Sunday, December 27, 2020

ಆರ್ಯಸಂಸ್ಕೃತಿ ದರ್ಶನ - 23 (Arya Samskruti Darshana - 23)

ಓಂ ಶ್ರೀಃ
ತ್ರಿಪುಂಡ್ರ 
ವಿಭೂತಿ
 ಲೇಖಕರು: ಡಾ|| ಎಸ್.ವಿ.ಚಾಮು.


     
ಬ್ರಹ್ಮಸೂತ್ರ, ಊರ್ಧ್ವಪುಂಡ್ರ, ತ್ರಿಪುಂಡ್ರ ಮುಂತಾದ ಧಾರ್ಮಿಕ ಚಿಹ್ನೆಗಳನ್ನು ಧರಿಸಿದರೆಯೇ ಸಾಕು, ಅದರಿಂದಲೇ ಎಲ್ಲವೂ ಸಂಪನ್ನವಾಗುತ್ತದೆ. ಅವುಗಳ ಅರ್ಥವನ್ನು ತಿಳಿಯದಿದ್ದರೂ ಪರವಾಗಿಲ್ಲ ಎಂಬ ಭಾವನೆಯು ಅನೇಕ ಧಾರ್ಮಿಕ ವಲಯಗಳಲ್ಲಿ ಇರುತ್ತದೆ. ಅದನ್ನು ಪೂರ್ತಿಯಾಗಿ ತಪ್ಪು ಎಂದು ಹೇಳಲಾಗುವುದಿಲ್ಲ. ಅವುಗಳಲ್ಲಿ ಆಳವಾದ ಶ್ರದ್ಧಾಭಕ್ತಿಗಳಿದ್ದ ಪಕ್ಷದಲ್ಲಿ, ದ್ರವ್ಯ, ಸ್ಥಾನ ಇವುಗಳ ಬಲದಿಂದ ಅವು ವ್ಯಕ್ತಿಯಲ್ಲಿ ಉತ್ಕರ್ಷವನ್ನು ಅವಶ್ಯವಾಗಿ ಉಂಟುಮಾಡುತ್ತವೆ. ಆದರೆ ಅವೆಲ್ಲವೂ ಪೂರ್ಣವಾದ ಆತ್ಮ ವಿಕಾಸವನ್ನು ಸೂಚಿಸುವ ಸಂಕೇತಗಳು. ಆದುದರಿಂದ ಆತ್ಮಪ್ರಭೋಧವನ್ನು ಸಂಪಾದಿಸಬೇಕಾದರೆ ಅವು ಒಳಗೊಂಡಿರುವ ಅರ್ಥದ ಕಡೆಗೆ ನಮ್ಮ ಗಮನವನ್ನು ಹರಿಸಲೇಬೇಕು. ಅರ್ಥವನ್ನರಿತ ನಂತರ ಅವು ಸೂಚಿಸುವ ಸಾಧನೆ, ದರ್ಶನ ಮತ್ತು ಅನುಭವಗಳನ್ನು ಸಂಪಾದಿಸುವ ಮಾರ್ಗದಲ್ಲಿ ನಡೆಯಬೇಕು. ಆಗ ಆ ಚಿಹ್ನೆಗಳ ಧಾರಣೆಯು ನಿಜವಾಗಿಯೂ ಅರ್ಥವತ್ತಾಗುತ್ತದೆ.

ಈ ಮಾತುಗಳನ್ನು ನಮ್ಮ ದೇಶದ ಧಾರ್ಮಿಕ ಚಿಹ್ನೆಗಳಲ್ಲಿ ಬಹಳ ಪ್ರಸಿದ್ಧವಾದ ತ್ರಿಪುಂಡ್ರದ ಮೂಲಕ ಉದಾಹರಿಸಲು ಯತ್ನಿಸುತ್ತೇವೆ. ತ್ರಿಪುಂಡ್ರವು ಶೈವ ಧರ್ಮದ ಒಂದು ಮುಖ್ಯವಾದ ಚಿಹ್ನೆ. ಅಂತ್ಯಜರಿಂದ ಹಿಡಿದು ಶೈವ ಧರ್ಮಾನುಸಾರಿಗಳೆಲ್ಲರೂ ಆದರದಿಂದ ಧರಿಸುವ ಈ ಚಿಹ್ನೆಯು ವಿಶೇಷವಾಗಿ ದಕ್ಷಿಣ ದೇಶದಲ್ಲಿ ಬಹಳ ವ್ಯಾಪಕವಾಗಿ ಇಂದೂ ಸಹ ಆಚರಣೆಯಲ್ಲಿರುತ್ತದೆ. ಅದು ಶಾಂಭವ ವ್ರತದ ಹೆಗ್ಗುರುತು.

