Sunday, January 10, 2021

ಆರ್ಯಸಂಸ್ಕೃತಿ ದರ್ಶನ - 25 (Arya Samskruti Darshana - 25)

ಉಡಿಗೆ
ಲೇಖಕರು : ಡಾII ಶ್ರೀ ಎಸ್.ವಿ.ಚಾಮು

  

ಮಾನವ ಸಮಾಜದಲ್ಲಿ ಉಡಿಗೆಯು ಎಲ್ಲಕ್ಕಿಂತಲೂ ದೊಡ್ಡ ಸಭ್ಯತೆಯ ಕುರುಹು. ಪ್ರಪಂಚದ ಪ್ರತಿಯೊಂದು ಜನಾಂಗವೂ ತನ್ನ ದೇಶದ ಹವಾಗುಣ
ಅಲ್ಲಿ ದೊರಕುವ  ರೇಷ್ಮೆಹತ್ತಿ ಮುಂತಾದ ಪದಾರ್ಥಗಳುಅಲ್ಲಿನ ವಸ್ತ್ರನಿರ್ಮಾಪಕರ ಕುಶಲತೆರೀತಿನೀತಿಸೌಂದರ್ಯದೃಷ್ಟಿಧಾರ್ಮಿಕ ಭಾವನೆ ಮುಂತಾದವುಗಳನ್ನನುಸರಿಸಿ ತನ್ನದೇ ಆದ    ಉಡಿಗೆಯ ಶೈಲಿಯನ್ನು ನಿರ್ಮಿಸಿಕೊಂಡಿರುತ್ತದೆ. ಹೊರ ವಿಷಯವಾದರೂ ಉಡುಪು ಬೇರೆ ಬೇರೆ ಜನರ ಅಂತರಾತ್ಮದಲ್ಲಿ ಆಡಿದ ಭಾವನೆಗಳಿಗೆ ಕನ್ನಡಿ ಹಿಡಿದಿರುತ್ತದೆ. ಅವರ ಮನೋಧರ್ಮವನ್ನು ಹೊರಗೆ ಪ್ರತೀಕಿಸಿರುತ್ತದೆ.

ಈ ಮಾತು ನಿಜವಾದರೆ ಜನರು ತಮ್ಮ ತಮ್ಮ ದೇಶಕ್ಕೆ ಕೂಡಿಬಂದ ಉಡಿಗೆಯಲ್ಲಿ ಅದರ ಪ್ರೀತಿ ಮತ್ತು ಅಭಿಮಾನಗಳಿಂದ ಕೂಡಿರಬೇಕೆಂದು ನಿರೀಕ್ಷಿಸುವುದು ಸಹಜವಾಗಿರುತ್ತದೆ. ಪ್ರತಿಯೊಂದು ದೇಶದ ಸಂಸ್ಕೃತಿ ಮತ್ತು ಉಡಿಗೆಗಳ ಮಧ್ಯೆ ನಿಕಟವಾದ ಸಂಬಂಧವಿರುವುದಾದರೆ ಆ ಸಂಸ್ಕೃತಿಗೆ ಕೂಡಿಬಂದ ಉಡಿಗೆಯನ್ನು ಜೀವನದಲ್ಲಿ ಬಳಕೆಯಲ್ಲಿಟ್ಟುಕೊಳ್ಳುವುದರ ಮೂಲಕ ಈ ಸಂಸ್ಕೃತಿಯು ಪ್ರತೀಕಿಸುವ ವಿಚಾರದೃಷ್ಟಿನೀತಿ ಮತ್ತು ನಡತೆಗಳಿಗೆ ಬದ್ಧರಾಗಿರುವುದನ್ನು ಹೇಳಿದಂತಾಗುತ್ತದೆ. ಆ ಉಡಿಗೆಯನ್ನು ತ್ಯಾಗಮಾಡಿದರೆ ಒಬ್ಬರು ತಮ್ಮ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ ಅಥವಾ ಸರಿದಿರುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.

