Thursday, January 28, 2021

ಸಾಮರಸ್ಯಕ್ಕೊಂದು ಸರಳ ಸೂತ್ರ (Samarasyakkondu Sarala Sutra)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್  
(ಪ್ರತಿಕ್ರಿಯಿಸಿರಿ lekhana@ayvm.in)


ಮಹಾಭಾರತದಲ್ಲಿ ಹೀಗೊಂದು ಉದ್ಬೋಧಕ ಪ್ರಸಂಗವಿದೆ-

ವನವಾಸದ ಅವಧಿಯಲ್ಲಿ ಪಾಂಡವರೊಮ್ಮೆ ದ್ವೈತವನದಲ್ಲಿದ್ದರು. ಅವರ ಹೊಟ್ಟೆ ಉರಿಸಬೇಕೆಂಬ ಉದ್ದೇಶದಿಂದ, ಬಂಧು-ಮಿತ್ರರೊಡಗೂಡಿ ವೈಭವೋಪೇತವಾದ ಸಜ್ಜುಗಳೊಡನೆ ದುರ್ಯೋಧನನು ದ್ವೈತವನದಲ್ಲಿದ್ದ ಸರೋವರದ ಬಳಿಗೆ ಹೋದನು. ದುರ್ಯೋಧನನ ಅಪ್ಪಣೆಯಂತೆ ಅಲ್ಲಿ ಕ್ರೀಡಾಸ್ಥಾನವನ್ನು ಸಿದ್ಧಪಡಿಸುವುದಕ್ಕೆ, ಅವನ ಸೇವಕರು ಆ ಸರೋವರದ ಬಳಿ ಹೋದಾಗ, ಆ ವೇಳೆಗೆ ಅಲ್ಲಿ ಬೀಡುಬಿಟ್ಟಿದ್ದ ಗಂಧರ್ವರು, ಇವರನ್ನು ತಡೆದರು. ದುರ್ಯೋಧನಾದಿಗಳೇ ಗಂಧರ್ವರನ್ನು ಎದುರಿಸಲು ಬಂದು, ಕಡೆಗೆ ಅವರಿಂದ ಬಂಧಿತರಾದರು. ಕೌರವರ ಕಡೆಯವರು ಧರ್ಮರಾಜನನ್ನು ಕಂಡು ತಮ್ಮ ರಾಜನನ್ನು ಬಿಡಿಸಿಕೊಡಬೇಕೆಂದು ಆರ್ತರಾಗಿ ಬೇಡಿಕೊಂಡರು. ಅದನ್ನು ಕೇಳಿ ಭೀಮನು, "ನಾವು ಮಾಡಬೇಕಾದದ್ದನ್ನು ಗಂಧರ್ವರೇ ಮಾಡಿದರು; ಅಧರ್ಮಾಚರಣೆಗೆ ತಕ್ಕ ಶಾಸ್ತಿಯಾಯಿತು" ಎಂದನು. ಧರ್ಮರಾಜನು ಅವನನ್ನು ತಡೆದು, 


"ಪರಸ್ಪರ ವಿರೋಧೇ ತು ವಯಂ ಪಂಚ ಚ ತೇ ಶತಮ್I

 ಅನ್ಯೇಭ್ಯಶ್ಚ ವಿರೋಧೇ ತು ವಯಂ ಪಂಚಾಧಿಕಂ ಶತಮ್II


(ನಮ್ಮ ನಮ್ಮಲ್ಲಿ {ಪಾಂಡವ ಕೌರವರಲ್ಲಿ ವಿರೋಧವಿದ್ದಾಗ ನಾವೈದು ಮಂದಿ; ಅವರು ನೂರು. ಇತರರೊಡನೆ ವಿರೋಧ ಬಂದಲ್ಲಿ ನಾವು ನೂರೈದು ಮಂದಿ}). "ಜ್ಞಾತಿಗಳಲ್ಲಿ ಅಭಿಪ್ರಾಯಭೇದಗಳು ಇರುತ್ತವೆ. ಆದರೆ, ಹೊರಗಿನವರು ಬಂದು ಮೇಲೆ ಬಿದ್ದಾಗ, ಅದನ್ನು ನೋಡಿಕೊಂಡು ಸುಮ್ಮನಿರುವುದೇ? ಶರಣಾಗತರಿಗೆ ಸಹಾಯ ಮಾಡಬೇಕು. ದುರ್ಯೋಧನನಿಗೆ ಆಗಿರುವ ಅವಮಾನವು ನಮಗೂ ಆದಂತೆಯೇ ಸರಿ" ಎಂದು ಹೇಳುತ್ತಾನೆ. ಧರ್ಮರಾಜನ ತಮ್ಮಂದಿರು ಗಂಧರ್ವರೊಡನೆ ಹೋರಾಡಿ, ದುರ್ಯೋಧನಾದಿಗಳನ್ನು ಗಂಧರ್ವರ ಸೆರೆಯಿಂದ ಬಿಡಿಸುತ್ತಾರೆ.


