Thursday, June 17, 2021

ಜೀವನದಲ್ಲಿ ಶುದ್ಧಿಯ ವ್ಯಾಪ್ತಿ Jivanadalli Shuddhiya Vyapti

ಲೇಖಕರು: ಮೈಥಿಲೀ ರಾಘವನ್
 (ಪ್ರತಿಕ್ರಿಯಿಸಿರಿ lekhana@ayvm.in)
ಶುದ್ಧಿ – ಇದು ಸಾಮಾನ್ಯವಾಗಿ ಪ್ರಪಂಚದಲ್ಲಿ ಎಲ್ಲರೂ ಪ್ರಾಮುಖ್ಯವನ್ನು ಕೊಡುವ ಒಂದು ವಿಚಾರ. ಸಣ್ಣ ಮಕ್ಕಳಿಗೆ ಚಿಕ್ಕಂದಿನಿಂದಲೂ ಮನೆಯಲ್ಲೂ, ಶಾಲೆಗಳಲ್ಲೂ ಶುದ್ಧಿಯ ಬಗೆಗೆ ತಿಳಿಯಪಡಿಸುತ್ತಿರುವುದು ಕಂಡುಬರುತ್ತದೆ.


ಶುದ್ಧಿ-ಇಂದಿನ ವಿಚಾರಗಳು:  

ಪರಿಸರಮಾಲಿನ್ಯ, ಅದರ  ಸುಧಾರಣಾಕ್ರಮಗಳ ಬಗೆಗೆ ಚರ್ಚೆಗಳು ವಿಶ್ವದಾದ್ಯಂತ ನಡೆಯುತ್ತಲಿವೆ. ಗಾಳಿಯಲ್ಲಿ ಸಹಜವಾಗಿ ಇರಬೇಕಾದಷ್ಟು ಆಮ್ಲಜನಕ-ಸಾರಜನಕ-ಇಂಗಾಲದಅಂಶಗಳು ಇಲ್ಲವಾದರೆ, ಅವುಗಳ ಅನುಪಾತದಲ್ಲೇನಾದರೂ ವ್ಯತ್ಯಾಸವಾದರೆ ಅದನ್ನು ವಾಯುಮಾಲಿನ್ಯವೆಂಬುದಾಗಿ ಗುರುತಿಸಲಾಗುತ್ತದೆ.  ಅಂತೆಯೇ ಜಲ-ಭೂಮಾಲಿನ್ಯಗಳ ಕಡೆಯೂ ಲೋಕವು ಗಮನಹರಿಸುತ್ತಿದೆ. ಈ ಮಾಲಿನ್ಯಗಳನ್ನು ತೆಗೆದುಹಾಕಿ ಪರಿಸರವನ್ನು ಶುದ್ಧೀಕರಿಸಬೇಕೆನ್ನುವುದು ನಿರ್ವಿವಾದ. ಜನರ ಆರೋಗ್ಯ-ಸುಖಜೀವನಗಳಿಗೆ  ಮಾಲಿನ್ಯಗಳು ಅಡ್ಡಿ ತರುತ್ತವೆ. ಅಲ್ಲದೆ, ಶುದ್ಧವಾದ ವಾತಾವರಣವುಕಣ್ಮನಗಳಿಗೆ ತಂಪನ್ನೂ ಇಂಪನ್ನೂ ನೀಡುತ್ತದೆಯೆಂಬುದು ಎಲ್ಲರ ಅನುಭವಕ್ಕೂ ಬರುವಂತಹದ್ದು. ಅಶುದ್ಧವಾತಾವರಣದಲ್ಲಿಯೇ ಇದ್ದು  ಅದಕ್ಕೇ ತಮ್ಮನ್ನು ಒಗ್ಗಿಸಿಕೊಂಡವರೂ ಸಹ ಒಮ್ಮೆ ಶುಚಿಯಾದಪರಿಸರವನ್ನು ಕಂಡರೆ "ಆಹಾ! ಎಷ್ಟು ಚೆನ್ನಾಗಿದೆ" ಎಂಬ ಉದ್ಗಾರ ತೆಗೆಯುವುದು ಕಂಡುಬರುತ್ತದೆ. ಆದ್ದರಿಂದ ನಮ್ಮ ಮೈ-ಬಟ್ಟೆ-ಪದಾರ್ಥಗಳೆಲ್ಲವನ್ನೂ ಶುದ್ಧವಾಗಿಟ್ಟುಕೊಳ್ಳುವುದರ ಜೊತೆಗೆ,ನಮ್ಮ ನಮ್ಮ ಮನೆಯ ಅಂಗಳದಿಂದ ಹಿಡಿದು ರಸ್ತೆ-ಸಂತೆಗಳವರೆಗೂ ಎಲ್ಲೆಡೆಯಲ್ಲೂ ಶುದ್ಧಿಯನ್ನು ಕಾಪಾಡುವಹೊಣೆಗಾರಿಕೆ  ನಮ್ಮೆಲ್ಲರ ಮೇಲಿದೆ. ಇಂತಹ ಶುಚಿತ್ವವು ಆರೋಗ್ಯದ ಹಾಗೂ ಮನಃಪ್ರಸನ್ನತೆಯದೃಷ್ಟಿಯಿಂದ  ನಮ್ಮೆಲ್ಲರ ಅನಿವಾರ್ಯ ಕರ್ತವ್ಯವಷ್ಟೇ.