ನಮ್ಮ ಪುರಾತನ ಸಾಹಿತ್ಯಶಿಲ್ಪಚಿತ್ರ ಮುಂತಾದವುಗಳಿಂದ ನಮ್ಮ ದೇಶವೂ ಸಹ ಅನಾದಿಕಾಲದಿಂದ ಉಡಿಗೆಯಲ್ಲಿ ತನ್ನದೇ ಆದ ಸಭ್ಯ ಸಂಪ್ರದಾಯವನ್ನು ಸೃಷ್ಟಿಸಿ ಕೊಂಡಿರುವುದು ಖ್ಯಾಪಿತವಾಗುತ್ತದೆ. ಉಡಿಗೆಯಲ್ಲಿ ವೈವಿಧ್ಯ ಮತ್ತು ವೈಚಿತ್ರ್ಯಗಳಿರುವುದು ಅನಿವಾರ್ಯ. ಅದರಂತೆ ನಮ್ಮ ದೇಶದಲ್ಲಿಯೂ ಸಹ ಬೇರೆ ಬೇರೆ ಪ್ರದೇಶಗಳುಜಾತಿವೃತ್ತಿಅಭಿರುಚಿ ಸಂಪತ್ತುಗಳಿಗೆ ಅನುಗುಣವಾಗಿ ಉಡಿಗೆಯಲ್ಲಿ ವ್ಯತ್ಯಾಸಗಳು ಅವಶ್ಯವಾಗಿರುತ್ತವೆ. ಆದರೂ ಉಡುಪಿಗೆ ಸಂಬಂಧಿಸಿದಂತೆ  ಹಲವು ಸಭ್ಯ ಸಂಪ್ರದಾಯಗಳು ದೇಶದಾದ್ಯಂತವೂ ನಮ್ಮ ಜನರಿಂದ ಅಂಗೀಕಾರ ಪಡೆದವು. ಗಂಡಸರಿಗೆ ಪಂಚೆಉತ್ತರೀಯಅಂಗಿಪಾಗು ಇತ್ಯಾದಿಗಳೂ ಮತ್ತು ಸ್ತ್ರೀಯರಿಗೆ ಸೀರೆ ಮತ್ತು ಕುಪ್ಪಸಗಳೂ ಕೆಲವು ಸೀಮಾವರ್ತಿಪ್ರದೇಶಗಳನ್ನು ಬಿಟ್ಟರೆ ದೇಶದ ಉಳಿದ ಭಾಗಗಳಲ್ಲಿ ನಾಗರೀಕವಾದ ಉಡುಪಾಗಿ ಸ್ವೀಕಾರ ಪಡೆದವು. ಪುರುಷರಿಗಿಂತ  ಹೆಚ್ಚಾಗಿ ಸ್ತ್ರೀಯರಲ್ಲಿ ಉಡುಪಿನಲ್ಲಿ ಏಕರೂಪತೆಯುಂಟಾದುದು ಗಮನಾರ್ಹವಾದ ವಿಷಯ. ಅನೇಕ ಧಾರ್ಮಿಕ ಪಂಥಗಳು ವಸ್ತ್ರವನ್ನು ಉಡುವ ಶೈಲಿಯಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಪ್ರಕಟವಾಗಿಸಿದುವು. ಮೇಲೆ ಹೇಳಿದಂತೆ ಜಾತಿಧರ್ಮವೃತ್ತಿಅಂತಸ್ತುಗಳಿಗನುಗುಣವಾಗಿ ವ್ಯತ್ಯಾಸಗಳಿದ್ದರೂ ಒಟ್ಟಿನಲ್ಲಿ ಉಡಿಗೆಯ ಮೇಲೆ ಭಾರತೀಯತೆಯ ಅಚ್ಚಿದ್ದಿತು.

ಪ್ರತಿಯೊಂದು ದೇಶದ ಉಡಿಗೆಯೂ ಯಾವಾಗಲೂ ಒಂದೇ ರೀತಿಯಾಗಿ ಇರುವುದು ಅಸಂಭವ. ನಾಗರಿಕತೆಯು ಬೆಳೆದಂತೆ ಉಡಿಗೆಯಲ್ಲಿ ಪರಿವರ್ತನೆಗಳುಂಟಾಗುತ್ತವೆ. ಆ ಪರಿವರ್ತನೆಗಳೇ ಬೇರೆ ಜನರೊಡನೆ ಸಂಪರ್ಕವುಂಟಾದರೆ ಅಧಿಕವಾದ ಪ್ರಮಾಣದಲ್ಲಿ ಆಗತೊಡಗುತ್ತವೆ. ಬೇರೆ ಬೇರೆ ಜನರು ಒಟ್ಟಿಗೆ ಸೇರಿದಾಗ ಭಾಷೆರೀತಿನೀತಿ ಮತ್ತು ವಿಚಾರ ಪ್ರಪಂಚಗಳಲ್ಲಿ ಹೇಗೆ ಸಾಂಕರ್ಯವುಂಟಾಗುತ್ತದೆಯೋ ಅದೇ ರೀತಿ ಉಡಿಗೆ ತೊಡಿಗೆಗಳಲ್ಲಿಯೂ ಸಾಂಕರ್ಯವುಂಟಾಗುತ್ತದೆ.

