Thursday, December 10, 2020

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ (Kottiddu Tanage, Baccittiddu pararige)

ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು 
(ಪ್ರತಿಕ್ರಿಯಿಸಿರಿ lekhana@ayvm.in)




"ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ"...  ಇದು ಒಂದು ಕನ್ನಡಭಾಷೆಯಲ್ಲಿ ಬರುವ ನಾಣ್ಣುಡಿ ಮತ್ತು ದಾಸರ ಪದದಲ್ಲೂ ಈ ಮಾತನ್ನು ಕೇಳುತ್ತೇವೆ. ಈ ವಾಕ್ಯವು ಡಾ.ಪಿ.ಬಿ.ಶ್ರೀನಿವಾಸ ಎಂಬ ಪ್ರಸಿದ್ಧ ಗಾಯಕರು ಹೇಳಿರುವ ಹಾಡಿನಲ್ಲಿ ಇಂದಿಗೂ ನಮ್ಮೆಲ್ಲರ ಕಿವಿಗಳಲ್ಲಿ ಮೊಳಗುತ್ತಿದೆ. ಹಾಗಾದರೆ ಈ ಮಾತಿನ ಅರ್ಥ ಏನು? ಮೇಲ್ನೋಟಕ್ಕೆ ನೋಡಿದರೆ ಒಂದು ಅರ್ಥ ಬರುತ್ತದೆ. ಅದನ್ನೇ ಇನ್ನೊಂದು ಮುಖದಲ್ಲಿ ವಿಚಾರಿಸಿದರೆ ವಿಶೇಷವಾದ ಅರ್ಥವೂ ಬರುತ್ತದೆ. ಅಂತಹ ವಿಶೇಷವಾದ ಅರ್ಥ ಏನು? ಎಂಬುದನ್ನು ಸ್ವಲ್ಪ ಗಮನಿಸೋಣ.

ನಾವು ಯಾವುದನ್ನು ಬೇರೆಯವರಿಗೆ ಕೊಡುತ್ತೇವೋ ಅದು ನಮಗೆ ಸಿಗುತ್ತದೆ. ಮತ್ತು ನಾವು ಯಾವುದನ್ನು ಯಾರಿಗೂ ಕೊಡದೆ ಇಟ್ಟುಕೊಳ್ಳುತ್ತೇವೋ ಅದು ಒಂದಲ್ಲ ಒಂದು ದಿನ ಬೇರೆಯವರ ಪಾಲಾಗುತ್ತದೆ ಎಂಬುದು ಈ ನುಡಿಗಟ್ಟಿನಿಂದಬರುವ ನೇರವಾದ ಅರ್ಥವಾಗಿದೆ. ನಮಗೊಂದು ಪ್ರಶ್ನೆ ಈ ಮಾತಿನಿಂದ ಬರುತ್ತದೆ. ಅದೇನೆಂದರೆ ಇತರರಿಗೆ ಕೊಟ್ಟಿದ್ದು ನಮಗೆ ಹಿಂದಿರುಗಿ ಬರುವುದು ಹೇಗೆ? ಮತ್ತು ಯಾರಿಗೂ ಕೊಡದೆ ತನ್ನಲ್ಲೇ ಇಟ್ಟುಕೊಂಡರೆ ಪರರ ವಶವಾಗುವುದು ಹೇಗೆ? ಎಂಬ ವಿರೋಧವು ಕಾಣುತ್ತದೆ. ಕೊಟ್ಟರೆ ಅದು ನಮ್ಮಿಂದ ದೂರವಾಗುತ್ತದೆಯೇ ವಿನಾ ಅದು ಮತ್ತೆ ನಮ್ಮವರೆಗೆ ಬರುವುದೆಂಬುದು ಸುಳ್ಳು ಮತ್ತು ನಾವು ಇಟ್ಟುಕೊಂಡ ಪದಾರ್ಥ ನಮ್ಮ ಸಂಪರ್ಕದಲ್ಲೇ ಇರುತ್ತದೆಯೇ ಹೊರತು ನಮ್ಮಿಂದ ದೂರವಾಗುತ್ತದೆಂಬ ಮಾತೂ ಸತ್ಯಕ್ಕೆ ವಿರೋಧವಾದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಇದರ ಹಿಂದಿರುವ ತಾತ್ತ್ವಿಕವಾದ ಹಿನ್ನೆಲೆ ಏನೆಂಬುದು ನಾವಿಂದು ತಿಳಿಯಬೇಕಾದ ವಿಷಯ.

ಕೊಡುವುದು ಎಂದರೆ ಅದು 'ತ್ಯಾಗ'. ತ್ಯಾಗ ಎಂಬುದು ಪದಾರ್ಥದ ಮೇಲಿನ ನಮ್ಮ ಸ್ವಾಮಿತ್ವವನ್ನು ದೂರಮಾಡುತ್ತದೆ. ಅಷ್ಟೇ ಅಲ್ಲದೆ ತ್ಯಾಗ ಮಾಡುವಾಗ 'ನ ಮಮ' ಎಂದು ಹೇಳುತ್ತೇವೆ. ನಾನು ಕೊಡುತ್ತಿರುವ ವಸ್ತು ನನ್ನದಲ್ಲ ಎಂಬ ಭಾವನೆ ಬಂದಾಗ ಆ ವಸ್ತುವಿನ ಮೇಲಿನ ಮಮತೆ – ಅಂಟು ಕಳಚುತ್ತದೆ. ಯಾವಾಗಲೂ ಅಂಟು ಅಥವಾ ರಾಗದಿಂದಲೇ ನಮ್ಮ ನೆಮ್ಮದಿಯು ಹಾಳಾಗುವುದು. ನಮ್ಮ ನಿದ್ದೆಯನ್ನು ಕೆಡಿಸುವುದು. ನಮಗೆ ಎಲ್ಲಿಯ ತನಕ ಪದಾರ್ಥದ ಮೇಲೆ ಅಂಟು ಇರುವುದೋ ಅಲ್ಲಿಯ ತನಕ ನೆಮ್ಮದಿಯಾಗಿ ನಿದ್ದೆಯನ್ನೂ ಮಾಡಲು ಸಾಧ್ಯವಾಗುವುದಿಲ್ಲ. ನಿದ್ದೆಯು ಎಲ್ಲವನ್ನು ಬಿಟ್ಟಾಗ ಬರುವ ಸುಖ ತಾನೆ. ನನ್ನ ಮನೆ, ನನ್ನ ಕುಟುಂಬ, ನನ್ನ ಮಕ್ಕಳು ಇತ್ಯಾದಿಯಾದ ಚಿಂತೆ ಅಥವಾ ಚಿಂತನೆ ಮಾಡುತ್ತಿದ್ದರೆ ನಿದ್ದೆ ಬರಲು ಸಾಧ್ಯವೇ? ನಿದ್ದೆಯು ಬರಬೇಕೆಂದರೆ ಇವೆಲ್ಲದರ ಮಮತೆ ಇಲ್ಲವಾದಾಗ ಮಾತ್ರ ಸಾಧ್ಯ. ಹಾಗೆಯೆ ಈ ಸಂಸಾರವೆಂಬ ಬಂಧನವನ್ನು ಬಿಟ್ಟು ಪರಮ ಸುಖವಾದ ಭಗವಂತನ ಸಾನ್ನಿಧ್ಯವನ್ನು ಸೇರಲು ಈ ಪ್ರಪಂಚದ ಎಲ್ಲಾ ವಸ್ತುಗಳ ಮೇಲಿನ ಅಂಟನ್ನು  ಬಿಡಬೇಕು. ಆಗ ಅವನ ಮನಸ್ಸು ಶುದ್ಧವಾಗುತ್ತಾ ಹೋಗುತ್ತದೆ. ಜಗತ್ತಿನಲ್ಲಿರುವ ಉತ್ತಮವಾದ ರತ್ನದಂತಹ ವಸ್ತುಗಳು ಉತ್ತಮರನ್ನೇ ಸೇರಲು ಬಯಸುತ್ತಿರುತ್ತವೆ. ಹೀಗೆ ಕೊಡುವ ಅಭ್ಯಾಸ ಬೆಳೆಸಿಕೊಂಡಾಗ ಉತ್ತಮವಾದ ವಸ್ತುಗಳು ಅವರನ್ನು ಬಂದು ಸೇರುತ್ತವೆ. ಎಲ್ಲಾ ನಿಧಿಗಳಿಗೂ ಪತಿಯಾದ ನಿಧಿಪತಿ-ಭಗವಂತನೇ ಆಗಿದ್ದಾನೆ ಎಂಬುದನ್ನು ಅರಿಯದೆ ವಸ್ತುಗಳನ್ನು ಬೇರೆಯವರಿಗೆ ಕೊಡದೆ ಅವುಗಳನ್ನು ಸಂಗ್ರಹಿಸಿದಾಗ ಅವುಗಳ ಮೇಲಿನ ಅಂಟು ಜಾಸ್ತಿ ಆಗುತ್ತದೆ. ಆ ಅಂಟು ಮನಸ್ಸನ್ನು ಕೆಡಿಸುವುದರಲ್ಲಿ ಯಾವದೇ ಸಂಶಯವಿಲ್ಲ. ಆಗ ಅವನಲ್ಲಿರುವ ಉತ್ತಮ ಪದಾರ್ಥಗಳೂ ಬೇರೆಯವರ ಪಾಲಾಗುತ್ತದೆ. ಯಾವುದೋ ನೆಪಮಾಡಿಕೊಂಡು ಆ ವಸ್ತುಗಳು ಅವನಿಂದ ದೂರವಾಗುತ್ತವೆ. ಇದೇ ಅರ್ಥದಲ್ಲಿ ಈ ಮಾತು ಬಂದಿದೆ ಎಂಬುದನ್ನು ನಾವು ತಿಳಿದಾಗ ಯಾವ ವಿರೋಧವೂ ಕಾಣುವುದಿಲ್ಲ. ಶ್ರೀರಂಗಮಹಾಗುರುವಿನ ಈ ಮಾತನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಂಡರೆ ಪ್ರಸ್ತುತವಾಕ್ಯಕ್ಕೆ ಇನ್ನೂ ಪುಷ್ಟಿ ದೊರಕಿದಂತಾಗುವುದು- "ಜೀವ, ಜೀವನ, ಜೀವನೋಪಕರಣ ಇವೆಲ್ಲವನ್ನೂ ಒಂದು ಹದವಾಗಿ ವ್ಯವಸ್ಥೆಮಾಡಿಕೊಂಡರೆ ಅದಕ್ಕೆ ತಕ್ಕಂತೆ ಒಂದು ದಾನಕ್ರಿಯೆಯನ್ನೂ ಇಟ್ಟುಕೊಂಡರೆ ಅದು ಋಷಿಪಂಥಕ್ಕೆ ಸೇರಿದ ದಾನಕ್ರಿಯೆ"

ಸೂಚನೆ: 10/12/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.