Sunday, December 6, 2020

ಆರ್ಯಸಂಸ್ಕೃತಿ ದರ್ಶನ - 20 (Arya Samskruti Darshana - 20)

  " ಸನಾತನ "  ಎಂದರೇನು?

ಲೇಖಕರು: ವಿದ್ವಾನ್||ಶ್ರೀ ಛಾಯಾಪತಿ



ಸನಾತನಧರ್ಮ, ಸನಾತನಸಂಪ್ರದಾಯ, ಸನಾತನಿ ಮೊದಲಾದ ಎಡೆಗಳಲ್ಲಿ ಸನಾತನ ಎಂಬ ಪದವನ್ನು ನಾವು ಬಳಸುತ್ತೇವೆ. ಹಾಗೆ ಬಳಸುವಾಗ ಸನಾತನ ಎಂಬ ಪದವು ಹಳೆಯದು, ಹಿಂದಿನ ಕಾಲದ್ದು ಎಂಬರ್ಥವನ್ನು ಒಳಗೊಂಡಿದೆಯೆಂಬುದೇ ನಮ್ಮ ಭಾವನೆ. ಆಧುನಿಕ ವಿಚಾರವಾದಿಗಳಂತೂ ಸನಾತನ ಎಂದರೆ ಜಡ್ಡುಹಿಡಿದ ಹಳೆಯಕಾಲ, ಮತ್ತು ಅದಕ್ಕೆ ಸಂಬಂಧಿಸಿದ ವ್ಯವಹಾರ ಎಂಬುದಾಗಿಯೇ ಅರ್ಥ ಮಾಡುವುದು ಕಂಡುಬರುತ್ತದೆ.

ಹಳೆಯದು, ಹಿಂದಿನದು ಎಂಬುದು ಸನಾತನ ಪದದ ಅರ್ಥವಲ್ಲ. ಅಮರಕೋಶಕಾರನೂ  "ಸದಾತನ ಸನಾತನಾಃ" ಎಂಬುದಾಗಿ ಹೇಳಿ ಎಂದೆಂದಿಗೂ ಇರುವುದು ಎಂಬ ಅರ್ಥವನ್ನು ಹೇಳುತ್ತಾನೆ. ಆದ್ದರಿಂದ "ಸನಾತನ" ಎಂದರೆ ಎಂದೆಂದಿಗೂ ಇರುವುದು, ಚಿರಪುರಾತನವಾದರೂ ನಿತ್ಯನೂತನವಾದುದು - ಎಂಬ ಅರ್ಥವಿದೆಯೇ ಹೊರತು ಕೇವಲ ಹಳೆಯದು ಎಂಬ ಅರ್ಥವಲ್ಲ ಎಂಬುದು ಗಮನಾರ್ಹವಾಗಿದೆ. ಸನಾತನ ಎಂಬ ಪದವು ನಿತ್ಯವಾದುದು, ಶಾಶ್ವತವಾದದ್ದು. ಎಂಬ ಅರ್ಥವನ್ನೇ ಹೇಳುತ್ತದೆ. ಮೇಲಿನ ಪದಗಳು ನಿತ್ಯಶಾಶ್ವತವಾದ ಬಣ್ಣಿಸಲಾಗದ ಧರ್ಮ, (ಸನಾತನ ಧರ್ಮ) ನಿತ್ಯಶಾಶ್ವತವಾಗಿ ಬೆಳೆಸಿದ ಸಂಪ್ರದಾಯ.( ಸನಾತನ ಸಂಪ್ರದಾಯ) ನಿತ್ಯಶಾಶ್ವತವಾದ ಬದುಕಿನ ವಿಧಾನವನ್ನನುಸರಿಸಿದವನು(ಸನಾತನಿ), ಎಂಬರ್ಥವನ್ನು ಒಳಗೊಂಡಿವೆಯೇ  ಹೊರತು ಹಿಂದಿನದು ಎಂದಲ್ಲ.

