Sunday, December 13, 2020

ಆರ್ಯಸಂಸ್ಕೃತಿ ದರ್ಶನ - 21 (Arya Samskruti Darshana - 21)

 ಊರ್ಧ್ವಪುಂಡ್ರ

 ಲೇಖಕರು:  ಡಾII ಶ್ರೀ ಎಸ್.ವಿ. ಚಾಮು


   
ಬಹಳ ಹಿಂದಿನಿಂದ ಹಣೆಯಲ್ಲಿ ಲಾಂಛನ (ಚಿಹ್ನ)ವನ್ನುಧರಿಸುವುದು ಭಾರತೀಯರ ಸಂಪ್ರದಾಯ. ಈಗ ಒಂದೆರಡು ಪೀಳಿಗೆಗಳ ಹಿಂದಿನವರೆಗೆ ಈ ಧಾರ್ಮಿಕ ಪದ್ಧತಿಯನ್ನು ದೇಶದಲ್ಲಿ ಉಚ್ಚವರ್ಗಗಳಿಗೆ ಸೇರಿದವರೆಲ್ಲರೂ ತಪ್ಪದೆ ಅನುಸರಿಸುತ್ತಿದ್ದರು. ಪಾಶ್ಚಾತ್ಯ ನಾಗರಿಕತೆಯ ಪ್ರಭಾವದಿಂದ ಹೇಗೆ ಉಡಿಗೆ ತೊಡಿಗೆಗಳಲ್ಲಿ ವ್ಯತ್ಯಾಸವಾಗಿದೆಯೋ ಹಾಗೆಯೇ ಲಾಂಛನವನ್ನು ಧರಿಸುವ ವಿಷಯದಲ್ಲಿಯೂ ಬದಲಾವಣೆಯಾಗಿರುತ್ತದೆ.  ಅವರವರ ಮತಗಳಿಗೆ ಅನುಸಾರವಾಗಿ ಲಾಂಛನಗಳನ್ನು ಧರಿಸುವವರು ಇಂದೂ ಇದ್ದರೂ ಅವರ ಸಂಖ್ಯೆ ಬಹಳ ವಿರಳವಾಗಿರುತ್ತದೆ.

ಸಂಸ್ಕೃತಿಯ ದೃಷ್ಟಿಯಿಂದ ಇದು ವಿಷಾದಕರವಾದ ವಿಷಯ. ಏಕೆಂದರೆ ಆಧುನಿಕರು ಯೋಚಿಸುವಂತೆ  ಲಾಂಛನವನ್ನು ಧರಿಸುವುದು ಅರ್ಥವಿಲ್ಲದ ಆಚರಣೆಯಲ್ಲ.  ಲಾಂಛನವನ್ನು ಧರಿಸುವುದು ಎಷ್ಟು ಹಳೆಯ ಪದ್ಧತಿ ಎಂಬುದು ನಮಗೆ ತಿಳಿಯದು. ವೇದ ಮತ್ತು ಪುರಾತನವಾದ ಉಪನಿಷತ್ತುಗಳಲ್ಲಿ ಎಲ್ಲಿಯೂ ಲಾಂಛನಗಳ ಉಲ್ಲೇಖವು ಕಂಡುಬರುವುದಿಲ್ಲ. ಪ್ರಾಯಃ ಕರ್ಮ ಬಹುಳವಾದ ವೈದಿಕ ಧರ್ಮದಲ್ಲಿ ಲಾಂಛನಗಳಿಗೆ ಯಾವ ಸ್ಥಾನವೂ ಇದ್ದಿರಲಾರದು. ಅದು ನೀರಸವಾಗಿ ಕಂಡ ನಂತರ ವೇದ ಮತ್ತು ಉಪನಿಷತ್ತುಗಳಲ್ಲಿ ಇದ್ದ ಜ್ಞಾನ ಮತ್ತು ಭಕ್ತಿ ಪರವಾದ ಅಂಶಗಳು ಮೇಲೆದ್ದು ತೋರಿ ನಮ್ಮ ದೇಶದ ಬೇರೆ ಬೇರೆ ಧಾರ್ಮಿಕ  ಪಂಥಗಳ ಮೂಲಕ ಪ್ರಕಟವಾದವು. ಅಂತಹ ಧಾರ್ಮಿಕ ಪಂಥಗಳಲ್ಲಿ ಶೈವ ಮತ್ತು ವೈಷ್ಣವ (ಭಾಗವತ) ಧರ್ಮಗಳು ಅತ್ಯಂತ ಗಣ್ಯವಾದುವು. ಲಾಂಛನಗಳನ್ನು ಧರಿಸುವ ಪದ್ಧತಿಯು ಈ ಧರ್ಮಗಳ ಉದ್ಭವ ಮತ್ತು ಬೆಳವಣಿಗೆಗಳೊಡನೆ ನಿಕಟವಾಗಿ ಸಂಬಂಧಿಸಿದೆ ಎಂದರೆ ತಪ್ಪಿಲ್ಲ.

