Sunday, January 10, 2021

ನಿಯಮ - ಸ್ವಾಧ್ಯಾಯ, ಈಶ್ವರ ಪ್ರಣಿಧಾನ (Niyama - Svadhyaya, Isvara Pranidhana)

ಲೇಖಕರು: ಶ್ರೀ ಜಿ ನಾಗರಾಜ

(ಪ್ರತಿಕ್ರಿಯಿಸಿರಿ lekhana@ayvm.in)


  

ಪತಂಜಲಿಗಳ ಯೋಗಸೂತ್ರದ ಕೊನೆಯ ಎರಡು ನಿಯಮಗಳು ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ.

ವ್ಯಾಸಭಾಷ್ಯದ ಅನುಸಾರ ಮೋಕ್ಷಶಾಸ್ತ್ರದ ಅಧ್ಯಯನ ಹಾಗೂ ಪ್ರಣವ ಜಪವೇ ಸ್ವಾಧ್ಯಾಯ. ಸ್ವಾಧ್ಯಾಯದ ನೇರವಾದ ಅರ್ಥ ತನ್ನನ್ನೇ ತಾನು ಅಧ್ಯಯನ ಮಾಡಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದು ಎಂದಾಗುತ್ತದೆ. ಮಹರ್ಷಿಗಳ ಅಭಿಮತದಲ್ಲಿ ಮಾನವ ಶರೀರವು ಇಡೀ ಬ್ರಹ್ಮಾಂಡದ ಸಂಗ್ರಹವಾದ ಮಾದರಿಯಾಗಿದ್ದು ಪಿಂಡಾಂಡ ಎನ್ನಿಸಿಕೊಳ್ಳುತ್ತದೆ. ಹೀಗಾಗಿ ಇಡೀ ಸೃಷ್ಟಿಯ ತತ್ತ್ವಗಳನ್ನು ಮಾನವನು ತನ್ನೊಳಗೇ ಅವಲೋಕಿಸಿಕೊಳ್ಳಬಹುದಾಗಿದೆ. ಮಾನವನಲ್ಲಿ ಭೌತಿಕ, ದೈವಿಕ ಹಾಗೂ ಆಧ್ಯಾತ್ಮಿಕ ಸ್ತರಗಳಿದ್ದು ಕೇವಲ ಭೌತಿಕ ಸ್ತರದಲ್ಲಿಯೇ ಅನೇಕ ವೈದ್ಯಕೀಯ ಶಾಸ್ತ್ರಗ್ರಂಥಗಳಿಗೆ ಸಾಕಾಗುವಷ್ಟು ವಿಷಯಗಳಿವೆ. ಇನ್ನು ದೈವೀ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಗಳನ್ನು ಪರಿಗಣಿಸಿದರೆ, ಮಾನವನ ಒಳಪ್ರಪಂಚ ಬಹಳ ವಿಸ್ತಾರವಾಗಿರುತ್ತದೆ. ಈ ಒಳಪ್ರಪಂಚದಲ್ಲಿ ಸಾಗಿ ಮೂಲನಾದ ಭಗವಂತನನ್ನು ತಲಪುವುದೇ ಯೋಗವಾದುದರಿಂದ ಈ ಒಳಪ್ರಪಂಚದ ವಿಜ್ಞಾನದ ಪರಿಚಯವು ಯೋಗ ಸಾಧನೆಗೆ ಬಹಳ ಪೋಷಕವಾಗಿರುತ್ತದೆ.

