Sunday, December 13, 2020

ಯಮ - ಅಸ್ತೇಯ ಮತ್ತು ಬ್ರಹ್ಮಚರ್ಯ (Yama - asteya mattu brahmacarya)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)

ಅಸ್ತೇಯ ಮತ್ತು ಬ್ರಹ್ಮಚರ್ಯಗಳು ಯಮದ ಮೂರನೆಯ ಮತ್ತು ನಾಲ್ಕನೆಯ ಅಂಗಗಳಾಗಿರುತ್ತವೆ.

ಸ್ತೇಯವೆಂದರೆ ಕಳ್ಳತನ. ಕ್ರಿಯೆ ಯಿಂದಾಗಲೀ, ಮಾತಿನಿಂದಾಗಲೀ, ಮನಸ್ಸಿನಿಂದಾಗಲೀ ಕಳ್ಳತನದಲ್ಲಿ ತೊಡಗದೇ ಇರುವುದು ಅಸ್ತೇಯವಾಗುತ್ತದೆ. ಇದು ಹೇಗೆ ಯೋಗಾಂಗವಾಗುತ್ತದೆಯೆಂದು ನೋಡೋಣ.  ಚಿತ್ತವೃತ್ತಿಗಳನ್ನು ನಿರೋಧಿಸುವುದೇ ಯೋಗವಾದುದರಿಂದ ಯಾವುದು ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತದೋ ಅದು ಯೋಗವಿಘ್ನವಾಗಿರುತ್ತದೆ. ಪದಾರ್ಥಗಳಿಗೆ ಅವುಗಳ ಒಡೆಯನ ಚಿತ್ತವೃತ್ತಿಯು ಅಂಟಿರುತ್ತದೆ. ಪದಾರ್ಥವನ್ನು ಸಕ್ರಮವಾಗಿ ಖರೀದಿಸಿದಾಗ ಅಥವಾ ದಾನ ಪಡೆದಾಗ, ಪದಾರ್ಥಕ್ಕೆ ಅಂಟಿದ್ದ ಚಿತ್ತವೃತ್ತಿಯು ಕಳಚಿ, ಪದಾರ್ಥವು ನಿರುಪಾಧಿಕವಾಗಿ ಖರೀದಿಸಿದವನನ್ನು/ದಾನ ಪಡೆದವನನ್ನು  ಬಂದು ಸೇರುತ್ತದೆ. ಆದರೆ ಕಳ್ಳತನ ಮಾಡಿದಾಗ, ಒಡೆಯನ ಅನುಮತಿಯಿಲ್ಲದೇ ಬಂದುದರಿಂದ, ಪದಾರ್ಥವು ಚಿತ್ತವೃತ್ತಿಯ ಅಂಟಿನೊಂದಿಗೇ ಕೂಡಿದ್ದು, ಕಳ್ಳತನ ಮಾಡಿದವನ ಚಿತ್ತವೃತ್ತಿಯು ಜಾಸ್ತಿಯಾಗುವಂತೆ ಮಾಡುತ್ತದೆ. ಹೀಗೆ ಕಳ್ಳತನದಿಂದ ದೂರವಿರುವುದು ಚಿತ್ತವೃತ್ತಿಗಳು ಹೆಚ್ಚುವುದನ್ನು ತಪ್ಪಿಸುತ್ತದೆ; ಆದ್ದರಿಂದ  ಯೋಗಕ್ಕೆ ಪೋಷಕವಾಗಿ ಯೋಗಾಂಗವಾಗುತ್ತದೆ.

ಬ್ರಹ್ಮಚರ್ಯವೆಂಬ ಪದಕ್ಕೆ, ಬ್ರಹ್ಮನಲ್ಲಿ ಸಂಚಾರ ಮಾಡುವುದು  ಎನ್ನುವುದೇ ಶಬ್ದಾರ್ಥವಾದರೂ ರೂಢಿಯಲ್ಲಿ, ಕಾಮದ ವಿಷಯದಲ್ಲಿ ಸ್ವೇಚ್ಛಾಚಾರವಿಲ್ಲದಿರುವುದು ಎನ್ನುವುದೇ ಅರ್ಥವಾಗಿದೆ. ಸ್ತ್ರೀ ಸಂಬಂಧವಾದ ಕಾಮಾಸಕ್ತಿಯು ಇಂದ್ರಿಯಗಳನ್ನು ಮಥಿಸಿ ವೀರ್ಯವು ಹೊರಮುಖವಾಗಿಸುವ ಕ್ರಿಯೆ. ಈ ಕ್ರಿಯೆಯಲ್ಲಿ ತೊಡಗಿದರೆ ನರಸಮೂಹವೆಲ್ಲವೂ ಹೊರಮುಖವಾಗುತ್ತದೆ ಮತ್ತು ಅವು ಸ್ವಸ್ಥಿತಿಗೆ ಬರುವ ತನಕ ಬೇರೊಂದು ಕೆಲಸಕ್ಕೆ ಬರುವುದಿಲ್ಲವೆಂಬುದು ಪ್ರಕೃತಿ ನಿಯಮ. ಯೋಗವು ದೇಹೇಂದ್ರಿಯಗಳೆಲ್ಲವನ್ನೂ ಒಳಮುಖವಾಗಿಸುವ ಪ್ರಕ್ರಿಯೆಯಾದುದರಿಂದ ಕಾಮದಲ್ಲಿ ತೊಡಗಿದ ದೇಹೇಂದ್ರಿಯಗಳನ್ನು ಯೋಗದಲ್ಲಿ ತೊಡಗಿಸಲು ಬರುವುದಿಲ್ಲ. ಹೀಗಾಗಿ ಕಾಮಾಸಕ್ತಿಯ ನಿರೋಧರೂಪವಾದ ಬ್ರಹ್ಮಚರ್ಯವು ಯೋಗಕ್ಕೆ ಪೋಷಕವೆಂಬುದು ಸಾಮಾನ್ಯ ನಿಯಮ. ಆದರೆ ಈ ಸಾಮಾನ್ಯ ನಿಯಮಕ್ಕೆ ಅಪವಾದವೂ ಉಂಟು. ಸ್ವಸ್ತ್ರೀಯಲ್ಲಿ ಯಥೋಚಿತವಾದ ಸಂಗದಿಂದ ಉಂಟಾಗುವ ದೇಹೇಂದ್ರಿಯಗಳ ಪ್ರಸನ್ನತೆಯು ಆರೋಗ್ಯಕ್ಕೂ, ಯೋಗಕ್ಕೂ ಪೋಷಕವಾಗಬಲ್ಲದು ಮತ್ತು ತಂತ್ರಮಾರ್ಗದಲ್ಲಿ ಮೈಥುನಕ್ರಿಯೆಯಿಂದಲೇ ಯೋಗಸಾಧನೆ ಮಾಡುವ ಮಾರ್ಗವೂ ಉಂಟು. ಆದರೆ ಸಾಮಾನ್ಯವಾಗಿ, ಬ್ರಹ್ಮಚರ್ಯವು ಯೋಗಸಾಧನೆಗಾಗಿ ಅನುಸರಿಸಬೇಕಾದ ಯಮವಾಗಿದೆ.

ಎಲ್ಲ ಯಮಗಳ ಸಾಧನೆಯಲ್ಲಿಯೂ ಅವುಗಳ ಪರಾಕಾಷ್ಠೆಯನ್ನು ತಲುಪಿದಾಗ ಒಂದೊಂದು ಫಲವುಂಟು. ಅಹಿಂಸಾ ಸಿದ್ಧಿಯಿರುವವರ ಪ್ರಭಾವವಲಯದಲ್ಲಿ ಯಾರಿಗೂ ವೈರವನ್ನಿಟ್ಟುಕೊಳ್ಳಲಾಗುವುದಿಲ್ಲ. ಸತ್ಯದ ಸಿದ್ಧಿಯಿರುವವರು ನುಡಿದದ್ದೆಲ್ಲಾ ಸತ್ಯವಾಗಿ ಪರಿಣಮಿಸುತ್ತದೆ. ಬ್ರಹ್ಮಚರ್ಯ ಸಿದ್ಧಿಯಲ್ಲಿ ಎಲ್ಲ ಗುಣಗಳೂ ವೃದ್ಧಿ ಹೊಂದುವ ವೀರ್ಯಲಾಭವಾಗುತ್ತದೆ ಮತ್ತು ಅಸ್ತೇಯ ಸಿದ್ಧಿ ಹೊಂದಿದವನನ್ನು ಸರ್ವ ರತ್ನಗಳು ಬಂದು ಸೇರುತ್ತವೆ ಎಂದು ಪತಂಜಲಿಗಳ ಯೋಗ ಸೂತ್ರವು ಹೇಳುತ್ತದೆ.

ಸೂಚನೆ : 12/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .