Thursday, January 7, 2021

ಶಿವನ ಅಂತರಂಗ ದರ್ಶನ (Shivana Antaranga Darshana)

ಲೇಖಕರು:ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)


ದಕ್ಷಯಜ್ಞಕ್ಕೆ ದಾಕ್ಷಾಯಣಿ ಬಂದಿದ್ದಾಳೆ. ಪತಿ ಪರಮೇಶ್ವರನು ಹೋಗುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ್ದಾನೆ. ಆದರೂ ಸ್ತ್ರೀ ಸಹಜ ತವರಿನ ಸೆಳೆತ ಅವಳನ್ನು ಬರುವಂತೆ ಮಾಡಿದೆ. ಅಲ್ಲಿ ತಂದೆಯಾದ ದಕ್ಷನಾಗಲೀ ಹತ್ತಿರದ ಇತರ ಬಂಧುಗಳಾಗಲೀ ಇವಳನ್ನು ಆದರದಿಂದ ಬರಮಾಡಿಕೊಂಡಿಲ್ಲ. ಯಜ್ಞದ ಯಶಸ್ಸಿಗೆ ಕಾರಣನಾಗಬೇಕಾದ ಪರಶಿವನಿಗೆ ಆಹ್ವಾನವಿಲ್ಲ. ಒಟ್ಟು ವಾತಾವರಣದಲ್ಲಿ ಶಿವನ ಬಗ್ಗೆ ತಾತ್ಸಾರ ಎದ್ದು ಕಾಣುತ್ತಿದೆ. ಸತೀ-ದಾಕ್ಷಾಯಣಿಗೆ ಇದನ್ನು ಸಹಿಸಿಕೊಳ್ಳಲಾಗಿಲ್ಲ. ತನಗೇ ಆದ ಅವಮಾನಕ್ಕಿಂತ ಜಗತ್ತಿಗೇ ಒಡೆಯನಾದ ಶಿವನಿಗೆ ಆದ ಅವಮಾನ ಅವಳನ್ನು ಹೆಚ್ಚು ಕ್ರುದ್ಧಳನ್ನಾಗಿಸಿತ್ತು. ಈ ಹಿಂದೆ ದಕ್ಷನು ಶಿವನನ್ನು ಸ್ಮಶಾನವಾಸಿ, ಬೂದಿಬಡುಕ, ಜುಗುಪ್ಸಿತವಾದ ವೇಷವುಳ್ಳವನು, ಕುಲ-ಗೋತ್ರ ಇಲ್ಲದವನು ಎಂದೆಲ್ಲ ಮೂದಲಿಸಿರುತ್ತಾನೆ. ತನ್ನ ಅವಮಾನದ ಬೆಂಕಿಯಲ್ಲಿ ಅದನ್ನೆಲ್ಲಾ ನೆನೆದು ತಂದೆಯಾದ ದಕ್ಷನಿಗೆ ಸತಿಯು ಹೇಳುವ ಮಾತುಗಳು ನಮಗೆಲ್ಲರಿಗೂ ಆದರ್ಶ.

" ಜಗದೀಶ್ವರನಾದ ಶಂಕರನ ಮಹಿಮೆಯನ್ನು ನೀನೇನು ಬಲ್ಲೆ? ಎಲ್ಲಾ ದೇಹಿಗಳ ಅಂತರಂಗದಲ್ಲಿ ಬೆಳಗುವ ಆತ್ಮಸ್ವರೂಪನವನು. ಸಮದರ್ಶನನಾದ ಅವನಿಗೆ ಯಾರೂ ಪ್ರಿಯರೂ, ಅಪ್ರಿಯರೂ ಅಲ್ಲ. ಯಾವ ಪ್ರಾಣಿಗಳಲ್ಲೂ ವೈರವಿಲ್ಲದ ಶಾಂತಮೂರ್ತಿ ಅವನು. ಜಗತ್ತಿಗೇ ಮೂಲನಾದ, ತಂದೆಯಾದ ಅವನಿಗೆ ಕುಲ-ಗೋತ್ರಗಳು ಎಲ್ಲಿಂದ ಬರಬೇಕು?  ಬ್ರಹ್ಮಾದಿ ದೇವತೆಗಳು ಸ್ಮಶಾನವಾಸಿಯಾದ, ಚಿತಾಭಸ್ಮಗಳನ್ನು ಧರಿಸಿದ ಭಗವಂತನಾದ ಪರಶಿವನ ಪಾದಗಳಿಂದ ಉದುರಿದ ನಿರ್ಮಾಲ್ಯವನ್ನು ತಮ್ಮ ತಲೆಯಲ್ಲಿ ಧರಿಸಿಕೊಳ್ಳುತ್ತಾರೆ. ಇದನ್ನೇ ಮಹಾಕವಿ ಕಾಳಿದಾಸನು ಹೀಗೆ ಹೇಳುತ್ತಾನೆ- 'ಅವನ ಅಂಗದ ಸಂಪರ್ಕವನ್ನು ಹೊಂದಿದ ಚಿತಾಭಸ್ಮದ ಧೂಳು ಸಹ ಪರಮಶುದ್ಧಿಯನ್ನು ಪಡೆಯುತ್ತದೆ.' ಅವನ ನೃತ್ಯಾಭಿನಯದಿಂದ ಅವನ ಮೈಮೇಲಿನ ಚಿತಾಭಸ್ಮವು ಕೆಳಗೆ ಬಿದ್ದಾಗ, ದೇವತೆಗಳೆಲ್ಲ ಅದನ್ನು ಪ್ರಸಾದರೂಪವಾಗಿ ತಮ್ಮ ತಲೆಯಮೇಲೆ ಹಚ್ಚಿಕೊಳ್ಳುತ್ತಾರೆ."

ನಮ್ಮ ಕಣ್ಣುಗಳು ದಕ್ಷನಂತೆಯೇ ಹೊರ ಜುಗುಪ್ಸಿತವಾದ ರೂಪವನ್ನು ಮಾತ್ರವೇ ಗ್ರಹಿಸುತ್ತವೆ. ನಮಗೆ ಯಾವುದು ಭಯಂಕರವೋ, ಅವೆಲ್ಲ ಅವನಿಗೆ ಅಲಂಕಾರ. ಸೃಷ್ಟಿಯನ್ನು ಲಯಗೊಳಿಸುವ ಅವನ ಕಾರ್ಯದ ಸಂಕೇತಗಳು/ಚಿಹ್ನೆಗಳು ಅವು. ಆ ರೂಪದ ಹಿಂಬದಿಯ ಅವನ ಪರವಾದ, ಜಗತ್ತಿನ ಚೇತನವಾದ ಬೆಳಕಿನ ರೂಪವನ್ನು ಗ್ರಹಿಸಲು ಸತಿಗಿದ್ದಂತೆ ತಪಸ್ಸಿನ ಕಣ್ಣುಗಳು ಬೇಕು. ಮಹಾದೇವನ ನಿಂದೆಯನ್ನು ಸಹಿಸದೇ, ಯಾವ ದೇಹಾಭಿಮಾನಿಯಾದ ತಂದೆಯಿಂದ ತನ್ನ ಶರೀರವು ಉಂಟಾಯಿತೋ ಆ ಶರೀರವನ್ನೇ ಮೈಲಿಗೆಯಾಗಿ ಭಾವಿಸಿ ಯೋಗದಿಂದ ತನ್ನ ಶರೀರವನ್ನು ಅಗ್ನಿಗಾಹುತಿಗೈಯುತ್ತಾಳೆ.

ಶಿವಸ್ವರೂಪದ ಬಗ್ಗೆ ಶ್ರೀರಂಗಮಹಾಗುರುಗಳು ಎತ್ತಿ ಹೇಳುತ್ತಿದ್ದ ಕಾಳಿದಾಸನ ಕುಮಾರ ಸಂಭವದ ಮಾತು ಇಲ್ಲಿ ಸ್ಮರಣೀಯ. "ಮನೋ ನವದ್ವಾರ ನಿಷಿದ್ಧ ವೃತ್ತಿ: ಹೃದಿ ವ್ಯವಸ್ಥಾಪ್ಯ ಸಮಾಧಿ ವಶ್ಯಂ | ಯಮಕ್ಷರಂ ಕ್ಷೇತ್ರವಿದೋ ವಿದುಸ್ತಂ, ಆತ್ಮಾನಮಾತ್ಮನ್ಯವಲೋಕಯನ್ತಮ್"- ಇಂದ್ರನ ಆದೇಶದಂತೆ ಶಿವನ ತಪಸ್ಸನ್ನು ಭಂಗಗೊಳಿಸಲು ಬಂದ ಮನ್ಮಥನು ಶಿವನನ್ನು ನೋಡಿದಾಗ ಅವನನ್ನು ಭಾವಿಸಿದ ಪರಿ ಇದು.  "ಶಿವನ ಮನಸ್ಸು ನವದ್ವಾರಗಳಲ್ಲೂ ವೃತ್ತಿರಹಿತವಾಗಿದೆ. ಸಮಾಧಿವಶನಾಗಿ, ಮನಸ್ಸನ್ನು ಹೃದಯದ ಅನಾಹತವೆಂಬ ಚಕ್ರದಲ್ಲಿ ಬೆಳಗುವ ಪರಮಾತ್ಮನಲ್ಲಿ ನೆಲೆಗೊಳಿಸಿದ್ದಾನೆ. ಯಾವ ಅಕ್ಷರನಾದ ಪರಮಾತ್ಮನನ್ನು ಈ ದೇಹಯಂತ್ರದ ಮರ್ಮವನ್ನರಿತವರು-ಕ್ಷೇತ್ರಜ್ಞರು ತಿಳಿಯುತ್ತಾರೋ ಅಂತಹ ಶಿವನು ತನ್ನಲ್ಲಿಯೇ ತನ್ನನ್ನು ನೋಡಿಕೊಳ್ಳುತ್ತಿದ್ದಾನೆ" ಎಂತಹ ಅದ್ಭುತವಾದ ಶಿವನ ನಿಜರೂಪ ವರ್ಣನೆ!

ಅಂತಹ ಶಿವಸ್ವರೂಪದ ಚಿಂತನೆ, ಸ್ಮರಣೆ ಸದಾ ನಮ್ಮೆಲ್ಲರಿಗೂ ಆಗಲಿ ಎಂದು ಆಶಿಸೋಣ.


ಸೂಚನೆ: 7/1/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.