 ಲಾಂಛನ ಧರಿಸುವುದರ ಇತಿಹಾಸವು ಹೇಗಾದರೂ ಇರಲಿ, ಅದು ನಮ್ಮ ದೇಶದ ಜ್ಞಾನ ಪುರುಷರಲ್ಲಿ ಉಂಟಾದ ವಿಶೇಷವಾದ ಆತ್ಮವಿಕಾಸವನ್ನು ಪ್ರತೀಕಿಸುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದರಲ್ಲಿ ತತ್ತ್ವಜ್ಞಾನವಿರುತ್ತದೆ. ಯೋಗವಿರುತ್ತದೆ. ಭಕ್ತಿ ಮತ್ತು ಜ್ಞಾನಗಳು ಅದನ್ನು ಹೆಣೆದುಕೊಂಡಿರುತ್ತವೆ. ಅದರ ಹಿಂಬದಿಯಲ್ಲಿ ನಮ್ಮ ದೇಶದ ಪ್ರಬುದ್ಧಾತ್ಮರು ಸಾಧಿಸಿದ ದರ್ಶನ ಮತ್ತು ಅನುಭವಗಳ ರಸಮಯವಾದ ಸ್ಮರಣೆಯಿರುತ್ತದೆ. ಶರೀರ ವಿಜ್ಞಾನವಿರುತ್ತದೆ. ಸಾಧನೆಯ ಮಾರ್ಗವಿರುತ್ತದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಈ ಲಾಂಛನಗಳಲ್ಲಿ ಮನುಷ್ಯರ ಉದ್ಧಾರಕ್ಕೆ ಸಾಕಾಗುವ ಆಧ್ಯಾತ್ಮಿಕ ರಹಸ್ಯಗಳನ್ನು ಸಂಗ್ರಹವಾಗಿ, ಸಾರಭೂತವಾಗಿ ಪ್ರಕಟ ಪಡಿಸುವ ಕೌಶಲ್ಯವಿದೆ.ಆದುದರಿಂದಲೇ ಲಾಂಛನಕ್ಕೆ ನಮ್ಮ ಹಿಂದಿನವರು ಅಷ್ಟು ಮಹತ್ವವನ್ನು ಕೊಟ್ಟರು. ಲಾಂಛನವನ್ನು ಧರಿಸದೆ ಮಾಡುವ ದಾನ, ಪೂಜೆ, ಹೋಮ, ಜಪ, ಕರ್ಮ, ಮುಂತಾದ ಧರ್ಮಕಾರ್ಯಗಳಾವುವೂ ಸಫಲವಾಗದೆಂದು ಅವರು ಸಾರಿದರು. ಲಾಂಛನದ ಮೂಲಕ ಸಾಮಾಜಿಕ ಐಕ್ಯವನ್ನು ಸಾಧಿಸಿದರು. ಜೊತೆಗೆ ಬೇರೆ ಬೇರೆ ಮತಗಳ ಚಿಹ್ನೆಗಳಾದುದರಿಂದ, ಲಾಂಛನಗಳು ಸಮಾಜದಲ್ಲಿ ಬೇರೆ ಬೇರೆ ಗುಂಪುಗಳ ಮಧ್ಯೆ ಒಡಕನ್ನುಂಟುಮಾಡಲು ಕಾರಣವಾಗಿರುತ್ತವೆಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಬೇರೆ ಮತಗಳ ವಿಷಯದಲ್ಲಿದ್ದ ಅಸಹಿಷ್ಣುತೆಯು ಲಾಂಛನಗಳ ಮೂಲಕ ವ್ಯಕ್ತವಾಗಿ ಅವುಗಳ ಬಗ್ಗೆ ಕಲಹ, ಕುತ್ಸಿತ ಮತ್ತು ಕುಚೋದ್ಯಗಳನೇಕ ಉಂಟಾಗಿರುತ್ತವೆ. ಆದರೆ ಅವು ಮತಿಹೀನರಾದ ಮಂದಾತ್ಮರ ಕೆಲಸ. ನಮ್ಮ ದೇಶದ ಲಾಂಛನಗಳು ಒಳಗೊಂಡಿರುವ ಆಳವಾದ ಅರ್ಥವು ಅವರಿಗೆ ತಿಳಿದುಬಂದಿದ್ದರೆ, ಆಗ ಪ್ರಾಯಶಃ ಅವರು ಯಾವ ಲಾಂಛನವನ್ನೂ ಅಲ್ಲಗಳೆಯುವ ಸಾಹಸ ಮಾಡುತ್ತಿರಲಿಲ್ಲವೆಂದು ನಮ್ಮ ನಂಬಿಕೆ.    