ಪರಕೀಯರು ನಮ್ಮ ದೇಶವನ್ನು ಪ್ರವೇಶಿಸಿದ ನಂತರ ನಮ್ಮ ಉಡಿಗೆಯಲ್ಲಿ ನಿರಂತರವಾಗಿ ವ್ಯತ್ಯಾಸವುಂಟಾಗಿರುವುದು ನಮ್ಮ ಇತಿಹಾಸದಿಂದ ತಿಳಿದುಬರುತ್ತದೆ. ದೇಶದಲ್ಲಿ ಮುಸಲ್ಮಾನರು ತಮ್ಮ ಅಧಿಕಾರವನ್ನು ಸ್ಥಾಪಿಸಿದಾಗಬಲಾತ್ಕಾರದಿಂದ ಅಥವಾ ಕುತೂಹಲದಿಂದ ಅನೇಕರು ಅವರ ಉಡುಪನ್ನು ಅನುಕರಿಸಲಾರಂಭಿಸಿದರು.
ಇಂಗ್ಲಿಷಿನವರು ಬಂದನಂತರವಂತೂ ಅವರ ಉಡುಪು ಸಮಾಜದ ಅನೇಕ ವಲಯಗಳಲ್ಲಿ ಸ್ವಾಗತ ಪಡೆಯಿತು. ಇಂಗ್ಲಿಷ್ ವಿದ್ಯೆಯನ್ನು ಕಲಿತವರು ಮತ್ತು ಇಂಗ್ಲೀಷಿನವರೊಡನೆ ವ್ಯವಹಾರ ಪಡೆದವರೆಲ್ಲರೂ ಹೆಚ್ಚು ಅಥವಾ ಕಡಿಮೆಯಾಗಿ ಅವರ ಉಡುಪನ್ನು ತಮ್ಮದಾಗಿಸಿಕೊಂಡರು. ಭಾಷೆಸಾಹಿತ್ಯವಿಚಾರವಿಜ್ಞಾನ ಇತ್ಯಾದಿಗಳ ವಿಷಯಗಳಲ್ಲಿ ಹೇಗೋ ಹಾಗೆಯೇ ಉಡುಗೆಯ ವಿಷಯದಲ್ಲಿಯೂ ಅಸಂಖ್ಯಾತ ಜನರು ಪಾಶ್ಚಾತ್ಯರ ಎಂದರೆ ( ಭಾರತದೇಶದ ದೃಷ್ಟಿಯಿಂದ ಹೇಳುವುದಾದರೆ ಇಂಗ್ಲೀಷಿನವರ) ನೇತ್ರೃತ್ವವನ್ನು ಅಂಗೀಕರಿಸಿದರು. ಆದರೂ ನೆಟ್ಟಗೆ ಅವರೊಡನೆ ಸಂಬಂಧವಿಲ್ಲದಿದ್ದವರೂ ಮತ್ತು ತಮ್ಮ ಧರ್ಮ ಮತ್ತು ಸಂಸ್ಕೃತಿಗಳಲ್ಲಿ ವಿಶ್ವಾಸವಿದ್ದವರೂ ಈಗ ಕೆಲವು ದಶಮಾನಗಳ ಹಿಂದಿನವರೆಗೆ ತಮ್ಮ ಪರಂಪರಾಗತವಾದ ಉಡುಪನ್ನೇ ಉಡುತ್ತಿದ್ದರು. ಅವರ ಸಂಖ್ಯೆ ಬಹಳ ಅಧಿಕವಾಗಿಯೇ ಇದ್ದಿತು.

ಈಗ ಎರಡು ಮೂರು ದಶಮಾನದಿಂದ ಈಚೆಗೆ ಈ ಪಾಶ್ಚಾತ್ಯರ ಅನುಕರಣೆಯು ಉಲ್ಬಣವಾದ ರೂಪವನ್ನು ತಾಳಿರುತ್ತದೆ. ಸ್ವಾತಂತ್ರ್ಯ ಪಡೆದ ನಂತರ ರಾಜಕೀಯವಾದ  ಬಲಾತ್ಕಾರವಿಲ್ಲದಿದ್ದರೂ ನಮ್ಮ ಜನರುಸ್ವೇಚ್ಛೆಯಿಂದ ಪಾಶ್ಚಾತ್ಯರ ಉಡಿಗೆಯಲ್ಲಿ ಅಭಿರುಚಿ ಮತ್ತು ಅಭ್ಯಾಸಗಳನ್ನು ಬೆಳೆಸಿಕೊಂಡಿರುವುದನ್ನು ನೋಡುತ್ತೇವೆ. ಈ ಪ್ರವೃ ತ್ತಿಗಳೇ ಬಿಡದೆ ಮುಂದುವರಿದರೆ ನಮ್ಮ ಪರಂಪರಾಗತವಾದ ಉಡುಪು ಪೂರ್ತಿ ಮರೆವಿಗೆ ವಿಷಯವಾಗಬಹುದು. ಆರಂಭದಿಂದ ಈ ಬದಲಾವಣೆಗಳು ಪುರುಷರ ಉಡಿಗೆಗೆ ಮಾತ್ರ ಸೀಮಿತವಾಗಿದ್ದವು. ಸ್ತ್ರೀಯರ ಉಡಿಗೆಯು ಪ್ರಾಯಃ ಸ್ಥಾಯಿಯಾಗಿಯೇ ಇದ್ದಿತು. ಇಂದಿನ ಸಾಂಕರ್ಯದ ವಾತಾವರಣದಲ್ಲಿ ಅದೂ ಸಹ ಶೀಘ್ರಗತಿಯಲ್ಲಿ ವ್ಯತ್ಯಾಸವಾಗುವ ದಾರಿಯನ್ನು ಹಿಡಿದಿರುತ್ತದೆ. Women's Lib ಮುಂತಾದ  ಕ್ರಾಂತಿಕಾರಿಯಾದ ಶಕ್ತಿಗಳು ಅವರಿಗೆ ತಮ್ಮ ಪರಂಪರಾಗತವಾದ ಉಡುಪನ್ನು ಪರಿತ್ಯಜಿಸಿ ಸ್ವೇಚ್ಛೆಯಾಗಿ ಉಡುಪನ್ನುಡಲು ಪ್ರಚೋದನೆ ನೀಡಿವೆ. ಪುರುಷರ ಉಡುಪನ್ನುಡುವುದು ಅದರ ಒಂದು ಅಂಶ.

ಪಾಶ್ಚಾತ್ಯನಾಗರಿಕತೆಯು ಕೊಟ್ಟಿರುವ ಉಡಿಗೆಯ ಶೈಲಿಗಳಿಗೆ ಬಲಿಯಾಗಿರುವವರು ನಾವು ಮಾತ್ರವಲ್ಲ. ಪ್ರಾಯಃ ಪೌರಾಸ್ತ್ಯ ದೇಶಗಳೆಲ್ಲವೂ ತಮ್ಮ ಪರಂಪರಾಗತವಾದಚಿತ್ರವಿಚಿತ್ರವಾದ ಉಡಿಗೆಗಳನ್ನು ಬಿಟ್ಟುಬಿಟ್ಟು  ಪಾಶ್ಚಾತ್ಯರು ತೋರಿಸಿರುವ ಮಾರ್ಗವನ್ನೇ ಅವಲಂಬಿಸಿರುವುದನ್ನು ನೋಡುತ್ತೇವೆ. ಅದರಿಂದ ಬೇಕಾದರೆ
ನಾವು ನಮ್ಮನ್ನು ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದು.

