Thursday, December 24, 2020

ಶ್ರೀಶಂಕರರಮಂಗಳ - ಶಂ ಕಾರ್ಯ (Srishankararamangala-Sha Skarya)

ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು 
(ಪ್ರತಿಕ್ರಿಯಿಸಿರಿ lekhana@ayvm.in)



ಅವತಾರದಿಂದ ಅಧರ್ಮ ಅಡಗಿತು
ಲೋಕದಲ್ಲಿ ಯಾವಾಗ ಅಧರ್ಮವು ವಿಪರೀತವಾಗಿ, ಧರ್ಮಗ್ಲಾನಿ ಉಂಟಾಗುವುದೋ ಆಗ ಭಗವಂತನು ಅವತರಿಸುತ್ತಾನೆ. ಅಂದು ಶ್ರೀಶಂಕರಾಚಾರ್ಯರ ಅವತಾರವೂ ಹೀಗೇ ಆದುದು. ಸನಾತನಧರ್ಮವನ್ನು ಧಿಕ್ಕರಿಸುವುದರಲ್ಲಿ ಬುದ್ದಿವಂತರೆಂದೆನಿಸಿಕೊಂಡವರು ಮುಖ್ಯ ಪಾತ್ರವನ್ನು ವಹಿಸಿ ಅಧರ್ಮಕ್ಕೆ ನಾಂದಿ ಹಾಡಿದ್ದರು. ಇವರನ್ನು ಮೊದಲು ಧರ್ಮಮಾರ್ಗಕ್ಕೆ ತರಬೇಕಾಗಿತ್ತು. ಇಡೀ ಭಾರತವನ್ನು ಅನೇಕ ಬಾರಿ ಸಂಚರಿಸಿ, ಶ್ರೀಶಂಕರರು ವೈದಿಕಮತವನ್ನು ಪುನಃ ಪ್ರತಿಷ್ಠಾಪಿಸಿದರು. ಯಾವ ಮೇಧಾವಿಗಳು ಸನಾತನ ಧರ್ಮವನ್ನು ಅವಹೇಳನ ಮಾಡುತ್ತಿದ್ದರೋ ಅಂತಹ ಪಂಡಿತರನ್ನೇ ಯುಕ್ತಿಯಿಂದ, ಪ್ರತಿಭೆಯಿಂದ ವಾದ ಮಾಡಿ, ಶಿಷ್ಯರನ್ನಾಗಿ ಸ್ವೀಕರಿಸಿ, ಸನಾತನಧರ್ಮದ ಪ್ರಚಾರಕರನ್ನಾಗಿ ಮಾಡಿಕೊಂಡರು. ಇದು ವೈದಿಕ ಧರ್ಮಕ್ಕೆ ಹೆಚ್ಚು ಬಲವನ್ನು ಕೊಡುವಂತಿತ್ತು. ಪಂಡಿತರು ಸನ್ಮಾರ್ಗಕ್ಕೆ ಬರುವಂತಾಗಿತ್ತು. ಕೇವಲ ಪಂಡಿತರನ್ನು ಮಾತ್ರವಲ್ಲದೇ ಪಾಮರರನ್ನೂ ಸನ್ಮಾರ್ಗಕ್ಕೆ ತರುವ ಮಹತ್ಕಾರ್ಯ ಅವತಾರದ ಇನ್ನೊಂದು ಮುಖ್ಯಧ್ಯೇಯ. ಇದಕ್ಕೆ ಶಂಕರರು ದಿವ್ಯಶಕ್ತಿಯನ್ನು ಬಳಸಿಕೊಂಡರು. ಹೀಗೆ ಪ್ರತಿಭೆ ಮತ್ತು ದಿವ್ಯತೆಯೆಂಬ ಎರಡು ಅಸ್ತ್ರಗಳಿಂದ ಅಧರ್ಮವನ್ನು ಅಡಗಿಸಿ ಧರ್ಮವು ಪ್ರಕಾಶವಾಗುವಂತೆ ಮಾಡಿದರು.

ಶಂಕರರಶ್ರೀಕಾರ್ಯ
ಪ್ರಾಜ್ಞ ಮತ್ತು ಅಜ್ಞರಿಂದ ಕೂಡಿದ ಲೋಕವನ್ನು ಸನ್ಮಾರ್ಗಕ್ಕೆ ತರಲು ಶ್ರೀಶಂಕರರು ಬಳಸಿದ ಉಪಾಯ ಎರಡು. ಅವು ಭಾಷ್ಯ ಮತ್ತು ಸ್ತೋತ್ರಸಾಹಿತ್ಯಗಳು. ಬ್ರಹ್ಮಸೂತ್ರ, ಉಪನಿಷತ್ತು ಮತ್ತು ಭಗವದ್ಗೀತೆ ಇವುಗಳಿಗೆ ಪಾಂಡಿತ್ಯಪೂರ್ಣವೂ ಮತ್ತು ವೇದಪ್ರಾಮಾಣ್ಯದಿಂದಲೂ ಕೂಡಿದ ಭಾಷ್ಯವನ್ನು ಬರೆದರು. ಇದರಿಂದ ಪಂಡಿತರು ಸನ್ಮಾರ್ಗಕ್ಕೆ ಬರಲು ಸಹಾಯವಾಯಿತು. ಯುಕ್ತಿ ಮತ್ತು ಗ್ರಂಥವನ್ನು ಮಾತ್ರ ಪ್ರಮಾಣವಾಗಿ ಸ್ವೀಕರಿಸಬಲ್ಲ ವಿದ್ವಾಂಸರಿಗೆ ಇದು ಅತ್ಯಾಕರ್ಷಕವೆನಿಸಿತ್ತು. ಇಲ್ಲಿ 'ಬ್ರಹ್ಮಸತ್ಯಂಜಗನ್ಮಿಥ್ಯಾಜೀವೋಬ್ರಹ್ಮೈವನಾಪರಃ"- ಪರಬ್ರಹ್ಮವೆಂಬ ವಿಷಯಮಾತ್ರಸತ್ಯ. ನಮಗೆ ಕಾಣುವ ಈ ಪ್ರಪಂಚವು ಬ್ರಹ್ಮದ ದೃಷ್ಟಿಯಿಂದ ಸತ್ಯವಲ್ಲ. ಮತ್ತು ಜೀವನಿಗೂ ದೇವನಿಗೂ ಭೇದವಿಲ್ಲ. ಎರಡೂ ಒಂದೇ, ಮೋಕ್ಷವು ಜ್ಞಾನದಿಂದ ಮಾತ್ರ ಸಾಧ್ಯ. ಕರ್ಮವೆಲ್ಲವೂ ಚಿತ್ತಶುದ್ದಿಗಾಗಿ ಎಂಬ 'ಅದ್ವೈತ' ಸಿದ್ಧಾಂತವನ್ನು ಪ್ರತಿಪಾದಿಸಿದರು.

ಪಾಮರರಮಾರ್ಗ
ಪಾಮರರಿಗೆ ನಿರಾಕಾರದ ಉಪಾಸನೆ ಎಟುಕದು. ಅವರಿಗೆ ಸಾಕಾರದ ಉಪಾಸನೆಯಿಂದ ಮಾತ್ರ ಮೋಕ್ಷ ಸಿದ್ಧಿಸುವುದು ಎಂದರಿತ ಶ್ರೀಶಂಕರರು, ಮತಿಗೆ ನಿಲುಕುವ ದೇವತಾಮೂರ್ತಿಗಳನ್ನು ಕೊಟ್ಟು "ಷಣ್ಮತಸ್ಥಾಪನಾಚಾರ್ಯರು" ಎಂದೇ ಪ್ರಸಿದ್ಧರಾದರು. ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣು-ಸ್ಕಂದ ಆರು ದೇವತೆಗಳನ್ನು ವಿಶೇಷವಾಗಿ ಪರಿಭಾವಿಸಿ ಅವುಗಳಿಗೆ ಸಂಬಂಧಿಸಿದಂತೆ ಪೂಜಾಪದ್ಧತಿಯನ್ನೂ ಮತ್ತು ಸ್ತೋತ್ರಗಳನ್ನು ಅನುಗ್ರಹಿಸಿದರು. ಈ ದೇವತೆಗಳಿಗೆ ಸಂಬಂಧಿಸಿದ ಸುಮಾರು ೨೪೦ಕ್ಕಿಂತಲೂ ಹೆಚ್ಚುಸ್ತೋತ್ರಗಳನ್ನು ರಚಿಸಿದರು. ಇವುಗಳಲ್ಲಿ ಸುಮಾರು ೩೮ಕ್ಕಿಂತಲೂ ಹೆಚ್ಚು ಅಷ್ಟಕಗಳು ಇವೆ. ಇವು ಭಗವಂತನನ್ನು, ವಿವಿಧ ರೂಪಗಳಿಂದಲೂ ಮತ್ತು ಭಗವಂತನ ಕಾರ್ಯವಿಶೇಷತೆಗಳಿಂದಲೂ ಆರಾಧಿಸಲು ಸಹಕಾರಿಗಳಾದವು. ಇದು ಅಲ್ಪಜ್ಞರಾದ ಪಾಮರರನ್ನು ಆಕರ್ಷಿಸಿತು. ಈ ದೃಷ್ಟಿಯಿಂದಲೇ ಶ್ರೀಶಂಕರರು ಲೋಕದಲ್ಲಿ ಎಲ್ಲಾ ಬಗೆಯ ಜನರಿಗೂ ಪ್ರೀತಿಪಾತ್ರರಾದರು. ಹೀಗೆ, ಲೋಕವು ಆಸ್ತಿಕವಾಗಿ, "ಹದಿನೆಂಟು ವರ್ಷವಾದರೆ ಹೇಗೆ ಮತ ಚಲಾಯಿಸುವ ಹಕ್ಕುಬರುತ್ತದೆಯೋ ಅಂತೆಯೇ ಮನುಷ್ಯನಾದ್ದರಿಂದಲೇ ಭಗವಂತನನ್ನು ಕಾಣುವ ಹಕ್ಕು ಬರುತ್ತದೇಪ್ಪ" ಎಂದು ಶ್ರೀರಂಗಮಹಾಗುರುಗಳು ಹೇಳುವಂತೆ ಭಗವಂತನ ದರ್ಶನವನ್ನು ಪಡೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬುದು ಶಂಕರಾವತಾರದಲ್ಲಿ ಎಲ್ಲರಿಗೂ ಮನವರಿಕೆಯಾಯಿತೆಂಬುದು ಇಲ್ಲಿ ಸ್ಮರಣೀಯ.

ಸೂಚನೆ: 24/12/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.