Saturday, December 26, 2020

ನಿಯಮ - ಶೌಚ (Niyama - Sauca)

ಲೇಖಕರು: ಶ್ರೀ ಜಿ ನಾಗರಾಜ

(ಪ್ರತಿಕ್ರಿಯಿಸಿರಿ lekhana@ayvm.in)

  


ಆಷ್ಟಾಂಗ ಯೋಗದ ಎರಡನೇ ಮೆಟ್ಟಿಲೇ ನಿಯಮ. ನಿಯಮವು ವಿಧಿ ಅಂದರೆ, ಆಚರಿಸಬೇಕಾದ ಕರ್ಮಗಳ ರೂಪದಲ್ಲಿದೆ. ಪತಂಜಲಿ ಯೋಗಸೂತ್ರದಲ್ಲಿ ನಿಯಮವನ್ನು ಐದು ವಿಧವಾಗಿ ವಿಂಗಡಿಸಿದ್ದಾರೆ. ಯಾವುವೆಂದರೆ - ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ. ಇವುಗಳಲ್ಲಿ ಶೌಚವು ಬಾಹ್ಯ ಶೌಚ ಮತ್ತು ಆಂತರಿಕ ಶೌಚ ಎಂದು ಎರಡು ಬಗೆಯಾಗಿದೆ. ಜಲ ಹಾಗೂ ಮೃತ್ತಿಕೆ(ಮಣ್ಣು) ಯಿಂದ ಶರೀರವನ್ನು ಶು ಮಾಡಿಕೊಳ್ಳುವುದು ಬಾಹ್ಯ ಶುದ್ಧಿ ಎನ್ನಿಸಿಕೊಳ್ಳುತ್ತದೆ. ಕೆಮ್ಮಣ್ಣು ದುರ್ಗಂಧ ನಿವಾರಣೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಹೀಗಾಗಿ ಇಂದು ಬಳಸುವ ಸೋಪಿನ ಬದಲು ಕೆಮ್ಮಣ್ಣನ್ನು ಬಳಸುವ ರೂಢಿ ಆರ್ಷ ಸಂಸ್ಕೃತಿಯಲ್ಲಿತ್ತು. ಮನಸ್ಸನ್ನು ಸಂಕುಚಿತವಾಗಿ ಮತ್ತು ಬಗ್ಗಡವಾಗಿ ಮಾಡುವ ಲೋಭ, ಮೋಹ, ಮದಗಳನ್ನು ಹೋಗಲಾಡಿಸಿಕೊಳ್ಳುವಿಕೆಯು ಆಂತರಿಕ ಶೌಚ.


ಯೋಗದ ತತ್ತ್ವಗಳು ಭಾರತೀಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಹರಡಿವೆ. ಪ್ರಸ್ತುತ, ಶೌಚವನ್ನು ಧರ್ಮಶಾಸ್ತ್ರಗಳು ಇನ್ನೂ ವಿಸ್ತರಿಸಿ, ದೇಹ, ಮನಸ್ಸುಗಳಲ್ಲದೇ, ಪದಾರ್ಥಗಳ ಶುದ್ಧಿ ಹಾಗೂ ಸ್ಥಳ ಶುದ್ಧಿಯನ್ನೂ ಸೇರಿಸಿಕೊಳ್ಳುತ್ತವೆ. ಭಾರತದ ಎಲ್ಲ ಜಾತಿವರ್ಗಗಳೂ ತಮಗೆ ಆಚರಿಸಲು ಸಾಧ್ಯವಾದಷ್ಟು ಇಂದಿಗೂ ವಿಸ್ತಾರವಾಗಿ ಶೌಚವನ್ನು ರೂಢಿಯಲ್ಲಿಟ್ಟುಕೊಂಡಿವೆ.


ನಿತ್ಯವೂ ಸ್ನಾನ ಮಾಡುವುದು, ಪಾತ್ರೆ ಪಡಗಗಳನ್ನು ತೊಳೆಯುವುದು, ಅಡುಗೆಗೆ ಬಳಸುವ ತರಕಾರಿ, ಧಾನ್ಯಗಳನ್ನು ತೊಳೆದು ಉಪಯೋಗಿಸುವುದು, ನೆಲವನ್ನು ಗುಡಿಸಿ ಸಾರಿಸುವುದು ಮುಂತಾದವು ದೇಹ, ಪದಾರ್ಥ, ಸ್ಥಳ (ದೇಶ) ಶುದ್ಧಿಯ ಉದಾಹರಣೆಗಳಾದರೆ, ದೇವರ ಪೂಜೆ, ಸ್ತೋತ್ರಗಳಿಂದ ಮನಸ್ಸಿನಲ್ಲಿ ಸತ್ತ್ವಗುಣವನ್ನು ಪ್ರಬೋಧಗೊಳಿಸುವುದು ಆಂತರಿಕ ಶುಧ್ಧಿಯ ಉದಾಹರಣೆಯಾಗುತ್ತದೆ.


ಆಧುನಿಕ ವಿಜ್ಞಾನವೂ ಸಹ "ಹೈಜೀನ್"(ನೈರ್ಮಲ್ಯ)ಹೆಸರಿನಲ್ಲಿ ಶೌಚವನ್ನು ಪ್ರಶಂಸಿಸುತ್ತದೆ ಮತ್ತು ಶೌಚಪಾಲನೆಗೆ ಮಾರ್ಗದರ್ಶನ ಮಾಡುತ್ತದೆ. ವಿಪರ್ಯಾಸವೆಂದರೆ, ಇಂದು ಆಧುನಿಕತೆಯ ಹೆಸರಿನಲ್ಲೇ ಹಲವರು ಶೌಚದಿಂದ ದೂರ ಸರಿಯುತ್ತಿದ್ದಾರೆ. ಪಾದರಕ್ಷೆ ಹಾಕಿಕೊಂಡೇ ಮನೆಯೊಳಗೆ ಓಡಾಡುವುದು, ಎಂಜಲು ಕೈಯಲ್ಲೇ ಬೇರೆ ಪದಾರ್ಥಗಳನ್ನು ಮುಟ್ಟುವುದು, ಒಬ್ಬರ ಎಂಜಲನ್ನು ಮತ್ತೊಬ್ಬರು ತಿನ್ನುವುದು ಹೀಗೆ ಧಾರ್ಮಿಕ ನಂಬಿಕೆಗಳನ್ನು ತೊಡೆಯುತ್ತಿದ್ದೇವೆ ಎನ್ನುವ ಮೌಢ್ಯದಲ್ಲಿ ಅಧುನಿಕ ವಿಜ್ಞಾನ, ಯೋಗ, ಧರ್ಮಶಾಸ್ತ್ರಗಳೆಲ್ಲದರ ವಿರುಧ್ಧವಾಗಿ ಹೋಗುತ್ತಿದ್ದಾರೆ. ಆದರೆ ಇದರಿಂದ ಯೋಗಕ್ಕಲ್ಲದೇ ಭೌತಿಕವಾಗಿ ಆರೋಗ್ಯಕ್ಕೂ ಸಹ ತೊಂದರೆಯಾಗುತ್ತದೆ.

ಶೌಚದ ಅನುಷ್ಠಾನವು ದೇಹಾರೋಗ್ಯ, ಲಾಘವ ಮತ್ತು ತಿಳಿಯಾದ ಮನಸ್ಸುಗಳನ್ನುಂಟು ಮಾಡಿ ಯೋಗ ಸಾಧನೆಗೆ ಅತ್ಯಂತ ಪೋಷಕವಾಗಿರುತ್ತದೆ.


ಸೂಚನೆ : 19/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .