Sunday, January 3, 2021

ಆರ್ಯಸಂಸ್ಕೃತಿ ದರ್ಶನ - 24 (Arya Samskruti Darshana - 24)

ಯಜ್ಞ –ಭಾರತದ ಜೀವನದ ಆದರ್ಶ        
ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ.  


ಭಾರತ ಭೂಮಿ ಪವಿತ್ರವಾದ ಕರ್ಮಭೂಮಿ. ಧರ್ಮ ಭೂಮಿಯೂ ಹೌದು. ಕರ್ಮವು ಬಂಧನಕ್ಕೆ ಕಾರಣವೆಂದು ಶಾಸ್ತ್ರಗಳು ಸಾರಿದರೂ ಧರ್ಮಮಯವಾದ-ಯಜ್ಞಮಯವಾದ ಕರ್ಮವು ಪವಿತ್ರವಾದುದು. ಅದು ಬಂಧನಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದಲೇ ಭಗವಂತನು ಗೀತೆಯಲ್ಲಿ "ಯಜ್ಞಾರ್ಥಾತ್ ಕರ್ಮಣೋsನ್ಯತ್ರ ಲೋಕೋ ಯಂ ಕರ್ಮಬಂಧನಃ" ಎಂದು ಹೇಳಿದ್ದಾನೆ. ಯಜ್ಞ, ದಾನ, ತಪಸ್ಸುಗಳಿಂದ ಜೀವನವು ಪಾವನವಾಗುತ್ತದೆ. (ಯಜ್ಞೋದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್). ಯಜ್ಞದ ಆಚರಣೆಯನ್ನು ಮಾಡದವನಿಗೆ ಈ ಲೋಕವೂ ಇಲ್ಲ. ಪರಲೋಕವೂ ಇಲ್ಲ. (ನಾಯಂ ಲೋಕೋsಸ್ತ್ಯಯಜ್ಞಸ್ಯ ಕುತೋsನ್ಯಃ ಕುರುತ್ತಮ.)

ದೈವೀ ಶಕ್ತಿಯ ಅನುಗ್ರಹದಿಂದಲೇ ಈ ಜಗತ್ತಿನ ವ್ಯಾಪಾರವೆಲ್ಲ ಸುಸೂತ್ರವಾಗಿ ನಡೆಯಬೇಕು. "ದೇವಾಧೀನಂ ಜಗತ್ಸರ್ವಮ್" ಎಂಬ ಮಾತು ಇದನ್ನೇ ಸಮರ್ಥಿಸುತ್ತದೆ. ಕೇವಲ ಪ್ರಾಕೃತ ವ್ಯಾಪಾರಗಳಲ್ಲಿ ಆಸಕ್ತರಾದ ಜನರು ನಿಗೂಢವಾದ ದೈವೀ ಶಕ್ತಿಯನ್ನು ಗುರುತಿಸಲಾರರು. ಧ್ಯಾನಯೋಗದಿಂದ ಶುದ್ಧಾತ್ಮರಾದ ಜ್ಞಾನಿಗಳು ತಪೋಮಯ ದೃಷ್ಟಿಯಿಂದ ದೈವೀ ಶಕ್ತಿಯನ್ನು ಗುರುತಿಸಿ ಸಾಕ್ಷಾತ್ಕರಿಸುತ್ತಾರೆ. ("ತೇ ಧ್ಯಾನಯೋಗಾನುಗತಾ ಅಪಶ್ಯನ್ ದೇವಾತ್ಮಶಕ್ತಿಂ ಸ್ವಗುಣೈರ್ನಿಗೂಢಾಮ್ ")  ನಿಗೂಢವಾದ ದೇವಾತ್ಮ ಶಕ್ತಿಯನ್ನು ಗುರುತಿಸಿ ಜೀವನವನ್ನು ಪಾವನವನ್ನಾಗಿ ಮಾಡಿಕೊಂಡು ದೇವಾತ್ಮ ಭಾವವನ್ನು ತುಂಬಿಕೊಳ್ಳುವುದೇ ಯಜ್ಞಾಚರಣೆಯ ಗುರಿ. ಜನ್ಮ ಮರಣರಹಿತನಾದ ಆತ್ಮನು ಪ್ರಕೃತಿಕ್ಷೇತ್ರಕ್ಕೆ ಇಳಿದು ಕರ್ಮಚಕ್ರಕ್ಕೆ ಸಿಕ್ಕಿದಾಗ, ಆ ಕರ್ಮಚಕ್ರದಿಂದ ಬಿಡಿಸಿಕೊಂಡು ತನ್ನ ಸ್ವಸ್ವರೂಪದಲ್ಲಿ ನಿಲ್ಲುವುದು ಅವನ ಪರಮ ಲಕ್ಷ್ಯವಾಗಿರಬೇಕು. ಪುರುಷಾರ್ಥಮಯವಾದ ಬಾಳಾಟಕ್ಕೆ ಧರ್ಮವು ಜೀವನಾಡಿಯಾಗಿದೆ. ಆ ನಾಡೀಗತಿಯು ಜೀವನ ಸ್ವಾಸ್ಥ್ಯಕ್ಕೆ ಪೋಷಕವಾಗಿರಬೇಕು. ಇಲ್ಲದಿದ್ದರೆ ಜೀವನದಲ್ಲಿ ನೆಮ್ಮದಿಯಿರುವುದಿಲ್ಲ. ಮೂಲದಲ್ಲಿ ಧರ್ಮವು ಬೀಜದಂತೆ ಏಕರೂಪವಾಗಿದ್ದರೂ, ವಿಕಾಸಗೊಳ್ಳುವಾಗ ಕಾಲ, ದೇಶ, ವ್ಯಕ್ತಿಗಳ ನಿಮಿತ್ತದಿಂದ ಬೇರೆ ಬೇರೆ ರೂಪ ತಾಳುವುದು ಅನಿವಾರ್ಯ. ಆದರೆ ವಿಕಾಸ ಮುಗಿದು ಪ್ರಕಾಶದಲ್ಲಿ ಜೀವನ ನೆಲೆಗಾಣಬೇಕು. ಪ್ರಾಚೀನ ಭಾರತದ ಸಮಾಜ ವ್ಯವಸ್ಥೆ ಮೂಲಧರ್ಮದ ತಳಹದಿಯ ಮೇಲೆ, ಯಜ್ಞತತ್ತ್ವದ ಸೂತ್ರದಿಂದ ಕಟ್ಟಲ್ಪಟ್ಟು, ಆತ್ಮಹಿತ ಮತ್ತು ಲೋಕಹಿತಗಳನ್ನು ಸಾಧಿಸಲು ಉಪಯುಕ್ತವಾಗಿದೆ. ಚಾತುರ್ವರ್ಣ್ಯ ವ್ಯವಸ್ಥೆ ಪ್ರಕೃತಿ ನಿಯಮಕ್ಕೆ ಅನುಗುಣವಾಗಿದೆ.ಯಜ್ಞತತ್ತ್ವದ ಅಧಾರದಮೇಲೆ ಸುಪ್ರತಿಷ್ಠವಾದ ಸುಂದರ ಸೌಧವಾಗಿದೆ. ಗುಣಕರ್ಮಗಳ ವಿಭಾಗ ನಿಯಮವನ್ನು ಆಧಾರವಾಗಿ ಉಳ್ಳ ಚಾತುವರ್ಣ್ಯ ವ್ಯವಸ್ಥೆಯು ನಿಸರ್ಗನಿಯಮಕ್ಕೆ ಬಹು ಸುಂದರವಾಗಿ ಹೊಂದಿಕೊಂಡಿರುವ ವ್ಯವಸ್ಥೆ. "ಚಾತುರ್ವರ್ಣ್ಯಂ  ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ" ಎಂದು ಹೇಳಿರುವುರಿಂದ ಇದು ಭಗವತ್ ಸೃಷ್ಟಿಯೇ ಸರಿ. ಭಗವತ್ ಸೃಷ್ಟಿಯ ರಹಸ್ಯವನ್ನು ಅರಿತು, ಜೀವನವನ್ನು ಅದಕ್ಕನುಗುಣವಾಗಿ ರೂಪಿಸಿಕೊಳ್ಳುವುದೇ ವಿವೇಕ. ಸೃಷ್ಟಿಯ ಎಲ್ಲ ವಸ್ತುಗಳ ಮೇಲೂ ಈ ಗುಣಕರ್ಮಗಳ ವಿಭಾಗ ನಿಯಮವು ಹರಿದಿದೆ. ಆದ್ದರಿಂದಲೇ ದೇವತೆಗಳು, ಮನುಷ್ಯರು, ಪಶು, ಪಕ್ಷಿ, ಕಲ್ಲು, ಮಣ್ಣು, ಗಿಡ, ಮರ, ಧಾತುಗಳು, ರತ್ನಗಳು, ಗ್ರಹಗಳು- ಮುಂತಾದ ಚರಾ ಚರ ಜಗತ್ತೆಲ್ಲವೂ ಈ ನಿಯಮಕ್ಕೆ ಬದ್ಧವಾಗಿದೆ. ಚಾತರ್ವರ್ಣ್ಯ ವ್ಯವಸ್ಥೆಯು ವಿಶ್ವಪುರುಷನ –ವಿರಾಟ್ ಪುರಷನ- ಯಜ್ಞನಾರಾಯಣನ  ಶರೀರ ರೂಪವಾದುದು. ಇದರ ತತ್ತ್ವವನ್ನರಿತು ಜೀವನವನ್ನು ಯಜ್ಞಮಯವಾಗಿ ರೂಪಿಸಿಕೊಂಡರೆ   "ನಾರಾಯಣ ಏವೇದಗಂ ಸರ್ವಂ", " ಪುರುಷ ಏವೇದಗಂ ಸರ್ವಂ " ಎಂಬ ದೇವಾತ್ಮ ಭಾವವು ಜಾಗೃತವಾಗುತ್ತದೆ. ಆದ್ದರಿಂದಲೇ ವಿಷ್ಣುಪುರಾಣದಲ್ಲಿ ಹೀಗೆ ಹೇಳಿದೆ:- 
          
 "ವರ್ಣಾಶ್ರಮಾಚಾರವತಾ ಪುರುಷೇಣ ಪರಃ ಪುಮಾನ್|
  ವಿಷ್ಣುರಾರಾಧ್ಯತೇ ಪಂಥಾ ನಾನ್ಯಸ್ತತ್ತೋಷಕಾರಕಃ ||"

(ವರ್ಣಾಶ್ರಮಾಚಾರವುಳ್ಲ ಪುರುಷನಿಂದ ಪರಮ ಪುರುಷನಾದ ವಿಷ್ಣುವು ಆರಾಧಿತ ನಾಗುತ್ತಾನೆ. ಮಹಾವಿಷ್ಣುವಿಗೆ ಸಂತೋಷವನ್ನುಂಟು ಮಾಡಲು ಬೇರೆ ಮಾರ್ಗವಿಲ್ಲ)

"ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರಶ್ಚ ಪೃಥಿವೀಪತೇ|
ಸ್ವಧರ್ಮತತ್ಪರೋ ವಿಷ್ಣುಮಾರಾಧಯತಿ ನಾನ್ಯಥಾ||"

(ಬ್ರಾಹ್ಮಣನಾಗಲಿ, ಕ್ಷತ್ರಿಯನಾಗಲಿ, ವೈಶ್ಯನಾಗಲಿ, ಶೂದ್ರನಾಗಲಿ ಸ್ವಧರ್ಮ ತತ್ಪರನಾಗಿಯೇ ವಿಷ್ಣುವನ್ನು ಆರಾಧಿಸುವವನಾಗುತ್ತಾನೆ. ಬೇರೆ ವಿಧದಿಂದಲ್ಲ.)

"ಯಜ್ಞನಿಷ್ಪತ್ತಯೇ ಸರ್ವಮೇತದ್ ಬ್ರಹ್ಮಾ ಚಕಾರ ವೈ|
ಚಾತುರ್ವರ್ಣ್ಯಂ ಮಹಾಭಾಗ ಯಜ್ಞಸಾಧನಮುತ್ತಮಮ್||
ಯಜ್ಞ್ಯೈರಾಪ್ಯಾಯಿತಾ ದೇವಾ ವೃಷ್ಟ್ಯುತ್ಸರ್ಗೇಣ ವೈ ಪ್ರಜಾಃ|    
ಆಪ್ಯಾಯಯಂತೇ ಧರ್ಮಜ್ಞ ಯಜ್ಞಾಃ ಕಲ್ಯಾಣಹೇತವಃ ||"

(ಯಜ್ಞದ ನಿಷ್ಪತ್ತಿಗಾಗಿ ಸೃಷ್ಟಿಕರ್ತನು ಇವೆಲ್ಲವನ್ನೂ ಏರ್ಪಡಿಸಿದನು. ಚಾತುರ್ವರ್ಣ್ಯವು ಉತ್ತಮವಾದ ಯಜ್ಞಸಾಧನ. ಯಜ್ಞದಿಂದ ತೋಷಿತರಾದ ದೇವತೆಗಳು ಮಳೆ ಸುರಿಸುವುದರಿಂದ ಪ್ರಜೆಗಳನ್ನು ಸಂತೋಷಪಡಿಸುತ್ತಾರೆ. ಯಜ್ಞಗಳು ಕಲ್ಯಾಣಕ್ಕೆ ಕಾರಣ.)

ತತ್ತ್ವಗರ್ಭಿತವಾದ ಈ ಯಜ್ಞ ವಿಧಾನವು ಚಾತುರ್ವರ್ಣ್ಯ ವ್ಯವಸ್ಥೆಯಲ್ಲಿ ಹೇಗೆ ಅಡಕವಾಗಿದೆಯೆಂಬುದನ್ನು ಈಗ ಪರಿಶೀಲಿಸೋಣ. ಬ್ರಹ್ಮಜ್ಞಾನಿಯಾದ ಬ್ರಾಹ್ಮಣನ ಜೀವನ ಯಜ್ಞಮಯವಾದುದು. ಎಲ್ಲ ದೇವತಾ ಶಕ್ತಿಗಳನ್ನೂ ಬ್ರಹ್ಮಜ್ಞಾನಿಯು ತನ್ನಲ್ಲಿ ಜಾಗೃತಗೊಳಿಸಿರುತ್ತಾನೆ. ಆದರಿಂದಲೇ "ಯಾವ ತೀರ್ವೈ ದೇವತಾಃ ತಾಃ ಸರ್ವಾ ವೇದವಿಧಿ ಬ್ರಾಹ್ಮಣೇ ವಸಂತಿ" ಎಂದು ಶ್ರುತಿಯು ಸಾರುತ್ತದೆ. ಬ್ರಹ್ಮಜ್ಞಾನಿಯಾದವನ ದೃಷ್ಟಿಯಲ್ಲಿ

"ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಂ|
  ಬ್ರಹ್ಮೈವ ತೇನ ಗಂತವ್ಯಂ  ಬ್ರಹ್ಮಕರ್ಮ ಸಮಾಧಿನಾ|

ಎಂಬುದೇ ಯಜ್ಞದ ಸ್ವರೂಪ. ಬ್ರಹ್ಮಮಾರ್ಗದಲ್ಲಿ ಜೀವನವನ್ನು ರೂಪಿಸಿಕೊಂಡು ಬಾಳುವ ಬ್ರಾಹ್ಮಣನು ಬಹಿರಂಗದಲ್ಲಿ ಅಗ್ನಿಯನ್ನು ಉಪಚರಿಸುತ್ತಾ ಉಚಿತ ದ್ರವ್ಯಗಳಿಂದ ಕರ್ಮಮಯ ಯಜ್ಞವನ್ನು ಮಾಡುತ್ತಿದ್ದರೂ

"ಆತ್ಮಾನಮರಣಿಂ ಕೃತ್ವಾ ಪ್ರಣವಂಚೋತ್ತರಾರಣಿಂ|
ಧ್ಯಾನ ನಿರ್ಮಥನಾಭ್ಯಾಸಾದ್ ದೇವಂ ಪಶ್ಯೇನ್ನಿಗೂಢವತ್||"

 (ಆತ್ಮವೇ ಅರಣಿ, ಪ್ರಣವವೇ ಉತ್ತರಾರಣಿ, ಧ್ಯಾನವೇ ನಿರ್ಮಥನ. ಹೀಗೆ ಅಭ್ಯಾಸಮಾಡಿ ಗುಪ್ತವಾಗಿ  ಅಂತಃಸ್ಥನಾದ ಪರಮಾತ್ಮನನ್ನು ಕಾಣಬೇಕು) ಎಂಬ ವಿಧಾನದಿಂದ ಅಂತರ್ಯಾಗವನ್ನೇ ಆಚರಿಸುತ್ತಾನೆ. ಆದ್ದರಿಂದಲೇ ಬೋಧಾಯನ ಮಹರ್ಷಿಯು "ಸರ್ವಕ್ರತುಯಾಜಿನಾಮಾತ್ಮಯಾಜೀ ವಿಶಿಷ್ಟತೇ" (ಎಲ್ಲ ವಿಧ ಯಾಗಗಳನ್ನು ಆಚರಿಸುವವರ ಪೈಕಿ ಆತ್ಮಯಾಗವನ್ನು ಆಚರಿಸುವವನೇ ವಿಶಿಷ್ಟನು) ಎಂದು ಹೇಳುತ್ತಾನೆ.

ಧರ್ಮರಕ್ಷಣೆಗಾಗಿ-ಸತ್ಯದ ಜಯಕ್ಕಾಗಿ ಯುದ್ಧದಲ್ಲಿ ತೊಡಗುವ ಕ್ಷತ್ರಿಯನ ಜೀವನದಲ್ಲಿಯೂ ಯಜ್ಞವಿಧಾನವು ಆದರ್ಶವಾಗಿದೆ. ಧರ್ಮಯುದ್ಧವೂ ಒಂದು ಪವಿತ್ರವಾದ ಯಜ್ಞವೇ. ಬಹಿರಂಗದಲ್ಲಿ ಧರ್ಮಯುದ್ಧವನ್ನು ನಡೆಸುತ್ತಾ ಕ್ಷತ್ರಿಯನು ಅಂತರಂಗದಲ್ಲಿ ಆತ್ಮ ಯಾಗವನ್ನೇ ಸಂಪನ್ನಗೊಳಿಸುತ್ತಾನೆ.
"ಪ್ರಣವೋಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇI
ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್||"  

(ಪ್ರಣವವೇ ಧನಸ್ಸು. ಆತ್ಮವೇ ಶರ. ಬ್ರಹ್ಮವೇ ಲಕ್ಷ್ಯ. ಅಪ್ರಮತ್ತನಾಗಿ ಆತ್ಮ ಶರವನ್ನು ಪ್ರಯೋಗಿಸಿ ಬ್ರಹ್ಮಲಕ್ಷ್ಯದಲ್ಲಿ ಒಂದಾಗಬೇಕು.) ಉತ್ತಮ ಕ್ಷತ್ರಿಯನ ರಣಯಜ್ಞದ ರಹಸ್ಯ ಇದೇ ಆಗಿದೆ.

ವೈಶ್ಯನ ವಾಣಿಜ್ಯ-ವ್ಯಾಪಾರವೂ ಯಜ್ಞದೃಷ್ಟಿಯಿಂದಲೇ ನಡೆಯಬೇಕು. ತಕ್ಕಡಿಯನ್ನು ಹಿಡಿಯುವಾಗ ವೈಶ್ಯನು ತಾಳುವ ಭಾವನೆ ಸತ್ಯಸಾಕ್ಷಾತ್ಕಾರದ ದೃಷ್ಟಿಯನ್ನು ತೆರೆಯಬೇಕು. ಸತ್ಯದಿಂದ ಜಾರಿದರೆ ಅವನ ವ್ಯಾಪಾರ ಪಾಪಕಾರ್ಯವಾಗುತ್ತದೆ. ಸತ್ಯವೇ ಜೀವನ ವ್ಯಾಪಾರಗಳನ್ನು ತೂಗುತ್ತಿರುವ ತಕ್ಕಡಿ. ತಕ್ಕಡಿಯನ್ನು ಹಿಡಿದ ವೈಶ್ಯನು ಊರ್ಧ್ವದೃಷ್ಟಿಯಿಂದ ಸತ್ಯವನ್ನು ಕಾಣುತ್ತಾನೆ. ಆದ್ದರಿಂದಲೇ ತಕ್ಕಡಿಯನ್ನು ಕುರಿತು ಹೀಗೆ ನಮಸ್ಕರಿಸುತ್ತಾನೆ:-

 "ಓಂ ನಮಸ್ತೇ ಸರ್ವದೇವಾನಾಂ ಶಕ್ತಿಸ್ತ್ವಂ ಸತ್ಯಮಾಶ್ರಿತಾ|
 ಸಾಕ್ಷಿಭೂತಾ ಜಗದ್ಧಾತ್ರೀ ನಿರ್ಮಿತಾ ವಿಶ್ವಯೋನಿನಾ||
ಏಕತಃ ಸರ್ವಸತ್ಯಾನಿ ತಥಾನೃತಶತಾನಿ ಚ |
ಧರ್ಮಾಧರ್ಮ ಕೃತಾಂ ಮಧ್ಯೇ ಸ್ಥಾಪಿತಾಸಿ ಜಗದ್ಧಿತೇ||
ತ್ವಂ ತುಲೇ ಸರ್ವ ಭೂತಾನಾಂ ಪ್ರಮಾಣಮಿಹಕೀರ್ತಿತಾ||
ಓಂ, ಯೋsಸೌತತ್ತ್ವಾಧಿಪೋ ದೇವಃ ಪುರುಷಃಪಂಚವಿಂಶಕಃ|
ಸ ಏಷೋsಧಿಷ್ಠಿತೋ ದೇವಸ್ತ್ವಯಿ ತಸ್ಮಾನ್ನಮೋನಮಃ|| 

   (ಓಂ, ತಕ್ಕಡಿಯೇ ! ನಿನಗೆ ನಮಸ್ಕಾರ! ಎಲ್ಲದೇವತೆಗಳ ಶಕ್ತಿಯು ನೀನೇ. ನೀನು ಸತ್ಯವನ್ನು ಆಶ್ರಯಿಸಿದ್ದೀಯೆ. ವಿಶ್ವ ಕಾರಣನು ನಿನ್ನನ್ನು ಸಾಕ್ಷಿಭೂತಳನ್ನಾಗಿಯೂ, ಜಗದ್ರಕ್ಷಕಳನ್ನಾಗಿಯೂ ನಿರ್ಮಿಸಿದ್ದಾನೆ. ಒಂದುಕಡೆಗೆ ಎಲ್ಲ ಸತ್ಯಗಳೂ ಇವೆ. ಮತ್ತೊಂದು ಕಡೆಗೆ ಅಸಂಖ್ಯಾತವಾದ ಸುಳ್ಳುಗಳಿವೆ. ಜಗದ್ಧಿತಳಾದ ನೀನು ಧರ್ಮಾಧರ್ಮಗಳನ್ನು ಮಾಡುವವರ ಮಧ್ಯೆ ಸ್ಥಾಪಿತಳಾಗಿದ್ದೀಯೆ. ಎಲೈ ! ತಕ್ಕಡಿಯೇ ! ಸಮಸ್ತ ಭೂತಗಳಿಗೂ ನೀನೇ ಪ್ರಮಾಣವಾದ್ದೀಯೆ. ಓಂ, ಎಲ್ಲಿ ತತ್ತ್ವಗಳಿಗೂ ಒಡೆಯನೂ, ಇಪ್ಪತ್ತೈದನೆಯವನೂ ಆದ ಯಾವ ಪುರುಷನುಂಟೋ ಆ ದೇವನೇ ನಿನ್ನಲ್ಲಿ ಅಧಿಷ್ಠಿತನಾಗಿದ್ದಾನೆ. ಆದ್ದರಿಂದ ನಿನಗೆ ನಮೋನಮಃ !) ವಿಶ್ವವನ್ನೇ ತೋಲನಮಾಡುತ್ತಿರುವ ಪರಮಾತ್ಮನನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತರ್ಯಾಗ ವಿಧಾನದಿಂದ ವೈಶ್ಯನು ತನ್ನ ವ್ಯಾಪಾರವನ್ನು ಮಾಡಬೇಕು.