ಈ ಪರಿವರ್ತನೆಗಳ ಹಿಂದೆ ಯಂತ್ರಯುಗದ ವ್ಯಾಪಕವಾದ ಪ್ರಭಾವವು ಇರುತ್ತದೆಂಬುದನ್ನು ಹೇಳಬೇಕಾಗಿಲ್ಲ. ಅದು ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಬಗೆ ಬಗೆಯಾದ ಮತ್ತು ಆಕರ್ಷಕವಾದ ಬಟ್ಟೆಗಳ ಉತ್ಪಾದನೆಗೆ ದಾರಿಮಾಡಿರುತ್ತದೆ. ಅವುಗಳನ್ನು ಶೀಘ್ರವಾಗಿ ಚಿತ್ರ ವಿಚಿತ್ರವಾಗಿ ಹೊಲಿಯಲು ಹೊಲಿಗೆಯಂತ್ರವನ್ನು ಸೃಷ್ಟಿಸಿಕೊಟ್ಟಿರುತ್ತದೆ. ದೇಶದಲ್ಲಿ ಅದೊಂದು ದೊಡ್ಡ ಉದ್ಯಮವಾಗಿರುತ್ತದೆ. ವ್ಯಾಪಾರಿಗಳುದರ್ಜಿಗಳುವಿಲಾಸಿಗಳುಪತ್ರಿಕೆ ಮುಂತಾದ ಪ್ರಸಾರ ಮಾಧ್ಯಮಗಳುಸಿನೇಮಾ ನಟ ನಟಿಯರು  ಮುಂತಾದವರೆಲ್ಲರೂ ಹೊಸ ಉಡುಪುಗಳನ್ನು ಜನಪ್ರಿಯವಾಗಿಸಲು ತಮ್ಮ ಶಕ್ತಿ ಮತ್ತು ದಕ್ಷತೆಗಳೆಲ್ಲವನ್ನೂಬಳಸುತ್ತಿದ್ದಾರೆ. ಆಧುನಿಕ ಆರ್ಥಿಕ ವ್ಯವಸ್ಥೆಯು ಜನರ ಕೈಯಲ್ಲಿ ಹೇರಳವಾದ ಹಣವನ್ನು ಹಾಕಿರುತ್ತದೆ. ಪ್ರತಿಕ್ಷಣವೂ ಪ್ರತಿಯೊಂದು ವಿಷಯದಲ್ಲಿಯೂ ನವೀನತೆಯನ್ನು ಅರಸುವ ಮನೋಭಾವವು ಜನರಲ್ಲಿ ಮಿತಿ ಮೀರಿ ವ್ಯಾಪಾರಮಾಡುತ್ತಿದೆ.

ಹೊಲಿಗೆಯಂತ್ರ ಮತ್ತು ದರ್ಜಿಗಳು ಸೃಷ್ಟಿಸಿರುವ ಹೊಸ ಉಡಿಗೆಯ ನಾಗರಿಕತೆಯಲ್ಲಿ ಅನುಕೂಲ ಭಾಗಗಳು ಇಲ್ಲದೆ ಇಲ್ಲ. ಆಧುನಿಕ ಯಂತ್ರಯುಗವು ಉಂಟುಮಾಡಿರುವ ಹೊಸ ಜೀವನ ವಿಧಾನಕ್ಕೆ ಅದು ಹೊಂದಿಕೊಂಡಿರುತ್ತದೆ. ಹೊಸ ಉಡಿಗೆಗಳಲ್ಲಿ ಜನರ ಮನಸ್ಸನ್ನು ಸಂತಸಪಡಿಸುವ ವೈವಿಧ್ಯವಿರುತ್ತದೆ. ಅವುಗಳನ್ನು ಹಾಕಿಕೊಳ್ಳುವುದು ಮತ್ತು ತೆಗೆಯುವುದು ಸುಲಭ. ಅವು ಬಾಳಿಕೆ ಬರುತ್ತವೆ. ಅವು ನಾಗರಿಕ ವಲಯಗಳಲ್ಲಿ ಅಂಗಿಕಾರ ಪಡೆದಿವೆ. ಅವು ಸುಂದರವಾಗಿವೆ ಎಂಬ ನಂಬಿಕೆ ಕೂಡ ಅವಕ್ಕೆ ಮಾನ್ಯತೆ ದೊರಕಲು ಕಾರಣವಾಗಿದೆ. ಹೀಗೆ ಆಧುನಿಕ ಉಡಿಗೆಯಲ್ಲಿ ಅನೇಕ ಗುಣಭಾಗಳಿದ್ದರೂ ಸಹಸೌಂದರ್ಯದಲ್ಲಿ  ಅವು ಪರಂಪರಾಗತವಾದ ಉಡುಪನ್ನು ಮೀರಿಸಿವೆಯೆಂಬುದನ್ನು ಸಿದ್ಧಪಡಿಸುವುದು ಸುಲಭವೇನೂ ಅಲ್ಲ. ಏಕೆಂದರೆ ಸೌಂದರ್ಯವೆಂಬುದು ಯಾವಾಗಲೂ ಸಾಪೇಕ್ಷವಾದ(Relative)ವಿಷಯ. ಯಾವುದು ಸುಂದರ  ಮತ್ತು ಯಾವುದು ಅಸುಂದರ ಎಂಬುದು ನಿಶ್ಚಯಿಸಲು ಏಕಮಾತ್ರ ಮಾನದಂಡವಿರುವುದಿಲ್ಲ. ಸೌಂದರ್ಯ  ಮತ್ತು ಅಸೌಂದರ್ಯಗಳ ಕಲ್ಪನೆಯು ಮನಸ್ಸಿನ  ಮೇಲೆ ತಾತ್ಕಾಲಿಕವಾಗಿ ಉಂಟಾದ ಅನೇಕ ವಿಧವಾದ ಪ್ರಭಾವಗಳಿಂದ ನಿರ್ಧಾರಿತವಾಗುತ್ತದೆ. ಉಡಿಗೆಯ ವಿಷಯದಲ್ಲಿ ಹೇಳುವುದಾದರೆ ಸೌಂದರ್ಯವು ತತ್ಕಾಲದಲ್ಲಿ ಜನಪ್ರಿಯತೆ ಪಡೆದಿರುವ ಫ್ಯಾಷನ್ನುಗಳನ್ನು ಅವಲಂಬಸಿರುತ್ತದೆ. ನಾವು ಯಾವ ಉಡುಪನ್ನು ಸುಂದರವಾದುದೆಂದು ಗಣಿಸುತ್ತೇವೆಯೋ ಅದು ನಮ್ಮಲ್ಲಿ ಕೃತಕವಾಗಿ ಉಂಟುಮಾಡಲಟ್ಟ ಭಾವನೆಯಾಗಿರುತ್ತದೆ. ಯಾವುದು ಫ್ಯಾಷನ್ನಿಗೆ ಅನುಗುಣವಾಗಿರುತ್ತದೆಯೋ ಅದು ಸುಂದರ: ಯಾವುದು ಅದರಿಂದ ಬೇರೆಯಾಗಿರುತ್ತದೆಯೋ ಅದು ಆಸುಂದರ. ದೋಷಯುಕ್ತವಾಗಿದ್ದರೂ ಫ್ಯಾಷನ್ನಿನಲ್ಲಿರುವ ಉಡಿಗೆಗಳು ಜನರ ಮೆಚ್ಚುಗೆ ಮತ್ತು ಅನ್ವೇಷಣೆಗೆ ವಿಷಯವಾಗುತ್ತವೆ.

ಸೌಂದರ್ಯದ ವಿಷಯ ಹೇಗಾದರೂ ಇರಲಿನಮ್ಮ ದೇಶದ ಯಾವ ಉಡಿಗೆಗಳು ಸಭ್ಯವಾದುವೆಂದು ಗಣಿಸಲ್ಪಡುತ್ತಿದ್ದುವೊ ಅವುಗಳ ಸ್ಥಾನವನ್ನು ಹೊಸ ಉಡಿಗೆಗಳು ಆಕ್ರಮಿಸಿಕೊಳ್ಳಲಾರಂಭಿಸಿವೆ. ಪರಂಪರಾಗತವಾದ ಉಡುಗೆಗಳು ತ್ಯಾಗಕ್ಕೆ ಮತ್ತು ಅಪಹಾಸ್ಯಕ್ಕೆ ವಿಷಯವಾಗಿರುತ್ತವೆ. ಅದರಲ್ಲಿ ಅಭಿಮಾನವಿರುವವರು ಬಹಳ ಮಂದಿ ಇರುತ್ತಾರೆ. ಆದರೆ ಫ್ಯಾಷನ್ನಿಗೆ ವಿರೋಧವಾಗಿ ಹೋದರೆ ಎಲ್ಲಿ ಜನರು ತಮ್ಮನ್ನು ಹೀಯಾಳಿಸುವರೋ ಎಂಬ ಭಯದಿಂದ ಅವರು ಆಧುನಿಕ ಉಡಿಗೆಗಳನ್ನು ಅನುಕರಿಸುತ್ತಾರೆ. ಆ ರೀತಿ ಮಾಡದಿರಬೇಕಾದರೆ ಸ್ವಾಭಿಮಾನವಿಚಾರಶೀಲತೆತೃಪ್ತಿ ಮತ್ತು ಆತ್ಮ ವಿಶ್ವಾಸಗಳು ಬೇಕು. ಸರಳವಾದ ಜೀವನದಲ್ಲಿ ಆಸಕ್ತಿ ಇರಬೇಕು. ಗಾಂಧಿಯವರಿಗಿದ್ದಂತಹ ವ್ಯಕ್ತಿತ್ವ ಬೇಕು. ಇಂದಿನ ನಾಗರಿಕತೆಯಲ್ಲಿ ಈ ಆತ್ಮಗುಣಗಳಿಗೆ ಸ್ಥಾನವಿಲ್ಲ. ನಮ್ಮ ಒಳಶೂನ್ಯತೆಯನ್ನು ನಾವು ರಮಣೀಯವಾದ ಬಟ್ಟೆಗಳಿಂದ ಮುಚ್ಚಲು ಉದ್ಯುಕ್ತರಾಗುತ್ತೇವೆ. ನಮ್ಮ ಉಡಿಗೆಯ ಶೈಲಿಯಲ್ಲಿ  ದೊಡ್ಡ ಪರಿವರ್ತನೆಗಳುಂಟಾಗುತ್ತಿರುವುದಕ್ಕೆ ಅದೇ ಮುಖ್ಯವಾದ ಕಾರಣ.

ಭಾರತೀಯರ ಉಡಿಗೆಯನ್ನು ತೆಗೆದುಕೊಂಡು ವಿಸ್ತಾರವಾಗಿ ವಿಚಾರಿಸಬೇಕಾದರೆ ಬಹಳ ಸ್ಥಳಾವಕಾಶ ಬೇಕು. ಅದು ವ್ಯಾಪಕವಾದ ರೀತಿಯಲ್ಲಿ ಅನ್ವೇಷಣೆ ಮಾಡಿ ಬರೆಯುವ ವಿಷಯ. ಅದನ್ನು ನಮಗಿರುವ ಐದು ಪುಟಗಳಲ್ಲಿ ಮಾಡಲಾಗುವುದಿಲ್ಲ. ಅದು ಕೇವಲ ಶರೀರವನ್ನು ಮುಚ್ಚುವ ವಿಧಾನಮಾತ್ರವಾಗಿರದೆ ಒಂದು ಆಳವಾದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪ್ರತೀಕಿಸುವ ವಿಷಯವೂ ಆಗಿದ್ದಿತು. ಆ ಅಭಿಪ್ರಾಯವನ್ನು ಶ್ರೀಶ್ರೀರಂಗಗುರುಗಳ  "ಭಾರತೀಯರ ಉಡಿಗೆ ತೊಡಿಗೆ ಇತ್ಯಾದಿಗಳೆಲ್ಲವೂ ಅಷ್ಟಾಂಗಯೋಗದಿಂದ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟಿರುತ್ತದೆಎಂಬ ಸೂತ್ರವು ವ್ಯಕ್ತಪಡಿಸುತ್ತದೆ. ಆ ಬಗ್ಗೆ ಸಂಗ್ರಹವಾಗಿ ಕೆಲವು ಮಾತುಗಳನ್ನು ಹೇಳಿ ಈ ಲೇಖನವನ್ನು ಮುಕ್ತಾಯ ಮಾಡುತ್ತೇವೆ.

ನಮ್ಮ ಪರಂಪರಾಗತವಾದ ಉಡುಪು ತನ್ನದೇ ಆದ ಸೌಂದರ್ಯ ಮತ್ತು ಗಾಂಭೀರ್ಯಗಳನ್ನಿರಿಸಿಕೊಂಡಿರುತ್ತದೆ ಎಂಬುದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ಹೊಲಿಯದಿರುವ ಬಟ್ಟೆಯನ್ನು ನಾಜೂಕಾಗಿ ಉಡುವ ಕುಶಲತೆ ಪಂಚೆ ಮತ್ತು ಸೀರೆಗಳನ್ನುಡುವ ಬಗೆಯಲ್ಲಿರುತ್ತದೆ. ಜೊತೆಗೆ ಆ ಉಡುಪಿನಲ್ಲಿ ಸರಳತೆಯಿರುತ್ತದೆ. ಪ್ರಾಯಃ ಇವೆರಡು ಗುಣಗಳನ್ನೂ ಒಂದು ಕಡೆ ಸೇಸಿರಿಕೊಂಡಿರುವ ಉಡಿಗೆಯ ವಿಧಾನವು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರದು.

ಸರಳ ಜೀವನದಲ್ಲಿ ಅಭಿರುಚಿ ಇಲ್ಲದವನಿಗೂ ಸಂಸ್ಕೃತಿಗೂ ಬಹಳ ದೂರ. ಸಂಸ್ಕೃತಿಯು ಯಾವಾಗಲೂ ಮನಸ್ಸಂಯಮಇಂದ್ರಿಯ ಸಂಯಮಸ್ವಚ್ಛತೆ ಮತ್ತು ಶುದ್ಧತೆಗಳನ್ನು ಹೇಳುತ್ತದೆ. ಅದನ್ನು ಉಡಿಗೆಯು ಪ್ರತಿಬಿಂಬಿಸುತ್ತದೆ ಎಂಬುದನ್ನು ನೋಡಿ ತಿಳಿಯಲು ಹೆಚ್ಚು ಕಾಲ ಬೇಕಾಗುವುದಿಲ್ಲ. ಜನರ ಉಡಿಗೆಯೇ ಅದನ್ನು ಹೇಳುತ್ತದೆ. ಅದೇ ಜನರ ಹೃದಯದಲ್ಲಿ ಲಂಪಟತನವು ಆಡಿದರೆ ಶರೀರದ ನರ ಮಂಡಲವು ಅದಕ್ಕೆ ಅನುಗುಣವಾದ ಉಡುಪನ್ನೋ ಅಥವಾ ಉಡುಪಿಲ್ಲದಿರುವುದನ್ನೂ
ಅಪೇಕ್ಷಿಸುತ್ತದೆ.