ಶೈವ ಗ್ರಂಥಗಳು ಈ ತ್ರಿಪುಂಡ್ರವನ್ನು ಹೇಗೆ ನಿರ್ಮಿಸಬೇಕು, ಅದರ ಪ್ರಮಾಣ ಎಷ್ಟಿರಬೇಕು, ಅದನ್ನು ಯಾವ ಯಾವ ಸ್ಥಾನಗಳಲ್ಲಿ ಧರಿಸಬೇಕು, ಅದರ ಶಕ್ತಿ-ದೇವತೆ  ಮುಂತಾದವರು ಯಾರು? ಅದರಿಂದ ದೊರಕುವ ಫಲ ಏನು? ಮುಂತಾದ ವಿವರಗಳನ್ನು ವಿಸ್ತಾರವಾಗಿ ನಿರೂಪಿಸುತ್ತವೆ.

ಹಿಂದೆ ನಮ್ಮ ದೇಶದಲ್ಲಿದ್ದ ಕಾಳಾಮುಖ, ಕಾಪಾಲಿಕ ಮುಂತಾದ ಚಂಡ ಶೈವರು ಚಿತಾಭಸ್ಮವನ್ನೇ ಈ ಚಿಹ್ನವನ್ನು ರಚಿಸಲು ಬಳಸುತ್ತಿದ್ದರು ಎಂದು ಅವರಿಗೆ ಸಂಬಧಿಸಿದ ವಾಙ್ಮಯಗಳಲ್ಲಿ ಓದುತ್ತೇವೆ.  "ಶಿವನು ಚಿತಾಭಸ್ಮದಿಂದ ಅಲಂಕೃತನಾಗಿರುತ್ತಾನೆ" (ಚಿತಾರಜಃ ಪುಂಜ ವಿಚರ್ಚಿತಾಯ)ಮುಂತಾದ ವರ್ಣನೆಗಳನ್ನು ಓದಿದಾಗ ಶಿವಭಕ್ತರು ತಮ್ಮ ಆರಾಧ್ಯದೈವವನ್ನೇ ಅನುಕರಿಸುತ್ತಿದ್ದುದು ಅಸಹಜವಾಗಿ ಕಾಣುವುದಿಲ್ಲ. ಶೈವ ಶಾಸ್ತ್ರಗಳು ಅತಿವರ್ಣಾಶ್ರಮಿಗಳಾದ ಯತಿಗಳಿಗೆ ಶ್ಮಶಾನಾಗ್ನಿಯಿಂದ ಉಂಟಾದ ಭಸ್ಮವನ್ನೇ ತ್ರಿಪುಂಡ್ರಕ್ಕೆ ವಿಧಿಸುತ್ತವೆ. ಆದರೆ ಶಿಷ್ಟರಾದವರು ಬಹಳ ಹಿಂದಿನಿಂದಲೂ ಇತರ ವಿಧವಾದ ವಿಕಲ್ಪಗಳನ್ನೇ ಬಳಸುತ್ತಿದ್ದರು ಎಂದು ಯೋಚಿಸಬಹುದು. ಅಗ್ನಿಹೋತ್ರದಿಂದ ದೊರಕುವ ಹಾಗೂ ಶುದ್ಧವಾದ ಗೋಮಯದಿಂದ  ವಿಧಿವತ್ತಾಗಿ ಮಾಡಿದ ಭಸ್ಮವನ್ನೇ ಅವರು ಬಳಸುತ್ತಿದ್ದರು. ಶಿವಲಿಂಗಕ್ಕೆ ಲೇಪಮಾಡಿದ ಭಸ್ಮವಂತೂ ಅವರಿಂದ  ಬಹಳ ಮಾನ್ಯತೆಗೆ  ವಿಷಯವಾಗಿದ್ದಿತು.

ತ್ರಿಪುಂಡ್ರವನ್ನು ಶರೀರದಲ್ಲಿ 32, 16, 9, 8, 5 ಅಥವಾ 4 ಸ್ಥಾನಗಳಲ್ಲಿ ಧರಿಸಬೇಕೆಂದು ಶಾಸ್ತ್ರವು ವಿಧಿಸುತ್ತದೆ. ಶಿರಸ್ಸು, ಲಲಾಟ, ವಕ್ಷ (ಎದೆ) ಮತ್ತು ಭುಜಗಳೇ ಕೊನೆಯ ವಿಕಲ್ಪವು ಹೇಳುವ ನಾಲ್ಕು ಸ್ಥಾನಗಳು. ಬೇರೆ ಬೇರೆ ಸ್ಥಾನಗಳಲ್ಲಿ ಧರಿಸುವಾಗ ಶಿವನ ಬೇರೆ ಬೇರೆ ನಾಮಗಳನ್ನುಚ್ಚರಿಸುತ್ತಾ ಧರಿಸಬೇಕು ಎಂಬುದು ಶಾಸ್ತ್ರವಿಧಿ. ಭಸ್ಮಸ್ನಾನವು ಸಹ ಬಹಳ ಪ್ರಶಂಸೆಗೆ ವಿಷಯವಾಗಿರುತ್ತದೆ.