ಇಲ್ಲಿ ಅಂತಹ ಲಾಂಛನವೊಂದನ್ನು ತೆಗೆದುಕೊಂಡು ಅದರ ಭಾವಗಾಂಭೀರ್ಯವನ್ನು ವಿವರಿಸುವ ಆಶಯದಿಂದ ಕೂಡಿರುತ್ತೇವೆ. ಅದು ಊರ್ಧ್ವಪುಂಡ್ರ. ಈ ಊಧ್ವಪುಂಡ್ರವು ವೈಷ್ಣವ (ಭಾಗವತ)ಧರ್ಮದ ಸಾರವೆಲ್ಲವನ್ನೂ ತನ್ನಲ್ಲಿ ಒಳಗೊಂಡಿರುವುದರಿಂದ, ಅದನ್ನು ಪೂರ್ತಿಯಾಗಿ ಹೇಳಬೇಕಾದರೆ ವೈಷ್ಣವ ಧರ್ಮದ ಮೂಲ ತತ್ತ್ವಗಳನ್ನು ನಿರೂಪಿಸಬೇಕಾಗುತ್ತದೆ. ಆದರೆ 3-4 ಪುಟಗಳ ಒಂದು ಸಣ್ಣ ಲೇಖನದಲ್ಲಿ ಆ ಕೆಲಸವನ್ನು ಮಾಡಲಾಗುವುದಿಲ್ಲ. ಅದರ ಬಗ್ಗೆ ಒಂದು ಸಂಗ್ರಹವಾದ ನೋಟವನ್ನಿತ್ತು ತೃಪ್ತರಾಗುತ್ತೇವೆ.

ಊರ್ಧ್ವಪುಂಡ್ರವು ಶುದ್ಧವಾದ ಬಿಳಿಯ ಮಣ್ಣಿನಿಂದ ಹಾಗೂ ಅರಿಸಿನದ ಪುಡಿ, ಅಕ್ಕಿಯಹಿಟ್ಟು, ತುಳಸೀ, ಕರ್ಪೂರ, ಗಂಧ, ಕುಂಕುಮ ಮುಂತಾದ ದ್ರವ್ಯಗಳಿಂದ ಮಾಡಿದ ಚೂರ್ಣದಿಂದ ಹಣೆ ಮತ್ತು ನಾಭಿಯಿಂದ ಮೇಲೆ ಶರೀರದ ನಿರ್ದಿಷ್ಟವಾದ ಸ್ಥಾನಗಳಲ್ಲಿ ಶ್ರೀವೈಷ್ಣವರು ಗುರುತಿಸುವ ಚಿಹ್ನವನ್ನುಸೂಚಿಸುತ್ತದೆ. ಅದಕ್ಕೆ ನಾಮ ಎಂಬ ಹೆಸರಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಬೇರೆ ಬೇರೆ ಸ್ಥಾನಗಳಲ್ಲಿ ಅದನ್ನು ಹಾಕಿಕೊಳ್ಳುವಾಗ ಭಕ್ತಿ ಭಾವದಿಂದ ವಿಷ್ಣುವಿನ ನಾಮೋಚ್ಚಾರಣೆ ಮಾಡುತ್ತಾ, ಪರಂಜ್ಯೋತಿ  ಪರಮಾತ್ಮನಾದ ವಿಷ್ಣುವಿನ ಸ್ಮರಣೆ ಮಾಡುತ್ತಾ, ಆದನ್ನು  ಮಾಡುವುದರಿಂದ ಅದಕ್ಕೆ ನಾಮ (ಹೆಸರು) ಎಂಬ ಹೆಸರು ಪ್ರಚಾರಕ್ಕೆ ಬಂದಿರುತ್ತದೆ. ವೈಷ್ಣವ ಧರ್ಮವು ಭಗವನ್ನಾಮ ಸಂಕೀರ್ತನಗೆ ಎಷ್ಟು ಪ್ರಾಧಾನ್ಯ ಕೊಡುತ್ತದೆ ಎಂಬುದನ್ನು ಮುಂದಿನ ಮಾತುಗಳಿಂದ ಸ್ವಲ್ಪ ಮಟ್ಟಿಗೆ ಊಹಿಸಿಕೊಳ್ಳಬಹುದು:

ಸರ್ವೇಷಾಂ ಅಘವತಾಂ ಇದಮೇವ ಸುನಿಷ್ಕೃತಂ |
ನಾಮವ್ಯಾಹರಣಂ ವಿಷ್ಣೋಃ ಯತಃ ತದ್ವಿಷಯಾ ಮತಿಃ|| 
                                                                                                                                                                      -ಭಾಗವತ 6,2.10  
                                             
