Saturday, December 19, 2020

ಶ್ರೀರಾಮನಲ್ಲಿನ “ವೀರ” ರಸ (Sriramanallina “Veera” Rasa)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)

  

ವೀರರಸಕ್ಕೆ ಉತ್ಸಾಹವೇ ಸ್ಥಾಯಿಭಾವ. ಲಕ್ಷ್ಮಿಯು ಉತ್ಸಾಹಸಂಪನ್ನನಲ್ಲವೇ ಹೊಂದುವುದು? ವಾಲ್ಮೀಕಿಮಹರ್ಷಿಗಳು ಧೀರೋದಾತ್ತನಾಯಕನಾದ ಶ್ರೀರಾಮನಲ್ಲಿ ಈ ರಸವನ್ನು ಬಹಳ ಪ್ರಧಾನವಾಗಿ ನಿರೂಪಿಸಿದ್ದಾರೆ. ವಿಶ್ವಾಮಿತ್ರರ ಯಜ್ಞರಕ್ಷಣೆ, ಅತಿರಥಮಹಾರಥರೆಲ್ಲರೂ ಪ್ರಯತ್ನಿಸಿ, ಮಿಸುಕಾಡಿಸಲೂ ಆಗದ, ಶಿವಧನುಸ್ಸನ್ನು ಮುರಿದಸಂದರ್ಭ, ಪರಶುರಾಮರ ಅಭಿಯೋಗ, ವಿರಾಧವಧೆ, ಅಸಹಾಯಶೂರನಾಗಿ ಹದಿನಾಲ್ಕುಸಾವಿರರಾಕ್ಷಸರನ್ನು ಜನಸ್ಥಾನದಲ್ಲಿ ಸಂಹರಿಸಿದ್ದು, ಕಬಂಧನ ಬಾಹುಚ್ಛೇದನ, ಸುಗ್ರೀವನಿಗೆ ತನ್ನ ಸಾಮರ್ಥ್ಯದಲ್ಲಿ ನಂಬಿಕೆ ಹುಟ್ಟಿಸಲು ಮಾಡಿದ ಸಪ್ತಸಾಲವೃಕ್ಷಗಳ ಭಂಜನ, ದುಂದುಭಿರಾಕ್ಷಸನ ಅಸ್ಥಿಪಂಜರವನ್ನು ಅಂಗುಷ್ಠದಿಂದ ಯೋಜನದೂರ ಹಾರಿಸಿದ್ದು, ವಾಲಿವಧೆ, ರಾವಣಕುಂಭಕರ್ಣಾದಿರಾಕ್ಷಸರ ಸಂಹಾರ – ಈ ಎಲ್ಲವೂ ಶ್ರೀರಾಮಚಂದ್ರನಲ್ಲಿನ ವೀರರಸಕ್ಕೆ ಸಾಕ್ಷಿಗಳು. 

ಸಾಮಾನ್ಯವಾಗಿ ಶೌರ್ಯವಿದ್ದೆಡೆ ಆತ್ಮಪ್ರಶಂಸೆಯೂ ಇರುತ್ತದೆ. ಆದರೆ ಆದರ್ಶಪುರುಷನಾದ ಶ್ರೀರಾಮನಲ್ಲಿ ಅದಿಲ್ಲದಿರುವುದು ಅವನನ್ನು ಮತ್ತಷ್ಟು ದೊಡ್ಡವನನ್ನಾಗಿಸಿದೆ. ಆದ್ದರಿಂದಲೇ ನಾರದರು ಶ್ರೀರಾಮನನ್ನು 'ಅವಿಕತ್ಥನಃ' ಎಂದು ಬಣ್ಣಿಸಿದ್ದಾರೆ. ಅಂದ ಮಾತ್ರಕ್ಕೆ ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳಲೇ ಬಾರದಂತೇನೂ ಅಲ್ಲ. ಶ್ರೀರಾಮರಾವಣರ ಯುದ್ಧದ ಸಂದರ್ಭದಲ್ಲಿ, ರಾವಣನ ಮೂಲಬಲವನ್ನು ಕಂಡು, ಕಪಿಸೇನೆಯು ಓಡಿಹೋಗುತ್ತಿರುವಾಗ, ಶ್ರೀರಾಮನು ಅವರನ್ನು ತಡೆದು, 'ಇಂದು ರಾಮನ ರಾಮತ್ವವನ್ನು ಕಪಿಸೇನಾನಿಗಳು ನೋಡಲಿ' ಎಂದು ಹೇಳಿಕೊಳ್ಳುತ್ತಾನೆ. ಹಾಗೆಯೇ, ರಾವಣನನ್ನು ಯುದ್ಧದಿಂದ ಹಿಮ್ಮೆಟ್ಟಿಸಿದಾಗ, 'ಈ ಸಾಮರ್ಥ್ಯವು ನನಗೆ ಅಥವಾ ಈಶ್ವರನಿಗೆ ಮಾತ್ರ' ಎಂಬ ಮಾತನ್ನು ಆಡುತ್ತಾನೆ. 