ಎರಡು ಸಂಧ್ಯೆಗಳಲ್ಲಿಯೂ, ಅರ್ಧರಾತ್ರಿಯಲ್ಲಿಯೂ, ಹಾಗೆಯೇ ಕರ್ಮಗಳ ಆರಂಭ ಮತ್ತು ಅವಸಾನಗಳಲ್ಲಿಯೂ ತ್ರಿಪುಂಡ್ರ ಧಾರಣೆಯು ಹೇಳಲ್ಪಟ್ಟಿರುತ್ತದೆ. ಅಶುದ್ಧವಾದ ಪದಾರ್ಥಗಳನ್ನು ಮುಟ್ಟಿದಾಗ ಭಸ್ಮಸ್ನಾನದಿಂದ ಶುದ್ಧಿಯು ವಿಧಿಸಲ್ಪಟ್ಟಿರುತ್ತದೆ.

ವಿಭೂತಿ ಧಾರಣೆಯಿಂದ ಮನುಷ್ಯನು ಪಶುಪತಿಯಾದ ಈಶ್ವರನನ್ನು ತಿಳಿಯುತ್ತಾನೆ. ಅವನು ಮತ್ತೆ ಈ ಭೂಮಿಯಲ್ಲಿ ಹುಟ್ಟುವುದಿಲ್ಲ, ಅವನಿಗೆ ಮೋಕ್ಷವು ಪ್ರಾಪ್ತಿಯಾಗುತ್ತದೆ, ಅವನು ಸಮಸ್ತ ಪಾಪಗಳಿಂದಲೂ ನಿರ್ಮುಕ್ತನಾಗುತ್ತಾನೆಂದು ಶೈವ ಶಾಸ್ತ್ರಗಳು ಘೋಷಿಸುತ್ತವೆ.

ಇವು ವಿಭಾತಿಧಾರಣೆಗೆ ಸಂಬಂಧಿಸಿದ ಹಲವು ಸಾಂಪ್ರದಾಯಿಕವಾದ ವಿವರಗಳು. ಭಸ್ಮಧಾರಣೆಗೆ ಅಷ್ಟು ಪ್ರಾಶಸ್ತ್ಯ ಬರಲು ಕಾರಣವೇನು? ಗಾಢವಾದ ಆಧ್ಯಾತ್ಮಿಕ ಆಚರಣೆಗೆ ಅಂಗವಾಗಿ ಭಸ್ಮವನ್ನು ಆರಿಸಲು ಕಾರಣವೇನು? ಮತ್ತು ಮೂರು ರೇಖೆಗಳ ರೂಪವಾದ ತ್ರಿಪುಂಡ್ರವು  ಏನನ್ನು ಸೂಚಿಸುತ್ತದೆ? ಅದರ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು? ಮುಂತಾದ ಹಲವು ಪ್ರಶ್ನೆಗಳು ಏಳುತ್ತವೆ. ಅವುಗಳನ್ನು ಯಥಾಮತಿಯಾ ಗಿ ಕೆಳಗೆ ಉತ್ತರಿಸಲು ಯತ್ನಿಸುತ್ತೇವೆ.

ಬಹಳ ಹಿಂದಿನ ಕಾಲದಿಂದಲೂ ರುದ್ರನು ಭಕ್ತಜನರಿಂದ "ಮಹಾದೇವ" ನೆಂದು  ಪೂಜಿಸಲ್ಪಟ್ಟಿರುವುದಕ್ಕೆ ಸಾಹಿತ್ಯ ಮತ್ತು ಸಂಪ್ರದಾಯಗಳೆರಡೂ ಸಾಕ್ಷಿಗಳಾಗಿರುತ್ತವೆ. ವೇದ ಮತ್ತು ಉಪನಿಷತ್ತಗಳು ಪರಬ್ರಹ್ಮ,ಪರಮಾತ್ಮ,ಪುರುಷ ಮುಂತಾದವರನ್ನು ವರ್ಣಿಸುವುದಕ್ಕೋಸ್ಕರ ಬಳಸುವ ಮಾತುಗಳನ್ನೇ ಶೈವಶಾಸ್ತ್ರಗಳು ರುದ್ರನಿಗೆ ಬಳಸುವುದನ್ನು ನೋಡಿದಾಗ, ಹೆಸರು ಬೇರೆಯಾದರೂ ಅವು ಹೊಗಳುವುದು ಪರಿಪೂರ್ಣ ಅಥವಾ ಅಂತಿಮ ಸತ್ಯವನ್ನೇ ಎಂಬುದರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅದಕ್ಕೆ " ಯಃ ಪ್ರಣವಃ ಸ ಸರ್ವವ್ಯಾಪೀ ಯಃ ಸರ್ವವ್ಯಾಪೀ ಸೋ  ನಂತಃ   ಯೋ  ನಂತಃ ತತ್ತಾರಂ ಯತ್  ತಾರಂ ತತ್ ಸೂಕ್ಷ್ಮಂ ಯತ್ ಸೂಕ್ಷ್ಮಂ ತಚ್ಛುಕ್ಲಂ ಯಚ್ಛುಕ್ಲಂ ತದ್ವೈದ್ಯುತಂ ತತ್ ಪರಂಬ್ರಹ್ಮೇತಿ ಸ ಏಕಃ ಸ ಏಕೋ ರುದ್ರಃ ಸ ಈಶಾನಃ ಸ ಭಗವಾನ್ ಸ ಮಹೇಶ್ವರಃ ಸ ಮಹಾದೇವಃ"  ಎಂಬ ಅಥರ್ವಶ್ಶಿರೋಪನಿಷತ್ತಿನ ಮಾತು ನಿದರ್ಶನ. ಆತ್ಮನ ವಿಷಯದಲ್ಲಿ ಪುರಾತನ ಉಪನಿಷದೃಷಿಗಳ ಮನಸ್ಸಿನಲ್ಲಿ ಆಡಿದ ಉನ್ನತೋನ್ನತವಾದ ಭಾವನೆಗಳನ್ನೇ ಅದು ರುದ್ರನ ವಿಷಯದಲ್ಲಿವ್ಯಕ್ತಪಡಿಸುತ್ತದೆ. ಪುರಾತನ ಉಪನಿಷತ್ತುಗಳು ಆತ್ಮನಿಂದಲೇ ಸೃಷ್ಟಿ, ಸ್ಥಿತಿ, ಲಯಗಳುಂಟಾಗುತ್ತವೆಂಬುದನ್ನು ಹೆಜ್ಜೆ ಹೆಜ್ಜೆಗೂ ಒತ್ತಿ ಹೇಳುತ್ತವೆ. "ರುದ್ರನೇ ಎಲ್ಲಲೋಕಗಳನ್ನೂ ಸೃಷ್ಟಿಸಿ ರಕ್ಷಿಸುತ್ತಾನೆ: ಅವನೇ  ಅಂತಕಾಲದಲ್ಲಿ ಅವೆಲ್ಲವನ್ನೂ ತನ್ನಲ್ಲಿ ಉಪಸಂಹಾರ ಮಾಡಿಕೊಳ್ಳುತ್ತಾನೆ" ಎಂಬ ಶೈವಶಾಸ್ತ್ರಗಳ ಮಾತೂ ಅದನ್ನೇ ಪುನರುಕ್ತಿಸುತ್ತದೆ.

ರುದ್ರನು ಸೃಷ್ಟಿ ಸಂಹಾರಗಳೆರಡನ್ನೂ ಮಾಡುವ ಪರದೇವತೆ ಎಂಬ ಈ ಭಾವನೆಯು  ಹಲವು ವಿಶೇಷವಾದ ರೀತಿಗಳಲ್ಲಿ ತನ್ನನ್ನು ವ್ಯಕ್ತಪಡಿಸಿಕೊಂಡಿರುತ್ತದೆ. ರುದ್ರನು ಅರ್ಧನಾರೀಶ್ವರನೆಂಬ ಕಲ್ಪನೆಯಲ್ಲಿ ನಾವು ಅದನ್ನು ನೋಡುತ್ತೇವೆ. "ಅವನು ಪಾರ್ವತಿಯ ರೂಪದಲ್ಲಿ ಲಾಸ್ಯದ ಮೂಲಕ ಪ್ರಪಂಚವನ್ನು ಸೃಷ್ಟಿಸುತ್ತಾನೆ. ಅವನೇ ತನ್ನ ತಾಂಡವದ ಮೂಲಕ ಪ್ರಪಂಚವನ್ನು ಸಂಹಾರ ಮಾಡುತ್ತಾನೆ" ಎಂಬ ಅರ್ಧನಾರೀಶ್ವರ ಸ್ತೋತ್ರದ ವಚನವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ರುದ್ರನ ಇಬ್ಬಗೆಯಾದ ರೂಪವನ್ನು ಹೇಳುವ ಬೇರೆ ವಿಧವಾದ ಪರಿಭಾಷೆಗಳೂ ಸಹ ಕಂಡುಬರುತ್ತವೆ. ಉದಾಹರಣೆಗೆ, ಒಂದು ವೇದ ಮಂತ್ರವು ರುದ್ರನನ್ನು

ಯೋ ರುದ್ರೋ ಅಗ್ನೌ ಯೋ ಅಪ್ಸ್ವಂತಃ ಯ ಓಷಧೀರ್ವೀರುಧ ಆವಿವೇಶ|  
ಯ ಇಮಾ ವಿಶ್ವಾಭುವನಾನಿ ಚಕ್ಷುಷೇ ತಸ್ಮೈ ರುದ್ರಾಯ ನಮೋ ಅಸ್ತು||

ಎಂಬುದಾಗಿ  ಸ್ತೋತ್ರ ಮಾಡುತ್ತದೆ. "ರುದ್ರನು ಆಗ್ನಿಯಲ್ಲಿರುತ್ತಾನೆ. ಅವನೇ ಜೀವ ಸೃಷ್ಟಿಗೆ ಕಾರಣವಾದ ನೀರು, ಓಷಧಿ ಮತ್ತು ಲತೆಗಳಲ್ಲಿರುತ್ತಾನೆ" ಎಂಬುದು ಮಂತ್ರದ ತಾತ್ಪರ್ಯ. ಅವುಗಳಲ್ಲಿ ಅಗ್ನಿಯು ಸಂಹಾರಶಕ್ತಿಯನ್ನೂ, ರುದ್ರನು ಪ್ರವೇಶಿಸಿರುವ ನೀರು ಮುಂತಾದವು ಸೃಷ್ಟಿ ಶಕ್ತಿಯನ್ನೂ ಪ್ರತೀಕಿಸುತ್ತವೆ. ಈ ಜಗತ್ತೆಲ್ಲವೂ "ಅಗ್ನಿಷೋಮಾತ್ಮಕವಾದುದು" ಎಂಬಲ್ಲಿಯೂ ಸಹ ಇದೇ ಭಾವನೆಯನ್ನು ನೋಡುತ್ತೇವೆ. ಅಗ್ನಿಯು ಸಂಹಾರಶಕ್ತಿಯಾದರೆ, ಓಷಧಿ ವನಸ್ಪತಿಗಳಿಗೆ ಅಧಿಪತಿಯಾದ, ಅಮೃತಮಯನಾದ ಸೋಮನು ಸೃಷ್ಟಿಶಕ್ತಿ. ಅವೂ ಸಹ ರುದ್ರನ ರೂಪಗಳೇ ಎಂಬುದಾಗಿ ಕೇಳುತ್ತೇವೆ.

ಸೃಷ್ಟಿಸಂಹಾರ(ಜನ್ಮಮೃತ್ಯು)ಗಳು ಒಂದು ಮತ್ತೊಂದನ್ನು ಅವಲಂಬಿಸಿರುತ್ತವೆ. ಒಂದು ಮತ್ತೊಂದನ್ನು ಅನುಸರಿಸುತ್ತದೆ. ಅವರೆಡರ ಮೂಲದಲ್ಲಿರುವ ಶಕ್ತಿ ಒಂದೇ. ಆ ಶಕ್ತಿಯೇ ರುದ್ರ ಎಂಬುದು ಈ  ಕಲ್ಪನೆಗಳೆಲ್ಲದರ ತಾತ್ಪರ್ಯ. ಆದರೆ ಕಟ್ಟಕಡೆಯದಾಗಿ ಹೇಳುವುದಾದರೆ ಸಂಹಾರ ಕ್ರಿಯೆಯೇ ರುದ್ರನ ಪ್ರಧಾನವಾದ ಲಕ್ಷಣವಾಗಿ ಉಳಿಯುತ್ತದೆ. ಅಗ್ನಿಯೂ ಮತ್ತು ಅಗ್ನಿಯಲ್ಲಿರುವ ರುದ್ರನೂ ಆ ಸಂಹಾರ ಕ್ರಿಯೆಯ ಅಂತಿಮ ಸಂಕೇತಗಳಾಗಿರುತ್ತಾರೆ. ಈ ಭಾವನೆಯಿಂದ ಭಸ್ಮವು ತನ್ನ ಗಾಢವಾದ ಒಳ ಅರ್ಥವನ್ನು ತೆಗೆದುಕೊಳ್ಳುತ್ತದೆ. ಭಸ್ಮ ಎಂದರೆ ಸೃಷ್ಟಿಯ ಹಿಂಬದಿಯಲ್ಲಿ ನಿತ್ಯವಾಗಿರುವ ಸಂಹಾರ ತತ್ವ. ಆದುದರಿಂದಲೇ ಶೈವ ಶಾಸ್ತ್ರಗಳು " ಅಗ್ನಿಯೆಂದರೆ ಭಸ್ಮ, ವಾಯುವೆಂದರೆ ಭಸ್ಮ, ಜಲವೆಂದರೆ ಭಸ್ಮ, ಸ್ಥಲವೆಂದರೆ ಭಸ್ಮ, ಆಕಾಶವೆಂದರೆ ಭಸ್ಮ" ಎಂಬುದಾಗಿ ಘೋಷಿಸುತ್ತವೆ. ಅವುಗಳ ಪ್ರಕಾರ ಇದನ್ನು ದೃಢವಾಗಿ ತಿಳಿದವನೇ ಮಹಾಪಾಶುಪತವೆನಿಸಿಕೊಳ್ಳುತ್ತಾನೆ