ಕನ್ನಡದಲ್ಲಿ "ನಾಮಹಾಕುವುದು" ಎಂದರೆ ಮೋಸ ಮಾಡುವುದು ಎಂಬ ಅರ್ಥವು ಸಾಮಾನ್ಯಜನರಲ್ಲಿ ಬಳಕೆಯಲ್ಲಿರುತ್ತದೆ. ಶಬ್ದಕೋಶಗಳೂ ಈ ಅರ್ಥವನ್ನು ಅಂಗೀಕರಿಸುತ್ತವೆ. ವಾಸ್ತವದಲ್ಲಿ "ನಾಮ"ವು ಜಗತ್ಸ್ವಾಮಿಯಾದ  ಭಗವಂತನ ಮಹಿಮೆಯನ್ನು ಕೊಂಡಾಡುವ ಪದ.ಅದನ್ನು ಅಪಾರ್ಥದಲ್ಲಿ ಬಳಸುವುದು ಬಹಳ ಕೆಳಮಟ್ಟದ ಅನಾಗರಿಕತೆಯನ್ನು ಸೂಚಿಸುತ್ತದೆ ಎಂಬುದನ್ನು ಹೇಳಬೇಕಾಗಿಲ್ಲ.

ಸಾಂಕೇತ್ಯಂ ಪಾರಿಹಾಸ್ಯಂವಾ ಸ್ತೋಭಂ ಹೇಲನ ಮೇವ ವಾ|
ವೈಕುಂಠನಾಮಗ್ರಹಣಂ ಅಶೇಷಾಘ ಹರಂ ವಿದುಃ||14||
ಪತಿತಃ ಸ್ಖಲಿತೋ ಭಗ್ನಃ ಸಂದಷ್ಟಃ ತಪ್ತ ಆಹತಃ|
ಹರಿರಿತ್ಯವಶೇನಾಹ ಪುಮಾನ್ನಾರ್ಹತಿ ಯಾತನಾಂ||15||    

 (ಮನುಷ್ಯನು ಮಾಡಿದ ಪಾಪವು ಎಷ್ಟೇ ದೊಡ್ಡದಾಗಿರಲಿ, ವಿಷ್ಣುವಿನ ನಾಮವನ್ನು ಹೇಳುವುದರಿಂದಲೇ ಅದಕ್ಕೆ ಪ್ರಾಯಶ್ಚಿತ್ತ ಮಾಡಿದಂತಾಗುತ್ತದೆ. ವಿಷ್ಣುವಿನ ನಾಮವನ್ನು ಉಚ್ಚರಿಸಿದ ಮಾತ್ರದಿಂದಲೇ ಅವನ  ಮತಿಯು ಭಗವಂತನಲ್ಲಿ ಹರಿಯುತ್ತದೆ. ಮನಸ್ಸಿನಲ್ಲಿ ಅಭಿಪ್ರಾಯವನ್ನಿಟ್ಟುಕೊಂಡಾಗಲಿ, ಪರಿಹಾಸ್ಯಕ್ಕೋಸ್ಕರವಾಗಲಿ, ಹಾಡುವಾಗಾಗಲಿ, ಅಥವಾ ಅವಹೇಳನ ಮಾಡುವ ಉದ್ದೇಶದಿಂದಾಗಲಿ ವೈಕುಂಠನ(ವಿಷ್ಣುವಿನ) ನಾಮವನ್ನು ಹೇಳಿದರೆ, ಅದರಿಂದಲೇ  ಅವನ  ಪಾಪಗಳೆಲ್ಲವೂ ನೀಗುತ್ತವೆ ಎಂದು ಹೇಳುತ್ತಾರೆ. ಬೀಳುವಾಗ, ಜಾರುವಾಗ, ಮೈಮುರಿಯುವಾಗ, ಹಾವು ಕಚ್ಚಿದಾಗ, ಸುಟ್ಟಾಗ, ಹೊಡೆಯಲ್ಪಟ್ಟಾಗ ಅವಶನಾಗಿಯೇ ಆಗಲಿ ಹರಿ! ಎಂದು ಹೇಳಿದ ಮಾತ್ರದಿಂದಲೇ ಮನುಷ್ಯನು ನರಕಯಾತನೆಗೆ ಅನರ್ಹನಾಗುತ್ತಾನೆ.)

ಅಂತಹ ಮನುಷ್ಯನನ್ನು ಸರ್ವಕಾಲಕ್ಕೂ ಉದ್ಧಾರಮಾಡುವ, ಪರಮ ಪಾವನವಾದ ಭಗವನ್ನಾಮವನ್ನು ಉಚ್ಚರಿಸುತ್ತಾ ಮಾಡುವ ಚಿಹ್ನವು ನಮಗೆ ತಿಳಿದಂತೆ ಭ್ರೂ
ಮಧ್ಯದಿಂದ (ಅಥವಾ ನಾಸಾಗ್ರದಿಂದ) ದ್ವಾದಶಾಂತ (ಹಣೆ ಮತ್ತು ಕೂದಲು ಸೇರುವ ಜಾಗದವರೆಗೆ  ಹೋಗುವ ಮೂರು ರೇಖೆಗಳ ರೂಪವಾಗಿರುತ್ತದೆ. ಆ ಚಿಹ್ನವನ್ನು ಗುರುತಿಸುವ ಬೇರೆ ವಿಧಾನಗಳು ಇರುತ್ತವೆಂದು ಶಾಸ್ತ್ರ ಗ್ರಂಥಗಳಿಂದ ತಿಳಿದುಬರುತ್ತದೆ. ಅದನ್ನು ದೀಪಶಿಖೆ, ಬಿದಿರಿನ ಎಲೆ, ಕಮಲದ ಮೊಗ್ಗು, ಮೀನು, ಆಮೆ, ಅಥವಾ ಕವಿಗಳ ಆಕಾರದಲ್ಲಿ ಇಡುವ ರೂಢಿಯು ಇದ್ದಿತು. ಪರ್ವತಾಗ್ರ, ನದೀತೀರ, ಮರದ ಬುಡಗಳಿಂದ ಸಂಗ್ರಹಿಸಿದ  ಮಣ್ಣಿನಿಂದ ಅದನ್ನು ಹಾಕಿಕೊಳ್ಳಬೇಕೆಂದು ಶಾಸ್ತ್ರವು ಹೇಳುತ್ತದೆ. ಕೆಂಪು, ಕಪ್ಪು ಅಥವಾ ಹಳದಿ ಬಣ್ಣದ ಮಣ್ಣು (ಗೋಪಿಚಂದನ)ಗಳನ್ನು ಸಹ ಪುಂಡ್ರ ಧಾರಣೆಗೆ ಬಳಸಬಹುದು. ಧರ್ಮಶಾಸ್ತ್ರಗಳು ಬೇರೆ ಬೇರೆ ಬಣ್ಣದ ಮಣ್ಣುಗಳಿಗೆ ಶಾಂತಿ, ವಶ್ಯ, ಸಂಪತ್ತು ಮುಂತಾದ ಫಲಗಳನ್ನು ಹೇಳುತ್ತವೆ. ಬಿಳೀ ಮಣ್ಣಿಗೆ ವೈಷ್ಣವವೆಂದು ವಿಶೇಷವಾದ ಪ್ರಶಸ್ತಿಯು ಹೇಳಲ್ಪಟ್ಟಿರುತ್ತದೆ. ಸತ್ವಗುಣವು ಶ್ವೇತವರ್ಣವೆಂದು ಶಾಸ್ತ್ರಗಳು ಹೇಳುತ್ತವೆ. ವಿಷ್ಣುವು ಸತ್ವಗುಣಕ್ಕೆ ಅಧಿಪತಿಯಾದುದರಿಂದ ಬಿಳಿ ಮಣ್ಣಿಗೆ ಹೆಚ್ಚು ಮಹತ್ವ ಹೇಳಲು ಕಾರಣವಿರಬಹುದು. ವೈಷ್ಣವ ಧರ್ಮದ ಒಂದು ಬಗೆಯನ್ನು ಆರಂಭಿಸಿದ ರಾಮಾನುಜಾಚಾರ್ಯರು   ಮೇಲುಕೋಟೆಯಲ್ಲಿ ಅಂತಹ ಮಣ್ಣಿನ ಖನಿಯನ್ನು ಕಂಡು ಅದರ ಬಳಕೆಯನ್ನು ಪ್ರಸಾರಮಾಡಿದರೆಂಬ ಐತಿಹ್ಯವು ಸಹ ಕೇಳಿಬರುತ್ತದೆ.

ಈ ಊರ್ಧ್ವಪುಂಡ್ರವನ್ನು ಹಾಕಿಕೊಳ್ಳುವಾಗ "ಲಲಾಟದಲ್ಲಿ ಕೇಶವನನ್ನೂ, ಉದರದಲ್ಲಿ ನಾರಾಯಣನನ್ನೂ, ಹೃದಯದಲ್ಲಿ ಮಾಧವನನ್ನೂ, ಭುಜದ ಬುಡಭಾಗದಲ್ಲಿ ಗೋವಿಂದನನ್ನೂ, ಉದರದ ಬಲ ಪಾರ್ಶ್ವದಲ್ಲಿ ವಿಷ್ಣುವನ್ನೂ, ಅದರ ಪಾರ್ಶ್ವದಲ್ಲಿಯೂ, ಬಾಹುಮಧ್ಯದಲ್ಲಿಯೂ ಮಧುಸೂದನನ್ನೂ ,ಕಂಠದೇಶದಲ್ಲಿ ತ್ರಿವಿಕ್ರಮನನ್ನೂ, ಉದರದ  ಎಡಪಾರ್ಶ್ವದಲ್ಲಿ ವಾಮನನನ್ನೂ, ಎಡಬಾಹುವಿನಲ್ಲಿ ಶ್ರೀಧರನನ್ನೂ, ಕಿವಿಯಲ್ಲಿ ಹೃಷೀಕೇಶನನ್ನೂ, ಬೆನ್ನಿನಲ್ಲಿ ಪದ್ಮನಾಭನನ್ನೂ, ಕುತ್ತಿಗೆಯ ಹಿಂಭಾಗದಲ್ಲಿ ದಾಮೋದರನನ್ನೂ  ಸ್ಮರಿಸಬೇಕು. ಇವು ದ್ವಾದಶನಾಮಗಳು." ವಾಸುದೇವ" ಎಂದು ನೆತ್ತಿಯಲ್ಲಿ  ಹಚ್ಚಬೇಕು" ಎಂದು ಶಾಸ್ತ್ರವು ಆದೇಶ ಮಾಡುತ್ತದೆ.

