Sunday, December 20, 2020

ಆರ್ಯಸಂಸ್ಕೃತಿ ದರ್ಶನ - 22 (Arya Samskruti Darshana - 22)

ಸತ್ಸಹವಾಸ 
ಲೇಖಕರು:ವಿದ್ವಾನ್|| ಶ್ರೀಛಾಯಾಪತಿಬೇಸಿಗೆಯ ತೀವ್ರವಾದ ಧಗೆ ತಾಪಕರ. ಅದೇ ಆಗ ಬೀಸುವ ಗಾಳಿಯ ಸಹವಾಸ ತಾಪಹರ. ಕೇಸರಿ, ಏಲಕ್ಕಿ, ಪುನುಗು ಮೊದಲಾದವುಗಳನ್ನೊಳಗೊಂಡ ಡಬ್ಬಿಗಳೂ ಪರಿಮಳ ಸೂಸುತ್ತವೆ. ಅದು ಅವುಗಳ ಸಹಜ ಪರಿಮಳವಲ್ಲ. ಪರಿಮಳದ್ರವ್ಯಗಳ ಸಹವಾಸದ ಫಲ. ಗೊಬ್ಬರದ ಗುಂಡಿಯ ಮೇಲೆ ಬೀಸುವ ಗಾಳಿ ಮೂಗು ಮುಚ್ಚಿಸುವಂತೆ ಇರುತ್ತದೆ. ಅದೇ ಮಲ್ಲಿಗೆಯ ತೋಟದ ಬಳಿ ಬೀಸುವ ಗಾಳಿ ಮೂಗರಳಿಸುತ್ತದೆ. ಯಾವುದರ ಸಹವಾಸ ಹಿತಕರ?  ಜೀವನದ ಬೆಳವಣಿಗೆಯಲ್ಲಿ ಈ ಸಹವಾಸದ ಪಾತ್ರ ಗಣನೀಯವಾದುದು. ಆದ್ದರಿಂದಲೇ ವಿಶ್ವದ ಎಲ್ಲ ದೇಶದ ಸಾಹಿತ್ಯಗಳಲ್ಲಿಯೂ ಒಂದಲ್ಲ ಒಂದು ಬಗೆಯಲ್ಲಿ ಸತ್ಸಸಹವಾಸ- [ಉತ್ತಮರ ಒಡನಾಟ] -ಮತ್ತು ಅದರ ಫಲಗಳ ಬಗ್ಗೆ ಉಲ್ಲೇಖ ದೊರಕುತ್ತದೆ.

ಸತ್ಪುರುಷರು ಎಂದರೆ ಯಾರು? ಅವರ ಲಕ್ಷಣಗಳೇನು? ಅವರ ಸಹವಾಸದಿಂದಾಗುವ ಅನುಕೂಲಗಳೇನು? ಎಂಬಂಶಗಳು ಇಲ್ಲಿ ಪರಿಶೀಲನಾರ್ಹವಾಗಿವೆ.
"ಸ್ವಾರ್ಥವನ್ನೂ ತೊರೆದು ಪರಾರ್ಥಕ್ಕಾಗಿ ದುಡಿಯುವವರು ಸತ್ಪುರುಷರು. ಮಾತು, ಮನಸ್ಸು, ಕ್ರಿಯೆಗಳಲ್ಲಿ ಏಕರೂಪತೆ ಸಜ್ಜನರಲ್ಲಿ ಕಂಡುಬರುತ್ತದೆ. ದುರಾಸೆಯನ್ನು ಕತ್ತರಿಸು, ಕ್ಷಮಯನ್ನಾಶ್ರಯಿಸು, ಗರ್ವವನ್ನು ಬಿಡು, ಪಾಪದಲ್ಲಿ ಪ್ರೀತಿಯನ್ನು ಮಾಡದಿರು, ಸತ್ಯವನ್ನು ಹೇಳು, ಸಾಧುಮಾರ್ಗವನ್ನು ಅನುಸರಿಸು, ವಿದ್ವಾಂಸರನ್ನು ಸೇವಿಸು, ಗೌರವಾರ್ಹರನ್ನು ಗೌರವಿಸು, ಶತ್ರುಗಳನ್ನೂ ಅನುನಯಿಸು, ತನ್ನ ಗುಣಗಳನ್ನು ಹೊಗಳಿಕೊಳ್ಳದಿರು, ಕೀರ್ತಿಯನ್ನು ಕಾಪಾಡು, ದೀನರಲ್ಲಿ ದಯೆತೋರು. ಇವು ಸಜ್ಜನರ ಲಕ್ಷಣಗಳು. ಧರ್ಮತತ್ಪರತೆ, ಮಧುರವಾಣಿ, ದಾನೋತ್ಸಾಹ, ವಂಚನೆಯಿಲ್ಲದಿರುವಿಕೆ, ವಿನಯ, ಗಂಭೀರವಾದ ಮನಸ್ಸು, ಶುಚಿಯಾದ ನಡವಳಿಕೆ, ಗುಣಾಸಕ್ತಿ, ಶಾಸ್ತ್ರ ಪರಿಣತಿ, ಸುರೂಪಸಂಪತ್ತು, ಹರಿಭಕ್ತಿ-ಇವು ಸಜ್ಜನರಲ್ಲಿ ಕಾಣುವ ಗುಣಗಳು." ಪರನಾರೀಸೋದರತ್ವ, ಪರಗುಣ ಪ್ರಶಂಸೆ, ಲೋಕಾಪವಾದ ಭೀತಿ, ಅಪಕಾರಿಗಳಲ್ಲಿಯೂ ಪ್ರೀತಿ, ಸರ್ವಭೂತಹಿತ, ಮೃದುತ್ವ, ಸತ್ಕಾರಪರತೆ, ಸಂಕಟದಲ್ಲಿ ದೃಢಚಿತ್ತತೆ, ಇವುಗಳು ಸಜ್ಜನರ ಗುಣಗಳು. ಹೀಗೆ ಸುಭಾಷಿತಗ್ರಂಥಗಳಲ್ಲಿ ಸತ್ಪುರುಷರ ಗುಣವರ್ಣನೆ ಬರುತ್ತದೆ.
.
ವಿದೇಶೀ ಸಾಹಿತ್ಯಗಳಲ್ಲಿಯೂ ಸಜ್ಜನರ ವರ್ಣನೆಗಳನ್ನೊಳಗೊಂಡ ಸಾಹಿತ್ಯಗಳಿವೆ. ಅವುಗಳಲ್ಲಿ ಎಲ್ಲರ ಮನ್ನಣೆಗೆ ಪಾತ್ರವಾದ, ಕಾರ್ಡಿನಲ್ ನ್ಯೂಮನ್,(Cardinal New man) ಎಂಬುವನು ಕೊಟ್ಟಿರುವ ಜೆಂಟಲ್ಮನ್ (Gentleman) ಶಬ್ದಾರ್ಥದ ವಿವರಣೆ ಅತಿ ಪ್ರಸಿದ್ಧವಾದುದು. ಅದು ಹೀಗಿದೆ-  "ನಿಜವಾಗಿ ದೊಡ್ಡ  ಮನುಷ್ಯನಾದವನು (ಜೆಂಟಲ್ಮಮನ್‌) ಯಾರ ಒಡನೆ ತಾನು ಬದುಕಬೇಕಾಗಿದೆಯೋ ಅವರ ಮನಸ್ಸಿಗೆ ವಿರಸ-ಕುಲುಕಾಟಗಳನ್ನುಂಟುಮಾಡಬಹುದಾದ ಸಂದರ್ಭಗಳನ್ನು ತಪ್ಪಿಸಲು ಎಚ್ಚರದಿಂದಿರುತ್ತಾನೆ. ಪ್ರತಿಯೊಬ್ಬರೂ ಸಮಾಧಾನದಿಂದ ಅವರವರ ಸ್ವಗೃಹದಲ್ಲಿ ಹೇಗೋ ಹಾಗೆ ಇರುವಂತೆ ಅನುಕೂಲಪಡಿಸಬೇಕೆಂಬುದೇ ಆತನ ಮುಖ್ಯ ಯೋಚನೆ. ಗೋಷ್ಠಿಯಲ್ಲಿ ಎಲ್ಲರ ಕಡೆಗೂ ಆತನ ಕಣ್ಣಿರುತ್ತದೆ. ನಾಚಿಕೆಯ ಸ್ವಭಾವದವರ ವಿಷಯದಲ್ಲಿ ಆತನು ಮೃದುವಾಗಿಯೂ, ಸಲಿಗೆಯಿಲ್ಲದೆ, ದೂರ ನಿಂತವರಲ್ಲಿ ನಯದಿಂದಲೂ, ಅವಿವೇಕಿಗಳಲ್ಲಿ ಮರುಕದಿಂದಲೂ ನಡೆದುಕೊಳ್ಳುತ್ತಾನೆ. ಮಾತುಕಥೆಯಲ್ಲಿ ತಾನು ಪ್ರಮುಖವಾಗಿ ಮುಂದೆ ಬರುವುದೂ, ಬೇಸರಪಡಿಸುವಂತೆ ಮಾತನಾಡುವುದು ಎಂದಿಗೂ ಇಲ್ಲ. ತನ್ನ ಉಪಕಾರವನ್ನು ಅಲ್ಪವಾಗಿ ಗಣಿಸುತ್ತಾನೆ. ತಾನೇ ಕೊಡುವವನಾದರೂ ಸ್ವೀಕರಿಸುವವನಂತೆ ನಡೆಯುತ್ತಾನೆ. ಒತ್ತಾಯವಿದ್ದ ಹೊರತು ತನ್ನ ವಿಷಯವನ್ನು ತಾನು ಹೇಳಿಕೊಳ್ಳುವುದಿಲ್ಲ. ವಾದದಲ್ಲಿ ತಾನೆಂದಿಗೂ ಪ್ರತ್ಯಾಕ್ಷೇಪಣೆಯಿಂದ ತನ್ನನ್ನುಸಮರ್ಥನೆ ಮಾಡಿಕೊಳ್ಳುವುದಿಲ್ಲ. ಚಾಡಿಮಾತು, ಗೊಡ್ಡುಹರಟೆಗಳಿಗೆ ಅವನು ಕಿವಿಕೊಡನು. ತನ್ನ ದಾರಿಗೆ ಅಡ್ಡ ಬಂದವರ ಬಗೆಗೆ ಹೇಗೆ ನಡೆದುಕೊಳ್ಳುತ್ತೇವೆಯೋ ಹಾಗೆ ನಡೆಯುವುದು ಜಾಣ್ಮೆಯೆಂಬುದು ಅವನ ದೂರದೃಷ್ಟಿಗೆ ಗೋಚರವಾಗುತ್ತದೆ. ಆತನ ಅಭಿಪ್ರಾಯ ಸರಿ ಅಥವಾ ತಪ್ಪಿದ್ದರೂ ಅವನ ವಿಚಾರವಿಶದತೆ ಅನ್ಯಾಯಕ್ಕೆಡೆಗೊಡದು. ಆತನು ಶಕ್ತ ಹಾಗೂ ಸರಳ, ನಿಷ್ಕರ್ಷೆಯುಳ್ಳವನು ಹೇಗೋ ಹಾಗೆ ಮಿತಿಯುಳ್ಳವನೂ ಹೌದು."

