ಪ್ರಾಣಾಯಾಮದ ಮುಖ್ಯಾಂಗಗಳು ರೇಚಕ (ಉಸಿರು ಬಿಡುವುದು), ಪೂರಕ (ಉಸಿರು ತೆಗೆದುಕೊಳ್ಳುವುದು) ಮತ್ತು ಕುಂಭಕ (ಉಸಿರು ಕಟ್ಟುವುದು). ಬಲಹೊಳ್ಳೆಯಲ್ಲಿ ಪೂರಕ, ನಂತರ ಕುಂಭಕ, ತದನಂತರ ಎಡಹೊಳ್ಳೆಯಲ್ಲಿ ರೇಚಕ ಮಾಡುವುದನ್ನು ಸೂರ್ಯಭೇದನ ಪ್ರಾಣಾಯಾಮವೆನ್ನುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಎಡಹೊಳ್ಳೆಯಲ್ಲಿ ಪೂರಕ, ನಂತರ ಕುಂಭಕ, ತದನಂತರ ಬಲಹೊಳ್ಳೆಯಲ್ಲಿ ರೇಚಕ ಮಾಡುವುದನ್ನು ಚಂದ್ರಭೇದನ ಪ್ರಾಣಾಯಾಮವೆನ್ನುತ್ತಾರೆ. ಇದಲ್ಲದೇ ಭಸ್ತ್ರಿಕಾ, ಶೀತಲೀ, ಸೀತ್ಕಾರಿ ಮುಂತಾದ ಬೇರೆ ಪ್ರಾಣಾಯಾಮಗಳೂ ರೂಢಿಯಲ್ಲಿವೆ.
ಚಂದ್ರಭೇದನ, ಸೂರ್ಯಭೇದನ ಮುಂತಾದ ಹೆಸರುಗಳು ಬರುವುದಕ್ಕೆ ಕಾರಣವುಂಟು. ಶರೀರದಲ್ಲಿ ಪ್ರಾಣಶಕ್ತಿಯು ಹರಿಯುವ ಮಾರ್ಗಗಳನ್ನು ನಾಡೀ ಎನ್ನುತ್ತಾರೆ. ಇವುಗಳಲ್ಲಿ ಮೂರು ನಾಡಿಗಳು ಮುಖ್ಯವಾದವು - ಚಂದ್ರನಾಡಿ, ಸೂರ್ಯನಾಡಿ ಹಾಗೂ ಸುಷುಮ್ನಾ ನಾಡಿ. ಎಡಹೊಳ್ಳೆಯಲ್ಲಿ ಹೆಚ್ಚು ಉಸಿರಾಟ ನಡೆಯುವಾಗ ಚಂದ್ರನಾಡಿಯಲ್ಲಿ ಪ್ರಾಣಸಂಚಾರವಿದ್ದು ಮನಸ್ಸು ಶಾಂತವಾಗಿದ್ದು ಶರೀರದಲ್ಲಿ ತಂಪಿರುತ್ತದೆ. ಬಲಹೊಳ್ಳೆಯಲ್ಲಿ ಹೆಚ್ಚು ಉಸಿರಾಟ ನಡೆಯುವಾಗ ಸೂರ್ಯನಾಡಿಯಲ್ಲಿ ಪ್ರಾಣಸಂಚಾರವಿದ್ದು ಶರೀರದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಮನಸ್ಸು ಹೆಚ್ಚು ಕಾರ್ಯಪ್ರವೃತ್ತವಾಗಿರುತ್ತದೆ. ಎರಡೂ ಹೊಳ್ಳೆಯಲ್ಲಿ ಸಮ ಪ್ರಮಾಣದಲ್ಲಿ ಉಸಿರಾಟವಿದ್ದಾಗ ಪ್ರಾಣಸಂಚಾರವು ಸುಷುಮ್ನಾ ಮಾರ್ಗದಲ್ಲಿ ನಡೆಯುತ್ತಿದ್ದು ಶರೀರ ಮನಸ್ಸುಗಳಲ್ಲಿ ಧ್ಯಾನಕ್ಕೆ ಪೋಷಕವಾದ ಸ್ಥಿತಿಯುಂಟಾಗುತ್ತದೆ.
