Saturday, January 2, 2021

ನಿಯಮ - ಸಂತೋಷ, ತಪಸ್ಸು (Niyama - Santosha, Tapassu)

ಲೇಖಕರು: ಶ್ರೀ ಜಿ ನಾಗರಾಜ

(ಪ್ರತಿಕ್ರಿಯಿಸಿರಿ lekhana@ayvm.in)



ಪತಂಜಲಿ ಯೋಗಸೂತ್ರದಲ್ಲಿ ಎರಡನೇ ಹಾಗೂ ಮೂರನೇ ನಿಯಮಗಳು ಸಂತೋಷ ಹಾಗೂ ತಪಸ್ಸು.

ತನಗೆ ಸಹಜ ಪ್ರಯತ್ನದಿಂದ ಎಷ್ಟು ದೊರೆಯುತ್ತದೆಯೋ ಅಷ್ಟರಲ್ಲೇ ತೃಪ್ತಿಯಿಂದಿರುವುದು ಸಂತೋಷ. ಯಾವುದೇ ವಿಷಯದಲ್ಲಿಯೂ ಪ್ರಯತ್ನಪಟ್ಟು ಚೆನ್ನಾಗಿ ಆಸ್ವಾದಿಸಿದರೆ ಸಂತೋಷವು ಹಿಗ್ಗಿ ಇನ್ನೂ ದೊಡ್ಡ ಮಟ್ಟದ್ದಾಗುತ್ತದೆ. ಉದಾಹರಣೆಗೆ, ಮನೆಯಲ್ಲಿ ಊಟಕ್ಕೆ ಮೃಷ್ಟಾನ್ನಭೋಜನದ ಬದಲು ಕೇವಲ ಅನ್ನ, ಸಾರು, ಮಜ್ಜಿಗೆಯೇ ಇದ್ದರೂ ಅದರ ಬಗ್ಗೆ ಅಸಡ್ಡೆ ತೋರದೇ ಶ್ರದ್ದೆಯಿಂದ ಅದನ್ನೇ ಆಸ್ವಾದಿಸಿ ಊಟ ಮಾಡಿದರೆ, ತೃಪ್ತಿಯೂ ಉಂಟಾಗುತ್ತದೆ ಮತ್ತು ಬಳಸಿದ ಆಹಾರ ಚೆನ್ನಾಗಿ ಮೈಗೂಡಿ ಆರೋಗ್ಯವೂ ಕೂಡಿ ಬರುತ್ತದೆ. ಮತ್ತೊಬ್ಬರನ್ನು ನೋಡಿ ನಮಗಿಲ್ಲವಲ್ಲಾ ಎಂದು ಕೊರಗುವುದರಿಂದ ಅಥವಾ ಪೈಪೋಟಿಗೆ ಒಳಗಾಗಿ ಮೇಲೆ ಬಿದ್ದು ಸಂಪಾದನೆ ಮಾಡುತ್ತಾ ಧನದಾಹವನ್ನೇ ಹೆಚ್ಚಿಸಿಕೊಳ್ಳುವುದರಿಂದ ಯೋಗಸಾಧನೆಗೆ ಬಾಧೆಯೇ ಉಂಟಾಗುತ್ತದೆ. ಯೋಗದ ಸಮಾಧಿ ಸ್ಥಿತಿಯು ಒಂದು ಮಹದಾನಂದದ ಅನುಭವವಾಗಿರುವುದರಿಂದ ಜೀವನದ ಎಲ್ಲ ಹೆಜ್ಜೆಗಳಲ್ಲಿಯೂ ಇದ್ದುದರಲ್ಲಿಯೇ ಸಂತೋಷವನ್ನುಹೆಚ್ಚಿಸಿಕೊಳ್ಳುತ್ತಾ ಬಂದರೆ, ನಮ್ಮ ದೇಹ ಮನಸ್ಸುಗಳಲ್ಲಿ, ಪುಷ್ಟಿ-ತುಷ್ಟಿಗಳುಂಟಾಗಿ ಸಮಾಧಿ ಸ್ಥಿತಿಯ ಮಹದಾನಂದವನ್ನು ಅನುಭವಿಸಲು ಯೋಗ್ಯತೆಯನ್ನು ತಂದುಕೊಡುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಸಂತೋಷದ ಅಭ್ಯಾಸವು ವ್ಯಾಪಕವಾಗಿದೆ. ಪಾಲಿಗೆ ಬಂದದ್ದು ಪಂಚಾಮೃತ ಎನ್ನುವ ನಾಣ್ಣುಡಿ ಈ ಸಂತೋಷ ಎನ್ನುವ ಅಭ್ಯಾಸ ಎಷ್ಟು ಹಾಸುಹೊಕ್ಕಾಗಿದೆಯೆನ್ನುವುದನ್ನು ತೋರಿಸಿಕೊಡುತ್ತದೆ.

ತಪಸ್ಸಿನಲ್ಲಿ ಹಲವು ವಿಧಗಳುಂಟು. ಯೋಗಸೂತ್ರದ ವ್ಯಾಸಭಾಷ್ಯದ ಪ್ರಕಾರ ಹಸಿವು, ಬಾಯಾರಿಕೆ, ಶೀತ ಉಷ್ಣ ಇವುಗಳನ್ನು ಸಹಿಸಿಕೊಳ್ಳುವುದು, ಮೌನ, ಕೃಚ್ಛ್ರ, ಚಾಂದ್ರಾಯಣಾದಿ ವ್ರತಗಳನ್ನು ಮಾಡುವುದು ತಪಸ್ಸೆನಿಸಿಕೊಳ್ಳುತ್ತದೆ. ಕೃಚ್ಛ್ರ ಚಾಂದ್ರಾಯಣಗಳು ಉಪವಾಸವೇ ಪ್ರಮುಖವಾಗಿರುವ ವ್ರತಗಳಾಗಿದ್ದು ಶರೀರ ಮತ್ತು ಮನಸ್ಸಿನ ದೋಷಗಳನ್ನು ತೊಡೆಯುತ್ತವೆ. ಧರ್ಮಶಾಸ್ತ್ರಗಳು ಅನೇಕ ವಿಧವಾದ ದೋಷಗಳಿಗೆ ಕೃಚ್ಛ್ರ, ಚಾಂದ್ರಾಯಣಾದಿ ವ್ರತಗಳನ್ನು ಪ್ರಾಯಶ್ಚಿತ್ತವಾಗಿ ಹೇಳುತ್ತವೆ.

ಯೋಗದ ಬೇರೆ ಅಂಗಗಳಂತೆಯೇ, ಉಪವಾಸ ವ್ರತಗಳೂ ಸಹ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದು ಅದರಲ್ಲಿ ಏಕಾದಶೀ ಮತ್ತು ಶಿವರಾತ್ರಿ ವ್ರತಗಳು ಪ್ರಸಿದ್ಧವಾಗಿವೆ.

ಯೋಗಸೂತ್ರದ ಪ್ರಕಾರ ತಪಸ್ಸಿನಿಂದ ದೇಹದ ಅಶುದ್ಧಿಯು ಕ್ಷೀಣವಾಗಿ ಒಂದು ಹಂತದ ಶುದ್ಧಿಯುಂಟಾದರೆ ಆಗ ಅಣಿಮಾ, ಮಹಿಮಾ ಮುಂತಾದ ಶರೀರವನ್ನು ಇಚ್ಛೆಗನುಸಾರವಾಗಿ ಕುಗ್ಗಿಸುವುದು ಅಥವಾ ಹಿಗ್ಗಿಸುವುದೇ ಮುಂತಾದ ಶರೀರ ಸಂಬಂಧವಾದ ಸಿದ್ಧಿಗಳು ಉಂಟಾಗುತ್ತವೆ. ಅಲ್ಲದೇ ದೂರ ಶ್ರವಣ ಮತ್ತು ದೂರದೃಷ್ಟಿ ಮುಂತಾದ ಇಂದ್ರಿಯ ಸಿದ್ಧಿಗಳೂ ಉಂಟಾಗುತ್ತವೆ.

ಸೂಚನೆ : 2/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.