   

ಇಂದಿನ ವಿಜ್ಞಾನವು  ಶುದ್ಧಸ್ಥಿತಿಯಲ್ಲಿನ ಅಂಶಗಳನ್ನೂ, ಮಾಲಿನ್ಯ ಸೇರಿದಾಗಿನ ಅಂಶಗಳನ್ನೂ ನಿಖರವಾಗಿಅಳೆದು ಲೋಕದ ಮುಂದಿಡುವುದರಿಂದ ಅದನ್ನು ಪ್ರಶ್ನಿಸುವ, ನಿರಾಕರಿಸುವ ಪ್ರವೃತ್ತಿಯು ಏಳಬೇಕಾದ ಸನ್ನಿವೇಶವೇಇಲ್ಲ. ಹೀಗಾಗಿ ಈ ವಿಚಾರಗಳು ಆಧುನಿಕ ವಿಜ್ಞಾನದ ಪ್ರಭಾವದಿಂದಲೇ ಹೆಚ್ಚು ಬೆಲೆಯನ್ನು ಪಡೆದಿವೆಯೆಂದೆನಿಸಿದರೂ ಹಿಂದಿನ ಕಾಲದಿಂದಲೂ–ಋಷಿಯುಗದಲ್ಲಿಯೂ-ಶುದ್ಧಿಯ ಬಗೆಗೆ ಜನರ ಮನಸ್ಸು-ವಿಚಾರಗಳು ಬಹುಮಟ್ಟಿಗೆ ಹರಿದಿರುವುದು ಕಂಡುಬರುತ್ತದೆ.


ಭಾರತಿಯ ಸಂಸ್ಕೃತಿಯಲ್ಲಿನ ಪರಿಕಲ್ಪನೆಗಳು :

ಶುದ್ಧಿ:

ಸನಾತನಾರ್ಯಭಾರತಮಹರ್ಷಿಗಳು ತಮ್ಮ ಶುದ್ಧಿಯ ಪರಿಕಲ್ಪನೆಯನ್ನು ದೈನಂದಿನ ಚಟುವಟಿಕೆಗಳಲ್ಲಿಹಾಸುಹೊಕ್ಕಾಗಿ ಹೆಣೆದು ನಾಗರಿಕತೆಯಾಗಿ ಹೊರತಂದರು. ಅದು ಆಚಾರ-ಮಡಿ-ಮೈಲಿಗೆ ಎಂಬುದಾಗಿತಿಳಿಯಲ್ಪಡುತ್ತಿದೆ.    ಆದರೆ ಮಹರ್ಷಿಗಳು ರೂಪಿಸಿಕೊಟ್ಟಿರುವ ಆಚಾರಗಳು ಇಂದು ಕೇವಲ ವಿಧಿ-ನಿಷೇಧಗಳ ಪಟ್ಟಿಯಾಗಿಉಳಿದಿವೆ.  ಅವುಗಳಲ್ಲನೇಕ, ಅರ್ಥಹೀನವಾಗಿಯೂ, ಮೂಢನಂಬಿಕೆಗಳ  ಕಂತೆಗಳಾಗಿಯೂ ಕಾಣಿಸುತ್ತಿವೆ. ಇನ್ನು ಕೆಲವು,ಇಂದಿನ ಜೀವನಶೈಲಿಗೆ ಹೊರತಾದ ವಿಚಾರಗಳಾಗಿಯೂ ಕಂಡುಬರುತ್ತಿವೆ. ಆದ್ದರಿಂದ  ಆಚಾರ-ಮಡಿವಂತಿಕೆಗಳನ್ನುನಮ್ಮಿಂದ ದೂರ ಇಡೋಣವೆನ್ನಿಸುವುದೂ ಸಹಜವೇ.    ಇವುಗಳು ನಿಜಕ್ಕೂ ಸಾರಹೀನವಾಗಿ, ಋಷಿಯುಗಕ್ಕೇ ಸೀಮಿತವಾದವುಗಳೇ? ಎಂಬುದನ್ನರಿಯಲು ಮಹರ್ಷಿಗಳಶುದ್ಧಿಪರಿಕಲ್ಪನೆಯ ಜೀವಾಳವನ್ನೇ ನೋಡಬೇಕಾಗುವುದು. ಕೆಲವಂಶಗಳ ಮೂಲಕ ಇದರ ಸಂಕ್ಷಿಪ್ತ ವಿವೇಚನೆಯನ್ನುಮಾಡುವುದು ಉಚಿತವೆನಿಸುತ್ತದೆ. 

      

೧.ಉಟ್ಟ ಬಟ್ಟೆಯನ್ನು  ಒಗೆಯುತ್ತೇವೆ. ಇದರ ಶುದ್ಧಿ ನೀರು, ಸಾಬೂನುಗಳಿಂದಾಗುತ್ತದೆ. ಆದರೆ ಒಬ್ಬ ವೈದ್ಯ ಶಸ್ತ್ರಚಿಕಿತ್ಸೆಮಾಡಲು ಧರಿಸುವ ಅಥವಾ ಚಿಕಿತ್ಸೆಮಾಡುವಾಗ ಧರಿಸಿದ್ದ ಬಟ್ಟೆಗಳ ಒಗೆಯುವಿಕೆಗೆ  ಸಾಬೂನಷ್ಟೇ ಸಾಲದು. ಡೆಟ್ಟಾಲ್ನಂತಹ ಕ್ರಿಮಿನಾಶಕಗಳ ಬಳಕೆಯೂ ಅತ್ಯಾವಶ್ಯಕ.  ಏಕೆಂದರೆ ಆತನ ಕಾರ್ಯ-ಕಾರ್ಯಕ್ಷೇತ್ರಗಳುಹೆಚ್ಚು ಶುದ್ಧಿಯನ್ನಪೇಕ್ಷಿಸುತ್ತದೆ. ಆ ಕಾರ್ಯಕ್ಷೇತ್ರದ ಪರಿಚಯವುಳ್ಳವರು ಯಾರೂ ಇದನ್ನುಆಕ್ಷೇಪಿಸುವುದಿಲ್ಲವಷ್ಟೇ. ಕೆಲವು ಸಂಶೋಧನಾಕೂಟಗಳು ಇದಕ್ಕಿಂತಲೂ ಹೆಚ್ಚು ಹಾಗೂ ಭಿನ್ನವಾದಶುಚಿತ್ವವನ್ನಪೇಕ್ಷಿಸುತ್ತವೆ. ಹೀಗೆ ಕಾರ್ಯೋದ್ದೇಶದ ಮೇಲೆಯೇ ಶುದ್ಧಿಯ ಮಟ್ಟವನ್ನು ನಿಶ್ಚಯಿಸ ಬೇಕೆನ್ನುವುದುಸ್ಥಾಪಿತವಾಗುತ್ತದೆ. 


೨.ಶುದ್ಧಿಗೊಳಿಸುವ ಪದಾರ್ಥಗಳೂ, ವಿಧಾನಗಳೂ ಕೊಳೆಯ ಗುಣಮಟ್ಟವನ್ನವಲಂಬಿಸಿರುತ್ತವೆ. ಬಟ್ಟೆ-ಪಾತ್ರೆ-ನಮ್ಮಶರೀರ ಎಲ್ಲಕ್ಕೂ ಒಂದೇ ಪದಾರ್ಥದಿಂದ ಶುದ್ಧಿಯೇ? ಬಟ್ಟೆಯೇ ಆದರೂ ಬೇರೆಬೇರೆ ಕಲೆಗಳಿಗೆ ಬೇರೆಬೇರೆ ಸಾಧನ-ವಿಧಾನಗಳು ಬೇಕಾಗುವುದೆಂಬುದು ಸಾಮಾನ್ಯಜ್ಞಾನವಲ್ಲವೇ? 