ಭಾರತೀಯರ ಉಡಿಗೆಯಲ್ಲಿ ಮನಸ್ಸ೦ಯಮ ವತ್ತು ಇಂದ್ರಿಯ ಸಂಯಮಗಳ ಆದರ್ಶವು ಕೆಲಸಮಾಡಿದ್ದಿತೆಂಬುದಕ್ಕೆ ಎರಡು ಮೂರು ಉದಾಹರಣೆಗಳನ್ನು ಕೊಡಬಹುದು. ಪಂಚೆ ಮತ್ತು ಸೀರೆಗಳನ್ನು ನಡುವಿನಲ್ಲಿ ಕಟ್ಟುವ ರೀತಿಯೇ ಸಹಜವಾಗಿ ಅದರಲ್ಲಿ ಒಂದು ಬಂಧವನ್ನುಂಟುಮಾಡಿ ಮನಸ್ಸು ಮತ್ತು ಪ್ರಾಣಗಳಿಗೆ ಜಘನ್ಯ (ಕೀಳು) ಗತಿಯುಂಟಾಗದಂತೆ ಮಾಡುತ್ತದೆ. ದೇವರಿಗೆ ನಮಸ್ಕಾರ ಮಾಡುವಾಗ ಉತ್ತರೀಯವನ್ನು ಉದರದಲ್ಲಿ ಬಿಗಿಯಾಗಿ ಕಟ್ಟಿ ಆ ರೀತಿ ಮಾಡುವ ಪದ್ಧತಿಯ ಉದ್ದೇಶವೂ ಅದೇ. ಸಂಪ್ರದಾಯಾನುಗುಣವಾಗಿ ಸೀರೆಯನ್ನುಡುವ ಸ್ತ್ರೀಯರಲ್ಲಿಯೂ ಸಹ ಅಂತಹ ಸಂಯಮ ಪೂರ್ಣವಾದ ಬಂಧವು ತಾನಾಗಿ ಏರ್ಪಟ್ಟು ಅವರಿಗೆ ಮನಸ್ಸು ವಶವಾಗಿರಲು ದಾರಿ ಮಾಡಿಕೊಡುತ್ತದೆ.

ಈಗ ಹಲವು ದಶಮಾನಗಳ ಹಿಂದಿನವರೆಗೆ ನಮ್ಮ ದೇಶದಲ್ಲಿ ಕಚ್ಚೆ ಹಾಕಿಕೊಳ್ಳದೆ ಸ್ತ್ರೀಯರಾಗಲೀ ಪುರುಷರಾಗಲೀ ಪಂಚೆಯನ್ನುಡುವುದು ಕೆಟ್ಟ ನಡತೆಯ ಕುರುಹಾಗಿ ಗಣಿಸಲ್ಪಡುತ್ತಿದ್ದಿತು. ಕಾಲಕ್ರಮೇಣ ಸಂಪ್ರದಾಯದ ಪ್ರಭಾವವು ಕಡಿಮೆಯಾಗಿ ಆ ಪದ್ಧತಿಯು ಬಹಳ ಮಟ್ಟಿಗೆ ಲುಪ್ತವಾಯಿತು. ಅಷ್ಟಾಂಗಯೋಗದಲ್ಲಿ ಬ್ರಹ್ಮಚರ್ಯವನ್ನು ಕುರಿತು ಹೇಳುವಾಗ ನಾವು ಕೌಪೀನಕ್ಕಿರುವ ಆಳವಾದ ಅರ್ಥವನ್ನು ವಿವರಿಸಿದೆವು. ಒಂದು ಕಡೆ ಅದು ಇಂದ್ರಿಯಾವಯವವನ್ನು ಹತೋಟಿಯಲ್ಲಿಟ್ಟುಕೊಂಡಿರಬೇಕು ಎಂಬುದನ್ನು ಸೂಚಿಸಿದರೆ ಮತ್ತೊಂದು ಕಡೆ ಸಂಯಮ ಪೂರ್ಣವಾದ ಸ್ಥಿತಿಯನ್ನು ಸಾಧಿಸಿ ಜೀವನ ಮಾಡಬೇಕೆಂಬುದನ್ನು ಒತ್ತಿ ಹೇಳುತ್ತದೆ. ಜ್ಞಾನಮಾರ್ಗದಲ್ಲಿ ಹೋಗುವ 'ಬ್ರಹ್ಮಚಾರಿಗೆಅದು ಅತ್ಯಾವಶ್ಯಕವಾದರೆಆ ಆದರ್ಶವೇ ಗೃಹಸ್ಥ ಜೀವನಮಾಡುವ ಸ್ತ್ರೀಪುರುಷರಿಗೂ ಅಷ್ಟೇ ಅವಶ್ಯಕ ಎಂಬುದನ್ನು ಕಚ್ಚೆಯು ಹೇಳುತ್ತದೆ. ಮತ್ತು ಅದನ್ನು ಸಂಪಾದಿಸುವ ದಾರಿಯಾಗಿರುತ್ತದೆ. ಹಿಂದೆ ಕಚ್ಚಿ ವಸ್ತ್ರವನ್ನುಡದ ಗೃಹಸ್ಥರ ವಿಷಯದಲ್ಲಿ ಶಿಷ್ಟರು ತೀವ್ರವಾದ ಅಸಮ್ಮತಿಯನ್ನು ಸೂಚಿಸುತ್ತಿದ್ದರು. ಅವರಿಗೆ ಪೂಜೆಕರ್ಮ ಇತ್ಯಾದಿಗಳಲ್ಲಿ ಸ್ಥಾನವಿರುತ್ತಿರಲಿಲ್ಲ. ಕಚ್ಚಿಯು ಶುದ್ದವಾದ ಇಂದ್ರಿಯ ಮತ್ತು ಮನೋಧರ್ಮಗಳ ಪ್ರತೀಕವಾಗಿದ್ದಿತು.

