Thursday, December 10, 2020

ವಿಗ್ರಹಾರಾಧನೆಯ ಹಿಂದಿನ ರಹಸ್ಯ (Vigraharadhaneya Hindina Rahasya)

ಲೇಖಕರು: ಮೋಹನ ರಾಘವನ್.
(ಪ್ರತಿಕ್ರಿಯಿಸಿರಿ lekhana@ayvm.in)



ವಿಗ್ರಹಗಳ ಮುಖಾಂತರ ಸೃಷ್ಟೀಶನ ಪೂಜಿಸುವ ಪರಂಪರೆ ಜಗತ್ತಿನ ಎಲ್ಲ ಪ್ರಾಚೀನ ನಾಗರೀಕತೆಗಳಲ್ಲೂ ಬೆಳೆದುಬಂದಿದೆ. ಆದರೆ ದೇವತಾಮೂರ್ತಿ- ದೇವಾಲಯಗಳನ್ನು ಇಂದಿನವರೆವಿಗೂ ಉಳಿಸಿ, ದೈನಂದಿನ ಜೀವನದ ಬಹುಮುಖ್ಯ ಅಂಗವಾಗಿ ರೂಪಿಸಿಕೊಂಡಿರುವುದು ಪ್ರಾಯಶಃ ಭಾರತೀಯ ಸಂಸ್ಕೃತಿಯ ವಿಶೇಷತೆ. ಮನೆಯಲ್ಲಿ ಸಾಲಿಗ್ರಾಮ-ವಿಗ್ರಹಗಳ ಪೂಜೆಮಾಡುವವರುಂಟು. ದೇವಾಲಯದಲ್ಲಿ ದೇವರಮುಂದೆ ಕಷ್ಟ-ಸಂತಸವನ್ನು ನಿವೇದಿಸಿ ನೆಮ್ಮದಿ ಹುಡುಕುವವರು ಹಲವರು. ರಸ್ತೆಯಲಿ ನಡೆದಾಡುವಾಗ ಅರಳೀಕಟ್ಟೆಯಲ್ಲೋ, ಫುಟ್ಪಾತಿನ ಮಧ್ಯದಲ್ಲೋ ಸಣ್ಣ ಮೂರ್ತಿ ಪ್ರತಿಷ್ಠೆ ಆಗಿದ್ದರೂ, ಕ್ಷಣಮಾತ್ರವಾದರೂ ಕಣ್ಣು ಮಿಟುಕಿಸಿ ಕೈಮುಗಿದು ಮುಂದುವರೆಯುವ ಸಮಾಜ ನಮ್ಮದು. ಅಷ್ಟಾದರೂ ಈ ರೂಢಮೂಲವಾದ ಪದ್ಧತಿಗಳಿಗೆ ವಿರೋಧ ಅನೇಕವಾಗಿವೆ. ಧಾಳಿಮಾಡಿ ವಿಗ್ರಹಭೇದನ ಮಾಡಿದವರುಂಟು. ಮಾನಸಿಕ-ಬೌದ್ಧಿಕ ಮಟ್ಟದಲ್ಲಿ ಈ ಪರಂಪರೆಯನ್ನು ಒಡೆಯುವ ಸಂಗತಿಗಳೂ ಉಂಟು. 'ಈ ಕಲ್ಲಿಗ್ಯಾಕ ಪೂಜೆ ?' ಎನ್ನುವುದು ಮೊದಲೇಟು. 'ಈ ಕಲ್ಲನು ಒಡೆದರೆ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ದೇವರು ನಮ್ಮನ್ನೇನು ಕಾಪಾಡುತ್ತಾನೆ?' ಇಂತಹ ಬಾಣಗಳು ನಮ್ಮ ಅನ್ವೇಷಣಾಪರ ಪೀಳಿಗೆಯ ಶ್ರದ್ಧೆ-ನಂಬಿಕೆಗಳನ್ನು ಸಡಿಲಗೊಳಿಸುತ್ತವೆ. ನಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬೇಕಾದರೆ ವಿಗ್ರಹಾರಾಧನೆಯ ರಹಸ್ಯಭೇದನವನ್ನು ಮೊದಲಿಗೆ ನಡೆಸಬೇಕು.  

ಮೂರ್ತಿ ಭಗವಂತನ ಪ್ರತಿನಿಧಿ

ನಮ್ಮ ದೇಶದ ಧ್ವಜವನ್ನು ಅವಮಾನಿಸಿದರೆ ಅದು ಶಿಕ್ಷಾರ್ಹ ಅಪರಾಧ. ಬಣ್ಣದ ಬಟ್ಟೆಯಲ್ಲೇನಿದೆ ಎನ್ನುವುದಿಲ್ಲ. ಅದು ನಮ್ಮ ದೇಶವನ್ನೇ ಪ್ರತಿನಿಧಿಸುತ್ತದೆ. ಮಾತೃಭೂಮಿಗೆ ಸಲ್ಲಿಸುವ ಸಕಲ ಗೌರವವೂ ಅಲ್ಲಿಗೆ ಸಲ್ಲಿಸಬೇಕು. ನಮ್ಮ ಪ್ರೀತಿಪಾತ್ರರರೊಬ್ಬರ ಫೋಟೋ ಇದೆ ಅಂದುಕೊಳ್ಳೋಣ. ಯಾರಾದರೂ ಫೋಟೋವನ್ನು ನೆಲಕ್ಕೆ ಕೆಡವಿ ತುಳಿದರೆ ಆ ವ್ಯಕ್ತಿಗೆ ಮಾಡಿದ ಅಪಮಾನವೆಂದೇ ಭಾವಿಸುತ್ತೇವೆ. ಅಲ್ಲಿ ಆ ಫೋಟೋವನ್ನು ನೋಡಿದರೆ ನಮ್ಮಲ್ಲಿ ವ್ಯಕ್ತಿಯನ್ನೇ ನೋಡಿದ ಅನುಭವ ಉಂಟಾಗುತ್ತದೆ. ಆದ್ದರಿಂದ ಫೋಟೋ ಸಾಕ್ಷಾತ್ ವ್ಯಕ್ತಿಯೆಂದೇ ಭಾವಿಸುತ್ತೇವೆ. ಅಂತೆಯೇ ಭಾರತ ಮಹರ್ಷಿಗಳು ತಮ್ಮ ತಪಸ್ಯೆಯಲ್ಲಿ ಕಂಡನುಭವಿಸಿದ ಪ್ರಕಾಶಮಾನವಾದ ದೇವತಾಮೂರ್ತಿಗಳನ್ನು ತಮ್ಮ ಮನಃಪಟಲದಲ್ಲಿ ಸೆರೆಹಿಡಿದು ಅಂತೆಯೇ ಶಿಲ್ಪಗಳಾಗಿ ಕೆತ್ತಿಸಿದರು. ಶಿಲ್ಪ ಎನ್ನುವ ಪದವೇ ಸಮಾಧಿ ಎಂಬರ್ಥವನ್ನು ಕೊಡುತ್ತದೆ. ಶಿಲ್ಪ-ವಿಗ್ರಹಗಳನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಎಲ್ಲರೂ ಆ ಅದ್ಭುತ ದೃಶ್ಯಗಳನ್ನು ಕಂಡು ಅನಂದಿಸುವಂತೆ ಮಾಡಿದರು. ಜ್ಞಾನಿಶ್ರೇಷ್ಠರಾದ ಶ್ರೀರಂಗ ಮಹಾಗುರುಗಳು ದೇವಾಲಯಗಳನ್ನು ಋಷಿಗಳ 'ಸ್ಮಾರಕ ಮಂದಿರ'ವೆಂದು ಕರೆದರು.

