಿಗೆ ಆಧ್ಯಾತ್ಮಿಕ ಅವಲಂಬನೆಯನ್ನು ಒದಗಿಸಿದುವು. ವಿಶೇಷವಾಗಿ ವಿಷ್ಣು, ಶಿವ, ಶಕ್ತಿ, ಸೂರ್ಯ, ಗಣಪತಿ ಮತ್ತು ಸ್ಕಂಧರು ಬಹಳ ಪ್ರಭಾವಶಾಲಿಯಾದ ಪಂಥಗಳಿಗೆ ಆರಾಧ್ಯ ದೇವತೆಗಳಾದರು.

ಅವರಲ್ಲಿ ಶಿವ ಮತ್ತು ವಿಷ್ಣುಗಳಿಗೆ ಅಗ್ರಸ್ಥಾನ. ಅವರಿಬ್ಬರ ಪೈಕಿ ನಮ್ಮ ಲೇಖನಕ್ಕೆ ವಿಷಯವಾದ ವಿಷ್ಣುವಿಗೆ ಸಂಬಂಧಿಸಿದಂತೆ ವಿರಚಿತವಾದ ಭಾರತ, ಭಗವದ್ಗೀತೆ, ರಾಮಾಯಣ ಮತ್ತು ಭಾಗವತಗಳಂತಹ ಮಹಾಗ್ರಂಥಗಳು ಅವನ ಆರಾಧನಾ ಪಂಥಕ್ಕೆ ಶಾಶ್ವತವಾದ ತಳಹದಿಯನ್ನು ಒದಗಿಸಿದುವು. ಅವು ಮತ್ತು ಮುಂದಿನ ಕಾಲಗಳಲ್ಲಿ ಅವುಗಳ ಸ್ಫೂರ್ತಿಯಿಂದ ವಿರಿಚಿತವಾದ ಆಗಮಾದಿ ಶಾಸ್ತ್ರ ಸಂಹಿತೆಗಳು ದೇಶದ ಎಲ್ಲ ಭಾಗಗಳನ್ನು ವ್ಯಾಪಿಸಿದ ವೈಷ್ಣವಧರ್ಮದ ಉಸಿರಾದುವು. ಅವು ಕೊಂಡಾಡುವ ಧರ್ಮವೇ ಭಾಗವತ(ವೈಷ್ಣವ) ಧರ್ಮ. ಈ ಧರ್ಮವು ವೇದ, ಉಪನಿಷತ್ತು, ಯೋಗ ಮತ್ತು ಸಾಂಖ್ಯಾದಿ ಶಾಸ್ತ್ರಗಳ ಸಾರವೆಲ್ಲವನ್ನೂ ತನ್ನಲ್ಲಿ ಒಳಗೊಂಡು ಮನುಷ್ಯರ ಆತ್ಯಂತಿಕ ಹಿತವನ್ನು ಸಂಪಾದಿಸಿಕೊಡಲು ಸರ್ವಥಾ ಸಮರ್ಥವಾಗಿ ಮುಂದುವರಿದಿದೆ. ಅದನ್ನಾಶ್ರಯಿಸಿ ತಮಿಳುು  ಮುಂತಾದ ದೇಶಭಾಷೆಗಳಲ್ಲಿ ವಿರಚಿತವಾಗಿರುವ ಸಾಹಿತ್ಯಗಳು ಪಂಡಿತ ಪಾಮರರಿಬ್ಬರ ಮನಸ್ಸನ್ನೂ ಅಪಹರಿಸಿರುತ್ತವೆ. ಅದರ ಅವಲಂಬನೆಯ ಮೇಲೆ ಬೆಳೆದ ಸಂಸ್ಥೆಗಳು ಸಾಮಾಜಿಕವಾದ ಏರುಪೇರುಗಳನ್ನು ಸರಿಪಡಿಸಿ ವಿವಿಧ ವರ್ಗಗಳಲ್ಲಿ ಸಾಮರಸ್ಯವನ್ನುಂಟುಮಾಡಲು ಬಹುದೂರದವರೆಗೆ ಸಫಲವಾಗಿರುತ್ತವೆ. ಅದರಿಂದ ವಾಸ್ತುಶಿಲ್ಪ, ನಾಟ್ಯ ಮುಂತಾದ ಅನೇಕ ಕಲೆಗಳು ಸ್ಫೂರ್ತಿ ಪಡೆದು ಜೀವನವನ್ನು ಸುಂದರವಾಗಿಸಿರುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ, ಭಾಗವತಧರ್ಮವು ಅನೇಕ ಸಾವಿರ ವರ್ಷಗಳ ಕಾಲದಲ್ಲಿ ಬೌದ್ಧಿಕವಾಗಿ ಹಾಗು ಭಾವನಾತ್ಮಕವಾಗಿ ಉಂಟಾದ ಸುಚಾರುರೂಪವಾದ ಬೆಳವಣಿಗೆಯ ಶ್ರೇಷ್ಠವಾದ ಪ್ರತೀಕವಾಗಿರುತ್ತದೆ. ಅದೆಲ್ಲವನ್ನೂ ಸ್ಮರಿಸಿಕೊಳ್ಳ ಬೇಕಾದರೆ ಬಹಳ ಕಾಲ ಮತ್ತು ಸ್ಥಳಗಳು ಅವಶ್ಯಕವಾಗುತ್ತವೆ. ಅದು ಇಲ್ಲಿ ಕೈಗೊಳ್ಳುವ ಕೆಲಸವಲ್ಲ. ಇಲ್ಲಿ ಪವಿತ್ರವಾದ ಭಾಗವತಧರ್ಮದ ಮೂಲ ದೃಷ್ಟಿಗಳನ್ನು ಕುರಿತು ಕೆಲವಂಶಗಳನ್ನು ವಾಚಕರ ಮುಂದಿರಿಸುತ್ತೇವೆ.