ಮಹಾಭಾರತದ ಈ ಕಥೆ ಎಲ್ಲಾ ಕಾಲಕ್ಕೂ ಪ್ರಸ್ತುತವೇ. ಇಂದು ಎಲ್ಲ ಕ್ಷೇತ್ರಗಳಲ್ಲೂ ದ್ವೇಷಾಸೂಯೆಗಳಿಂದ ಸಂಘರ್ಷಕ್ಕೆ ಇಳಿಯುವವರು ಬಹು ಮಂದಿ. ಭಾರತ ದೇಶದಲ್ಲಿ ಈ ಹಿಂದೆ ಪೃಥ್ವೀರಾಜ-ಜಯಚಂದ್ರರ ನಡುವಿನ ವೈರ, ಅಧರ್ಮಿಗಳಾದ ಪರಕೀಯರ ದಾಳಿಗೆ ಎಡೆ ಮಾಡಿಕೊಟ್ಟಿತು. ಭಾರತ ಪರಾಕ್ರಾಂತವಾಗಿ ಅತ್ಯಾಚಾರ, ಅನಾಚಾರಗಳು ಯಥೇಚ್ಛವಾಗಿ ನಡೆದವು. 


ಇಂದೂ ಕೋಮುಗಲಭೆಗಳು ನಿಂತಿಲ್ಲ. ಇತ್ತೀಚಿನ ದಿನಗಳಲ್ಲೂ ಎಷ್ಟೋ ದೇವಾಲಯಗಳು ನಾಶವಾಗುತ್ತಿರುವುದಕ್ಕೆ ನಾವು ಮೂಕಪ್ರೇಕ್ಷಕರಾಗುತ್ತಿದ್ದೇವೆ. ಅಚ್ಚರಿಯ ಸಂಗತಿಯೆಂದರೆ, ಧರ್ಮವನ್ನು ಬೋಧಿಸ ಹೊರಡುವ ಆಚಾರ್ಯರು ತಮ್ಮ ಮತವೇ ಸರ್ವೊತ್ಕೃಷ್ಟವೆಂದು ಪ್ರತಿಪಾದಿಸುವ ಭರಾಟೆಯಲ್ಲಿ ಮಾಡುವ ಇತರ ಮತಗಳ ಖಂಡನೆ ತಾರಕಕ್ಕೇರಿ, ವಿಷಾಗ್ನಿ ಜ್ವಲಿಸಿ ಎಲ್ಲರನ್ನೂ ಸುಡುತ್ತಿದೆ. 


ಮತಭೇದಗಳೇನೇ ಇರಲಿ; ಸಮಾನವಾದ ಅಭಿಪ್ರಾಯಗಳೂ ಸಾಕಷ್ಟಿವೆಯಷ್ಟೆ. ಭಾರತದ ಎಲ್ಲ ಆಸ್ತಿಕ ಗುರುಗಳೂ, ಭಗವತ್ಸ್ಮರಣೆ, ಪೂಜೆ, ಸರ್ವಭೂತಹಿತರೂಪವಾದ ಧರ್ಮಾಚರಣೆಗಳನ್ನು ಬೋಧಿಸಿಯೇ ಇದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ, ತಮ್ಮ ಮತಾಚಾರ್ಯರ ಮಾತುಗಳನ್ನು ಆಚರಿಸಬಹುದು; ಆದರೆ ಮನೆಯಿಂದ ಕಾಲನ್ನು ಹೊರಗಿಟ್ಟ ಕೂಡಲೇ "ಭಾರತವಿಡೀ ಸರ್ವಹಿತಪರರಾದ ಋಷಿಮುನಿಗಳ ನಾಡು; ಧರ್ಮಾತ್ಮರಾಗಿ ರಾಜ್ಯವಾಳಿದ ಅರಸರ ನೆಲೆವೀಡು" ಎಂಬ ಪ್ರಜ್ಞೆ ಮೂಡಿಬಿಟ್ಟರೆ ನಮಗಿಂತಲೂ ಸುಖಿಗಳು ಯಾರಿದ್ದಾರೆ? ದೇಶಪ್ರೇಮ ಜಾಗೃತವಾಗಲು ಭೌಗೋಳಿಕ ಪ್ರಜ್ಞೆಯಷ್ಟೇ ಸಾಲದು; ಸಾಂಸ್ಕೃತಿಕವಾಗಿ ಸಮಾನಧರ್ಮಗಳೇನೆಂಬುದನ್ನು ಹುಡುಕಬೇಕು. "ಹುಟ್ಟುವಾಗ ಅಣ್ಣತಮ್ಮಂದಿರು; ಬೆಳೆಯುವಾಗ ದಾಯಾದಿಗಳು" ಎಂದು ಹೇಳುವುದುಂಟು. ಇದು ಲೋಕವನ್ನು ಗಮನಿಸಿ ಆಡಿರುವ ಅನುಭವದ ಮಾತೇ ಸರಿ. ಆದರೆ ದಾಯಾದಿಗಳಾಗಿದ್ದರೂ ಸರಿ; ಸಮಾಜ, ದೇಶಗಳ ರಕ್ಷಣೆಯ ವಿಷಯ ಬಂದಾಗ ನಾವು ಅಣ್ಣ-ತಮ್ಮಂದಿರು ಎಂದು ಭಾವಿಸುವುದು ವಿವೇಕಯುತವಾದ ನಡೆ. ಇಂತಹ ನಡೆ ಭಾರತೀಯರಿಗೆ ಅಸಾಧ್ಯವೇನೂ ಅಲ್ಲ. ಬಹುಶಃ ಉದಾರಗುಣಗಳನ್ನು ಮೆರೆದವರ ವೃತ್ತಾಂತಗಳ ಇತಿಹಾಸದ ಪುಟಗಳನ್ನು ನೋಡಿದಾಗ, ಭಾರತಕ್ಕೆ ಸರಿಸಮಾನ ರಾಷ್ಟ್ರ ಮತ್ತೊಂದಿರಲಾರದು. 