೩.ಶುದ್ದಿಯ ಸ್ವರೂಪ: ಬಟ್ಟೆಯನ್ನು ಶುದ್ಧಿಗೊಳಿಸುವುದೆಂದರೇನು? ಕೊಳೆ ಅಂಟುವ ಮುನ್ನ ಇದ್ದ ಸ್ಥಿತಿಗೇ ಅದನ್ನು ತರುವುದು. ಹೊಸದಾದ ಬೆಳ್ಳಿಲೋಟವೊಂದನ್ನು ಗಾಳಿಗೊಡ್ಡಲಾಗಿ, ತನ್ನ ಬಣ್ಣ-ಹೊಳಪುಗಳನ್ನುಕಳೆದುಕೊಂಡಿದೆಯೆನ್ನೋಣ. ಅದರ ಶುದ್ಧಿಯೆಂದರೆ ಸೂಕ್ತವಾದ ಪದಾರ್ಥದಿಂದ ಉಜ್ಜಿ-ತೊಳೆದು ಅದನ್ನುಮೂಲರೂಪಕ್ಕೆ ತರುವುದು. ಅದರ ಹೊಳಪನ್ನು ಪುನಃ ತಂದುಕೊಡುವುದು. 


ಕರೋನ ತಡೆಯಲು ಶುದ್ಧತೆಯು ಅನಿವಾರ್ಯ

ಎಲ್ಲೆಲ್ಲೂ ಕೊರೋನಾ ರೋಗ ಹರಡಿರುವ ಇಂದಿನ ಪರಿಸ್ಥಿತಿಯಲ್ಲಿ ಶುದ್ಧಿಕ್ರಿಯೆಯೂ ಸಾಮಾನ್ಯಮಟ್ಟಕ್ಕಿಂತಲೂ ವಿಭಿನ್ನ-ವಿಶೇಷವಾಗಿರಬೇಕಲ್ಲವೇ? ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳಲೂ, ಗುಣಮುಖರಾಗಲೂ ವಿಶೇಷವಾದ ವಿಧಿ-ನಿಷೇಧಗಳ ಪಟ್ಟಿ ಉಂಟಲ್ಲವೆ? ಮುಖದಲ್ಲೊಂದು ಮಾಸ್ಕ್, ಸಾನಿಟೈಸೆರ್, ಇಬ್ಬರ ನಡುವೆ ಅಂತರವನ್ನು ಕಾಪಾಡುವುದು ಇತ್ಯಾದಿಗಳು ವಿಧಿಯ ಪಟ್ಟಿಯಲ್ಲಿದ್ದರೆ, ಜನಗುಂಪು ಕಟ್ಟಬಾರದು, ಕೈಕುಲುಕಿ ಅಭಿನಂದಿಸಬಾರದು,  ಬೀದಿಯಲ್ಲಿ ಉಗುಳಬಾರದು ಇತ್ಯಾದಿಗಳು ನಿಷೇಧದ ಪಟ್ಟಿಯಲ್ಲಿರುವುವು. 'ಪ್ರಪಂಚದಲ್ಲಿ ನೆಗಡಿ-ಶೀತ-ಸೀನುವಿಕೆ-ಕೆಮ್ಮು ಇವುಗಳು ಹೊಸದೇನಲ್ಲವಲ್ಲ, ಈಗೇಕೆ ಇಷ್ಟೊಂದು ಕಟ್ಟುಪಾಡು' ಎನ್ನುವುದು, ಬಂದಿರುವ ರೋಗದ(ದೋಷದ) ಸ್ವರೂಪವನ್ನೇ ಅರಿಯದವರ ಮಾತೆನ್ನಬೇಕಲ್ಲವೆ? ಈ ವಿಧಿ-ನಿಷೇಧಪಟ್ಟಿಯನ್ನು ರೋಗಾಣುವಿನ ಸ್ವರೂಪವೇ ನಿಶ್ಚಯಿಸುತ್ತದೆಂಬುದೇ ಸತ್ಯ. ರೋಗದ ಪರಿಚಯವೇ ಇಲ್ಲದವರಿಗೆ ಈ ಕಟ್ಟುಪಾಡುಗಳೆಲ್ಲವೂ ಅರ್ಥಹೀನ, ಅಪ್ರಸ್ತುತ. ಆದರೆ ಕರೋನಾದ ಹಾವಳಿಗೆ ಸಿಗದೆ ಅಥವಾ ಸಿಕ್ಕಿದವರು ಅದರಿಂದ ಪಾರಾಗಬೇಕೆಂಬ ಉದ್ದೇಶವಿದ್ದಲ್ಲಿ ಈ ಕಟ್ಟುಪಾಡುಗಳೆಲ್ಲವೂ ಅರ್ಥಪೂರ್ಣವಷ್ಟೇ ಅಲ್ಲ, ಅನಿವಾರ್ಯವೂ ಹೌದು.

 

 ಈ ಹಿನ್ನೆಲೆಯಲ್ಲಿ ಋಷಿಗಳಿಗಿದ್ದ ಶುದ್ಧಿಪರಿಕಲ್ಪನೆಯನ್ನು ಗಮನಿಸೋಣ. ಆಚಾರ- ಶುದ್ಧಿಯೇನನ್ನುವುದನ್ನು  ಸುಸ್ಪಷ್ಟವಾಗಿ ತಿಳಿಸುತ್ತವೆ ಕೆಳಗಿನ ಸಾಲುಗಳು.

 

ಪಂಚೇಂದ್ರಿಯಸ್ಯ ದೇಹಸ್ಯ ಬುದ್ಧೇಶ್ಚ ಮನಸಸ್ತಥಾ |

ದ್ರವ್ಯ ದೇಶ ಕ್ರಿಯಾಣಾಂಚ ಶುದ್ಧಿಃ ಆಚಾರ ಇಷ್ಯತೇ ||

 

ಪಂಚೇಂದ್ರಿಯಗಳು-ದೇಹ-ದ್ರವ್ಯ-ದೇಶ-ಕ್ರಿಯೆ-ಬುದ್ಧಿ-ಮನಸ್ಸು  ಇವುಗಳ ಶುದ್ಧಿಯೇ ಅಥವಾ ಇವುಗಳ ಶುದ್ಧಿಗಾಗಿಮಾಡುವ ಕ್ರಿಯೆಯೇ ಆಚಾರ. ಈ ಪಟ್ಟಿಯಲ್ಲಿನ ಮೊದಲ ಐದು ಸಾಮಾನ್ಯವಾಗಿ ಆಧುನಿಕರು ಶುದ್ಧಿಗೆ ನೀಡುವವಿವರಣೆಗೆ ಹೊಂದಿಕೊಳ್ಳುತ್ತವೆ. ಆದರೆ ಬುದ್ಧಿ-ಮನಸ್ಸುಗಳು ಅವರ ಶುಚಿತ್ವ( cleanliness), ಮಾಲಿನ್ಯ ನಿಯಂತ್ರಣ(pollution control)ಗಳಲ್ಲಿಸೇರಿಲ್ಲವಷ್ಟೇ!


ಶುದ್ಧಿಯ ಉದ್ಧೇಶ :

ಈ ಎರಡನ್ನು ಋಷಿಗಳು ಏಕೆ ಸೇರಿಸಿದ್ದಾರೆ? ಇಂತಹ ಶುದ್ಧಿಯಿಂದ  ಏನನ್ನು ಸಾಧಿಸಲು ಹೊರಟರು?ಆರೋಗ್ಯ-ಸುಖಜೀವನದಲ್ಲಿ ಇವುಗಳ ಪಾತ್ರವೇನು?    ಮಹರ್ಷಿಗಳ ಆರೋಗ್ಯದ ಪರಿಕಲ್ಪನೆಯೆಂದರೆ – ಮಾನವನು ತನ್ನ ಶಕ್ತಿ-ಸಾಮರ್ಥ್ಯಗಳನ್ನು ಪರಿಪೂರ್ಣವಾಗಿಹೊಂದಿರುವುದು. ಭೌತಿಕಕ್ಷೇತ್ರ ಮಾತ್ರವಲ್ಲದೆ ದೈವಿಕ-ಅಧ್ಯಾತ್ಮಕ್ಷೇತ್ರಗಳ ಪ್ರವೇಶಕ್ಕೂ ಅನುವು ಮಾಡಿಕೊಡುವಶರೀರರಚನೆ ಹಾಗೂ ಸಾಮರ್ಥ್ಯವು ಮನುಷ್ಯಮಾತ್ರರೆಲ್ಲರಿಗೂ–ಮನುಷ್ಯರಿಗೆ ಮಾತ್ರವೇ-ಸೃಷ್ಟಿಸಹಜವಾಗಿಯೇಇರುವುದನ್ನು ಮಹರ್ಷಿಗಳು ಮನಗಂಡಿದ್ದರು.  ಹಾಗಾಗಿ ಭೌತಿಕಕ್ಷೇತ್ರದ ಆರೋಗ್ಯಮಾತ್ರವಲ್ಲದೆ ದೈವೀ-ಅಧ್ಯಾತ್ಮಕ್ಷೇತ್ರಗಳಲ್ಲೂ  ಸಂಚರಿಸಿ  ಆನಂದಿಸುವ  ಸ್ಥಿತಿ  ಇದ್ದಾಗ  ಮಾತ್ರವೇ  ವ್ಯಕ್ತಿಯು ಪೂರ್ಣ ಆರೋಗ್ಯವಂತ ಎಂಬುದುಅವರ ಮತ. ಮನಸ್ಸು ಅತ್ಯಂತ ಶುದ್ಧವಾಗಿದ್ದರೆ ಮಾತ್ರವೇ ಜೀವಿಯು ದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಂಚರಿಸಬಹುದು; ತನ್ಮೂಲಕ ಸುಖವನ್ನೂ, ಶಾಶ್ವತವಾದ ಪರಮಾನಂದವನ್ನೂ ಪಡೆಯಬಹುದೆಂಬುದು ಮಹರ್ಷಿಗಳಮಧುರವಾದ ಅನುಭವ. ಈ ರೀತಿಯ ಆರೋಗ್ಯವೇ ಒಬ್ಬ ವ್ಯಕ್ತಿಯು ತನ್ನ ಜೀವಮಾನದಲ್ಲಿ ಪಡೆಯಬಹುದಾದಅತ್ಯಮೂಲ್ಯ ಫಲ ಎಂಬ ನಿಷ್ಕರ್ಷೆಯನ್ನು ಹೊಂದಿದ್ದವರು ಭಾರತೀಯ ಮಹರ್ಷಿಗಳು.ಇಂತಹ ಪರಿಪೂರ್ಣವಾದ ಆರೋಗ್ಯವನ್ನು ಪಡೆಯುವಲ್ಲಿ ಮನಸ್ಸೇ ಪ್ರಧಾನವಾದ ಪಾತ್ರವನ್ನುವಹಿಸುವುದರಿಂದ ಶರೀರದ ಆರೋಗ್ಯದ ಜೊತೆಗೆ ಮನಸ್ಸಿನ ಸುಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು ವಿಧಿ-ನಿಷೇಧಗಳನ್ನುಸೂಚಿಸಿರುವರು. ಈ ಮೂಲಭೂತವಾದ ವಿಚಾರವು ಕಾಲಕ್ರಮದಲ್ಲಿ ಕಳೆದುಹೋಗಿ ವಿಧಿ-ನಿಷೇಧಗಳ ಪಟ್ಟಿ ಮಾತ್ರವೇಉಳಿದಿದ್ದು, ಇಂದು  ಆ ಪಟ್ಟಿಯಲ್ಲಿ  ಭೌತಿಕ ಆರೋಗ್ಯವನ್ನು ಸೂಚಿಸುವ ಅಂಶಗಳನ್ನಷ್ಟೇ ಗೌರವಿಸಿಉಳಿದವುಗಳನ್ನೆಲ್ಲ ಅರ್ಥಹೀನವೆಂದು ಭಾವಿಸುವ ಪರಿಸ್ಥಿತಿ ಏರ್ಪಟ್ಟಿದೆ.