ವೇದ, ಉಪನಿಷತ್ತು, ಗೀತೆ ಮುಂತಾದ ಪವಿತ್ರ ಗ್ರಂಥಗಳು ತಪಸ್ಸಿನಿಂದ ಅಥವಾ ಅಧ್ಯಾತ್ಮ ಯೋಗದಿಂದ ನಮ್ಮ ದೇಶದ ಖುಷಿಗಳು ಮಾಡಿದ ಸತ್ಯದ ಸ್ವರೂಪದ ಉನ್ನತೋನ್ನತವಾದ ವರ್ಣನೆಗಳನ್ನು ಒಳಗೊಂಡಿವೆ. ಅವೆಲ್ಲವೂ ನಿರಪೇಕ್ಷವಾದ (Absolute) ಸತ್ಯದ ಸ್ವರೂಪವನ್ನು ಯಥಾವಸ್ಥಿತವಾಗಿ ಹೊಗಳುತ್ತವೆ. ಉದಾಹರಣೆಗೆ ಪುರುಷ ಸೂಕ್ತವನ್ನು ಹೇಳಿದ ಋಷಿಯು, 'ಪುರುಷನು ಸಾವಿರ ತಲೆಗಳಿಂದ ಕೂಡಿರುತ್ತಾನೆ. ಅವನಿಗೆ ಸಾವಿರ ಕಣ್ಣುಗಳಿರುತ್ತವೆ, ಸಾವಿರ ಪಾದಗಳಿರುತ್ತವೆ. ಅವನು ಭೂಮಿಯನ್ನು ಎಲ್ಲ ಕಡೆಗಳಿಂದಲೂ ಆವರಿಸಿ ಅದನ್ನು ದಶಾಂಗುಲದಷ್ಟು ಮೀರಿಯೂ ಇರುತ್ತಾನೆ. ವರ್ತಮಾನಕಾಲದಲ್ಲಿರುವುದೆಲ್ಲವೂ ಪುರುಷನೇ. ಹಿಂದೆ ಇದ್ದದ್ದು, ಮುಂದೆ ಬರುವುದೂ ಸಹ ಪುರುಷನೇ. ಮತ್ತು ಅವನು ಅಮೃತತ್ವಕ್ಕೆ ಈಶ್ವರ. ಇದೆಲ್ಲವೂ ಅವನ ಮಹಿಮೆಯೇ. ಆ ಪರಮಪುರುಷನು ಅದಕ್ಕಿಂತಲೂ ದೊಡ್ಡವನು. ಎಲ್ಲ ಭೂತಗಳೂ ಅವನ ಒಂದು ಕಾಲು ಭಾಗ (ಎಂದರೆ ಅವನ ಒಂದು ಸಣ್ಣ ಅಂಶ) ಮಾತ್ರ. ಅವನ ಮುಕ್ಕಾಲು ( ಅಥವಾ ಅಪರಿಮಿತ) ಭಾಗವು ದಿವಿಯಲ್ಲಿ ಅಮೃತವಾಗಿರುತ್ತದೆ. ಅವನು ತಮಸ್ಸಿನ ಆಚೆ ಆದಿತ್ಯನ ವರ್ಣದಿಂದ ಕೂಡಿ ಪ್ರಕಾಶಿಸುತ್ತಾನೆ. ಅಂತಹ ಮಹಾಂತನಾದ ಪುರುಷನನ್ನು ನಾನು ತಿಳಿದಿರುತ್ತೆೇನೆ' ಎಂದು ನುಡಿಯುತ್ತಾನೆ.

ನಾರಾಯಣಸೂಕ್ತವೂ ಸಹ ಆ ಸತ್ಯವಸ್ತುವನ್ನು ನೋಡಿದ ನಾರಾಯಣನೆಂಬ ಋಷಿಯೊಬ್ಬನ ಅಂತರಂಗದರ್ಶನವನ್ನು ಸುಂದರವಾಗಿ ವರ್ಣಿಸುತ್ತದೆ. 'ನಾಭಿಯ ಮೇಲುಗಡೆ ಹೃದಯವು ಇರುತ್ತದೆ. ಅದು ಸಮಸ್ತ ವಿಶ್ವಕ್ಕೂ ನೆಲೆ. ಅದರ ಕೊನೆೆಯಲ್ಲಿ ಒಂದು ಸೂಕ್ಷ್ಮವಾದ ರಂಧ್ರವಿರುತ್ತದೆ. ಅದರಲ್ಲಿಯೇ ಎಲ್ಲವೂ ಪ್ರತಿಷ್ಠಿತವಾಗಿದೆ. ಅದರ ಮಧ್ಯದಲ್ಲಿ ಒಂದು ದೊಡ್ಡ ಅಗ್ನಿಯಿರುತ್ತದೆ. ಅದರ ಜ್ವಾಲೆಗಳು ವಿಶ್ವವೆಲ್ಲವನ್ನೂ ವ್ಯಾಪಿಸಿವೆ. ಅದು ಎಲ್ಲ ದಿಕ್ಕಿಗೂ ಹೋಗಿದೆ. ಅದರ ಮಧ್ಯದಲ್ಲಿ ಮೇಲಕ್ಕೆ ಹೋಗಿರುವ ಒಂದು ಅಗ್ನಿಶಿಖೆಯಿರುತ್ತದೆ. ಅದು ನೀಲಮೇಘದ ಮಧ್ಯದಲ್ಲಿರುವ ವಿದ್ಯುಲ್ಲೇಖೆಯಂತೆ ಅತಿಶಯವಾದ ಪ್ರಕಾಶದಿಂದ ಬೆಳಗುತ್ತದೆ. ಅದು ಬತ್ತದ ಮೊನೆಯಷ್ಟು ಸೂಕ್ಷ್ಮವಾಗಿರುತ್ತದೆ. ಚಿನ್ನದ ಬಣ್ಣ-ಕಾಂತಿಯಿಂದ ಬೆಳಗುತ್ತದೆ. ಅಣುವಿನಂತೆ ಸೂಕ್ಷ್ಮವಾಗಿರುವ ಅದಕ್ಕೆಣೆಯಾದುದು ಯಾವುದೂ ಇರುವುದಿಲ್ಲ. ಆ ಶಿಖೆಯ ಮಧ್ಯದಲ್ಲಿ ಪರಮಾತ್ಮನು ಇರುತ್ತಾನೆ. ಅವನೇ ಬ್ರಹ್ಮ, ಶಿವ, ಇಂದ್ರ. ಅದೆೇ ಅಕ್ಷರ. ಅವನೇ ಎಲ್ಲವನ್ನೂ ಆಳುವ, ಎಲ್ಲವನ್ನೂ ಮೀರಿದ ಸ್ವರಾಟ್' ಎಂದು ಋಷಿಯು ವರ್ಣಿಸುತ್ತಾನೆ.

ಗೀತೆ, ಉಪನಿಷತ್ತು ಮಂತಾದ ಗ್ರಂಥಗಳೂ ಸಹ ಬೆರೆ ಬೇರೆ ಋಷಿಗಳು ಮತ್ತು ಜ್ಞಾನಿಗಳು ತಮ್ಮ ಹೃದಯಗುಹೆಯಲ್ಲಿ ಕಂಡ ಸತ್ಯದ ಸ್ವರರೂಪವನ್ನೆೇ ವಿಸ್ತಾರವಾಗಿ ಹೇಳುತ್ತವೆ.

ವಿಷ್ಣು, ನಾರಾಯಣ, ವಾಸುದೇವ, ಪರಮಾತ್ಮ, ಅಕ್ಷರ ಮುಂತಾದ ಬೇರೆಬೇರೆ ಹೆಸರುಗಳಿಂದ ವ್ಯವಹರಿಸಲ್ಪಡುವ ಭಗವಂತನ ಸಾಕ್ಷಾತ್ಕಾರವೇ ಭಾಗವತಧರ್ಮದ ಅಂತಿಮಲಕ್ಷ್ಯ. ಹಿಂದಿನವರು ಯೋಗ, ತಪಸ್ಸು ಇತ್ಯಾದಿಗಳ ದ್ವಾರಾ ಆ ಪರಿಪೂರ್ಣವಾದ ಅವಸ್ಥೆಯನ್ನು ಸಾಧಿಸಿದರು. ಆದರೆ ಯೋಗಸಾಧನೆಯು ಎಲ್ಲರಿಗೂ ಸಾಧ್ಯವಿಲ್ಲ. ಎಲ್ಲರೂ ಅಷ್ಟಾಂಗಯೋಗದ ಮೆಟ್ಟಲುಗಳನ್ನು ಹತ್ತಿಕೊಂಡು ಹೋಗಿ ಆತ್ಮಸಾಕ್ಷಾತ್ಕಾರ ಮಾಡಲಾರರು. ಆದರೆ ಆ ಪರಿಪೂರ್ಣತೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಭಾಗವತಧರ್ಮವು ಜೀವನವನ್ನೇ ಯೋಗಮಯವಾಗಿ ಮಾಡುವ ಒಂದು ಉಪಾಯವನ್ನು ಉಪದೇಶಿಸುತ್ತದೆ. ಆ ಲಕ್ಷ್ಯವನ್ನು ಮುಟ್ಟಿಸುವಂತಹ ರೀತಿಯಲ್ಲಿ ವ್ಯವಸ್ಥಿತವಾದ ಒಂದು ವಿಶಿಷ್ಟವಾದ ಭಕ್ತಿಯೋಗವನ್ನು ಹೇಳುತ್ತದೆ. ಅದನ್ನು ಭಾಗವತವು ಈ ರೀತಿ ವರ್ಣಿಸುತ್ತದೆ -

ಯೇ ವೈ ಭಗವತಾ ಪ್ರೋಕ್ತಾ ಉಪಾಯಾಹ್ಯಾತ್ಮಲಬ್ಧಯೇ ।

ಅಂಜಃ ಪುಂಸಾಮವಿದುಷಾಂ ವಿದ್ಧಿ ಭಾಗವತಾನ್ ಹಿ ತಾನ್ ॥

(ಭಗವಂತನು ಅಜ್ಞಾನಿಗಳು ತನ್ನನ್ನು ಸುಲಭವಾಗಿ ಪಡೆಯುವಂತೆ ಯಾವ ಉಪಾಯಗಳನ್ನು ಹೇಳಿರುವನೋ ಅದನ್ನೇ ಭಾಗವತಧರ್ಮವೆಂದು ತಿಳಿ)


ಈಶ್ವರನಿಂದ ದೂರವಾಗಿ ಮನುಷ್ಯನು, ನಾನು ದೇವತೆ, ಮನುಷ್ಯ ಇತ್ಯಾದಿ ಭಾವನೆಗಳಿಂದ ಕೂಡಿದ್ದಾಗ ಭಗವಂತನ ಮಾಯೆಯಿಂದ ಭ್ರಮೆ, ವಿಸ್ಮೃತಿ ಇತ್ಯಾದಿಗಳು ಉಂಟಾಗುತ್ತವೆ. ಆ ರೀತಿ ಆಗದಿರುವುದಕ್ಕೋಸ್ಕರ ಬುದ್ಧಿವಂತನಾದವನು ಗುರುವೇ ದೇವತೆ ಎಂಬ ದೃಢಭಾವನೆಯಿಂದ ಕೂಡಿದವನಾಗಿ ಭಗವಂತನನ್ನು ಭಜಿಸಬೇಕು. ಹೇಗೆ ಅವು ನಿಜವಲ್ಲದಿದ್ದರೂ ಧ್ಯಾನಮಾಡುವವನ ಯೋಚನೆಯ ಕಾರಣದಿಂದ ಸ್ವಪ್ನ, ಮನೋರಥ ಇತ್ಯಾದಿಗಳುಂಟಾಗುವುವೋ ಹಾಗೆಯೇ ಮನಸ್ಸಿನಲ್ಲಿ ಜೀವನದ ಕರ್ಮಗಳಿಗೆ ಸಂಬಂಧಿಸಿದ ಸಂಕಲ್ಪ - ವಿಕಲ್ಪಗಳುಂಟಾಗುತ್ತವೆ. ಅವುಗಳನ್ನು ಬುಧನಾದವನು ನಿರೋಧಮಾಡಬೇಕು. ಆಗ ಅಭಯವುಂಟಾಗುವುದು - ಇದು ನೈಚಾರಿಕವಾಗಿ ಭಾಗವತಧರ್ಮದ ತಳಹದಿ.

 ಮನೋನಿರೋಧವನ್ನು ಸಾಧಿಸಿ ಭಗವನ್ಮಾಯೆಯಿಂದ ತಪ್ಪಿಸಿಕೊಳ್ಳಬೇಕಾದರೆ ಮನುಷ್ಯನು ಲೋಕದಲ್ಲಿ ತಾನು ಏನೇನು ಕರ್ಮವನ್ನು ಮಾಡುತ್ತಾನೆಯೋ ಅದೆಲ್ಲವನ್ನೂ ಭಗವಂತನಿಗೆ ಅರ್ಪಿಸಬೇಕು. ಅದಾವುದನ್ನೂ ತನ್ನ ಮೇಲೆ ಹಾಕಿಕೊಳ್ಳಬಾರದು.

