Sunday, December 13, 2020

ದೇವಾಲಯವೆಂಬ ಅಭಿಜ್ಞಾನ (Devalayavemba abhijnana)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಮಹರ್ಷಿ ಕಣ್ವರ ಪವಿತ್ರವಾದ ಆಶ್ರಮಕ್ಕೆ ದುಷ್ಯಂತ ಮಹಾರಾಜನ ಆಗಮನವಾಗಿ, ಅಲ್ಲಿದ್ದ ಋಷಿ ಕನ್ಯೆ (ಕ್ಷತ್ರಿಯ ಕನ್ಯೆ)ಶಕುಂತಲೆಯಲ್ಲಿ ಅನುರಕ್ತನಾಗಿ ಗಾಂಧರ್ವ ರೀತಿಯಲ್ಲಿ ವಿವಾಹವಾದ. ಒಂದು ಉಂಗುರವನ್ನು ನೆನಪಿಗಾಗಿ ನೀಡಿ, ತನ್ನ ರಾಜ್ಯಕ್ಕೆ ಮರಳಿದ. ದುಷ್ಯಂತನ ಚಿಂತನೆಯನ್ನೇ ಮಾಡುತ್ತಿದ್ದ ಶಕುಂತಲೆಗೆ ದೂರ್ವಾಸರು ಆಶ್ರಮಕ್ಕೆ ಆಗಮಿಸಿದ್ದು ಗಮನಕ್ಕೆ ಬರಲಿಲ್ಲ. ಹಿರಿಯರಿಗೆ ಗೌರವ ನೀಡದ ಮನೋಧರ್ಮವನ್ನು ಸಹಿಸದ ಮುನಿವರ್ಯರು ಶಕುಂತಲೆಗೆ, ಸ್ಮರಿಸುತ್ತಿರುವ ವ್ಯಕ್ತಿಗೆ, ಈಕೆ ಮರೆತು ಹೋಗಲಿ ಎಂಬ ಶಾಪವಿತ್ತರು. ನಂತರ ಶಾಂತವಾಗಿ, ಅಭಿಜ್ಞಾನವಾದ ಉಂಗುರದಿಂದ ಸ್ಮರಣೆ ಬರುವಂತೆ ಅನುಗ್ರಹಿಸಿದರು. ಶಾಪದಂತೆ ಇತ್ತ ದುಷ್ಯಂತ, ಶಕುಂತಲೆಯನ್ನು ಮರೆತ. ಶಕುಂತಲೆ ಉಂಗುರ ಕಳೆದುಕೊಂಡಳು. ಎದುರಿಗೆ ಬಂದು ನಿಂತು ಹೇಳಿದರೂ, ಎಲ್ಲಾ ಋಷಿಗಳು ಹೇಳಿದರೂ, ದುಷ್ಯಂತನಿಗೆ ಶಕುಂತಲೆಯ ನೆನಪಾಗಲಿಲ್ಲ. ಎಲ್ಲವೂ ಸುಳ್ಳು ಎಂದು ಭಾಸವಾಯಿತು. ಕಾಲಕ್ರಮದಲ್ಲಿ ಉಂಗುರದ ನೋಟದಿಂದ, ಹಿಂದೆ ನಡೆದ ಘಟನಾವಳಿಗಳೆಲ್ಲವೂ ಸ್ಮರಣೆಗೆ ಬಂದಿತು. ಶಕುಂತಲೆಯನ್ನು ಒಪ್ಪಿಕೊಂಡು ವಿವಾಹವಾದನು.

ನಮ್ಮ ಜೀವನದಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದುಂಟು.  ಪ್ರೀತಿಯಿಂದ ಅಪ್ಪ ಕೊಡಿಸಿದ ಕೈಗಡಿಯಾರ ಎಂದು ಹಾಳಾಗಿದ್ದರೂ, ಭದ್ರವಾಗಿ ಜೋಪಾನ ಮಾಡಿರುವುದುಂಟು. ಅಂತೆಯೇ ಭೇಟಿ ನೀಡಿದ ಸ್ಥಳದ ನೆನಪಿಗಾಗಿ ಏನನ್ನೋ ಕೊಳ್ಳುವುದುಂಟು. ಅಂಗಡಿಗೆ ಹೋದಾಗ, ಹೇಳಿದ ಸಾಮಾನು ತರಲು ಮರೆಯಬಾರದು ಎಂದು, ಬಟ್ಟೆಯ ತುದಿಯನ್ನು ಗಂಟು ಹಾಕಿಕೊಳ್ಳುವುದುಂಟು. ಇಂತಹ ವಸ್ತುಗಳು ಅಥವಾ ಗುರುತುಗಳು ಅಭಿಜ್ಞಾನವಾಗಿ ವ್ಯಕ್ತಿಯ, ಸ್ಥಳದ ಅಥವಾ ಘಟನೆಯ ಸ್ಮರಣೆಯನ್ನು ತಂದುಕೊಡುತ್ತದೆ.