"ಇತಿಹಾಸದಲ್ಲಿ ಎಲ್ಲಾ ದೇಶಗಳ ಜೀವನ ನಾವೆಗಳೂ ಆಗಿಂದಾಗ್ಗೆ ಬದಲಾಗುತ್ತಿದ್ದರೂ, ಭಾರತದಲ್ಲಿ ಈವರೆವಿಗೂ ಅನೇಕ ದಾಳಿಗಳು ನಡೆದಿದ್ದರೂ, ಒಂದೇ ರೀತಿಯಾದ ನಾವೆಯಲ್ಲಿ ಭಾರತವು ಪ್ರಯಾಣ ಮಾಡುತ್ತಿದೆ. ಈ ತರಹದ ಜೀವನದ ಧ್ಯೇಯನಿಷ್ಕರ್ಷೆ ಮತ್ತು ಅದರ ಸಾಧನಾವಿಧಾನ ಇವುಗಳನ್ನು ಮತ್ತಾವ ದೇಶದ ಇತಿಹಾಸದಲ್ಲೂ ನಾವು ಕಾಣಲಾಗುವುದಿಲ್ಲ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.


ಭ್ರಾತೃಪ್ರೇಮವನ್ನು ಬಿಂಬಿಸುವ ರಾಮಾಯಣದಂತಹ ಆರ್ಷಕಾವ್ಯಗಳು, ಭರತ-ಬಾಹುಬಲಿಗಳ ಸಹೋದರ ಸೌಹಾರ್ದದ ಇತಿಹಾಸ- ಮುಂತಾದ ನಿದರ್ಶನಗಳು ಅನೇಕ. ಮಹಾಭಾರತವು ಜ್ಞಾತಿಕಲಹದ ವೈಭವೀಕರಣದಂತೆ ಕಂಡರೂ, ಮೂಲತಃ ಧರ್ಮಕ್ಕೆ ಜಯವಾಗಬೇಕೆಂದು ಹೋರಾಡಿದವರ ಕಥೆಯೇ ಆಗಿದೆ. ಮೂಲಮಹಾಭಾರತದಲ್ಲಿ ಅನೇಕ ಕಥೆಗಳು ಬಂದಿದ್ದರೂ, ವಿಷಯದ ದೃಷ್ಟಿಯಿಂದ ಧರ್ಮಕ್ಕೆ ಹಾಗೂ ತತ್ತ್ವಕ್ಕೇ ಪ್ರಾಧಾನ್ಯ. ಇಂದಾದರೂ ನಮ್ಮ ಪೂರ್ವಜರ ಮಾತುಗಳಲ್ಲಿ ಕಂಡುಬರುವ ಸಮಾನಧರ್ಮಗಳನ್ನು ಹುಡುಕಿ ಸೌಮನಸ್ಯದಿಂದ ಒಗ್ಗಟ್ಟಾದರೆ, ನಾವು ಮೊದಲಿಗೆ ಭಾರತೀಯರು; ನಂತರ ಇಂತಹ ಒಳಪಂಗಡದವರು ಎನ್ನುವಂತಾದರೆ, ಭಾರತದಲ್ಲಿ ಸುವರ್ಣಯುಗ ಪ್ರಾರಂಭವಾಗುವ ದಿನಗಳು ದೂರವಿಲ್ಲ. 


ಸೂಚನೆ: 28/01/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.