ನಂತರ ಈ ಸ್ವಾಧ್ಯಾಯವನ್ನು ಮಾಡುವುದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ತನ್ನೊಳಗಿನ ಪರಿಚಯ ಹೇಗೆ ಉಂಟಾಗುತ್ತದೆಂದರೆ, ಮೋಕ್ಷಶಾಸ್ತ್ರ( ಉಪನಿಷತ್ತುಗಳು ಮತ್ತು ಭಗವದ್ಗೀತೆಗಳ ಅನುಸಂಧಾನ ಮತ್ತು ಓಂಕಾರ ಜಪ)ದಿಂದ ಉಂಟಾಗುತ್ತದೆ ಎಂದು ವ್ಯಾಸಭಾಷ್ಯ ಹೇಳುತ್ತದೆ. ಪರಂಪರೆಯಲ್ಲಿ ಸ್ವಾಧ್ಯಾಯ ಎಂದರೆ, ವೇದದ ಸ್ವಶಾಖೆಯನ್ನು ಅಧ್ಯಯನ ಮಾಡುವುದು ಅಥವಾ ಅದರ ಸ್ಥಾನದಲ್ಲಿ ಪುರಾಣಗಳನ್ನು ಅಧ್ಯಯನ ಮಾಡುವುದು ಎನ್ನುವ ಅಭಿಪ್ರಾಯಗಳಿದ್ದು ಈ ಅಧ್ಯಯನಗಳಿಂದ ತಮ್ಮನ್ನೇ ತಾವು ಅಧ್ಯಯನ ಮಾಡಿಕೊಂಡಂತಾಗುತ್ತದೆಯೆಂಬುದು ಇಲ್ಲಿನ ಸಾರಾಂಶ.

ಈಶ್ವರನಲ್ಲಿ ಸರ್ವಸ್ವಾರ್ಪಣ ಬುದ್ಧಿಯನ್ನಿಟ್ಟುಕೊಳ್ಳುವುದು ಈಶ್ವರ ಪ್ರಣಿಧಾನ. ಈಶ್ವರ ಪ್ರಣಿಧಾನವು ಸಂಪೂರ್ಣವಾಗಿ ಕೂಡಿಬಂದರೆ ಸಮಾಧಿ ಸ್ಥಿತಿಯೇ ಉಂಟಾಗಿಬಿಡುತ್ತದೆ. ಹೀಗಾಗಿ ಭಕ್ತಿಯೋಗದ ಮಾರ್ಗಗಳಲ್ಲಿ ಈಶ್ವರ ಪ್ರಣಿಧಾನವು ಪ್ರಧಾನ ಅಂಗವಾಗಿರುತ್ತದೆ. ನಾನಾವಿಧವಾದ ಯೋಗಮಾರ್ಗಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಅವು ಸಂಪೂರ್ಣವಾಗಿ ವಿವಿಕ್ತವಾದ ಸಾಧನಗಳಿಂದ ಕೂಡಿರದೇ ಅವುಗಳಲ್ಲಿ ಸಾಮಾನ್ಯವಾದ ಅಂಶಗಳೂ ಇದ್ದು ಕೆಲವು ಪ್ರಮುಖವಾಗಿದ್ದು ಮತ್ತಿತರವು ಗೌಣವಾಗಿರುತ್ತವೆ. ಈ ನೀತಿಯು ಈಶ್ವರ ಪ್ರಣಿಧಾನಕ್ಕೂ ಅನ್ವಯಿಸುತ್ತದೆ. ಆಸನ-ಪ್ರಾಣಾಯಾಮಾದಿ ಮೆಟ್ಟಿಲುಗಳನ್ನೇರಿ ಸಮಾಧಿ ಸ್ಥಿತಿ ತಲುಪಲು ಯಥಾಶಕ್ತಿ ಇಟ್ಟುಕೊಳ್ಳುವ ಈಶ್ವರಾರ್ಪಣ ಬುದ್ಧಿಯು ಪೋಷಕವಾದ ನಿಯಮವಾದರೆ, ಮುಖ್ಯವಾದ ಅಂಗವಾದಾಗ ಈಶ್ವರ ಪ್ರಣಿಧಾನವೇ ಒಂದು ಯೋಗಮಾರ್ಗವಾಗುತ್ತದೆ. ಯೋಗಸೂತ್ರದಲ್ಲಿ "ಈಶ್ವರ ಪ್ರಣಿಧಾನಾದ್ವಾ" ಎಂದು ಸಮಾಧಿ ಸ್ಥಿತಿಯನ್ನು ತಲುಪಲು ಇದೊಂದೇ ಸಾಕು ಎಂದೂ ಪತಂಜಲಿಗಳು ಘೋಷಿಸಿದ್ದಾರೆ. 

ಸೂಚನೆ : 9/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.