ಶೂದ್ರನ ಜೀವನವೂ ಯಜ್ಞಮಯವಾದುದೇ. ಸರ್ವಂಸಹಳೂ ವಸುಂಧರೆಯೂ ಆದ ಭೂಮಾತೆಯನ್ನು ಪ್ರಾರ್ಥಿಸಿ ಉಳಬೇಕು. ಯಜ್ಞಸಾಧನವಾದ ದ್ರವ್ಯವನ್ನು ಪಡೆಯುವುದಕ್ಕಾಗಿ ಭೂಮಿಯಲ್ಲಿ ಬೀಜವನ್ನು ಬಿತ್ತಬೇಕು. ಭೂಮಿಯಿಂದ ಬಂದ ಫಲ ದೇವತಾಪ್ರೀತಿಕರವಾದ ಯಜ್ಞದಲ್ಲಿ ದ್ರವ್ಯವಾಗುತ್ತದೆ. ಜೀವನಿಗೆ ಪ್ರಾಣಾಗ್ನಿಹೋತ್ರ ರೂಪವಾದ ಯಜ್ಞದಲ್ಲಿ ಪವಿತ್ರವಾದ ಹವಿಸ್ಸು ಆಗುತ್ತದೆ. ಉಳುವುದು, ಬಿತ್ತುವುದು ಮುಂತಾದ ಶೂದ್ರನ ವ್ಯಾಪಾರವೆಲ್ಲಾ ಯಜ್ಞಮಯ ದೃಷ್ಟಿಯಿಂದ ತುಂಬಿರುವುದನ್ನು ಆರ್ಷಗ್ರಂಥಗಳಲ್ಲಿ ಕಾಣುತ್ತೇವೆ. ಕೃಷಕನು ಭೂಮಿಯಿಂದ ಪಡೆದ ಧಾನ್ಯವನ್ನು ಕಣದಲ್ಲಿ ರಾಶಿ ಮಾಡುತ್ತಾನೆ. "ಬ್ರಹ್ಮಾರ್ಪಣಂ" ಎಂಬ ಭಾವದಿಂದ ಪ್ರಣವದ ಪ್ರತೀಕವಾಗಿ ಆ ಧಾನ್ಯರಾಶಿಗೆ ಮೂರೂವರೆ ಸುತ್ತು ಹಾಕುತ್ತಾನೆ. ಆಮೇಲೆ ಧಾನ್ಯರಾಶಿಗೆ ಕೈ ಮುಗಿದು ದೀರ್ಘದಂಡ ಪ್ರಣಾಮವನ್ನು ಮಾಡುತ್ತಾನೆ. ದೇವಭಾಗ-ಬ್ರಹ್ಮಭಾಗಗಳನ್ನು ತೆಗೆದು ಅರ್ಪಿಸಿ ಉಳಿದ ರಾಶಿಯನ್ನು ಅಳೆದು ತನ್ನ ಪಾಲನ್ನು ಪವಿತ್ರವಾದ ಭಾವನೆಯಿಂದ ಮನೆಗೆ ತೆಗೆದುಕೊಂಡು ಹೋಗುತ್ತಾನೆ.
"ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ|"
"ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ|"
ಎಂಬುದೇ ಸನಾತನ ಆರ್ಯಭಾರತದ ಜೀವನದ ಆದರ್ಶ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ: ೧೦,  ಜನವರಿ ೧೯೮೨ ತಿಂಗಳಲ್ಲಿ  ಪ್ರಕಟವಾಗಿದೆ.