ಮೇಲಿನ ಮಾತು ಸತ್ಪುರುಷರ ಮತ್ತು ಅವರ ಒಡನಾಟ ಎರಡನ್ನೂ ಒಳಗೊಂಡಿದೆ. ಅಂತೆಯೇ ಸತ್ಪುರುಷರ ಸಹವಾಸದ ಬಗೆಗೂ ಸುಭಾಷಿತ ಗ್ರಂಥಗಳು ಬಹಳವಾಗಿ ಹೇಳುತ್ತವೆ. ಒಂದೆರಡು ಹೀಗೆ ಉಲ್ಲೇಖಿಸಬಹುದು. "ಸತ್ಸಂಗವು ಸ್ವರ್ಗವಾಸ. ಸತ್ಸಂಗತಿಯು ಬುದ್ಧಿಯಲ್ಲಿ ಜಡತೆಯನ್ನು ಕಳೆಯುತ್ತದೆ. ಮಾತಿನಲ್ಲಿ ಸತ್ಯವನ್ನು ಬೆರೆಸುತ್ತದೆ. ಹಿರಿಮೆಯನ್ನು ತರುತ್ತದೆ. ದುಷ್ಟತೆಯನ್ನು ದೂರೀಕರಿಸುತ್ತದೆ. ಮನಸ್ಸನ್ನು ಪ್ರಸನ್ನಗೊಳಿಸಿ ಎಲ್ಲೆಡೆಗಳಲ್ಲಿ ಕೀರ್ತಿಯನ್ನು ಹರಡುತ್ತದೆ. ಸತ್ಸಂಗತಿಯು ಏನನ್ನು ತಾನೇ ಮಾಡುವುದಿಲ್ಲ?" " ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ". "ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ". ಹೀಗೆ ಸತ್ಪುರುಷ ಸಹವಾಸದ ಮೇಲ್ಮೆಯನ್ನು, ಒಂದೊಂದು ಗುಣಗಳ ಹಿರಿಮೆಯನ್ನೂ ಕೊಂಡಾಡುವ ಅಸಂಖ್ಯಾತ ಕಥೆಗಳು ವಿಶ್ವದ ಎಲ್ಲೆಡೆಯಲ್ಲಿಯೂ ಹರಡಿವೆ.

ಮೇಲ್ಕಂಡ ಗುಣಗಳಲ್ಲಿ ಹಲವನ್ನೋ ಎಲ್ಲವನ್ನೋ ಒಳಗೊಂಡು, ಬಾಳುವ ಜನಗಳು ವಿಶ್ವದ ಎಲ್ಲ ದೇಶಗಳಲ್ಲಿಯೂ ಬಹುಸಂಖ್ಯೆಯಲ್ಲಿ ಅಲ್ಲದಿದ್ದರೂ, ವಿರಳವಾಗಿಯಾದರೂ ಕಂಡು ಬರುತ್ತಾರೆ. ಮುಗ್ಧವಾದ ಸಾಧುಸ್ವಭಾವದವನನ್ನು –ಹಸುವಿನಂತಹ ಸ್ವಭಾವದವನು-ಅವನಿಗೆ ಪಾಪ, ಒಂದು ಕೆನ್ನೆಗೆ ಹೊಡೆದರೆ ಅಳಲೂ ಬರುವುದಿಲ್ಲ ಎಂದು ಕೊಂಡಾಡುವ, ಮರುಗುವ ಪ್ರಸಂಗಗಳೂ ಉಂಟು. "ಯಾವ ಗಲಭೆಗೂ ಹೋಗದವನು, ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ಒಡ್ಡುವನು, ಮೂರಕ್ಕೆ ಬರುವುದಿಲ್ಲ, ಆರಕ್ಕೆ ಹೋಗುವುದಿಲ್ಲ." ಹೀಗೆ ಒಮ್ಮೆ ಪ್ರಶಂಸೆಯಂತೆ ತೋರುವ ಮತ್ತೊಮ್ಮೆ ವ್ಯಂಗ್ಯಭರಿತವಾಗಿ ಆಡುವ ಮಾತುಗಳನ್ನೂ ಕೇಳಿದ್ದೇವೆ.