"ಪೂಜಾಕಾಲ, ಹೋಮಕಾಲ, ಸಾಯಂಕಾಲ, ಪ್ರಾತಃಕಾಲಗಳಲ್ಲಿ ಮನಸ್ಸಮಾಧಾನವುಳ್ಳವನಾಗಿ ವಿಧ್ಯುಕ್ತ ಪ್ರಕಾರ ಈ ನಾಮಗಳನ್ನುಚ್ಚರಿಸುತ್ತಾ ಊರ್ಧ್ವಪುಂಡ್ರವನ್ನು  ಧರಿಸಬೇಕು" ಎಂಬುದು ಶಾಸ್ತ್ರನಿಯಮ.
"ಯಾರ ಮುಖದಲ್ಲಿ ಶುದ್ಧವಾದ ಊರ್ಧ್ವಪುಂಡ್ರವು ಕಾಣಿಸುತ್ತದೆಯೋ ಅವನು ಚಂಡಾಲನಾದರೂ ಶುದ್ಧ ಸ್ವರೂಪ, ಪೂಜಾರ್ಹ. ಅದರಲ್ಲಿ ಸಂದೇಹವಿಲ್ಲ" ಎಂದು ಸತ್ಯವ್ರತನೆಂಬ ಧರ್ಮೋಪದೇಶಕನು ಘೋಷಣೆ ಮಾಡುತ್ತಾನೆ.  ಇವು ಊರ್ಧ್ವಪುಂಡ್ರದ ವಿಷಯದಲ್ಲಿ ಹಿಂದಿನಿಂದ ಬಂದ ಸಂಪ್ರದಾಯಗಳು. ಈಗ ಅವುಗಳ ಹಿಂದಿರುವ ಜ್ಞಾನ ವಿಜ್ಞಾನದ ಕಡೆಗೆ ನಮ್ಮ ದೃಷ್ಟಿಯನ್ನು ಹೊರಳಿಸಬೇಕಾಗಿದೆ. ಈ ಚಿಹ್ನವನ್ನು  ಹಣೆ ಮತ್ತು ಶರೀರದ ಬೇರೆ ಬೇರೆ ಸ್ಥಾನಗಳಲ್ಲಿ ಅಂಕಿತ ಮಾಡುವುದರ ಕಾರಣವೇನು ಎಂಬುದನ್ನು ವಿಚಾರಿಸಬೇಕಾಗಿದೆ.

ಭಾರತೀಯರ ಸತ್ಯಾನ್ವೇಷಣೆಯಲ್ಲಿ ಶರೀರ ವಿಜ್ಞಾನವು ಬಹಳ ದೂರದವರೆಗೆ ವ್ಯಾಪಾರ ಮಾಡಿದ್ದಿತೆಂಬುದನ್ನು ನಾವು ಈಗಾಗಲೇ ಪತ್ರಿಕೆಯಲ್ಲಿ ವಿಶದವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ನಿರೂಪಿಸಿರುತ್ತೇವೆ. ಭಾರತದೇಶದ ಜ್ಞಾನ ಪುರುಷರು ಧ್ಯಾನಯೋಗದ ಸಹಾಯದಿಂದ ಶರೀರದ ರಚನೆಗೆ ಕಾರಣವಾದ ತತ್ತ್ವಗಳೆಲ್ಲಕ್ಕೂ ಮೂಲನಾದ ಸ್ವಾಮಿಯನ್ನು ಈ ಶರೀರವೆಂಬ ದೇಗುಲವನ್ನು ಪ್ರವೇಶಿಸಿಯೇ ಸಾಕ್ಷಾತ್ಕರಿಸಿದವರಾಗಿದ್ದರು. ಶರೀರದಲ್ಲಿ ಗೂಢವಾಗಿರುವ ಜ್ಞಾನಮಾರ್ಗದಲ್ಲಿ ಪ್ರಾಣ ಮತ್ತು  ಮನಸ್ಸುಗಳ ಸಹಾಯದಿಂದ ನಡೆದು, ಬ್ರಹ್ಮರಂಧ್ರವನ್ನು ಮುಟ್ಟಿ ಅಲ್ಲಿ ಅವರು ಪರವಾಸುದೇವನಾದ ನಾರಾಯಣನ, ಆಧ್ಯಾತ್ಮದೀಪನಾದ ವಿಷ್ಣುವಿನ ದರ್ಶನವನ್ನು ಒಳಗಣ್ಣಿನಿಂದ  ಮಾಡಿದರವಾಗಿದ್ದರು. "ತದೇವ ನಾರಾಯಣ ಸ್ಥಳಂ| ತದ್ವೇತ್ತಾ ಮುಕ್ತಿಭಾಕ್|| ತ್ರಿಸ್ಥಾನಂ ಚ ತ್ರಿಮಾರ್ಗಂ ಚ ತ್ರಿಬ್ರಹ್ಮ ಚ ತ್ರಯಾಕ್ಷರಂ| ತ್ರಿಮಾತ್ರಂ ಅರ್ಧಮಾತ್ರಂ ವಾ ಯಸ್ತಂ ವೇದ ಸ ವೇದವಿತ್|| (ಅದೇ ನಾರಾಯಣಸ್ಥಳ. ಅದನ್ನು ತಿಳಿದವನು ಮುಕ್ತಿಗೆ ಅರ್ಹನಾಗುತ್ತಾನೆ. ಮೂರು ಸ್ಥಾನಗಳನ್ನೂ, ಮೂರುಮಾರ್ಗಗಳನ್ನೂ, ಮೂವರು ಬ್ರಹ್ಮರನ್ನೂ, ಮೂರು ಅಕ್ಷರಗಳನ್ನೂ, ಮೂರು ಮಾತ್ರೆಗಳನ್ನೂ ಮತ್ತು ಅರ್ಧ ಮಾತ್ರೆಯನ್ನೂ ತಿಳಿದವನು ವೇದ (ಜ್ಞಾನ)ವನ್ನು ತಿಳಿದವನು ಮುಂತಾದ ಮಾತುಗಳು ಅಂತಹ ಪರಮಾತ್ಮಸಾಕ್ಷಾತ್ಕಾರದಲ್ಲಿರುವ  ಜ್ಞಾನ ವಿಜ್ಞಾನಗಳನ್ನು ಸಾರಭೂತವಾಗಿ  ಹೇಳುತ್ತವೆ.                          
.
ಅಂತಹ ಜ್ಞಾನಸ್ಥಿತಿಯನ್ನು ತಮ್ಮಲ್ಲಿ  ಅನುಭವಾತ್ಮಕವಾಗಿ ಸಾಧಿಸಿದ ಯೋಗಿಗಳಿಂದಲೇ ವೈಷ್ಣವ ಧರ್ಮವು ತನ್ನ ಉತ್ಪತ್ತಿಯನ್ನು ತೆಗೆದುಕೊಂಡಿರುತ್ತದೆ. ಅದರಲ್ಲಿರುವ  ಆಚರಣೆ ಮತ್ತು ಸಂಪ್ರದಾಯಗಳನೇಕ ಯೋಗದ ಒಳರಹಸ್ಯಗಳ ಕಡೆಗೆ ನಿರ್ದೇಶಿಸುತ್ತವೆ. ಯೋಗಪಕ್ವತೆಯನ್ನುಂಟು ಮಾಡುವುದೇ ಅವುಗಳ ಆಶಯವಾಗಿದೆ. ಅವುಗಳ ಪೈಕಿ ಊರ್ಧ್ವಪುಂಡ್ರವನ್ನಿಡುವ ಪದ್ಧತಿಯು ತ್ರಿನಾಡಿ (ಇಡಾ,ಪಿಂಗಳಾ,ಸುಷುಮ್ನಾ)ರೂಪವಾದ ತ್ರಿಮಾರ್ಗವನ್ನೇ ಶರೀರದ ಮೇಲೆ ನಕ್ಷೆ ಎಳೆದು ತೋರಿಸುತ್ತದೆ. ಉದರ, ಹೃದಯ, ಕಂಠ, ಹಣೆಗಳಲ್ಲಿಡುವ ಮೂರು ರೇಖೆಗಳು ಕಡೆಗೆ ಪರವಾಸುದೇವನ ಸ್ಥಾನವಾದ ಬ್ರಹ್ಮರಂಧ್ರದ ಕಡೆಗೇ ಅಗ್ರಿಮವಾಗಿರುತ್ತವೆ. ಮನುಷ್ಯನ ಆತ್ಯಂತಿಕ ಹಿತ ಅಲ್ಲಿದೆ ಎಂಬುದನ್ನು ಹೇಳುತ್ತವೆ.

ಇಲ್ಲಿ ಶ್ರೀರಂಗಗುರುವು ಮಾಡಿದ ಜ್ಞಾನ ಪ್ರಯೋಗದಿಂದ ಹೊರಬಿದ್ದ ಒಂದು ಸಂಗತಿಯು ಸ್ಮರಣೆಗೆ ಬರುತ್ತದೆ. ಅವರು ಜ್ಞಾನಮಾರ್ಗದಲ್ಲಿ ಕರೆದುಕೊಂಡು ಹೋಗಿ, ಶಿಷ್ಯರೊಬ್ಬರಲ್ಲಿ ಧ್ಯಾನ ಕಾಲದಲ್ಲಿ ಊರ್ಧ್ವಪುಂಡ್ರದ ರಹಸ್ಯವು ಹೊರಪಟ್ಟಿತು. ಧ್ಯಾನದಲ್ಲಿ ಕುಳಿತಾಗ ಅವರ ಹಣೆಯಲ್ಲಿ ಮೂರು ನರಗಳು ಎದ್ದು ತೋರಿಬರುತ್ತಿದ್ದುದು ಮಾತ್ರವಲ್ಲದೆ, ಭುಜ ಇತ್ಯಾದಿಗಳಲ್ಲಿ ನರಗಳು ಎದ್ದು ತೋರಿ ವೈಷ್ಣವ ಚಿಹ್ನೆಗಳೆಲ್ಲವೂ ಕಾಣಿಸಿಕೊಳ್ಳುತ್ತಿದ್ದವು. ಶ್ರೀರಂಗಗುರುವು ಇದನ್ನು ನಮಗೆ ಹೇಳಿದರು. ನಂತರ ನಾವೇ ಪ್ರತ್ಯಕ್ಷವಾಗಿ ಒಂದೆರಡು ಬಾರಿ ಅದನ್ನು ನೋಡಿದೆವು. ಹಾಗೆ ವೈಷ್ಣವ ಧರ್ಮಕ್ಕೆ ಸಂಬಂಧಿಸಿದ ಮುದ್ರೆ,ಚಿಹ್ನೆಗಳೆಲ್ಲವೂ ಆವರ್ತವಾಗಿ ತೋರಿ ಅಡಗಿದ ನಂತರ ಅವರಲ್ಲಿ ಶೈವಧರ್ಮಕ್ಕೆ ಸಂಬಂಧಿಸಿದ ಚಿಹ್ನೆಗಳೆಲ್ಲವೂ ಶರೀರದಲ್ಲಿ ಸಹಜವಾಗಿ ಬರದಿಟ್ಟಂತೆ ಗೋಚರವಾಗುತ್ತಿದ್ದವು. ಅದನ್ನು ನೋಡಿ ಗುರು ಭಗವಂತರು ಅವರಿಗೆ ಶಂಕರನಾರಾಯಣ ದಾಸ ಎಂದು ನಾಮಕರಣ ಮಾಡಿದರು.

ಈ ಚಿಹ್ನೆಗಳು ಮನಃಕಲ್ಪಿತವಾದವುಗಳಲ್ಲ ಎಂಬುದನ್ನು ಹೇಳಲು ಇದನ್ನು ಇಲ್ಲಿ ಹೇಳಿದೆವು. ಅವುಗಳ ಮೂಲ, ಮನುಷ್ಯನಲ್ಲಿರುವ ಜ್ಞಾನದಲ್ಲಿರುತ್ತದೆ. ಧರ್ಮ ಕರ್ಮ ಸಂಯೋಗದಿಂದ ಒಬ್ಬನು ಅದನ್ನು ಪಡೆಯುವಂತಾದರೆ, ಆಗ ಅವು ಹೃದಯ ಸಮುದ್ರದ ತಳದಿಂದ ಮೇಲೆದ್ದು ಬಂದು ತೋರುತ್ತವೆ. ಅವನ್ನರಿತ  ಜ್ಞಾನಿಗಳು ಪಂಡಿತರಿಂದ ಪಾಮರರವರೆಗೆ ಎಲ್ಲರೂ ಆ ಜಾಡಿನಲ್ಲಿ ನಡೆಯಲೆಂದು ಮಣ್ಣು, ಅರಶಿನ ಮುಂತಾದ ದ್ರವ್ಯಗಳಿಂದ ಶರೀರದಲ್ಲಿ ಅದನ್ನು ಗುರುತಿಸುವ ಸಂಪ್ರದಾಯವನ್ನು ರೂಢಿಗೆ ತಂದರು. ಇಲ್ಲಿ ಮಣ್ಣಿಗಲ್ಲ ಬೆಲೆ. ಮಣ್ಣಿನಿಂದ ಎಳೆದ ರೇಖೆಯು ಸೂಚಿಸುವ ರಹಸ್ಯವಾಗಿರುವ ಜ್ಞಾನಮಾರ್ಗಕ್ಕೆ. ಅದರಲ್ಲಿ ನಡೆದಾಗ ಮನುಷ್ಯನು ಶಾಶ್ವತವಾದ ವಿಷ್ಣುಪದವನ್ನು ಮುಟ್ಟುತ್ತಾನೆಂದು ಹೇಳುವುದೇ ಆ ರೇಖೆಗಳ ಉದ್ದೇಶ. ಅದೇ ಅವುಗಳ ಅರ್ಥ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ  ಫೆಬ್ರುವರಿ 1982 ಸಂಪುಟ :4 ಸಂಚಿಕೆ:4 ರಲ್ಲಿ ಪ್ರಕಟವಾಗಿದೆ.