ಆದರೆ ಭಸ್ಮವು ಕೇವಲ ನಿಷೇಧಾತ್ಮಕವಾದ (negative) ಕ್ರಿಯೆ ಅಥವಾ ಸ್ಥಿತಿಯನ್ನು ಮಾತ್ರ ಸೂಚಿಸುವುದಿಲ್ಲ. ಅದರಲ್ಲಿ ವಿಧಿರೂಷ (positive) ಅರ್ಥ ಹಾಗೂ ಭಾವನೆಯು ಸಹ ಇರುತ್ತದೆ. ಉದಾಹರಣೆಗೆ ಶ್ರೀ ಕೃಷ್ಣ ಪರಮಾತ್ಮನು "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇರ್ಜುನ" ಎಂದು ಹೇಳಿದಾಗ ಅವನ ಮಾತು ಒಂದು ಕಡೆ ಜ್ಞಾನಾಗ್ನಿಯಿಂದ ಕರ್ಮಗಳ ನಾಶವನ್ನು  ಹೇಳಿದರೆ, ಮತ್ತೊಂದು ಕಡೆ ಜ್ಞಾನದ ಉದಯವನ್ನು ಸೂಚಿಸುತ್ತದೆ. ಹಾಗೆಯೇ ಸೃಷ್ಟಿಯೆಲ್ಲವೂ ಭಸ್ಮವಾದಾಗ, ಸೃಷ್ಟಿಗೆ ಮೂಲವಾದ ಈಶ್ವರನು ಗೋಚರಕ್ಕೆ ಬರುತ್ತಾನೆಂಬ ಅಂಶವೂ ಸಹ ಭಸ್ಮದ ಸಾಂಕೇತಿಕ ಅರ್ಥದಿಂದ ಹೊರಪಡುತ್ತದೆ. ಅದು ಶಿವನನ್ನು ಸೂಚಿಸುವ ಸಾಂಕೇತಿಕ ವಸ್ತು. ಶಿವನ ಸ್ಮರಣೆಯನ್ನುಂಟುಮಾಡುವ  ಪದಾರ್ಥ. ಆದುದರಿಂದಲೇ ವಿಧಿ ಪೂರ್ವಕವಾಗಿ ಎಂದರೆ ಉನ್ನತವಾದ ಭಾವನೆಗಳಿಂದ ನಿರ್ಮಿತವಾದ ವಿಭೂತಿಗೆ ಅಷ್ಟು ಪವಿತ್ರತೆ. ಅದು ವ್ಯಯವಾದ ಈ  ಜಗತ್ತಿನ ಹಿಂದೆ ಸರ್ವದಾ ಇರುವ ಅವ್ಯಯನಾದ ಈಶ್ವರನ ದ್ಯೋತಕವಾಗಿರುತ್ತದೆ. ಜ್ಯೋತಿರ್ಮಯನಾದ ಅವನಿಂದ ಅದು ತನ್ನ ಅರ್ಥ ಬಾಹುಳ್ಯವನ್ನು ತೆಗೆದುಕೊಳ್ಳತ್ತದೆ.