ಕಾಲದ ಪ್ರಭಾವವು ವಿಶ್ವದ ರೂಪವೆಲ್ಲವನ್ನೂ ಕೊಚ್ಚಿಹಾಕಿ ಬದಲಿಸುತ್ತಿರುವಾಗ ನಿತ್ಯ ಶಾಶ್ವತ ಎಂಬುದುಂಟೇ? ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಬದಲಾಗದ ವ್ಯವಸ್ಥೆ  ಎಂಬುದೊಂದುಂಟೀ-ಎಂಬಂಶವೂ ವಿಚಾರಣೀಯವಾಗಿದೆ. ಮಾನವನ ಆಗಮದಿಂದ ಇಂದಿನವರೆಗೆ ಆಲೋಚಿಸುವುದು ಬುದ್ಧಿ, ನೋಡುವುದು ಕಣ್ಣು, ಎಂಬ ವ್ಯವಸ್ಥೆಗಳಲ್ಲಿ ಬದಲಾವಣೆಯಿಲ್ಲ. ಕಾಲಬದಲಾದಂತೆ ಬದಲಾಗುವ ವ್ಯವಸ್ಥೆಯಿರುವಂತೆ ಬದಲಾಗದ ವ್ಯವಸ್ಥೆಗಳೂ ಇರುತ್ತವೆ. ಮಾನವನ ಉಗಮವೇ ಕಾಲಕ್ಕೆ ಒಳಪಟ್ಟುದಲ್ಲವೇ ಎಂದರೆ, ಹೌದು. ಕಾಲಕ್ಕೂ ಅದರ ಪರಿಣಾಮಕ್ಕೂ ಒಳಪಡದ ಎಡೆಯೊಂದಿದ್ದು, ಅದನ್ನು ಅರಿಯುವುದೂ, ಸಾಧ್ಯವಾಗಿ, ಅದನ್ನರಿತು ಅದರ ಮೇಲೆ ತಂದುಕೊಂಡ ವ್ಯವಸ್ಥೆಯು ನಿತ್ಯ-ಶಾಶ್ವತ ವ್ಯವಸ್ಥೆಯಾಗಬಹುದು'.

ಅಂತಹ ಬದಲಾಗದ ನಿತ್ಯ ಶಾಶ್ವತವಾದ ಬದುಕಾವುದು?  ಅದನ್ನು ಯಾರು ಹೇಗೆ ಕಂಡುಕೊಂಡರು?  ಅದನ್ನು ಸನಾತನ ಎಂದು ಕರೆದವರಾರು?  ಎಂಬೆಲ್ಲ ಪ್ರಶ್ನೆಗಳಿಗೂ ಉತ್ತರವಾಗುವ ಉಲ್ಲೇಖವೊಂದನ್ನು ಇಲ್ಲಿ ಗಮನಿಸಬಹುದು.

ಸ ಹಿ ಲೋಕಯೋನಿರಮೃತಸ್ಯ ಪದಮ್
ಸೂಕ್ಷ್ಮಂ ಪರಾಯಣಮಚಲಂ ಹಿ ಪದಮ್
ತತ್ಸಾಂಖ್ಯಯೋಗಿಭಿರುದಾಹೃತಂ ತಂ
ಬುದ್ಧ್ಯಾಯತಾತ್ಮಭಿರಿದಂ ಸನಾತನಮ್

ಅದು ಲೋಕಯೋನಿ, ವಿಶ್ವವು ವಿಕಾಸವಾಗುವ ಎಡೆ., ವಿಶ್ವವಿಸ್ತಾರಕ್ಕೆ ಮೂಲಕಾರಣವಾದ ಬದುಕು. ಅಮೃತದ ಸ್ಥಾನ. ಮೃತ್ಯುವು ಯಾವ ಎಡೆಯನ್ನು ಸೋಕಲಾರದೋ, ಯಾವ ಎಡೆಯನ್ನು ಮುಟ್ಟಿದಾಗ ವಿಶ್ವವನ್ನು ಯಾವಶಕ್ತಿ ತುಂಬಿಕೊಡಿದೆ ಎನ್ನುವ ಅರಿವು ಉಂಟಾಗುತ್ತದೆಯೋ ಅಂತಹ ಅಮೃತದ ನೆಲೆ. ಮೃತ್ಯುವಿನಿಂದ ಅಮೃತದೆಡೆಗೆ ನನ್ನನ್ನುಹೊಂದಿಸು ಎಂಬ ಭಾರತೀಯರ ಪ್ರಾರ್ಥನೆಯುಂಟೋ, ಯಾವ ಜಾಗವನ್ನು ಮುಟ್ಟಿದ ಜೀವಿಗೆ ಹುಟ್ಟು ಮತ್ತು ಸಾವುಗಳಿಗೆ ಸಿಕ್ಕದ ಮೂಲನೆಲೆಯು ದೊರಕುವುದೆಂಬ ಅನುಭವಪೂರ್ಣವಾದ ಜ್ಞಾನಿಗಳ ಮಾತಿದೆಯೋ, ಅಂತಹ ಅಮೃತದ ನೆಲೆ. ಆ ಅಮೃತದ ಎಡೆಯೂ ಲೋಕಯೋನಿಯೂ ಆದ ಬದುಕು ಸನಾತನ. ಅದು ಸೂಕ್ಷ್ಮ- ಸ್ಥೂಲ ದೃಷ್ಟಿಗೋಚರವಲ್ಲದ ಅತಿ ಸೂಕ್ಷ್ಮತಮವಾದ ಬದುಕು. ಅದು ಪರಾಯು- ಶ್ರೇಷ್ಠವಾದ ಗತಿ. ಶ್ರೇಷ್ಠವಾದ ಆಲಂಬನ. ಪರಮವಾದ ಗತಿ. "ಅಚಲಂ ಹಿ ಪದಮ್" ಚಲನೆಯಿಲ್ಲದ, ಬದಲಿಲ್ಲದ, ಸ್ಥಿರವಾದ ಬದುಕು. ವಿಶ್ವವೆಲ್ಲ ಚಲಿಸಿದರೂ, ಆ ವಿಶ್ವಕ್ಕೆಲ್ಲ ಚಾಲಕ ಶಕ್ತಿಯಾದರೂ ಚಲಿಸದೆಯಿರುವ ಎಡೆಯದು. ಚಲಿಸದ ಅಚಲವಾದ ಬದಕು ಅದು.

ಇಂತಹ ಬದುಕನ್ನು ಗುರುತಿಸಿ "ಸನಾತನ "ಎಂದು ಕರೆದವರಾದರೂ ಯಾರು? ಯತಾತ್ಮರಾದ ಸಾಂಖ್ಯಯೋಗಿಗಳು, ತತ್ತ್ವಸಂಖ್ಯಾನದ ಮರ್ಮವರಿತು,ತತ್ತ್ವ ನಿರ್ಣಯವನ್ನು ಗುರುತಿಸಬಲ್ಲ ಜ್ಞಾನಿಗಳೇ ಸಾಂಖ್ಯರು.ಬುದ್ಧಿ ಮನಸ್ಸುಗಳನ್ನು ಮುಂದಕ್ಕೆ ಮಾತ್ರವೇ ಹರಿಸದೇ ಹಿಂಬದಿಗೆ ಹರಿಸುತ್ತಾ, ಆವೃತ್ತಚಕ್ಷು (ತಿರುಗಿದ ಕಣ್ಣು)ಗಳಾಗಿ, ಪರಮ ಸೂಕ್ಷ್ಮವಾಗಿರುವಲ್ಲಿ ನೆಲೆಯ "ತನ್ಮನೋ ವಿಲಯಂ ಯಾತಿ ತದ್ವಿಷ್ಣೋಃ ಪರಮಂ ಪದಮ್" ಎಂಬುದಾಗಿ ಮನಸ್ಸನ್ನು ವಿಲೀನಗೊಳಿಸಿದಾಗ ಮುಟ್ಟುವ ಯಾವ ವಿಷ್ಣುಪದವುಂಟೋ ಅಲ್ಲಿಯವರೆಗೂ ಮನಸ್ಸನ್ನು ನಿರೋಧ ಮಾಡಿ ಸಾಂಖ್ಯಯೋಗಿಗಳಾದ ಜನರು, ಅವರು ಹೇಳಿದುದು ಹೇಗೆ?  ಯತಾತ್ಮರಾಗಿ ತಮ್ಮ ಆತ್ಮಸಂಯಮ ಮಾಡಿಕೊಂಡು, ಪ್ರಾಣ-ಮನಸ್ಸುಗಳೆಲ್ಲವನ್ನೂ ಕಟ್ಟಿ, ಕಟ್ಟಿ ಹಿಂಬದಿಗೆ ಹೋದಾಗ, ಪರಮಶ್ರೇಷ್ಠವಾದ ನೆಲೆಯಲ್ಲಿ ನಿಂತರೋ, ಆ ದರ್ಶನಗೋಚರವಾದ ವಿಷಯವನ್ನು ಆ ದರ್ಶನ ಭಾವದಿಂದಲೇ ಬುದ್ಧಿಗೂ ಇಳಿದಾಗ, ಆ ದರ್ಶನದಿಂದ ಅರಳಿದ ಬುದ್ಧಿಯ ಸಹಾಯದಿಂದ "ಸನಾತನಂ" ಎಂಬುದಾಗಿ ಕರೆದರು. ಬರಿಯ ಇಂದ್ರಿಯ ಸಹಕೃತವಾದ ಬುದ್ಧಿಯಿಂದ ಮಾತ್ರ ಸನಾತನವನ್ನು ಗುರುತಿಸುವುದು ಸಾಧ್ಯವಿಲ್ಲ. ಯೋಗದ ಹಾದಿ ತತ್ತ್ವಸಂಖ್ಯಾನದ ಹಾದಿಗಳನ್ನು ತುಳಿದು, ಜ್ಞಾನಿಗಳು ಯಾವುದನ್ನು ಸನಾತನ ಎಂದು ಕಂಡು ಹೇಳಿದರೋ ಆ ಹಾದಿಯಲ್ಲಿ ತಾವೂ ನಡೆದು ಕಂಡರೆ ಮಾತ್ರ "ಸನಾತನ" ಎಂಬ ಪದಕ್ಕೆ ವಿಷಯವಾದ ಬದುಕು ನಮಗೆ ಗೋಚರವಾಗುವುದು. ಅದು ಚಿರ ಪುರಾತನವೂ ಹೌದು, ನಿತ್ಯನೂತನವೂ ಹೌದು, ಎಂಬಂಶ ಅರಿವಿಗೆ ನಿಲುಕುವುದು. ಶ್ರೀರಂಗ ಮಹಾಗುರುವು ಈ ಸಂದರ್ಭದಲ್ಲಿ ನೀಡುತ್ತಿದ್ದ ಸುಂದರ ಉದಾಹರಣೆಯನ್ನು ಉಲ್ಲೇಖಿಸ ಬಯಸುತ್ತೇವೆ. ಇತರೆಡೆಗಳಲ್ಲಿ ಚಳಿಯನ್ನು ಅನುಭವಿಸಿದ ಜನಗಳನ್ನು ಹಿಮವತ್ಪರ್ವತದ ಗೌರೀಶಂಕರ ಶಿಖರದಲ್ಲೆಷ್ಟು ಚಳಿಯೆಂದರೆ, ತಾವು ಅನುಭವಿಸದಷ್ಟು ತೀವ್ರ ಚಳಿಯನ್ನು ಮಾತ್ರ ಹೇಳುವರು. ಆದರೆ ಆ ಮಟ್ಟದಲ್ಲಿ ಮೈಮರಗಟ್ಟಿ, ನಾಲಿಗೆ ಅಲುಗಿಸಿ ಮಾತನಾಡಲಾರದಷ್ಟು ಚಳಿಯಾಗುವುದೆಂಬುದನ್ನು ,ಆ  ಚಳಿಯ ಇತರ ಅನುಭವಗಳನ್ನು ಅನುಭವ ರಸಿಕನೇ ಬಲ್ಲನು . ಅಂತೆಯೇ ಯತಾತ್ಮರಾದ ಸಾಂಖ್ಯಯೋಗಿಗಳು ಅನುಭವದಿಂದ ಗುರುತಿಸಿದ "ಸನಾತನ" ಪದಾರ್ಥವನ್ನು ಅನುಭವಿಸಿಯೇ ಗುರುತಿಸಬಲ್ಲನು. ಆದ್ದರಿಂದ "ಸನಾತನ" ಎಂಬುದು ಜ್ಞಾನಿಗಳ ಅನುಭವಗೋಚರವಾದ ಸತ್ಯ. ಅದನ್ನು ಕಂಡು ಆ ಅರಿವು ಮರೆಯಾಗದಂತೆ ರೂಪಿಸಿದ ಧರ್ಮ, ಸಂಪ್ರದಾಯಗಳು ಸನಾತನವೆನ್ನಿಸಿಕೊಳ್ಳುವವೇ ಹೊರತು ಉಳಿದುವಲ್ಲ.

"ಸನಾತನ"ವಾದ ಬದುಕನ್ನರಿತು, ಸನಾತನ ಧರ್ಮದ ಉಸಿರನ್ನು ಗುರುತಿಸಿದ ಸಾಂಖ್ಯಯೋಗಿಯಾದ ಶ್ರೀಶ್ರೀರಂಗಮಹಾಗುರುವಿಗೆ ವಂದಿಸಿ, ಸನಾತನ ಪದಾರ್ಥ ವಿವರಣೆಯನ್ನು ಸನಾತನವಾದ ಬದುಕಿಗೆ ಅರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ 1981 ಸಂಪುಟ :8 ಸಂಚಿಕೆ:3 ರಲ್ಲಿ ಪ್ರಕಟವಾಗಿದೆ.