ನಾವೂ ದುಷ್ಯಂತನಂತೆ ನಮ್ಮವರನ್ನೂ, ನಮ್ಮ ಪೂರ್ವೇತಿಹಾಸವನ್ನೂ ಮರೆತಿದ್ದೇವೆ. ನಾವೆಲ್ಲರೂ ತಾಯಿಯ ಗರ್ಭದ ೮ನೇ ತಿಂಗಳಿನಲ್ಲಿ ಭಗವಂತನ ದರ್ಶನ ಪಡೆದಿರುತ್ತೇವೆಂದು ಗರ್ಭೋಪನಿಷತ್ತು ಪ್ರತಿಪಾದಿಸುತ್ತದೆ. ಹುಟ್ಟಿದನಂತರ ಮಾಯೆಯಿಂದ ಇದರ ವಿಸ್ಮರಣೆಯುಂಟಾಗಿರುತ್ತದೆ. ಆ ಅನುಭವದ ಸ್ಮರಣೆಯನ್ನು ತಂದುಕೊಡಲು ಮಹರ್ಷಿಗಳು ಅಭಿಜ್ಞಾನವಾಗಿ ದೇವಾಲಯಗಳನ್ನು ತಂದಿದ್ದಾರೆ. ಮಹರ್ಷಿಗಳು ಅಂತರಂಗದಲ್ಲಿ ಅಬಾಧಿತವಾಗಿ ಸಪ್ತಲೋಕದಲ್ಲೂ ವಿಹರಿಸಬಲ್ಲವರಾಗಿದ್ದರು.  ಹೀಗೆ ಸಂಚರಿಸುತ್ತ ಅನೇಕ ದರ್ಶನಗಳನ್ನು ಪಡೆದರು. ಅವರು ಕಂಡ ಅತ್ಯಮೋಘವಾದ , ಪರಮ ರಮಣೀಯವಾದ ಒಳದರ್ಶನಗಳನ್ನು ನಮ್ಮೆಲ್ಲರ ಬಗೆಗಿನ ಕರುಣೆಯಿಂದ ನಮ್ಮ ದೇವಾಲಯಗಳಲ್ಲಿ ದೇವತಾ ಮೂರ್ತಿಗಳಾಗಿ ಸ್ಥಾಪಿಸಿದರು. ತಮ್ಮ ಅಂತರಂಗದ ಶಕ್ತಿಯನ್ನು ಅದರಲ್ಲಿ ಪ್ರತಿಷ್ಠಾಪಿಸಿದರು. ನೋಡಿದವರಿಗೆಲ್ಲ ತಮ್ಮ ಸ್ವಸ್ವರೂಪದ ಸ್ಮರಣೆಯಾಗಿ ಎಲ್ಲರೂ ಸಂತೋಷ ಪಡುವಂತಾಗಲಿ ಎಂಬ ಕರುಣೆ ಅವರದು. ದೇವಾಲಯಗಳು ಮೂಲವನ್ನು ಜ್ಞಾಪಿಸುವ ಅಭಿಜ್ಞಾನ,

ಈ ಕಾರಣದಿಂದಲೇ ಶ್ರೀರಂಗ ಮಹಾಗುರುಗಳು ದೇವಾಲಯವನ್ನು "ಸ್ಮಾರಕ ಮಂದಿರ (Memory Hall)" ಎಂಬುದಾಗಿ ಕರೆಯುತಿದ್ದರು. ಅಲ್ಲಿ ಹೃದಯಗರ್ಭದಲ್ಲಿ ಬೆಳಗುವ ದೇವನನ್ನು ನೆನಪಿಸುವ ಗರ್ಭಗುಡಿಯುಂಟು. ಹೊರಗೆ ತ್ರಿಗುಣಗಳನ್ನು ಸ್ಮರಣೆಗೆ ತರಿಸುವ ಮೂರು ಬಣ್ಣದ ತೆರೆಗಳು೦ಟು. ಒಳಗೆ ಸಾಕ್ಷಾತ್ ಪ್ರತಿನಿಧಿಯಾದ ಮೂರ್ತಿಯ ದರ್ಶನವೂ ಉಂಟು. ಹೊಂಬಣ್ಣದ ಬೆಳಕಿನಲ್ಲಿ ಕಂಗೊಳಿಸುವಂತೆ ಮಾಡಿಸುವ ಮಂಗಳ ಆರತಿಯುಂಟು.  ಪ್ರಣವವನ್ನು ಹೋಲುವ ಘಂಟಾ ನಾದವುಂಟು. ಮಹರ್ಷಿಗಳ ಈ ವಿಜ್ಞಾನದೊಂದಿಗೆ ನಾವೆಲ್ಲರೂ ದೇವಾಲಯಗಳನ್ನು ನೋಡುವಂತಾಗಲಿ.   

ಸೂಚನೆ: 12/12/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.