Wednesday, December 30, 2020

ಕರ್ಮದ ಮರ್ಮವರಿತು ಕರ್ಮ ಮಾಡಬೇಕು (Karmada Marmavaritu Karma Madabeku)

ಲೇಖಕರು: ಶ್ರೀಮತಿ ರತ್ನಾಸುರೇಶ 
(ಪ್ರತಿಕ್ರಿಯಿಸಿರಿ lekhana@ayvm.in)



ದೇವಾಲಯದ ನಿರ್ಮಾಣಕಾರ್ಯ ನಡೆಯುತ್ತಾ ಇತ್ತು. ಅಲ್ಲಿ ಮೂವರು ಕಲ್ಲು ಕೆತ್ತುತ್ತಿದ್ದರು. ಒಬ್ಬನು ಬಂದು ಮೊದಲನೆಯವನನ್ನು "ನೀನ್ಯಾಕೆ ಕಲ್ಲು ಕೆತ್ತುತ್ತಿದ್ದೀಯಾ? ಎಂದು ಕೇಳಿದನು. ಅದಕ್ಕೆ ಅವನು ಅಯ್ಯೋ ಬಡತನ ಬುದ್ದಿ, ಹೆಂಡತಿ ಮಕ್ಕಳನ್ನು ಸಾಕಬೇಕಲ್ಲಾ" ಎಂದನು. ಎರಡನೆಯವಳನ್ನೂ ಅದೇ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಅವಳು "ನನ್ನ ಗಂಡ ಒಬ್ಬನೇ ದುಡಿಯುತ್ತಾನೆ;ನೆ, ಸಾಕಾಗುವುದಿಲ್ಲ. ನಾನೂ ಸ್ವಲ್ಪ ಸಹಾಯಮಾಡಿದರೆ ಸಂಸಾರದ ವೆಚ್ಚ ಸರಿದೂಗಿಸಲು  ಸುಲಭವಾಗುತ್ತದೆ" ಎಂದಳು. ಮೂರನೆಯವಳು ಒಬ್ಬ ವೃದ್ಧೆ. ಬಹಳ ಶ್ರದ್ಧೆಯಿಂದ ಕಲ್ಲು ಕೆತ್ತುತ್ತಿದ್ದಳು. ಅವಳಿಗೂ ಮೇಲಿನ ಪ್ರಶ್ನೆಯನ್ನೇ ಕೇಳಲಾಗಿ, ಅವಳು ಹೇಳುತ್ತಾಳೆ "ಯಾರೋ ಪುಣ್ಯಾತ್ಮರು ದೇವಸ್ಥಾನ ಕಟ್ಟಿಸಿದ್ದಾರೆ. ನನ್ನ ಕೈಯಲ್ಲಿ ಭಗವಂತನ ಕೆಲಸ ಇನ್ನೇನೂ ಮಾಡುವುದಕ್ಕಾಗುವುದಿಲ್ಲ. ಅದಕ್ಕೇ ಈ ಚಿಕ್ಕ ಸೇವೆ ಮಾಡುತ್ತಿರುವುದು. ಎಲ್ಲಾ ಅವನಿಗಾಗಿ". ಪ್ರಶ್ನೆ ಕೇಳಿದವನು  ಒಂದು ನಿಮಿಷ ಮೂಕವಿಸ್ಮಿತನಾದ. ಅವಳು ಮಾಡುತ್ತಿರುವುದು ಹೊಟ್ಟೆಪಾಡಿಗಾಗಿಯೇ. ಆದರೆ ಅವಳ ಭಾವ ಉನ್ನತವಾದದ್ದು. ಭಗವಂತನನ್ನು ಭಾವಿಸಿದಷ್ಟೂ ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾನೆ. "ಭಾವಗ್ರಾಹೀ ಜನಾರ್ದನಃ" ಎನ್ನುತ್ತಾರೆ. ನಾವು  ಏನನ್ನೇ ಮಾಡಿದರೂ ಅದರಲ್ಲಿ ಪೂರ್ತಿ ಮನಸ್ಸಿಟ್ಟು ಭಗವಂತನಿಗೆ ಪ್ರೀತಿಯಾಗಲಿ ಎಂಬ ಭಾವದೊಡನೆ ಶ್ರದ್ಧೆಯಿಂದ ಮಾಡಿದಾಗ ಅದು ಭಗವನ್ಮಯವಾದ ಬಾಳಾಟವಾಗುತ್ತೆ ಎಂದು ಹಿರಿಯರು ನುಡಿಯುತ್ತಾರೆ. 

ಭಾವಕ್ಕೆ ಸಂಬಂಧಪಟ್ಟ ಇನ್ನೊಂದು ಉತ್ಕೃಷ್ಟವಾದ ದೃಷ್ಟಾಂತ-ಗೋಪಿಯರು ಗೋಕುಲದಲ್ಲಿ ಪರಂಜ್ಯೋತಿ ಸ್ವರೂಪನಾದ ಶ್ರೀಕೃಷ್ಣನನ್ನು ಭಾವಿಸಿದ ಪರಿ. ಅವರ ಬೆಳಗಿನ ದಿನಚರಿ ಪ್ರಾರಂಭವಾಗುವುದೇ ಶ್ರೀ ಕೃಷ್ಣನ ಮಧುರ ಸ್ಮರಣೆಯಿಂದ. ಮನೆ ಗುಡಿಸಿ, ಸಾರಿಸಿ, ರಂಗವಲ್ಲಿ ಇಡುವಾಗ, ನೀರು ತರುವಾಗ, ಹಾಲು ಕರೆಯುವಾಗ, ಮೊಸರು ಕಡೆಯುವಾಗ ಅವರ ಮನಸ್ಸಿನ ಏಕಮಾತ್ರ ಧ್ಯೇಯಮೂರ್ತಿ ನೀಲಮೇಘಶ್ಯಾಮನಾದ ಶ್ರೀಕೃಷ್ಣ. ಸದಾ ಅವರ ಮನಸ್ಸು ಭಗವಂತನಲ್ಲಿಯೇ ರಮಿಸುತ್ತಿತ್ತು ಇದರಿಂದಾದ ಪ್ರಯೋಜನ - ಅಲಭ್ಯ ಲಭ್ಯನಾದ ಶ್ರೀಕೃಷ್ಣನ ದರ್ಶನ; ಆಲಿಂಗನ ಸೌಖ್ಯ. ಗೋಪಿಯರು ಏನನ್ನೂ ಬಯಸದೇ ಭಗವಂತನೊಬ್ಬನನ್ನೇ ಬಯಸಿ ಅವನನ್ನೇ ಪಡೆದರು. ಶ್ರೀರಂಗಮಹಾಗುರುಗಳ  ದಿವ್ಯವಾಣಿ ಇಂತಿದೆ--"ನಾವು ಮಾಡುವ ಪ್ರತಿಕರ್ಮವೂ ಬ್ರಹ್ಮಾರ್ಪಿತವಾಗಬೇಕು. ಅದಕ್ಕೆ ತಕ್ಕ ಯುಕ್ತಿಯೂ ಬೇಕು". ಇದನ್ನು ಜ್ಞಾಪಿಸಿಕೊಳ್ಳುತ್ತಾ ನಮ್ಮ ಕರ್ಮಗಳೆಲ್ಲ ಭಗವಂತನಿಗೆ ಪ್ರೀತಿಯನ್ನುಂಟುಮಾಡಿ ಅವನನ್ನೇ ಹೊಂದುವಂತಾಗಲಿ ಎಂದು ಪ್ರಾರ್ಥಿಸುತ್ತಾ "ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ"(ಎಲ್ಲ ಕರ್ಮಗಳೂ ಜ್ಞಾನದಲ್ಲಿ ಪರಿಸಮಾಪ್ತಿಯನ್ನು ಹೊಂದಬೇಕು) ಎಂಬ ಶ್ರೀಕೃಷ್ಣನ ದಿವ್ಯವಾಣಿಯನ್ನು ಸ್ಮರಿಸೋಣ.

ಸೂಚನೆ: 30/12/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.