ಯಾವ ನಾಡಿಯಲ್ಲಿ ಆಗುವ ಪ್ರಾಣಸಂಚಾರ ಯಾವ ಕ್ರಿಯೆ ಅಥವಾ ಸ್ಥಿತಿಗೆ ಪೋಷಕ ಎನ್ನುವ ವಿಜ್ಞಾನವನ್ನು ಆಧರಿಸಿ ಭಾರತೀಯ ಸಂಸ್ಕೃತಿಯ ಅನೇಕ ಆಚರಣೆಗಳು ರೂಪಿತವಾಗಿವೆ. ಉದಾಹರಣೆಗೆ, ಪರಂಪರೆಯಲ್ಲಿ ಬಂದಿರುವ ನಿದ್ರಿಸುವಾಗ ಎಡಮಗ್ಗುಲಲ್ಲಿ ಮಲಗಬೇಕು ಮತ್ತು ಬಲಮಗ್ಗುಲಿನಿಂದ ಏಳಬೇಕು ಎನ್ನುವ ರೂಢಿಯಲ್ಲಿಯೂ ಸಹ ಪ್ರಾಣವಿದ್ಯೆಯ ಹಿನ್ನೆಲೆಯುಂಟು. ಎಡಮಗ್ಗುಲಲ್ಲಿ ಮಲಗಿದ್ದಾಗ ಬಲಹೊಳ್ಳೆಯಲ್ಲಿ ಪ್ರಮುಖ ಉಸಿರಾಟ ಮತ್ತು ಸೂರ್ಯನಾಡಿಯಲ್ಲಿ ಪ್ರಾಣಸಂಚಾರವಿದ್ದು ಜೀರ್ಣಪ್ರಕ್ರಿಯೆಗೆ ಪೋಷಕವಾಗಿರುತ್ತದೆ. ಏಳಬೇಕಾದರೆ ಬಲ ಮಗ್ಗುಲಲ್ಲಿ ಮಲಗಿ ನಂತರ ಎದ್ದರೆ ಪ್ರಮುಖ ಉಸಿರಾಟ ಎಡಹೊಳ್ಳೆಯಲ್ಲಿದ್ದು, ಪ್ರಾಣಸಂಚಾರ ಚಂದ್ರನಾಡಿಯಲ್ಲಿದ್ದು ಮನಸ್ಸು ಶಾಂತವಾಗಿರುತ್ತದೆ. ಶಾಂತಮನಸ್ಸಿನಿಂದ ದಿನಚರಿಯು ಆರಂಭವಾಗಬೇಕೆಂಬುದು ಈ ರೂಢಿಯ ಆಶಯ. ಇದೇ ರೀತಿ, ಗೃಹಪ್ರವೇಶ ಮಾಡಬೇಕಾದರೆ ಬಲಗಾಲನ್ನು ಮೊದಲು ಇಟ್ಟು ಪ್ರವೇಶ ಮಾಡುವುದು, ಯುದ್ಧರಂಗವನ್ನು ಪ್ರವೇಶ ಮಾಡಬೇಕಾದರೆ ಎಡಗಾಲನ್ನು ಮೊದಲಿಟ್ಟು ಪ್ರವೇಶ ಮಾಡುವುದು, ಯಜ್ಞದಲ್ಲಿ ಎರಡೂ ಕೈಗಳನ್ನು ಬಳಸಿ ಕ್ರಿಯೆಗಳನ್ನು ಮಾಡುವುದು ಮುಂತಾದ ಎಲ್ಲ ಆಚರಣೆಗಳಲ್ಲೂ ಪ್ರಾಣವಿದ್ಯೆಯ ಮರ್ಮವು ಹಿನ್ನೆಲೆಯಲ್ಲಿರುತ್ತದೆ. ಹೀಗೆ ಪ್ರಾಣಾಯಾಮದ ವಿಜ್ಞಾನವನ್ನು ಮಹರ್ಷಿಗಳು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಅಳವಡಿಸಿದ್ದಾರೆ.
ಸೂಚನೆ : 30/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.