ಬಾಳಿಗೂ ಪರಿಸರ ಒಳಿತನ್ನು ತರುವ ಉದಾತ್ತ ಗುಣಗಳನ್ನು ಬಹುವಾಗಿಯೋ, ಸಮಗ್ರವಾಗಿಯೋ, ಒಳಗೊಂಡ ಜನಗಳನ್ನು ಸತ್ಪುರುಷರು ಎಂದು ಕರೆಯುವುದು ವ್ಯವಹಾರದಲ್ಲಿ ಬಂದಿದೆ. ಆದರೆ ಈ ಎಲ್ಲ ಉದಾತ್ತ ಗುಣಗಳ ಜೊತೆಗೆ, ಈ ಎಲ್ಲ ಗುಣಗಳಿಗೂ ಕಾರಣವಾದ ಮೂಲಭೂತವಾದ ಅಂಶವನ್ನು, ಸತ್ಪುರುಷರಿಗೆ ಸಜ್ಜನಿಕೆಯನ್ನು ನೀಡಿದ ಅಂಶವನ್ನು ಭಾರತಾರ್ಯಮಹರ್ಷಿಗಳು ಗಮನಿಸಿದ್ದಾರೆ.

"ಅಸ್ತಿ  ಬ್ರಹ್ಮೇತಿ ಚೇದ್ವೇದ ಸಂತಮೇನಂ ತತೋ ವಿದುರಿತಿ". ಬ್ರಹ್ಮವಸ್ತುವು ಇದೆ, ಎಂಬುದನ್ನು ಅನುಭವದಿಂದ ಅರಿತವನಾದರೆ ಅವನನ್ನು ಸಂತನೆಂದು ತಿಳಿಯುತ್ತಾರೆ. ಜೀವನ ಮತ್ತು ವಿಶ್ವವಿಕಾಸಕ್ಕೆ ಕಾರಣವಾದ ಮೂಲವಸ್ತುವೇ ಬ್ರಹ್ಮ ವಸ್ತು. ಅದನ್ನು ಕಂಡು ಅನುಭವಿಸಿದ ಆವನು ಬ್ರಹ್ಮವಿದ.

"ಸತ್"  ಎಂಬ ಪದವು ಆ ಬ್ರಹ್ಮವಸ್ತುವಿಗೇ ನೇರವಾಗಿ ಅನ್ವಯಿಸುತ್ತದೆ.
"ಓಂ ತತ್, ಸತ್, ಇತಿ ನಿರ್ದೇಶಃ ಬ್ರಹ್ಮಣಃ, ತ್ರಿವಿಧಃ ಸ್ಮೃತಃ" –ಗೀತಾ.
ಓಂ, ತತ್, ಸತ್, ಎಂಬ ಮೂರು ಬ್ರಹ್ಮನಿಗೆ ಅನ್ವಯಿಸುವ ನಿರ್ದೆಶಗಳು.

" ಸದೇವ ಸೌಮ್ಯೇದಮಗ್ರ ಆಸೀತ್".  ಸೌಮ್ಯನೇ " ಸತ್"-  ವಸ್ತುವೇ ಎಲ್ಲಕ್ಕೂ ಮೊದಲಿದ್ದುದು. ಅದು ಇರುವುದು ಮಾತ್ರವಲ್ಲ, ಅದರ ಸಂಬಂಧದಿಂದಲೇ ಎಲ್ಲ ವಸ್ತುಗಳೂ ಇರುವನ್ನು ಪಡೆದವು. ಜೀವನದ ಮೂಲವಾದ ಪರಂಜ್ಯೋತಿಯೇ ಆ ಸದ್ವಸ್ತು. ಆದ್ದರಿಂದಲೇ " ಪ್ರಥಮಸುಜನಾಯ ಪುಂಸೇ"   "ಮೊದಲನೆಯ ಸುಜನನಾದ ಪುರುಷನಿಗೆ ನಮಸ್ಕಾರ."- ಎಂದು ಭಗವಂತನನ್ನು ಕೊಂಡಾಡಿರುವುದು ಅನ್ವರ್ಥಕವಾಗಿದೆ. ಆ ಸದ್ವಸ್ತುವಿನೊಂದಿಗೆ ಯಾವಾಗಲೂ ಇರುವುದೇ ಮೂಲಾರ್ಥದಲ್ಲಿ ಸತ್ಸಹವಾಸ. ಸತ್ಸಂಗತಿ. ಒಳಗೆ ಬೆಳಗುವ ಆ ಸದ್ವಸ್ತುವನ್ನು ಕಂಡು ಅನುಭವಿಸಿ ಅದರ ನೆಮ್ಮದಿ ಸೌಖ್ಯಗಳನ್ನು ಪಡೆದವರೇ ಸತ್ಪುರುಷರು.

ಜೀವನಕ್ಕೆ ಅಗತ್ಯವಾದ ಎಲ್ಲ ಉದಾತ್ತ ಗುಣಗಳೂ ಬಾಳನ್ನು ಬೆಳಗಿಸುವ ಆ ಸದ್ವಸ್ತುವಿನಿಂದಲೇ  ಅರಳುವುವು. ಆದ್ದರಿಂದಲೇ ಅವು ಸದ್ಗುಣಗಳು. ಸದ್ವಸ್ತುವಿನ ಅರಿವಿಗೆ ಸಹಾಯಕವಾಗುವ ನಡುವಳಿಕೆಗಳೂ ಸದ್ಗುಣಗಳೇ. ಆದ್ದರಿಂದಲೇ ಋಷಿಕವಿಗಳಾದ  ವ್ಯಾಸ—ವಾಲ್ಮೀಕಿಗಳು  ಚಿತ್ರಿಸಿರುವ ರಾಮ, ಕೃಷ್ಣ, ಭೀಷ್ಮ ಮೊದಲಾದವರು ಮಹಾಪುರುಷರು. ಆ ಸದ್ವಸ್ತುವನ್ನು ಅರಿತ ಆತ್ಮಗುಣಭರಿತರಾದ ಮಹಾಪುರುಷರು, ಲೌಕಿಕವಾಗಿ ಕಂಡುಬರುವ ಒಳ್ಳೆಯ ಗುಣಗಳೂ ಆ ಸದ್ಗುಣಗಳ  ಏಕದೇಶಗಳೇ. ಒಳ್ಳೆಯ ಎಂಬ ಪದವೇ "ಉಳ್" - ಎಂಬ ಪದದ ರೂಪಾಂತರ. "ಉಳ್"-  ಎಂಬ ಪದವು ಸತ್ ಎಂಬ ಪದದ ಭಾಷಾಂತರವಷ್ಟೇ. ಆದ್ದರಿಂದ ಒಳ್ಳೆಯದು ಎಂಬುದು ಸತ್ಸಂಬಂಧವನ್ನೇ ಹೇಳುತ್ತದೆ. ಶಾಂತಿ, ಸೌಖ್ಯ, ನೆಮ್ಮದಿಗಳಿಂದ ತನ್ನ ಬಾಳನ್ನೂ ತುಂಬಿಕೊಂಡು ಲೋಕವನ್ನೂ ಅಂತೆ ಬಾಳಿಸಲು ಬೇಕಾದ ಉದಾತ್ತ ಗುಣಗಳು ಅ ಸತ್ ವಸ್ತುವಿನ ಸಂಬಂಧದಿಂದ ತಾವಾಗಿಯೇ ಮೊಳೆಯುತ್ತವೆ. ಒಳಗೆ ಬೆಳಗುವ ಸೂರ್ಯದೀಪ್ತಿ, ಚಂದ್ರಿಕಾಕಾಂತಿ ತಂಪುಗಳಿಂದಕೂಡಿದ, ದೀಪರೂಪವಾದ ಸದ್ವಸ್ತುವನ್ನು ಅರಿತು, ಅದರ ಪ್ರಕಾಶದಿಂದ ತಮ್ಮ ಒಳಗತ್ತಲೆಯನ್ನು ಕಳೆದುಕೊಂಡು, ಸ್ವಯಂ ದೀಪರೂಪರಾಗಿ ಬೆಳಗುವವರು ಸತ್ಪುರುಷರು. ಅವರ ಸಹವಾಸವು ಇತರರ ಒಳೆಗತ್ತಲೆಯನ್ನೂ ಕಳೆದು, ದೀಪದಿಂದ ದೀಪ ಬೆಳಗುವಂತೆ ಇತರರನ್ನೂ  ಪ್ರಕಾಶರೂಪರನ್ನಾಗಿ ಮಾಡುತ್ತದೆ.

ತಂಗಾಳಿಯು ಹೊರಬೇಗೆಯನ್ನು ಕಳೆದು ತಂಪು ನೀಡುತ್ತದೆ. ಲೌಕಿಕ ಗುಣಗಳು ಮನಃಪ್ರೀತಿಕರವಾಗಿರುತ್ತವೆ. ಆದರೆ ಜ್ಞಾನಿಗಳು ಹೇಳುವ ಸತ್ಸಹವಾಸವು ಆತ್ಮಸೌಖ್ಯವನ್ನೆರೆದು ಜೀವನದ ಎಲ್ಲಬಗೆಯ ತಾಪವನ್ನೂ ಕಳೆಯುತ್ತದೆ. ಹೊರಗೆ ಒಳಗೆ ಎಲ್ಲೆಲ್ಲಿಯೂ ತಂಪನ್ನು ನೀಡುವ ಗುಣ ಸದ್ವಸ್ತುವಿನ ಸಹವಾಸದ್ದು. ಅದನ್ನು ಪಡೆದ ಸತ್ಪುರುಷರ ಸಹವಾಸದ ಫಲವೂ ಅದೇ.

  " ಮೂರಕ್ಕೆ ಬರುವುದಿಲ್ಲ, ಆರಕ್ಕೆ ಹೋಗುವುದಿಲ್ಲ"-  ಎಂಬ ಸಜ್ಜನರನ್ನು ಕುರಿತ ಮಾತು ಯಾವತಂಟೆಗೂ ಬರದ ಮುಗ್ಧಸ್ವಭಾವದವನು ಎಂಬ ಸಾಮಾನ್ಯಾರ್ಥಕ್ಕಿಂತಲೂ ವಿಶೇಷವಾದ ಒಂದು ಅರ್ಥವನ್ನು ಒಳಗೊಂಡಿದೆ. ಇಲ್ಲಿ ಮೂರು ಎಂದರೆ ಸತ್ವ- ರಜಸ್-ತಮಸ್ ಎಂಬ ಮೂರು ಗುಣಗಳು ಎಂದರ್ಥ. ಆರು ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು. ತ್ರಿಗುಣಗಳನ್ನು ಮೀರಿ ಬೆಳಗುವ ಸದ್ವಸ್ತುವಿನಲ್ಲಿಯೇ ರಮಿಸುವ ಸತ್ಪುರುಷನು " ಮೂರಕ್ಕೆ ಬರುವುದಿಲ್ಲ" ಎಂದರೆ ತ್ರಿಗುಣಗಳಿಂದಾಗುವ ವಿಕಾರಕ್ಕೆ ಒಳಗಾಗುವುದಿಲ್ಲ. ಮತ್ತೆ ತ್ರಿಗುಣಗಳಿಂದ ಬೆಳೆಯುವ ಸೃಷ್ಟಿಗೂ ಒಳಗಾಗುವುದಿಲ್ಲ-ಎಂದರ್ಥ. "ಆರಕ್ಕೆ ಹೋಗುವುದಿಲ್ಲ" ಎಂದರೆ ಒಳಶತ್ರುಗಳಾದ ಕಾಮಕ್ರೋಧಾದಿಗಳಿಗೆ ಗುರಿಯಾಗುವುದಿಲ್ಲ. ಅವುಗಳ ತಂಟೆಗೆ ಹೋಗುವುದಿಲ್ಲವೆಂದರ್ಥ. ಅರಿಪಡ್ವರ್ಗಗಳನ್ನು ಗೆದ್ದು ತ್ರಿಗುಣಗಳನ್ನೂ ಮೀರಿರುವ, ಸದ್ವಸ್ತುವಿನಲ್ಲಿ ಒಂದಾಗಿರುವ ಸ್ವಭಾವ ಸತ್ಪುರುಷರದು ಎಂಬ ಅರ್ಥವನ್ನು ಈ ಮಾತು ಒಳಗೊಂಡಿದೆ.

ಜ್ಞಾನಿಗಳ ಒಳದೃಷ್ಟಿಗೆ ಗೋಚರವಾದ ಸದ್ವಸ್ತುವನ್ನು ಕಂಡು ಅನುಭವಿಸಿ, ಸ್ವಯಂ ಸತ್ಪುರುಷರಾಗಿ, ಲೋಕಕ್ಕೆ ಮಂಗಳವನ್ನುಂಟುಮಾಡುವ ಶಂಕರ ಎಂಬ ಅನ್ವರ್ಥವಾದ ಅಭಿಧಾನವುಳ್ಳ ಶಂಕರಭಗವತ್ಪಾದರು ತಮ್ಮ ಭಜಗೋವಿಂದ ಸ್ತೋತ್ರದಲ್ಲಿ ಸತ್ಸಹವಾಸದ ಫಲವನ್ನು ಹೀಗೆ ಹೇಳುತ್ತಾರೆ.
"ಶ್ರೀಜಗತಿ  ಸಜ್ಜನ ಸಂಗತಿರೇಕಾ ಭವತಿ ಭವಾರ್ಣವ ತರಣೇ  ನೌಕಾ °
"ಮೂರು ಲೋಕದಲ್ಲಿಯೂ ಸಜ್ಜನರ ಸಹವಾಸವೊಂದು ತಾನೇ, ಹುಟ್ಟು-ಸಾವುಗಳ ನಿರಂತರ ಪ್ರವಾಹಭರಿತವಾದ ಭವಸಮುದ್ರವನ್ನು ದಾಟಿಸುವ ಹಡಗಾದೀತು " ಈ ಮಾತು ಕೇವಲ ಲೌಕಿಕ ಗುಣಭೂಷಿತರಿಗೆ ಸಲ್ಲದು." ತಮಸಃ ಪರಮರ್ಕವರ್ಣಂ" ಎಂಬಂತೆ ತಮಸ್ಸಿನ ಆಚೆಗೆ ಬೆಳಗುವ ಆದಿತ್ಯದೀಪ್ತಿಯುಳ್ಳ ಜ್ಯೋತಿಯನ್ನುಕಂಡುಂಡ, ಆದ್ದರಿಂದಲೇ ಜೀವನದ ದಡಗಂಡ ಅನುಭವಿಗಳಾದ ಸತ್ಪುರುಷರಿಗೆ ಸಲ್ಲುವ ಮಾತಿದು. ಅವರೇ ಭವಾರ್ಣವವನ್ನು ದಾಟಿದವರು. ಹಾಗೆ ದಾಟಿದವರು ತಾನೇ ಮತ್ತೊಬ್ಬರನ್ನು ದಾಟಿಸಬಲ್ಲವರು. ತಾನೇ ದಾಟಲಾರದವನು ಮತ್ತೊಬ್ಬರನ್ನು ಹೇಗೆ ದಾಟಿಸಿಯಾನು?  ಆದ್ದರಿಂದ ಜೀವನ ಪ್ರವಾಹದ ದಡಮುಟ್ಟಿ, ನೆಮ್ಮದಿ ತುಂಬಿ ಬಾಳಲು ಸಜ್ಜನರ ಸಹವಾಸವೊಂದೇ ಸೂಕ್ತವಾದ ನೌಕೆ.
ಸಜ್ಜನ ಸಂಗತಿಯು ಹೇಗೆ ಭವಾರ್ಣವವನ್ನು ದಾಟಿಸುತ್ತದೆ- ಎಂಬ ಅಂಶವನ್ನೂ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಂ|
ನಿರ್ಮೋಹತ್ವೇ ನಿಶ್ಚಲತತ್ವಂ, ನಿಶ್ಚಲತತ್ವೇ ಜೀವನ್ಮುಕ್ತಿಃ||

ಸಂತರ ಸಂಗವು, ನಿಸ್ಸಂಗತ್ವವನ್ನುಂಟುಮಾಡುತ್ತದೆ. ನಿಸ್ಸಂಗಭಾವವು ಮೋಹವನ್ನು ಕಳೆಯುತ್ತದೆ. ಮೋಹಕಳೆದರೆ ನಿಶ್ಚಲವಾದ ತತ್ತ್ವಲಾಭವಾಗುತ್ತದೆ. ನಿಶ್ಚಲತತ್ತ್ವದ ಲಾಭವಾದರೆ ಜೀವನದ ಕಟ್ಟು ಕಳೆದು ಮುಕ್ತಿ ದೊರಕುತ್ತದೆ. ಮುಖ್ಯಾರ್ಥದಲ್ಲಿ ಸದ್ವಸ್ತುವಿನ ಸಂಗವೇ ಸತ್ಸಂಗ. ಅಂತೆಯೇ ನೇರವಾಗಿಯೇ ಆ ಸದ್ವಸ್ತುವಿನ ಸಂಗವನ್ನು ಪಡೆದ ಮಹಾತ್ಮರೂ ಸದ್ರೂಪರೇ ಆಗಿರುವುದರಿಂದ ಅವರ ಸಹವಾಸವೂ ಸತ್ಸಂಗವೇ. ಅಂತಹ ಸ್ವಭಾವವುಳ್ಳ ಸತ್ಪುರುಷರು ತಮ್ಮೊಳಗೆ ಬೆಳಗುವ ಸದ್ವಸ್ತುವಿನಲ್ಲಿ ಜೊತೆಗೂಡಿ, ಲೌಕಿಕ ವಸ್ತುಗಳಿಗೆ ಅಂಟರು. ನೀರಿನೊಳೆಗಿದ್ದರೂ ಕಮಲದೆಲೆಯು ನೀರನ್ನು ಅಂಟಿಸಿಕೊಳ್ಳದಂತೆ, ಲೋಕದೊಳಗಿದ್ದರೂ ಲೋಕವು ಅವರನ್ನು ಅಂಟದು., ಈ ಸತ್ಪುರುಪರ ಸಹವಾಸವು ಇತರರಿಗೂ ಲೌಕಿಕವಸ್ತುಗಳೇ ಜೀವನದ ಸಾರಸರ್ವಸ್ವವೆಲ್ಲವೆಂದೂ ಅದಕ್ಕಿಂತಲೂ ಮಿಗಿಲಾದುದುಂಟೆಂಬ ಅರಿವನ್ನು ಮೂಡಿಸಿ, ಲೋಕಾಸಕ್ತಿಯನ್ನು ಕ್ರಮವಾಗಿ ತಗ್ಗಿಸುವುದು. ಹೀಗೆ ಕ್ರಮವಾಗಿ ಸತ್ಸಹವಾಸದಿಂದ  ನಿಸ್ಸಂಗಭಾವವು ಮೊಳೆಯುವುದು. ಇದು ಮೊದಲನೆಯ ಹೆಜ್ಜೆ. ನಿಸ್ಸಂಗಭಾವವು ಮೂಡಿದಾಗ ಲೋಕವಸ್ತುಗಳ ಗುಣದೋಷಗಳೆರಡರ ಅರಿವೂ ಮೂಡಿ, ಅದರ ಸೆಳೆತ ತಗ್ಗುವುದು. ಆಗ ಚಪಲತೆ, ಚಾಂಚಲ್ಯಗಳು ಇಲ್ಲವಾಗುವುವು. ಅದೇ ನಿರ್ಮೋಹತ್ವ. ಮನಸ್ಸನ್ನು ಒಳಗೆ ಹರಿಸಿದೆಂತೆಲ್ಲಾ ಹೊರ ಸೆಳೆತ ತಪ್ಪುವುದು. ಇದು ಎರಡನೆಯ ಹಂತ.ಈ ಸೆಳೆತವಿಲ್ಲದಿದ್ದಾಗ, ಚಿತ್ತವೃತ್ತಿ ನಿರೋಧಿಸಲ್ಪಟ್ಟಾಗ, ಒಳಯೋಗವೇರ್ಪಡುವುದು. ಮನಸ್ಸಿನ ಹರಿವೆಗೆ ತಡೆಬಿದ್ದಾಗ ಚಂಚಲತೆ ಕಳೆದು ಸ್ಥಿರಚಿತ್ತತೆಯುಂಟಾಗುವುದು. ಹೀಗೆ ಸಮಚಿತ್ತತೆ, ಒಳಯೋಗಗಳೇರ್ಪಟ್ಟಾಗ, ಅಚಲವಾದ ತತ್ತ್ವವು ಗೋಚರಿಸುವುದು. ಈ ತತ್ತ್ವವು ಹಿಂದೆ ಹೇಳಿದ  "ಸತ್"  ವಸ್ತುವೇ. ಅದರೊಡನೆ ಬೆರೆತಾಗ " ನಿವಾತದೀಪಾ ಇವ ನಿಶ್ಚಲಾಂಗಾಃ"-ಎಂಬಂತೆ ನಿಶ್ಚಲಭಾವವೇರ್ಪಡುವುದು. ಹಾಗೆ ಏರ್ಪಟ್ಟಾಗ ತತ್ತ್ವದರ್ಶಿಗಳಾಗುವರು. ಆ ನಿಶ್ಚಲತತ್ತ್ವದರ್ಶನವು ಜೀವಕ್ಕೆ ಶಾಂತಿ ಸಮೃದ್ಧವಾದ ಅಮೃತವನ್ನು ನೀಡಿ, ಮುಕ್ತಿದಾಯಕವಾಗುವುದು. ಅದರಿಂದಲೇ ಜೀವದ ಕಟ್ಟು ಕಳಚುವುದು. ಅದೇ ಜೀವನ್ಮುಕ್ತಿ. ಜೀವನದ ಮಿಗಿಲಾದ ಶ್ರೇಯಸ್ಸು, ಇದೇ ಸತ್ಸಹವಾಸದ ಫಲ. ಒಳಗಿನ ಸತ್ಸಂಬಂಧಪಡೆದ ಸಜ್ಜನರ ಸಹವಾಸವು. ಆ ಸತ್ಸಂಗದಲ್ಲಿಯೇ ಇತರರನ್ನೂ ನಿಲ್ಲಿಸುವ ಹಿರಿಮೆಯುಳ್ಳದ್ದು.
"ಸತ್" ರೂಪವಾದ ವಸ್ತುವನ್ನು ತಾನೂ ಕಂಡು, ಅದರಿಂದ ಅರಳಿದ ಸದ್ಗುಣಗಳಿಂದ ಭರಿತನಾಗಿ, ಸತ್ಸಹವಾಸದ ಸವಿ ನೀಡಿದ ಶ್ರೀರಂಗಮಹಾಗುರುವಿತ್ತ ಸ್ಫೂರ್ತಿಯೇ ಈ ಬರಹದ ತಿರುಳು. ಸದ್ವಸ್ತುವನ್ನು ಕಂಡು ಲೋಕಕ್ಕೆ ಅದರ ಸವಿಯುಣಿಸಲು ತಮ್ಮ ಬಾಳನ್ನು ಸವೆಸಿದ ಶ್ರೀಶಂಕರಭಗವತ್ಪಾದರ ಜಯಂತೀ ಮಹೋತ್ಸವದ ಸಂದರ್ಭವಿದು. ಸತ್ಯದ ಉತ್ಕರ್ಷವೇ ಜಯ. ಅದರ ನೆನಪೇ ಪುಣ್ಯ. ಅಂತಹ ಜಯವನ್ನು ಸಾರಿ, ಪುಣ್ಯವನ್ನು ಬೀರುವ ಮಹಾಪರ್ವವೇ ಜಯಂತೀ.  ಲೋಕ ಶಂಕರರಾದ, ಶ್ರೀಶಂಕರಭಗವತ್ಪಾದರ ಜಯಂತೀಮಹೋತ್ಸವದ ಸವಿಗಾಣಿಕೆಯಾಗಿ ಈ ಕಿರುಬರಹವನ್ನು, ಹೃದಯಾಂಗಣದಲ್ಲಿ ಬೆಳಗುವ ಜ್ಞಾನಜ್ಯೋತಿಗೆ, ಸದ್ವಸ್ತುವಿಗೆ ಅರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಮೇ 1981 ಸಂಪುಟ :3 ಸಂಚಿಕೆ:7 ರಲ್ಲಿ ಪ್ರಕಟವಾಗಿದೆ.