ಈ ಅಂಶವು ತ್ರಿಪುಂಡ್ರದ  ಅರ್ಥದಿಂದ ಇನ್ನೂ ಸ್ಪಷ್ಟವಾಗಿ ಆಗುತ್ತದೆ. ನಾವೆಲ್ಲರೂ ತಿಳಿದಿರುವಂತೆ ತ್ರಿಪುಂಡ್ರವು ಅಡ್ಡಲಾದ ಮೂರು ರೇಖೆಯಲ್ಲಿರುವುದಷ್ಟೇ. ಆ ಮೂರು ರೇಖೆಗಳೂ ಪ್ರಣವದ ಮೂರು ಮಾತ್ರೆಗಳನ್ನೇ ಸೂಚಿಸುತ್ತವೆಂದು ಶೈವ ಶಾಸ್ತ್ರಗಳಲ್ಲಿ ಓದುತ್ತೇವೆ.  "ಅವುಗಳಲ್ಲಿ ಮೊದಲನೆಯ ರೇಖೆ ಯಾವುದುಂಟೋ ಅದು ಗಾರ್ಹಪತ್ಯ, ಆಕಾರ, ರಜೋಗುಣ, ಭೂಲೋಕ,ಆತ್ಮ, ಕ್ರಿಯಾಶಕ್ತಿ, ಋಗ್ವೇದ ಮತ್ತು ಪ್ರಾತಃಸವನಗಳನ್ನು ಸೂಚಿಸುತ್ತದೆ. ಪ್ರಜಾಪತಿಯು ಅದರ ದೇವತೆ ಎರಡನೆಯ ರೇಖೆ ಯಾವುದುಂಟೋ ಅದು ದಕ್ಷಿಣಾಗ್ನಿ, ಉಕಾರ, ಸತ್ವಗುಣ, ಅಂತರಿಕ್ಷ, ಅಂತರಾತ್ಮ, ಇಚ್ಛಾಶಕ್ತಿ, ಯಜುರ್ವೇದ ಮತ್ತು ಮಧ್ಯಾಹ್ನದ ಸವನಗಳನ್ನು ಸೂಚಿಸುತ್ತದೆ. ವಿಷ್ಣುವು ಅದರ ದೇವತೆ. ಮೂರನೆಯ ರೇಖೆಯು ಯಾವುದುಂಟೋ ಅದು ಆಹವನೀಯಾಗ್ನಿ, ಮಕಾರ, ತಮೋಗುಣ, ದ್ಯೌಸ್ಸು. ಪರಮಾತ್ಮ, ಜ್ಞಾನಶಕ್ತಿ, ಸಾಮವೇದ ಮತ್ತ  ಸಾಯಂ ಸವನಗಳನ್ನು ಸೂಚಿಸುತ್ತದೆ. ಅದರ ದೇವತೆ ಮಹಾದೇವ" ಎಂದು ಜಾಬಾಲೋಪನಿಷತ್ತು ಹೇಳುತ್ತದೆ. ಬೃಹಜ್ಜಾಬಾಲೋಪನಿಷತ್ತು ಸಹ ತ್ರಿಪುಂಡ್ರವು ಪ್ರಣವವನ್ನೇ ಪ್ರತೀಕಿಸುತ್ತದೆ ಎಂಬುದನ್ನು ಪುನರುಕ್ತಿ ಮಾಡುತ್ತದೆ.
ಬ್ರಹ್ಮ ವಿಷ್ಣು ಮಹೇಶಾನಾಂ ತ್ರಯ್ಯಗ್ನೀನಾಂ ಚ ಧಾರಣಂ|
ಗುಣ ಲೋಕತ್ರಯಾಣಾಂ ಚ  ಧಾರಣಂ ತೇನ ವೈಶ್ರುತಂ||

ನಾವು ಪ್ರಣವ ವಿದ್ಯೆಯ ಅರ್ಥವನ್ನು ಈಗಾಗಲೇ ವಿಸ್ತಾರವಾಗಿ ನಿರೂಪಿಸಿರುತ್ತೇವೆ (ಆರ್ಯಸಂಸ್ಕೃತಿ ಸಂಪುಟ ೨ ಸಂಚಿಕೆ ೧೦ರಿಂದ ಸಂಪುಟ ೩ ಸಂಚಿಕೆ ೬ವರೆಗೆ). ಅದು ಭಾರತೀಯ ಮಹರ್ಷಿಗಳ ತಪಸ್ಸಿನಿಂದ ಅವರಿಗೆ ಸೃಷ್ಟಿಯ ವಿಷಯದಲ್ಲಿ ಗೋಚರಿಸಿದ ದರ್ಶನ, ಅನುಭವ ವಿಚಾರಗಳೆಲ್ಲವನ್ನೂ ಸಂಪುಟಿತವಾಗಿ ಮಾಡಿಕೊಂಡಿರುವ ಸಾರ ವಿದ್ಯೆಯೆಂಬುದನ್ನು ನಾವು ನೋಡಿತ್ತಿರುತ್ತೇವೆ.  ಪರಮಾತ್ಮನೆಂಬ ಮೂಲ ಜ್ಯೋತಿಯಿಂದ ನಾದವೂ  ಮತ್ತು ಆ ನಾದದಿಂದ ವಿಶ್ವದ ಸೃಷ್ಟಿಯೂ ಉದಯವಾಗಿರುತ್ತದೆ ಎಂಬುದು ಅದರ ಸಾರಾಂಶವಾಗಿರುತ್ತದೆ. ಆ ನಾದವೇ ಊರ್ಧ್ವಮುಖವಾಗಿ ನಡೆದಾಗ ವಿಶ್ವವೆಲ್ಲವೂ  ಕಡೆಗೆ ಆ ಜ್ಯೋತಿಯಲ್ಲಿ ವಿಲೀನವಾಗುತ್ತದೆ. ಆ ರೀತಿ ಆಗುವುದು ತಾನೇ ಪರಿಪೂರ್ಣವಾದ ಜ್ಞಾನಸ್ಥಿತಿ ಎಂಬುದನ್ನು ಅದು ಸಾರುತ್ತದೆ. "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಾಸಾತ್ಕುರುತೇರ್ಜುನ" ಎಂಬ ಭಗವದ್ವಚನದ ಲಕ್ಷ್ಯವು ಈ ಪ್ರಣವ ವಿದ್ಯೆಯಲ್ಲಿಯೂ ಮತ್ತು ಅದು ಪ್ರತೀಕಿಸುವ ಜ್ಞಾನ, ವಿಜ್ಞಾನ ದರ್ಶನ ಮತ್ತು ಅನುಭವಗಳಲ್ಲಿಯೂ ಸಹ ಇರುತ್ತದೆ..