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಸ್ಸ್ವಭಾವಾತ್ ।

ಕರೋತ್ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯೇತ್ ॥ 

ಎಂಬುದು ಭಾಗವತಧರ್ಮದ ಒಂದು ಅಮೂಲ್ಯವಾದ ಉಪದೇಶ. ಕೃಷ್ಣನು

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।

ಅಹಂ ತ್ವಾ ಸರ್ವ ಪಾಪೇಭ್ಯೋ ಮೊಕ್ಷಯಿಷ್ಯಾಮಿ ಮಾ ಶುಚಃ ॥ 

(ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನ್ನನ್ನು ಏಕಮಾತ್ರ ಶರಣವಾಗಿ ಹೊಂದು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡಿಸುತ್ತೇನೆ. ಶೋಕಿಸಬೇಡ.) ಎಂಬ ಶ್ಲೋಕದಲ್ಲಿ ಪರ್ಯಾಯವಾಗಿ ಅದನ್ನೇ ಹೇಳುತ್ತಾನೆ. ಇಂದ್ರಿಯಧರ್ಮ, ಮನೋಧರ್ಮ, ಬುದ್ಧಿಧರ್ಮ ಇತ್ಯಾದಿಗಳೆಲ್ಲವನ್ನೂ ಬಿಟ್ಟು ನನ್ನಲ್ಲಿ ಏಕಮಾತ್ರ ಶರಣುಹೊಂದು. ಅವನ್ನು ಬಿಟ್ಟು ಇರಲಾಗದಿರುವುದರಿಂದ ಅವನ್ನು ನಿನ್ನ ಮೇಲೆ ಹಾಕಿಕೊಳ್ಳದೆೆ ನನಗೆ ಅರ್ಪಣೆ ಮಾಡು ಎಂಬುದು ಅವನ ಅಭಿಪ್ರಾಯ.

ಭಗವಂತನ ಜನ್ಮಕಥೆಗಳನ್ನು ಕುರಿತು ಕೇಳುವುದು, ಭಗವನ್ನಾಮೋಚ್ಚಾರಣೆ, ಅವನ ಕಥೆಗಳನ್ನು ಲಜ್ಜೆಯಿಲ್ಲದೆ ಗಾನಮಾಡುತ್ತಾ ಅಸಂಗನಾಗಿ ಸಂಚರಿಸುವುದು, ಭಗವದ್ಭಕ್ತಿಪರವಶನಾಗಿ ಭಾವಾವಿಷತೆಯಿಂದ ನಗುವುದು, ರೋದಿಸುವುದು, ಲೋಕವನ್ನು ಗಣಿಸದೆ ಉನ್ಮತ್ತನಂತೆ ನರ್ತನ ಮಾಡುವುದು - ಇವು ನಿಜವಾದ ಭಾಗವತನ ಮನೋಧರ್ಮದ ಅಂಶಗಳು. ಚೈತನ್ಯ ಮಹಾಪ್ರಭುವು  ಹೀಗೆ ಮಾಡುತ್ತಿದ್ದನೆಂದು ಕೇಳಿದ್ದೇವೆ.

ಇದನ್ನು ಕುರಿತು ಯೋಚಿಸಿದಾಗ ಸ್ವಭಾವವಾಗಿಯೂ ಭಾವುಕರಾಗಿರುವವರು ಮಾತ್ರ ಈ ಭಾಗವತ ಧರ್ಮವನ್ನು ಅನುಸರಿಸಬಲ್ಲರೆಂಬುದು ಸಿದ್ಧವಾಗುತ್ತೆ. ಆದರೆ ಅವರಲ್ಲಿ ಒಂದು ತಾತ್ವಿಕ ದೃಷ್ಟಿಯೂ ಉಂಟು. ಪುರುಷಸೂಕ್ತವು, 'ಸ ಭೂಮಿಂ ವಿಶ್ವತೋವೃತ್ತ್ವಾ' ಎಂದು ಹೇಳುವ ಮಾತು ಭಾಗವತದಲ್ಲಿ ಅಕ್ಷರಶಃ ನಿಜವಾಗುತ್ತೆ. ಅವನು ಆಕಾಶ, ವಾಯು, ಅಗ್ನಿ, ನೀರು, ಭೂಮಿ, ಜ್ಯೋತಿಸ್ಸುಗಳು, ಸತ್ವಗಳು, ದಿಕ್ಕುಗಳು, ನದಿ ಮತ್ತು ಸಮುದ್ರಗಳೆಲ್ಲವೂ ಭಗವಂತನ ಶರೀರವಂದು ಭಾವಿಸಿ ಅವುಗಳಿಗೆ ನಮಸ್ಕರಿಸುವುದರ ಮೂಲಕ ಭಗವಂತನನ್ನು ಪೂಜಿಸುತ್ತಾನೆ. ಒಂದು ಮಾತಿನಲ್ಲಿ ಹೇಳುವುದಾದರೆ - ಭಕ್ತಿ, ಭಗವದನುಭವ ಮತ್ತು ಇತರ ವಿಷಯಗಳಲ್ಲಿ ವಿರಕ್ತಿ - ಇವು ಮೂರೂ ಅವನಲ್ಲಿ ಏಕಕಾಲದಲ್ಲಿ ವ್ಯಾಪಾರಮಾಡುತ್ತವೆ.

ಈ ದಾರಿಯಲ್ಲಿ ನಡೆದು ಅಚ್ಯುತನ ಪಾದಗಳಲ್ಲಿ ಮನಸ್ಸನ್ನಿರಿಸಿದಾಗ ಭಕ್ತಿ, ವಿರಕ್ತಿ, ಭಗವತ್ಪ್ರಬೋಧಗಳು ಉಂಟಾಗುತ್ತವೆ. ಅದರಿಂದ ಅವನು ಅತುಲವಾದ ಶಾಂತಿಯನ್ನು ಪಡೆಯುತ್ತಾನೆಂದು ಭಾಗವತವು ಘೋಷಿಸುತ್ತದೆ.

ಒಂದು ದೃಷ್ಟಿಯಿಂದ ನೋಡಿದಾಗ ಈ ಥರ್ಮವು ಸುಲಭವೆಂದು ತೋರಬಹುದು. ಆದರೆ ತತ್ತ್ವಜ್ಞಾನವುಂಟಾಗಲು ಯೋಗವು ಯಾವ ವಿಧವಾದ ಏಕಾಂತಮತಿಯನ್ನು ಹೇಳುತ್ತದೆಯೋ ಅದನ್ನೇ ಭಾಗವತ ಧರ್ಮವು ಹೇಳುವುದರಿಂದ ಯೋಗವು ಎಷ್ಟು ಕಷ್ಟವೋ ಈ ಭಾಗವತಧರ್ಮವೂ ಸಾಧಿಸಲು ಅಷ್ಟೇ ಕಷ್ಟವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಗೀತೆಯ ಅನೇಕ ಶ್ಲೋಕಗಳು ಈ ಧರ್ಮವನ್ನೇ ಸಾರಭೂತವಾಗಿ ಉಪದೇಶಿಸುತ್ತವೆ. 'ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ' ಎಂಬುದು ಅದಕ್ಕೊಂದು ಉದಾಹರಣೆ. ಭಾಗವತದಲ್ಲಿ ಬರುವ ರಾಸಪಂಚಾಧ್ಯಾಯವು ಭಾಗವತಧರ್ಮಾನುಯಾಯಿಗಳ ಕಥೆಯನ್ನು ಸುಂದರವಾಗಿ ವರ್ಣಿಸುತ್ತದೆ. 

ಭಾಗವತ ಧರ್ಮವನ್ನು ಸಕ್ರಿಯವಾಗಿ ಅನುಸರಿಸದ ಭಾಗವೇ ನಮ್ಮ ಉಪಖಂಡದಲ್ಲಿ ಎಲ್ಲಿಯೂ ಇದ್ದಂತೆ ಕಾಣುವುದಿಲ್ಲ. ದ್ರವಿಡದೇಶ, ಮಹಾರಾಷ್ಟ್ರ, ಗುಜರಾತ್ ಮುಂತಾದ ದೇಶಗಳಲ್ಲಂತೂ ಈ ಧರ್ಮದ ಆಚರಣೆಯು ಬಗೆಬಗೆಯಾದ ನೃತ್ಯ, ಉತ್ಸವಾದಿಗಳ ರೂಪವನ್ನು ತೆಗೆದುಕೊಂಡು ಜನರ ಜೀವನವನ್ನು ರಸಮಯವಾಗಿ ಮಾಡಿರುತ್ತದೆ. ಭಾರತೀಯರ ಜೀವನಧಾರೆಯು ಒಂದು ಸುಂದರ ಸ್ವರೂಪವಾಗಿರುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೪ ಸಂಚಿಕೆ:೫, ಮಾರ್ಚ್ ೧೯೮೫ ತಿಂಗಳಲ್ಲಿ  ಪ್ರಕಟವಾಗಿದೆ.