ಒಂದು ಆಕ್ಷೇಪಣೆ ಮಾಡಬಹುದು. ತಪಸ್ಯೆಯಲ್ಲಿ ಮೂರ್ತಿಗಳನ್ನು ಕಂಡವರಿಗೆ ದೇವಾಲಯದಲ್ಲಿ ವಿಗ್ರಹ ನೋಡಿದರೆ ಆ ಸ್ಮರಣೆಯನ್ನು ಪುನಃ ತಂದುಕೊಡುತ್ತೆ. ಆದರೆ ಜನಸಾಮಾನ್ಯರಿಗೆ  ಏನು ಲಾಭ ? ಜನರು ಆ ವಿಗ್ರಹವೇ ದೇವರು ಎಂದು ಭ್ರಮೆಗೊಂಡು ತೆಂಗಿನಕಾಯಿ ಒಡೆದು ಪೂಜೆಯೂ ಮಾಡುತ್ತಾರೆ. ಇದು ಮೌಢ್ಯವೆಂದು ಪ್ರಚಾರ ಮಾಡುವವರನೇಕರು. ಆದರೆ ಜನಸಾಮಾನ್ಯರಿಗೂ ಋಷಿಗಳಂತೆ ಒಳ ಅನುಭವ ದೊರಕಿಸುವ ವೈಜ್ಞಾನಿಕವಾದ ಒಂದು ಯಂತ್ರ ಇದು ಎಂಬುದು ರಹಸ್ಯವಾಗಿಯೇ ಉಳಿದಿದೆ. ಈ ರಹಸ್ಯವಿಜ್ಞಾನಕ್ಕೆ ಆಧಾರವೆಂದರೆ ಆ ವಿಗ್ರಹಗಳ ಮಾಟ, ಅವುಗಳ ನೋಟ ಮತ್ತು ಅದರಲ್ಲಿ ಜ್ಞಾನಿಯು ಹರಿಸುವ ಸಂಕಲ್ಪಪೂರ್ವಕ ಶಕ್ತಿ.

ಮೊರ್ತಿಯ ರೂಪಸೌಂದರ್ಯ ಧ್ಯಾನದಿಂದ ಬ್ರಹ್ಮಾನುಭವ

ಒಂದು ಮುಖಭಾವವನ್ನೋ, ಭಂಗಿಯನ್ನೂ ಚೆನ್ನಾಗಿ ನೋಡಿ ಆಲಿಸಿದರೆ ನಮ್ಮಲ್ಲಿಯೂ ಆ ಭಾವ- ಭಂಗಿಯ ಸಂಸ್ಕಾರ ಸೂಕ್ಷ್ಮರೂಪದಲ್ಲಿ ಹರಿದು ಉಳಿಯುತ್ತೆ. ನಗುವ ಮುಖವ ನೋಡಿದರೆ ಕಿಂಚಿತ್ ಸಂತೋಷ, ಸಿಡುಕುಮೂತಿಯ ನೋಡಿದರೆ ಕಸಿಬಿಸಿ ಉಂಟಾಗುತ್ತದೆ. ಭಾರವನ್ನೆತ್ತುತ್ತಲಿರುವವನ ಚಿತ್ರ ನೋಡಿದರೆ ಆ ವ್ಯಕ್ತಿಯ ಉಬ್ಬಿರುವ ಮಾಂಸಖಂಡಗಳನ್ನು ನೋಡಿದಾಗ ಅವನು ಪಡುತ್ತಿರುವ ಶ್ರಮ ನಮ್ಮ ಅನುಭವಕ್ಕೂ ಬರುತ್ತದೆ. ಅಂತೆಯೇ ಪೂಜಾರ್ಹ ದೇವತಾವಿಗ್ರಹಗಳಲ್ಲಿನ ಭಾವ ಭಂಗಿ ನೋಟಗಳು ಒಳ ಯೋಗದ ಸ್ಥಿತಿಗಳನ್ನು ಅಚ್ಚಳಿಯದೆ ಹೊರತರುತ್ತವೆ; ನಮ್ಮಲ್ಲಿಯೂ ಮೂಡಿಸುತ್ತದೆ. ಆ ಮಂದಹಾಸ, ಬಿಗಿದು-ಬಾಗಿರುವ ಕಟಿ, ಹಸ್ತ ವಿನ್ಯಾಸಗಳು, ಆಳಕ್ಕೆ ಹೋಗುವ ಅರೆದೆರೆದ ಕಣ್ಣು ದೃಷ್ಟಿ ಇವು ಒಳ ಆನಂದದ ಸಹಜಾಭಿವ್ಯಕ್ತಿ. ಅಲ್ಲಿ ಮನಸ್ಸು ಲೀನವಾದರೆ ನಮ್ಮಲ್ಲಿಯೂ ಒಳಯೋಗಸ್ಥಿತಿ ಉಂಟುಮಾಡುತ್ತದೆ. ಮೂರ್ತಿಗಳಲ್ಲಿ ಅಲಂಕಾರವಾಗಿ ಕಟಿಬಂಧ, ತೋಳುಬಳೆಗಳು, ಕಿರೀಟಗಳು ಕಂಡುಬರುತ್ತವೆ. ಇವುಗಳ ಬಿಗಿತದಿಂದ ಪ್ರಾಣಸಂಚಾರ ನಿಯಂತ್ರಣವಾಗುತ್ತದೆ. ಅಲ್ಲಿ ಮನಸ್ಸನ್ನು ಒಂದಾಗಿಸಿದರೆ ಆ ಪ್ರಾಣಸಂಚಾರ ನಮ್ಮಲ್ಲಿಯೂ ಉಂಟಾಗುತ್ತದೆ. ಕೈಲಿರುವ ಆಯುಧಗಳು ದಿವ್ಯ ಶಕ್ತಿಗಳ ಪ್ರತಿರೂಪ. ಅವುಗಳ ದರ್ಶನ ಮನಸ್ಸಿನ ಕ್ಷೋಭೆಯನ್ನು ನಾಶಮಾಡುತ್ತವೆ.

 ಆದರೆ ಈ ಎಲ್ಲ ಉದ್ದಿಷ್ಟ ಪರಿಣಾಮ ದೊರಕಬೇಕಾದರೆ ನಮ್ಮ ಮನಸ್ಸು ಆ ವಿಗ್ರಹದಲ್ಲಿ ಒಂದಾಗಬೇಕು. ಎಲ್ಲಿ ಪ್ರೀತಿ-ವಿಶ್ವಾಸವಿದೆಯೋ ಅಲ್ಲಿ ಮನಸ್ಸು ಸಹಜವಾಗಿಯೇ ಅಂಟಿಕೊಳ್ಳುತ್ತದೆ. ಆದ್ದರಿಂದ 'ಆ ವಿಗ್ರಹವನ್ನೇ ಒಳ ದೇವರ ಹೊರರೂಪವೆಂದು ಭಾವಿಸು, ಸಾಕ್ಷಾತ್ ಭಗವಂತ ಎಂದು ತಿಳಿ' ಎಂಬ ಉಪದೇಶ. ಆ ವಿಗ್ರಹರೂಪದಲ್ಲಿರುವ ದೇವರಿಗೆ ಅಭಿಷೇಕ, ಅಲಂಕಾರಾದಿ ಮಾಡುವುದರಿಂದ ಅಥವಾ ನೋಡುವುದರಿಂದ ದೇವತಾಮೂರ್ತಿಯು ಸಾಂಗವಾಗಿ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅಲ್ಲಿನ ನಂಟು, ಮನಸ್ಸನ್ನು ಮೂರ್ತಿಯಲ್ಲಿ ಲಗ್ನವಾಗುವಂತೆ ಮಾಡುತ್ತದೆ.ಮೂರ್ತಿಯು ಋಷಿಗಳ ನಿರ್ದೇಶನದಲ್ಲಿ, ಒಳ್ಳೆಯ ಶಿಲ್ಪಿಯಿಂದ ಕೆತ್ತಲ್ಪಟ್ಟಿದ್ದರೆ ಅದರ ರೂಪ-ಸೌಂದರ್ಯಗಳ ಧ್ಯಾನದಿಂದಲೇ ಸಾಧಕನುಬ್ರಹ್ಮಾನುಭವ ಪಡೆದುಬಿಡಬಹುದು.