ಭಸ್ಮದಿಂದ ಇಟ್ಟುಕೊಳ್ಳುವ ತ್ರಿಪುಂಡ್ರವು ಪ್ರತೀಕಿಸುವುದು ಆ ಪ್ರಣವ ವಿದ್ಯೆಯನ್ನೇ. ಆ ಪ್ರಣವ ವಿದ್ಯೆಯನ್ನು ಅಷ್ಟಾಂಗ ಯೋಗದ  ಸಹಾಯದಿಂದ  ಸಾಧಿಸಿದಾಗ ಒಬ್ಬ ಜ್ಞಾನಿಗೆ ಅವನ ಅಂತರಾತ್ಮದಲ್ಲಿ ಉಂಟಾಗುವ ಜ್ಞಾನಾನುಭವಗಳನ್ನೇ ಅದನ್ನ ಸಾಧಿಸಿದವನಲ್ಲಿ ಅದು ಪ್ರಣವ ವಿದ್ಯೆಯಿಂದ ದೊರಕುವ ಒಳ ಪೂರ್ಣತೆಯನ್ನು ಪ್ರತೀಕಿಸುವ ಚಿಹ್ನವಾದರೆ, ಬೇರೆಯವರಿಗೆ ಧರ್ಮ  ಜೀವನದಿಂದ ಏನನ್ನು ಸಾಧಿಸಬೇಕು ಎಂಬುದನ್ನು ಸೂಚಿಸುವ ಒಂದು ಅಮೂಲ್ಯವಾದ ಗುರುತಾಗಿರುತ್ತದೆ. ಅದೇ ಅದರ ಅರ್ಥ.

ನಾವು ಪತ್ರಿಕೆಯಲ್ಲಿ ಬೇರೊಂದು ಕಡೆ ಊರ್ಧ್ಯಪುಂಡವನ್ನು ತೆಗೆದುಕೊಂಡು ವಿವರಿಸುವಾಗ ಅದೂ ಸಹ ಪ್ರಣವದೊಡನೆ  ಹತ್ತಿರದ ಸಂಬಂಧ ಹೊಂದಿರುವುದರ ಕಡೆಗೆ ವಾಚಕರ ಗಮನವನ್ನು ಸೆಳೆದವು. ಅದರಲ್ಲಿರುವ ಮರ್ಮವೇ ತ್ರಿಪುಂಡ್ರದಲ್ಲಿಯೂ ಇರುತ್ತದೆ. ಎರಡು ಚಿಹ್ನೆಗಳು ಬೇರೆ ಬೇರೆ. ಅವುಗಳ ಹಿಂದಿರುವ ಸಂಪ್ರದಾಯಗಳು ಬೇರೆ ಬೇರೆ. ಪ್ರಕ್ರಿಯೆಗಳೂ ಬೇರೆ ಬೇರೆ. ಆದರೆ ಎರಡೂ ಯೋಗ ವಿಜ್ಞಾನದ ಅಥವಾ ಪ್ರಣವ ವಿದ್ಯೆಯ ಆಸರೆಯನ್ನೇ ಅನುಸರಿಸಿ ವಿಶ್ವಪತಿಯಾದ, ವಿಶ್ವಪಿತನಾದ, ಭಗವಂತನ ಕಡೆಗೇ ನಮ್ಮ ದೃಷ್ಟಿಯನ್ನು ಸೆಳೆಯುತ್ತವೆ. ಎರಡು ಚಿಹ್ನೆಗಳ ಲಕ್ಷ್ಯವೂ ಒಂದೇ ಆಗಿರುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ: ೦೬ ಏಪ್ರಿಲ್: ೧೯೮೨  ತಿಂಗಳಲ್ಲಿ  ಪ್ರಕಟವಾಗಿದೆ.