ಶತ್ರುವು ಮುಂ‍ದಿರುವಾಗ ಪ್ರತಿದ್ವಂದ್ವಿಯ ಮಾತು ಆತ್ಮಪ್ರಶಂಸೆಯಾಗದೆ, ಅವನ ಆತ್ಮಸ್ಥೈರ್ಯವನ್ನು ಪ್ರಕಾಶಪಡಿಸುತ್ತದೆ. 'ಕೆಲಸಕ್ಕಾಗಿ ಸಂದರ್ಶನಕ್ಕೆ ಹೋದಾಗ, ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳುವ ಸಂದರ್ಭಬಂದಾಗ ಅಲ್ಲಿ ವಿನಯ ಸಲ್ಲ. ಅಲ್ಲಿ ತನ್ನ ಸಾಮರ್ಥ್ಯವನ್ನು ಹೇಳಿಕೊಳ್ಳಬೇಕು' ಎಂಬ ಶ್ರೀರಂಗಮಹಾಗುರುವಿನ ಹಿತನುಡಿ ಇಲ್ಲಿ ಸ್ಮರಣಾರ್ಹ. ಶ್ರೀರಾಮನಲ್ಲಷ್ಟೇ ಅಲ್ಲದೇ ಶ್ರೀರಾಮನ ನಾಮಸ್ಮರಣೆಗೂ, ಶ್ರೀರಾಮಬಾಣಕ್ಕೂ ಇದೇ ರೀತಿಯಾದ ಶಕ್ತಿ ಇದೆ. ಇಂದ್ರಜಿತ್ತನ್ನು ಸಂಹರಿಸಲು, ಲಕ್ಷ್ಮಣನು ತನ್ನ ಶರದಲ್ಲಿ ಅಭಿಮಂತ್ರಿಸಿದ್ದು ಶ್ರೀರಾಮನ ಪೌರುಷವನ್ನೇ. 'ಶ್ರೀರಾಮನು ಧರ್ಮಾತ್ಮನಾಗಿರುವುದರಿಂದ, ಸತ್ಯಸಂಧನಾಗಿರುವುದರಿಂದ, ಪೌರುಷದಲ್ಲಿ ತನಗೆ ಸರಿಸಾಟಿಯಿಲ್ಲದಿರುವುದರಿಂದ ಎಲೈ ಬಾಣವೇ ಈ ರಾವಣಿಯನ್ನು ಸಂಹರಿಸು, ಎಂದು ಹೇಳಿ ಬಾಣಪ್ರಯೋಗವನ್ನು ಮಾಡುತ್ತಾನೆ. ಈ ಶ್ಲೋಕವು 'ರಾಮಸಾಯಕಮಹಾಮಂತ್ರ'ವೆಂದೇ ಪ್ರಸಿದ್ದಿ. 

ಶೌರ್ಯವು ಯಾವಾಗಲೂ ದಯೆಯಿಂದಲೇ ಶೋಭಿಸುತ್ತದೆ. ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬಹುದೇ ಎಂಬ ಜಿಜ್ಞಾಸೆ ಬಂದಾಗ 'ವಿಭೀಷಣನೇ ಬರಲಿ ಅಥವಾ ಸ್ವಯಂ ರಾವಣನೇ ಬರಲಿ, ಅವನಿಗೆ ಅಭಯವುಂಟು, ಒಮ್ಮೆ ನನ್ನನ್ನಾಶ್ರಯಿಸಿದ ಎಲ್ಲಾ ಭೂತಗಳಿಗೂ ಅಭಯವುಂಟು. ಇದು ನನ್ನ ವ್ರತ' ಎಂಬುದಾಗಿ ಘೋಷಿಸುತ್ತಾನೆ ಶ್ರೀರಾಮ. ಇಂತಹ ಶ್ರೀರಾಮನನ್ನಲ್ಲವೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ 'ನಾನು ಧನುರ್ಧಾರಿಗಳಲ್ಲಿ ಶ್ರೀರಾಮನಾಗಿದ್ದೇನೆ' ಎಂದು ಹೇಳಿಕೊಳ್ಳುವುದು. ಶ್ರೀರಾಮನಿಗೆ ನಮೋ ನಮಃ.

ಸೂಚನೆ: 13/06/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.