ಮಹರ್ಷಿವಿಜ್ಞಾನ :

ದಿನಬಳಕೆಯಲ್ಲಿ ಉಪಯೋಗಿಸುವ ಪದಾರ್ಥಗಳು ಮೊದಲುಗೊಂಡು ಎಲ್ಲವೂ ನಮ್ಮ ಮೈಮನಗಳ ಮೇಲೆ ಮಾಡುವ ಪರಿಣಾಮವನ್ನು ನಿಖರವಾಗಿ ಬಲ್ಲವರಾಗಿದ್ದವರು ಮಹರ್ಷಿಗಳು. ಅಷ್ಟಲ್ಲದೆ ವಿವಿಧ ಪದಾರ್ಥಗಳಯೋಗಗಳು(ಸೇರುವೆಯು) ಉಂಟುಮಾಡಬಹುದಾದ ಪರಿಣಾಮಗಳನ್ನೂ ಅರಿತಿದ್ದರು. ಸನ್ನಿವೇಶಾನುಗುಣವಾಗಿಮನಸ್ಸಿನಲ್ಲಿ ಬಂದು ಸೇರಬಹುದಾದ ದೋಷಗಳ(ಕೊಳೆಗಳ) ಸ್ವರೂಪವನ್ನೂ, ಅವುಗಳನ್ನು ನಿವಾರಿಸಬಲ್ಲಪದಾರ್ಥಗಳನ್ನೂ ನಿರ್ದಿಷ್ಟವಾಗಿ ಸೂಚಿಸಬಲ್ಲವರಾಗಿದ್ದರು.    ಮಹರ್ಷಿಗಳ ಆಳವಾದ ವೈಜ್ಞಾನಿಕ ನೋಟದಿಂದ ಹೊರಬಂದ ವಿಚಾರಗಳೇ ನಮಗೆ ಲಭ್ಯವಾಗಿರುವ ವಿಧಿ-ನಿಷೇಧಗಳ ಪಟ್ಟಿ. ಕಾಲಕ್ರಮದಲ್ಲಿ ಕೆಲವು ಪ್ರಕ್ಷಿಪ್ತಗಳು ಸೇರಿರುವ ಸಾಧ್ಯತೆಗಳು, ಇತರ ಗ್ರಂಥಗಳಿಗಿರುವಂತೆಯೇ,ಇದರಲ್ಲಿಯೂ  ಇರಬಹುದೆಂಬುದನ್ನು ಒಪ್ಪಲೇ ಬೇಕಾಗುವುದು. ಋಷಿದೃಷ್ಟಿಯಲ್ಲಿನ ವಿಜ್ಞಾನವನ್ನು ಬಲ್ಲವರುಮಾತ್ರವೇ ಮೂಲವನ್ನೂ, ಪ್ರಕ್ಷಿಪ್ತವನ್ನೂ ಬೇರ್ಪಡಿಸಿ ತಿಳಿಸಬಲ್ಲರು ಎಂಬುದು ಗಮನಾರ್ಹವಾಗಿದೆ.ಋಷಿದೃಷ್ಟಿಯ ನಿರ್ಣಯ ಋಷಿಯುಗಕ್ಕೆ ಸೀಮಿತವಲ್ಲ. ಸಾರ್ವಕಾಲಿಕವಾದದ್ದು.


ಋಷಿಹೃದಯವನ್ನು ಬಲ್ಲವರೂ, ಯೋಗಿವರೇಣ್ಯರೂ,  ಜ್ಞಾನಿಶ್ರೇಷ್ಠರೂ ಆದ ಶ್ರೀರಂಗಮಹಾಗುರುಗಳುಮೇಲಿನ ವಿಚಾರಗಳೆಲ್ಲವನ್ನೂ ತಮ್ಮ ಶಿಷ್ಯರಿಗೆ ಪಾಠಪ್ರವಚನಗಳ ಮೂಲಕ ತಿಳಿಸಿದ್ದರು. "ವಿಚಾರದೊಡಗೂಡಿದ್ದರೆಮಾತ್ರವೇ ಆಚಾರವು ಅರ್ಥಪೂರ್ಣ. ಇಲ್ಲದಿದ್ದಲ್ಲಿ ಕುರುಡನಿಂದ ನಡೆಸಲ್ಪಟ್ಟ ಹೆಳವನಂತಾಗುವುದು; ಅಂತೆಯೇಆಚಾರವಿಲ್ಲದ ವಿಚಾರ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ವ್ಯರ್ಥ" ಎಂದೂ ಒತ್ತಿ ಹೇಳಿದ್ದರು. "ನಾವೆಲ್ಲರೂ ಪದಾರ್ಥಗಳ ಗುಣವನ್ನು ಅಳೆಯುವ ಮೀಟರ್ ಒಂದನ್ನು ಹೊತ್ತಿದ್ದೇವೆ; ಪ್ರತಿಯೊಬ್ಬರ ಕೈಮಣಿಕಟ್ಟಿನ ಜಾಗದಲ್ಲಿ ಮಿಡಿಯುವ ನಾಡಿಯೇ ಆ ಮೀಟರ್ ಆಗಿದೆ. ಪ್ರತಿಕ್ಷಣವೂ ನಮ್ಮ ಮೈಮನಗಳಲ್ಲಿನ ಎಲ್ಲ ಆಗುಹೋಗುಗಳನ್ನೂ-ನಾವು ಅರಿತರೂ, ಅರಿಯದಿದ್ದರೂ-ಅದು ತನ್ನಲ್ಲಿ ಮುದ್ರಿಸಿಕೊಳ್ಳುತ್ತಲೇ ಇರುತ್ತದೆ, ಅದುನೀಡುವ ಫಲಿತಾಂಶಗಳನ್ನು ತಿಳಿಯುವ ಅರ್ಹತೆಯನ್ನು ನಾವು ಪಡೆಯಬೇಕಷ್ಟೇ" ಎಂಬುದು ಅವರು ಈ ಬಗೆಗೆ ನೀಡಿದಪಾಠದ ಕೆಲವು ಸಾರಭಾಗಗಳು. 


ಮಡಿ-ಮೈಲಿಗೆ ಬಟ್ಟೆಗಳನ್ನೂ, ಎಂಜಲು-ಎಂಜಲಲ್ಲದ ಪದಾರ್ಥಗಳನ್ನೂ ಕೊಟ್ಟಾಗ ಮಹಾಗುರುಗಳು  ತಮ್ಮನಾಡಿಪರೀಕ್ಷೆಯಿಂದಲೇ  ಮಡಿ-ಮೈಲಿಗೆ, ಎಂಜಲು-ಎಂಜಲಲ್ಲದ್ದನ್ನು ಪತ್ತೆಮಾಡಿ ತಿಳಿಸುತ್ತಿದ್ದರು. ಹೀಗೆ ಪಾಠಗಳಷ್ಟೆಅಲ್ಲದೆ  ಪ್ರಾಯೌಗಿಕವಾಗಿಯೂ ಋಷಿವಾಕ್ಯಗಳ ಸತ್ಯಾರ್ಥವನ್ನು ನಿರೂಪಿಸಿದ ಸನ್ನಿವೇಶಗಳನೇಕ.  ಅವರಶಿಷ್ಯರಲ್ಲೊಬ್ಬರೂ, ಆಯುರ್ವೇದ ವೈದ್ಯರೂ ಆಗಿದ್ದ ವೈಕುಂಠವಾಸಿಗಳಾದ ಡಾ.ಗಣೇಶರಾಯರು ನಾಡೀವಿದ್ಯೆಯನ್ನುಮಹಾಗುರುಗಳಿಂದ ಕಲಿತು ಪರಿಣತಿಯನ್ನು ಹೊಂದಿದ್ದರೆಂಬುದು ಅವರ ನಿಕಟವರ್ತಿಗಳಾಗಿದ್ದಅನೇಕರು ಅರಿತಿರುವ ವಿಚಾರ.ಇಷ್ಟು ವ್ಯಾಪಕವಾದ ಮಹರ್ಷಿಗಳ ಶುದ್ಧಿಪರಿಕಲ್ಪನೆಯನ್ನು ಗೌರವಿಸಿ ತನ್ಮೂಲಕ ಪೂರ್ಣಾರೋಗ್ಯವನ್ನೂ,ಪರಮಫಲವನ್ನೂ  ಪಡೆಯಲು ಯತ್ನಿಸೋಣ.

ಸೂಚನೆ: 17/06/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ
ದಲ್ಲಿ ಪ್ರಕಟವಾಗಿದೆ.