ಅನೇಕ ವೈದಿಕ ಕರ್ಮಗಳಲ್ಲಿ ಬಟ್ಟೆಯನ್ನುಡುವ ವಿಧಾನದಿಂದ ಆಳವಾದ ಆಧ್ಯಾತ್ಮಿಕ ತತ್ವಗಳನ್ನು ಪ್ರಕಟಿಸುವ ಕೌಶಲ್ಯವು ಇರುತ್ತದೆ.  ಉತ್ತರೀಯವನ್ನು ಎಡಬಲ ಭುಜಗಳ ಮೇಲೆ ಹಾಕಿಕೊಳ್ಳುವುದರ ಹಿಂದೆ ಗಾಢವಾದ ಯೋಗತತ್ವಗಳು ಅಡಗಿರುತ್ತವೆ. ಅವುಗಳಲ್ಲಿ ಬಟ್ಟೆಯು ಕರ್ಮ ಮಾಡುವವನ ಮನೋಧಾರೆಯನ್ನು ಪ್ರತೀಕಿಸುವ ಸಾಧನವಾಗಿರುತ್ತದೆ.
(ಉಣ್ಣೆಯಿಂದ ಮಾಡಿದ್ದೇರೇಷ್ಮೆಯದೇಹತ್ತಿಯದೇ ಮುಂತಾಗಿ) ಬಟ್ಟೆಯ ಗುಣ ಅದರ ಆಯ್ಕೆಯಲ್ಲಿ ಪಾತ್ರ ವಹಿಸಿದ್ದರೆಅದರ ಬಣ್ಣವೂ ಸಹ ಅದನ್ನಾರಿಸುವುದರಲ್ಲಿ ಪ್ರಮುಖವಾದ ಪಾತ್ರವಹಿಸಿದ್ದಿತು. ಮನಸ್ಸಿನ ಬಣ್ಣವನ್ನು ನಿಶ್ಚಯಿಸುವುದರಲ್ಲಿ ಬಟ್ಟೆಯ ಬಣ್ಣದ ಪ್ರಭಾವವು ಬಹಳವಿರುತ್ತದೆ ಎಂಬ ಅಂಶವು ನಮ್ಮ ಪೂರ್ವಿಕರಿಗೆ ಚೆನ್ನಾಗಿ ತಿಳಿದಿದ್ದ ವಿಷಯವಾಗಿದ್ದಿತು. ಸ್ಥಳಾವಕಾಶವಿಲ್ಲವಿರುವುದರಿಂದ ಇಲ್ಲಿ ನಾವು ಉದಾಹರಣೆ ಕೊಡುತ್ತಿಲ್ಲ. ಇಂದು ನಮ್ಮ ಬಟ್ಟೆಗಳು ನಮ್ಮ ಮನಸ್ಸು ಒಂದು ಬಣ್ಣವಾಗಿರದೆ ಬಹು ವರ್ಣವಾಗಿರುವುದನ್ನು ಹೊರಗೆ ವ್ಯಕ್ತಪಡಿಸುತ್ತದೆ.

ಪ್ರಾಯಃ ನಾವು ಪುನಃ ನಮ್ಮ ಹಿಂದಿನವರ ಉಡಿಗೆಯ ಶೈಲಿಗೆ ಹಿಂದಿರುಗುವುದು ಕಠಿಣವಾದ ಕೆಲಸವೇ ಸರಿ. ಆದರೆ ನಮ್ಮ ಪರಂಪರಾಗತವಾದ ಉಡಿಗೆಯು ನಮ್ಮ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪ್ರತೀಕಿಸುವುದರಿಂದನಮ್ಮ ಧಾರ್ಮಿಕ ಜೀವನದ ಸಮಯದಲ್ಲಿ ಅದನ್ನು ನಿಷ್ಠೆಯಿಂದ ಅನುಸರಿಸಿದರೆ ಆಗ ಪರಂಪರೆಯು ಲುಪ್ತವಾಗುವುದಿಲ್ಲ. ಹಿಂದೆ ಅದು ಸರ್ವಕಾಲದ ಉಡುಪಾಗಿದ್ದಿತು. ಈಗ ಹೊಸ ಸನ್ನಿವೇಶಗಳಿಂದ ಅದನ್ನು ಸರ್ವದಾ ಅನುಸರಿಸಲಾಗದಿದ್ದರೂ ನಮ್ಮ ಧಾರ್ಮಿಕ ಜೀವನದಲ್ಲಿ ಅದಕ್ಕೆ ಸಲ್ಲುವ ಗೌರವವನ್ನು ಅನುಸರಣೆಯ ಮೂಲಕ ಸಲ್ಲಿಸಿದರೆ ಆಗ ಅದು ನಾವು ನಮ್ಮ ಸಂಸ್ಕೃತಿಯಿಂದ ಬೇರ್ಪಡದಿರುವ ದಿಕ್ಕಿನಲ್ಲಿ ಮಾಡಿದ ಒಂದು ಪ್ರಯತ್ನವಾಗುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಮೇ 1982 ಸಂಪುಟ :4 ಸಂಚಿಕೆ:7 ರಲ್ಲಿ ಪ್ರಕಟವಾಗಿದೆ.