ಜ್ಞಾನಿಗಳ ಶಕ್ತಿ - ಮೂರ್ತಿಯ ಪ್ರಾಣ
ಆದರೆ ಇವೆಲ್ಲಕ್ಕೂ ಮೀರಿದ ಮತ್ತೊಂದು ರಹಸ್ಯವೆಂದರೆ ಮೂರ್ತಿಯ ಪ್ರಾಣ-ಪ್ರತಿಷ್ಠೆ. ತಪಸ್ವಿಯೂ ಬ್ರಹ್ಮಜ್ಞಾನಿಯೂ ಆದ ಸಿದ್ಧಪುರುಷರು ತಮ್ಮ ತಪಶ್ಶಕ್ತಿಯನ್ನು ಮೂರ್ತಿಯಲ್ಲಿ ಹರಿಸುವ ಅಪೂರ್ವ ಪ್ರಕ್ರಿಯೆ ಇದು. ಋಷಿಯಾದವನು ಆ ಮೂರ್ತಿಯನ್ನು ಆಲಿಂಗಿಸಿ ತನ್ನ ಹೃದಯದಲ್ಲಿ ಆಡುವ ಶಕ್ತಿಯನ್ನು ವಿಗ್ರಹದಲ್ಲಿ ಇಟ್ಟು ಪ್ರತಿಷ್ಠಾಪನೆ ಮಾಡಿದರೆ ಕಾಲಕಾಲಕ್ಕೆ ಆ ಮೂರ್ತಿಯ ಸಾನ್ನಿಧ್ಯಕ್ಕೆ ಬರುವ ಭಕ್ತರ ಹೃನ್ಮನಗಳಮೇಲೆ ಅದರ ಕೆಲಸ ನಡೆಯುತ್ತಲೇ ಇರುತ್ತೆ. ಅವರನ್ನು ಒಳಯೋಗಸ್ಥಿತಿಯಲ್ಲಿ ಮುಳುಗಿಸುತ್ತದೆ. ಸಾಲಿಗ್ರಾಮ-ಸ್ಫಟಿಕ ಶಿಲೆಗಳೇ ಆದರೆ ಪ್ರಾಣ ಪ್ರತಿಷ್ಠೆಯೂ ಬೇಕಿಲ್ಲ. ಸೃಷ್ಟಿಸಹಜವಾಗಿಯೇ ಅಲ್ಲಿ ಶಕ್ತಿಪ್ರತಿಷ್ಠೆ ಆಗಿರುತ್ತದೆ.  

ಇಂತಹ ಮೂರ್ತಿಯನ್ನು ಗರ್ಭಗೃಹದಲ್ಲಿ ಇಟ್ಟು, ಜ್ಯೋತಿಯಿಂದ ಮಂಗಳಾರತಿ, ಒಳನಾದವನ್ನೇ ಹೋಲುವ ಘಂಟಾನಾದ, ತಂಪಾದ ಗಂಧ, ಸುಗಂಧಿತ ಪುಷ್ಪ, ತುಳಸೀ ಮತ್ತು ಶುದ್ಧಾಂತಃಕರಣದಿಂದ ಪೂಜೆ ನಡೆಸಿದರೆ 'ಇಲ್ಲಿ ಸಾಕ್ಷಾತ್ ಭಗವಂತನೇ ಇಳಿದು ಬಂದಿದ್ದಾನೆ' ಎಂಬ ಮಾತುಕೂಡ ಅಕ್ಷರಶಃ ಸತ್ಯವಾಗುತ್ತೆ. ಯೋಗರಹಸ್ಯಗರ್ಭಿತವಾದ ಮೂರ್ತಿಗಳನ್ನೂ,  ಪೂಜಾ-ಪದ್ಧತಿಯನ್ನೂ ಪೋಷಿಸಿ ರಕ್ಷಿಸಿದರೆ ಅಪಾರವಾದ ನೆಮ್ಮದಿ ಶಾಂತಿ, ಇಹ-ಪರಸೌಖ್ಯಗಳು ನಮ್ಮಪಾಲಿಗೆ ಖಚಿತ. 

ಸೂಚನೆ: 10/12/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.