Saturday, December 5, 2020

ನಿತ್ಯ ಜೀವನದಲ್ಲಿ ಸತ್ಯಪಾಲನೆ (Nitya Jivanadalli Sathyapalane)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)


"ಸತ್ಯಮೇವ ಜಯತೇ" ಎನ್ನುವುದು ಹಿಂದಿನ ಕಾಲದ ಮಾತು, ಇಂದು ಅಸತ್ಯಕ್ಕೇ ಜಯ ಎನ್ನುವ ತಪ್ಪು ಅಭಿಪ್ರಾಯ ಕೆಲವೆಡೆಯುಂಟು. ಆದರೆ ಸತ್ಯಕ್ಕೇ ಜಯ ಎನ್ನುವುದರ ಬಗ್ಗೆ ಶ್ರೀರಂಗಮಹಾಗುರುಗಳು ಒಂದು ಮರ್ಮವನ್ನು ಬಿಚ್ಚಿಕೊಟ್ಟಿದ್ದರು. ಏನೆಂದರೆ, ಸುಳ್ಳನ್ನು ಜನ ಸತ್ಯವೆಂದುಕೊಂಡಾಗ ಮಾತ್ರ ಅದಕ್ಕೆ ಬೆಲೆಯೇ ಹೊರತು ಸುಳ್ಳು ಸುಳ್ಳೆಂದು ಗೊತ್ತಾದಾಗ ಯಾರೂ ಅದಕ್ಕೆ ಬೆಲೆ ಕೊಡುವುದಿಲ್ಲ. ಹೀಗಾಗಿ ಸತ್ಯಕ್ಕೇ ಎಂದಿಗೂ ಬೆಲೆ.


ಸುಳ್ಳನ್ನು ಸತ್ಯದಂತೆ ಕಾಣುವಂತೆ ಮಾಡುವುದಕ್ಕೆ ಪ್ರಯತ್ನ ಮತ್ತು ಜಾಣತನ ಬೇಕು. ಇದರ ಬದಲು ಸ್ವಲ್ಪ ಪ್ರಯತ್ನ ಮತ್ತು ಜಾಣತನವನ್ನು, ಸತ್ಯವನ್ನು ನಿಭಾಯಿಸುವುದಕ್ಕೇ ಬಳಸಿಕೊಂಡರೆ ಇನ್ನೂ ಹೆಚ್ಚು ಅನುಕೂಲವಾಗುತ್ತದೆ. ಒಂದು ಸುಭಾಷಿತವು, ಸತ್ಯವನ್ನು ಹೇಳಬೇಕು,(ಸತ್ಯವನ್ನು) ಪ್ರಿಯವಾಗಿ ಹೇಳಬೇಕು.  ಸತ್ಯವನ್ನು  ಅಪ್ರಿಯವಾಗಿ ಹೇಳಬಾರದು ಮತ್ತು ಪ್ರಿಯವಾಗಿದ್ದರೂ, ಸುಳ್ಳನ್ನು ಹೇಳಬಾರದು, ಎಂದು ಹೇಳುತ್ತದೆ. ಸತ್ಯವನ್ನು ಪ್ರಿಯವಾಗುವಂತೆ ಹೇಳಲಿಕ್ಕೆ ಜಾಣತನ ಬೇಕು. ಇಂದಿನ ಕಾಲದ ಕಾರ್ಪೊರೇಟ್ ಪ್ರಪಂಚದಲ್ಲಿ ಸುಳ್ಳಿನ ಮೂಲಕ ಪಡೆದ ತಾತ್ಕಾಲಿಕ ಸಫಲತೆ ಮತ್ತು ದೀರ್ಘ ವೈಫಲ್ಯ ಹಾಗು ಸತ್ಯವನ್ನು ಅನುಸರಿಸಿ ತಾತ್ಕಾಲಿಕ ಹಿನ್ನಡೆ ಹಾಗೂ ದೀರ್ಘ ಸಫಲತೆಗೆ ಅನೇಕ ಉದಾಹರಣೆಗಳುಂಟು. ಆಧುನಿಕ ಸಂಸ್ಥೆಯೊಂದು ಗ್ರಾಹಕರಿಗೆ ಪ್ರಾಜೆಕ್ಟ್ ಪೂರ್ಣಗೊಳಿಸಲು ಹಲವು ಬಾರಿ ವಿಫಲವಾಗಿದ್ದಾಗ, ಗ್ರಾಹಕರು ಒಪ್ಪಂದವನ್ನು ರದ್ದು ಪಡಿಸಲು ನಿಶ್ಚಯಿಸಿ ಕೊನೆಯದಾಗಿ ಒಂದು ಪ್ರಶ್ನೆ ಕೇಳಿದರು - ಇಡೀ ಪ್ರಾಜೆಕ್ಟ್ ನಲ್ಲಿ ನೀವು ಸರಿಯಾಗಿ ಮಾಡಿರುವ ಒಂದೇ ಒಂದು ಕೆಲಸವನ್ನು ಹೇಳಬಲ್ಲಿರಾ? ಎಂದು. ಆಗ ಸಂಸ್ಥೆಯ ಉದ್ಯೋಗಿಯೊಬ್ಬರು, ಇದುವರೆವಿಗೂ ನಿಮಗೆ ಒಂದೇ ಒಂದು ಸುಳ್ಳನ್ನೂ ಹೇಳಿಲ್ಲ, ಏನೇ ವೈಫಲ್ಯವಿದ್ದರೂ ಮುಚ್ಚಿಡದೇ ಹಾಗೆಯೇ ತೋರಿಸಿದ್ದೇವೆ ಎಂದುತ್ತರಿಸಿದರು. ತಕ್ಷಣವೇ ಗ್ರಾಹಕರಲ್ಲಿ ಸಂಚಲನವುಂಟಾಗಿ ಹೌದಲ್ಲಾ, ಈತ ಹೇಳುತ್ತಿರುವುದು ಸರಿ. ವೈಫಲ್ಯವನ್ನು ಮುಚ್ಚಿಡದೇ ಪಾರದರ್ಶಕವಾಗಿದ್ದರೆ, ಹಲವು ಬಾರಿಯಾದರೂ ಪ್ರಯತ್ನ ಪಟ್ಟು ಯಶಸ್ಸನ್ನು ಗಳಿಸಬಹುದು; ಆದರೆ ಸುಳ್ಳು ಹೇಳುವ ಜನವಾದರೆ ಎಂದಿಗೂ ಯಶಸ್ಸು ದೊರೆಯದು ಎನ್ನಿಸಿ ಒಪ್ಪಂದವನ್ನು ರದ್ದು ಮಾಡದೇ ಮುಂದುವರೆಸಿದರು. ಪ್ರಾಜೆಕ್ಟ್ ಯಶಸ್ವಿಯಾಗಿ ಪೂರ್ಣಗೊಂಡು ಸಂಸ್ಥೆ ಮತ್ತು ಗ್ರಾಹಕರಿಬ್ಬರ ತಂಡಗಳಿಗೂ ಸಂತೋಷಕ್ಕೆ ಕಾರಣವಾಯಿತು.


ಹೀಗೆ ಸತ್ಯವು ಅಧ್ಯಾತ್ಮಿಕ, ಲೌಕಿಕ ಉನ್ನತಿಗಳೆರಡಕ್ಕೂ ಕಾರಣವಾಗುತ್ತದೆ.

ಸೂಚನೆ:05/12/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .