Sunday, January 24, 2021

ಆರ್ಯಸಂಸ್ಕೃತಿ ದರ್ಶನ - 27 (Arya Samskruti Darshana - 27 )

ಓಂ ಶ್ರೀಃ
ಭಾರತೀಯ ಸ್ತ್ರೀಯರ ಮಂಗಳಾಭರಣಗಳು
ಲೇಖಕರು: ಡಾ||ಶ್ರೀ. ಎಸ್.ವಿ. ಚಾಮುಸ್ತ್ರೀಯರು ಜನ್ಮತಃ ಆಭರಣ ಪ್ರಿಯರು. ತಮ್ಮ ದೈವದತ್ತವಾದ ಸೌದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಅವರು ಎಲ್ಲ ದೇಶಗಳಲ್ಲಿಯೂ ಮತ್ತು ಎಲ್ಲ ಕಾಲಗಳಲ್ಲಿಯೂ ಆಭರಣಗಳ ಸಹಕಾರವನ್ನೇ ಕೋರಿರುತ್ತಾರೆ. ಅವರ ಸಂತೋಷಾರ್ಥವಾಗಿಯೇ ಪ್ರತಿಯೊಂದು ದೇಶದಲ್ಲಿಯೂ ಚಿತ್ರವಿಚಿತ್ರವಾದ ಆಭರಣಗಳು ರಚಿತವಾಗಿರುತ್ತವೆ.
ಅನಾದಿಕಾಲದಿಂದ ಸಂಸ್ಕೃತಿಯ "ನೆಲೆವೀಡಾದ ಭಾರತದೇಶವೂ ಸಹ ತನ್ನ ಸಂಸ್ಕೃತಿ, ಕಲೆ ಇತ್ಯಾದಿಗಳ ಗಾಂಭೀರ್ಯಕ್ಕೆ ಅನುಗುಣವಾಗಿ ಆಭರಣಗಳ ಪರಂಪರೆಯನ್ನು ನಿರ್ಮಿಸಿಕೊಂಡಿರುತ್ತದೆ. ಈ ಆಭರಣಗಳ ಹಿಂದೆ ದೀರ್ಘಕಾಲದ ಚರಿತ್ರೆ ಇದೆ ಎಂಬುವುದನ್ನು ನಮ್ಮ ದೇಶದ ಸಾಹಿತ್ಯ ಹಾಗೂ ಶಿಲ್ಪಗಳು ನಮಗೆ ತಿಳಿಯಗೊಡುತ್ತವೆ. ಅವುಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳುಂಟಾಗಿದ್ದರೂ, ಅವು ಬಹಳ ಪುರಾತನ ಕಾಲದಿಂದ ನಮ್ಮವರೆಗೆ ಅನುಸ್ಯೂತವಾಗಿ ಬಂದಿರುತ್ತವೆಂಬುದು ಗಮನಾರ್ಹವಾದ ವಿಷಯ.

ಈ ಆಭರಣಗಳಿಗೆ ತಲೆ, ಕಿವಿ, ಮೂಗು, ಕತ್ತು, ತೋಳು, ಮಣಿಕಟ್ಟು, ನಡು, ಕಾಲಿನ ಹರಡು ಮತ್ತು ಕಾಲಿನ ಬೆರಳುಗಳು ಸ್ಥಾನಗಳು. ಈ ಅವಯವಗಳ ಸೌಂದರ್ಯವನ್ನು ವೃದ್ಧಿಮಾಡಲು ಆಭರಣ ನಿರ್ಮಾಪಕರು ನಿರ್ಮಿಸಿರುವ  ಆಭರಣಗಳ ಹೆಸರುಗಳನ್ನೂ ಮತ್ತು ಬಗೆಗಳನ್ನೂ ವರ್ಣಿಸಲು ಬಹಳ ಸ್ಥಳಾವಕಾಶಬೇಕು.  ಆದರೆ ಎಲ್ಲ ಅಂಗಗಳನ್ನೂ ಎಲ್ಲರೂ ಅಲಂಕರಿಸಿಕೊಳ್ಳವುದು ಅಸಂಭವ. ಅದು ಕೇವಲ ಸಿರಿವಂತರು ಮಾಡಬಹುದಾದ ಕೆಲಸ. ಆದರೆ ನಮ್ಮ ಸಂಸ್ಕೃತಿಯು ಸಿರಿ ಇರಲಿ ಅಥವಾ ಇಲ್ಲದಿರಲಿ ಪ್ರತಿಯೊಬ್ಬ ಸ್ತ್ರೀಯೂ ಅವಳ ಸೌಮಂಗಲ್ಯದ  ಕುರುಹಾಗಿ ಹಲವು ಆಭರಣಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು ವಿಧಿಸಿರುತ್ತದೆ. ಓಲೆ, ಮೂಗುತಿ, ಬಳೆ, ಮಾಂಗಲ್ಯ, ಕಾಲಂದಿಗೆ ಮತ್ತು ಕಾಲುಂಗುರ (ಉರುಟು) ಗಳು ಆ ಮಂಗಳಾಭರಣಗಳು. ಅದರಂತೆ ನಮ್ಮ ದೇಶದ ಸ್ತ್ರೀಯರು ಜಾತಿ, ಮತ ವ್ಯತ್ಯಾಸಗಳೆನ್ನದೆ ಈ ಮಂಗಳಾಭರಣಗಳನ್ನು ಧರಿಸಿ ತನ್ಮೂಲಕ ತಮ್ಮ ಸೌಂದರ್ಯ ಹಾಗೂ ಸೌಭಾಗ್ಯಗಳನ್ನು ಲೋಕಕ್ಕೆ ಪ್ರಕಟಿಸಿರುತ್ತಾರೆ.

ಇಂದೂ ಸಹ ಅಧಿಕಾಂಶ ಜನ ಸ್ತ್ರೀಯರು ಈ ಮಂಗಳಾಭರಣಗಳನ್ನು ಶ್ರದ್ಧೆಯಿಂದ ಧರಿಸುತ್ತಾರೆ. ಆದರೆ ಈಚೆಗೆ ಹಲವು ವರ್ಷಗಳಿಂದ ಗಮನಾರ್ಹವಾದ ಸಂಖ್ಯೆಯಲ್ಲಿ ಅವುಗಳ ಬಗ್ಗೆ ಅಲಕ್ಷ್ಯ ಭಾವವನ್ನು ತೋರಿಸತ್ತಿರುವುದನ್ನು ನೋಡುತ್ತೇವೆ. ಹಿಂದೆ ಇರುತ್ತಿದ್ದ ಪವಿತ್ರ ಭಾವನೆಯು ಈಗ ಬಹಳ ಸಡಿಲವಾಗಿರುತ್ತದೆ. ಹೇಗೆ ಸ್ತ್ರೀಯರಲ್ಲಿ ಕುಂಕುಮವಿಲ್ಲದ ಮುಖಗಳು ಹೆಚ್ಚುತ್ತಿವೆಯೋ, ಹಾಗೆಯೇ ಬಳೆಯಿಲ್ಲದ ಕೈಗಳೂ, ಚುಚ್ಚಿದ್ದರೂ ಓಲೆ ಮತ್ತು ಮೂಗುಬೊಟ್ಟುಗಳಿಲ್ಲದ ಕಿವಿ ಮೂಗುಗಳೂ ದಿನದಿನಕ್ಕೆ ಹೆಚ್ಚುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ ಇತರ ಉಡಿಗೆತೊಡಿಗೆಗಳಲ್ಲಿ ವ್ಯತ್ಯಾಸಗಳುಂಟಾಗುತ್ತಿರುವಂತೆ ಈ ಮಂಗಳಾಭರಣಗಳನ್ನು ಧರಿಸುವುದರಲ್ಲಿ ವ್ಯತ್ಯಾಸವುಂಟಾಗುತ್ತಿದೆ.

ಇದಕ್ಕೆ ಕಾರಣಗಳನ್ನು "ಕುಂಕುಮ"ದ ಪ್ರಕರಣದಲ್ಲಿ ನಾವು ಈಗಾಗಲೇ ಸೂಚಿಸಿರುತ್ತೇವೆ. ವಿಶೇಷವಾಗಿ ಈ  ಮಂಗಳಾಭರಣಗಳು ಸ್ತ್ರೀಯರ ದಾಸ್ಯದ ಕುರುಹುಗಳು ,ಅವು ಪುರುಷರು ಸ್ತ್ರೀಯರನ್ನು ವಶದಲ್ಲಿಟ್ಟುಕೊಳ್ಳಲು ಕೊಡಿಸಿರುವ ಶೃಂಖಲೆ ಎಂಬುದಾಗಿ ಹಲವು ವಲಯಗಳು ಪ್ರಚಾರಮಾಡಿರುತ್ತವೆ. ಅವರ ಪ್ರಾಪಗ್ಯಾಂಡಾದ ಕಾರಣದಿಂದಲೇ ಈ ಮಂಗಳಾಭರಣಗಳ ವಿಷಯದಲ್ಲಿ ಹಲವು ಸ್ತ್ರೀಯರು ಅಲಕ್ಷ್ಯಭಾವವನ್ನು ತಾಳಿರುತ್ತಾರೆಂದು ಹೇಳಬಹುದು. (ಆಧುನಿಕ ವಿದ್ವಾಂಸರು  ಶಿಲ್ಪ ಮತ್ತು ಸಾಹಿತ್ಯಗಳ ಆಧಾರದ ಮೇಲೆ ಮೂಗುತಿಯು ಪ್ರಾಚೀನ ಕಾಲದಲ್ಲಿ ನಮ್ಮ ದೇಶದವರಿಗೆ ತಿಳಿದಿರುವುದಿಲ್ಲವೆಂದೂ, ಅದು ವಿದೇಶೀ ಆಭರಣವೆಂದೂ ಮತ್ತು ೧೪ನೇ  ಶತಮಾನದ ನಂತರ ವ್ಯಾಪಕವಾಗಿ ಬಳಕೆಗೆ ಬಂದು ಮಂಗಳಾಭರಣವಾಗಿ ಪರಿಣಮಿಸಿತೆಂದೂ ಹೇಳುತ್ತಾರೆ. ಅಂತಹ ಪ್ರಾಪಗ್ಯಾಂಡಾಗೆ ಸಿಕ್ಕಿ ಬಹಳ ಕಾಲ ಬಳೆಯನ್ನು ಧರಿಸಿದ್ಧ ವಯಸ್ಸಾದ ಮಹಿಳೆಯೊಬ್ಬರು "ಬಳೆಯನ್ನು ಕಂಡರೆ  ನನಗೆ ಮೈ ಉರಿಯುತ್ತದೆ" ಎಂಬುದಾಗಿ ಅದಕ್ಕೆ ತಮ್ಮ ಉಗ್ರವಾದ ಪ್ರತಿಭಟನೆಯನ್ನು ಪ್ರಕಟಿಸಿದುದು ನಮ್ಮ ಕಣ್ಣಿಗೆ ಬಿದ್ದಿತು.) ಆದರೆ ಆ ಪ್ರಚಾರದ ಹಿಂದಿರುವ ವಿಚಾರಗಳು ಸರಿಯೇ, ಅವು  ವಾಸ್ತವಿಕವೇ ಎಂಬುದನ್ನು ವಿಮರ್ಶಿಸುವುದು ಅವಶ್ಯಕವಾಗುತ್ತದೆ. ಅವಕ್ಕೆ ಎಡೆಕೊಟ್ಟಿರುವ ನಾಗರೀಕತೆಯು ಸರಿಯಾದ ಮಾರ್ಗದಲ್ಲಿ ಹೋಗುತ್ತಿದೆಯೋ ಎಂಬ ಪ್ರಶ್ನೆಯನ್ನೂ ಸಹ ತೆಗೆದುಕೊಂಡು ವಿಚಾರಮಾಡಬೇಕಾಗುತ್ತದೆ. ಆದರೆ ಅದು ಇಲ್ಲಿ ಮಾಡುವ ಕೆಲಸವಲ್ಲ. ಈ ಮಂಗಳಾಭರಣಗಳ ಹಿಂಬದಿಯಲ್ಲಿರುವ ಸಾಂಸ್ಕೃತಿಕ ದೃಷ್ಟಿಯನ್ನು ವಾಚಕರ ಮುಂದಿರಿಸಿ ನಾವು ತೃಪ್ತರಾಗುತ್ತೇವೆ. ಈ ಆಭರಣಗಳನ್ನು ವಿರೋಧಿಸುವವರಿಗೆ ಆ ವಿವವರಣೆಗಳಲ್ಲೇ ಒಂದು ಉತ್ತರವಿದೆಯೆಂದು ನಮ್ಮ ನಂಬಿಕೆ.

ಒಂದು ಮರದ ಬೇರು, ಕಾಂಡ, ಕೊಂಬೆ, ತೊಗಟೆ, ಎಲೆ, ಹೂವು, ಹಣ್ಣು ಇತ್ಯಾದಿ ಯಾವ ಭಾಗವನ್ನು ನಾವು ಮೂಸಿ ನೋಡಿದರೂ ಎಲ್ಲದರಲ್ಲಿಯೂ ಒಂದೇ ವಾಸನೆ ಇರುವುದನ್ನು ನೋಡುತ್ತೇವೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿಯು ಯಾವ ಅಂಶವನ್ನು ತೆಗೆದುಕೊಂಡು ನೋಡಿದರೂ, ಆ ಸಂಸ್ಕೃತಿಯ ಮೂಲದಲ್ಲಿರುವ ದೃಷ್ಟಿ,
ವಿಜ್ಞಾನ, ವಿಚಾರ ಮತ್ತು ಆದರ್ಶಗಳೆಲ್ಲವೂ ಅದರಲ್ಲಿರುವುದು ಕಂಡುಬರುತ್ತದೆ. ಇದಕ್ಕೆ ನಮ್ಮ ದೇಶದ ಸ್ತ್ರೀಯರು ತೊಡುವ ಮಂಗಳಾಭರಣಗಳು ಒಳ್ಳೆಯ ನಿದರ್ಶನಗಳೆಂದು ಹೇಳಬಹುದು. ಅವು ಒಂದು ಕಡೆ ಅಲಂಕಾರ ಸಾಮಗ್ರಿಗಳು, ಮತ್ತೊಂದು ಕಡೆ ಅವುಗಳನ್ನು ನಿರ್ಮಿಸುವ ದ್ರವ್ಯಗಳ ಕಾರಣದಿಂದ ಶರೀರದ ಮೇಲೆ ಸತ್ಪರಿಣಾಮವನ್ನುಂಟು ಮಾಡುವ, ಶರೀರ ದೋಷಗಳನ್ನು ನಿವಾರಿಸುವ, ಯುಕ್ತಿಯುಕ್ತವಾದ ತೊಡಿಗೆಗಳು. ಜೊತೆಗೆ ಅವು ಆಳವಾದ ಆಧ್ಯಾತ್ಮಿಕ ಅರ್ಥದಿಂದ ಕೂಡಿರುವ ಭೂಷಣಗಳೂ ಸಹ ಆಗಿರುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ ಅವುಗಳಲ್ಲಿ ಸೌಂದರ್ಯ, ಆರೋಗ್ಯ ಮತ್ತು ಜ್ಞಾನ ಈ ಮೂರೂ ಒಂದೆಡೆ ಸೇರಿವೆಯೆಂದು ಹೇಳಬಹುದು.

ಅವುಗಳ ಪೈಕಿ ಮೊದಲನೆಯದನ್ನು ಕುರಿತು ನಾವು ಇಲ್ಲಿ ಹೇಳಬೇಕಾಗಿಲ್ಲ. ನಮ್ಮ ದೇಶದ ಕವಿಗಳು ಅದನ್ನು ತಮ್ಮ ಕಾವ್ಯಗಳಲ್ಲಿ ಮನಮುಟ್ಟುವಂತೆ ವರ್ಣಿಸಿರುತ್ತಾರೆ. ಎರಡನೆಯ ಹಾಗೂ ಮೂರನೆಯ ಅಂಶಗಳನ್ನು ಕುರಿತು ವಿಚಾರಿಸಿದರೆ ನಮ್ಮ ಉದ್ದೇಶಪೂರ್ತಿಯಾದಂತೆ.

ಪ್ರಪಂಚದ ಪ್ರತಿಯೊಂದು ದೇಶದಲ್ಲಿಯೂ ಜನರು ಚಿನ್ನ, ರತ್ನ, ಶಿಲೆ ಮುಂತಾದವುಗಳು ಮನುಷ್ಯರ ಮೇಲೆ ಯಾವ ರೀತಿಯಾದ ಪರಿಣಾಮಗಳನ್ನುಂಟುಮಾಡುತ್ತವೆ ಎಂಬ ವಿಷಯದಲ್ಲಿ ಕುತೂಹಲಿಗಳಾಗಿರುತ್ತಾರೆ. ಉದಾಹರಣೆಗೆ ನಮ್ಮ ದೇಶದಲ್ಲಿ ಹಸಿರು ಬಣ್ಣದ ಜೇಡ್( Jade) ಶಿಲೆಯು ಮನುಷ್ಯನನ್ನು ಹೃದಯಾಘಾತದಿಂದ ತಪ್ಪಿಸುತ್ತದೆ ಎಂಬ ನಂಬಿಕೆಯು ಇರುತ್ತದೆ. ಕಾರ್ನೀಲಿಯನ್ ಎಂಬ ಶ್ವೇತ ರಕ್ತ ವರ್ಣದ ಮಣಿಯು ಮನುಷ್ಯರನ್ನು ಶತ್ರುಗಳ ಕೆಡಕು ನೋಟದಿಂದ ಕಾಪಾಡುತ್ತದೆ ಎಂಬ ನಂಬಿಕೆಯು ವ್ಯಾಪಕವಾಗಿದ್ದಿರುತ್ತದೆ. ನೀಲಮಣಿಯು ಉಬ್ಬಸವನ್ನು ಗುಣಪಡಿಸುತ್ತದೆ ಮತ್ತು ಮರಕತವು (ಪಚ್ಚೆಯು) ಮನೋರೋಗವನ್ನು ವಾಸಿಮಾಡುತ್ತದೆ ಎಂಬುದಾಗಿ ಜನರು ಬಹಳ ಕಾಲದಿಂದ ನಂಬಿರುತ್ತಾರೆ. ಹಾಗೆಯೇ ಲೋಹಗಳ ಪೈಕಿ ಚಿನ್ನವು ಬಹಳ ಹಿಂದಿನಿಂದ ತನ್ನದೇ ಆದ ವೈಶಿಷ್ಟ್ಯವನ್ನು  ಇರಿಸಿಕೊಂಡಿರುತ್ತದೆ. ಯೂರೋಪ್, ಅಮೆರಿಕಾ ಮುಂತಾದ ದೇಶಗಳಲ್ಲಿ ಅದನ್ನು ವಸ್ತು(ಶರೀರ)ಗಳ ಮೇಲೆ ಬಹಳ ಪರಿಣಾಮಕಾರಿಯಾದ ಲೋಹವಾಗಿ (catalytic agent) ಬಳಸುವುದು ಕಂಡುಬರುತ್ತದೆ. ಈ ಹಳದಿ ಬಣ್ಣದ, ಪ್ರಕಾಶಮಾನವಾದ, ಯಾವ ಕಾರಣದಿಂದಲೂ ಬದಲಾವಣೆ ಹೊಂದದ, ಅತ್ಯಂತ ಆಕರ್ಷಕವಾದ ಲೋಹವು ನಮ್ಮ ದೇಶದಲ್ಲಿಯೂ ಸಹ ಬಹಳ ಪ್ರಶಸ್ತವಾಗಿ ಗಣಿಸಲ್ಪಟ್ಟಿರುತ್ತದೆ. ಉರುಟನ್ನು ಬಿಟ್ಟರೆ ಇತರ ಮಂಗಳಾಭರಣಗಳೆಲ್ಲವೂ ಚಿನ್ನದಿಂದಲೇ ನಿರ್ಮಿಸಲ್ಪಡುತ್ತವೆ. ಆದುದರಿಂದ ಈ ಮಂಗಳಾಭರಣಗಳ ಒಂದು ಅರ್ಥವನ್ನು ನಾವು ಚಿನ್ನದಲ್ಲಿ ಮತ್ತು ಅದು ಸ್ತ್ರೀಯರ ಶರೀರ ಧರ್ಮದ ಮೇಲೆ ಉಂಟುಮಾಡುವ ಸತ್ಪರಿಣಾಮಗಳಲ್ಲಿ ಹುಡುಕಬೇಕಾಗುತ್ತದೆ.

ಅದಕ್ಕೆ ಮೊದಲು ಹಾಕಿಕೊಳ್ಳಬಹುದಾದರೂ, ಮಂಗಳಾಭರಣಗಳನ್ನು ವಿಧಿಪೂರ್ವಕವಾಗಿ ಮತ್ತು ನಿಯತವಾಗಿ ಧರಿಸಲಾರಂಭಿಸುವುದು ವಿವಾಹದ ಮಂಗಳ ಸಮಯದಲ್ಲಿ. ವಿವಾಹದಿಂದಲೇ ಸ್ತ್ರೀಯ ನಿಜವಾದ ಜೀವನವು ಆರಂಭಿಸುತ್ತದೆ. ವಿವಾಹದ ಉದ್ದೇಶವು ಸಂತಾನವಾದುದರಿಂದ, ಸಂತಾನಕ್ಕೆ ಬೇಕಾದ ದೇಹಧರ್ಮವನ್ನು ಕಾಪಾಡುವುದು ಮತ್ತು ಅದಕ್ಕೆ ಪೋಷಕವಾದ ವಿಧಿಗಳನ್ನು ಅನುಸರಿಸುವುದು ವಿವಾಹಕರ್ಮದ ಅಂಗಗಳಾಗುತ್ತವೆ. ಅದುದರಿಂದಲೇ ವಿವಾಹದಲ್ಲಿ ಪದೇ ಪದೇ ರೋಗ ಹಾಗೂ ದೋಷಗಳನ್ನು ನಿವಾರಣೆ ಮಾಡುವ ಮಂತ್ರಗಳನೇಕ ಹೇಳಲ್ಪಡುತ್ತವೆ. ಆ ಸಮಯದಲ್ಲಿ ಚಿನ್ನದ ಮಂಗಳಾಭರಣಗಳನ್ನು ಕನ್ಯೆಗೆ ತೊಡಿಸುವುದರ ಉದ್ದೇಶವು ಅದಕ್ಕೆ ನಿಕಟವಾಗಿ ಸಂಬಂಧಿಸಿರುತ್ತದೆ ಎಂದು ಹೇಳಬಹುದು. ಸ್ತ್ರೀಯರ ಶರೀರದಲ್ಲಿ ಋತು ಸಂಬಂಧವಾದ ಆವೃತ್ತಿಗಳು ಯಾವುದೋ ವಯಸ್ಸಿನವರೆಗೆ ಎಡೆಬಿಡದೆ ಆಗುತ್ತಿರುತ್ತವೆ. ಪ್ರಸವಾದಿಕಾರಣಗಳಿಂದ ವಾತಾದಿ ದೋಷಗಳು ಉಲ್ಬಣಿಸುವ ಸನ್ನಿವೇಶ ಬಹಳ ಅಧಿಕ. ಕ್ಷಯ ಮೊದಲಾದ ರೋಗಗಳಿಗೆ ಅವರು ಪುರುಷರಿಗಿಂತ ಅಧಿಕವಾಗಿ ಈಡಾಗುವ ಸಂಭವವಿರುತ್ತದೆ.

ಅವುಗಳನ್ನು ಹಾಕಿಕೊಳ್ಳುವ ಸ್ಥಾನ ( ಕಿವಿ, ಮಣಿಕಟ್ಟು, ಕತ್ತು, ಹರಡು ಮತ್ತು ಕಾಲಿನ ಎರಡನೆಯ ಬೆರಳು)ಗಳ  ಕಾರಣದಿಂದಲೂ  ಮತ್ತು ದ್ರವ್ಯಗುಣದ ಕಾರಣದಿಂದಲೂ ಈ ಮಂಗಳಾಭರಣಗಳು ಶರೀರದ ಧಾತುಗಳಲ್ಲಿ ಉಂಟಾಗುವ ದೋಷಗಳೆಲ್ಲವನ್ನೂ ಹೋಗಲಾಡಿಸಿ ಶರೀರದಲ್ಲಿ ಸಮಸ್ಥಿತಿಯನ್ನುಂಟುಮಾಡುತ್ತವೆ. ಶ್ರೀರಂಗಮಹಾಗುರುವು ನಾಡೀಶಾಸ್ತ್ರದ ಸಹಾಯದಿಂದ ಲೋಹಗಳ ಪೈಕಿ ಚಿನ್ನವು ಶರೀರದಲ್ಲಿ ದೋಷಸಾಮ್ಯವನ್ನುಂಟುಮಾಡುವುದರಲ್ಲಿ  ತೀವ್ರವಾಗಿ ಕೆಲಸ ಮಾಡುತ್ತದೆಂಬುದನ್ನು ನಮ್ಮಗಳಿಗೆ ಅನೇಕ ಬಾರಿ ತಿಳಿಯಗೊಟ್ಟಿದ್ದು ಈ ಸಂದರ್ಭದಲ್ಲಿ ಜ್ಞಾಪಕಕ್ಕೆ ಬರುತ್ತದೆ. "ತ್ರಿದೋಷಗಳಲ್ಲಿ ಎಂದರೆ ವಾತ, ಪಿತ್ತ, ಕಫಗಳಲ್ಲಿ ಸಾಮ್ಯವಿರುವುದೇ ಅರೋಗ್ಯತೆ ಎಂದು ಆಯುರ್ವೇದವು ಹೇಳುತ್ತದೆ. ಅಂತಹ ಸಾಮ್ಯದ ಸ್ಥಿತಿಯನ್ನು ಶರೀರದಲ್ಲಿ ಉಂಟುಮಾಡುವುದರಲ್ಲಿ ಚಿನ್ನಕ್ಕೆ ಸಮಾನವಾದ ಲೋಹವಿಲ್ಲ. (ಅರಿಶಿನವೂ ಸಹ ಚಿನ್ನದಷ್ಟೇ  ಚೆನ್ನಾಗಿ ಕೆಲಸಮಾಡುವುದನ್ನು ಅವರು ಒಮ್ಮೆ ಪ್ರಯೋಗಪೂರ್ವಕವಾಗಿ ತಿಳಿಯಗೊಟ್ಟರು.)" ಆದುದರಿಂದ ಚಿನ್ನದ ಆಭರಣವನ್ನು ಧರಿಸಿದುದರಿಂದಲೇ ಸ್ತ್ರೀಯರು ತಮಗೆ ಬರಬಹುದಾದ ಅನೇಕ ವಿಧವಾದ ರೋಗಗಳಿಂದ ರಕ್ಷಣೆ ಪಡೆಯುತ್ತಾಳೆ. ಆದುದರಿಂದಲೇ ವಿವಾಹದಲ್ಲಿ ಪಿತನಾದವನು "ಕನ್ಯಾಂ ಕನಕ ಸಂಪನ್ನಾಂ ಕನಕಾಭರಣೈರ್ಯುತಾಂ|  ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕ ಜಿಗೀಷಯಾ||" ಎಂಬ ಮಾತನ್ನು ಹೇಳುತ್ತಾ ಕನ್ಯಾದಾನಮಾಡುತ್ತಾನೆ. ಅಲ್ಲಿ ಕನಕಾಭರಣಗಳಿಂದ ಕೂಡಿದ ಕನ್ಯೆಯನ್ನು ದಾನಮಾಡುವುದು ತನ್ನ ಐಶ್ವರ್ಯವನ್ನು ತೋರಿಸುವುದಕ್ಕಲ್ಲ. ಅದರಲ್ಲಿ ಆಳವಾದ ವಿಜ್ಞಾನವಿರುತ್ತದೆ. ಶಾರೀರಕ ಮರ್ಮಗಳ ತಿಳಿವಳಿಕೆ ಇರುತ್ತದೆ. ನಿರ್ದೋಷಿಯಾದ ಹಾಗೂ ನಿರೋಗಳಾದ ಕನ್ಯೆಯನ್ನು ಅವನು ಒಬ್ಬ ವರನಿಗೆ ಮದುವೆ ಮಾಡಿಕೊಡುತ್ತಾನೆ.

ಈ ಮಂಗಳಾಭರಣಗಳು ಕೇವಲ ಶಾರೀರಿಕವಲ್ಲದೆ ಆಳವಾದ ಆಧ್ಯಾತ್ಮಿಕ ಅರ್ಥದಿಂದಲೂ ಸಹ ಕೂಡಿರುತ್ತದೆ. ಆಧ್ಯಾತ್ಮಿಕ ಎಂಬ ಪದವು ಭಾರತೀಯ ಋಷಿಗಳಿಗೆ ಯಾವ ಅರ್ಥವನ್ನು ಕೊಡುತ್ತಿದ್ದಿತು ಎಂದರೆ, ಅವರು ಯೋಗ ಮುಂತಾದ ಸಾಧನಗಳಿಂದ ಹೇಗೆ ಎಲ್ಲರಿಗೂ ಪ್ರಭುವಾದ ಪರಮಾತ್ಮನನ್ನು ತಮ್ಮ ಶರೀರವೆಂಬ
ದೇಗುಲದಲ್ಲಿ ಪ್ರತ್ಯಕ್ಷ ಮಾಡಿಕೊಂಡು, ಅದರ ಸವಿನೆನೆಪಿನಿಂದ ಕೂಡಿ, ಜೀವನ ಮಾಡಲು ಎಳೆಸಿದರು ಎಂಬುದನ್ನು ನಾವು ನಮ್ಮ ಪತ್ರಿಕೆಯಲ್ಲಿ  ಬಗೆ ಬಗೆಯಾಗಿ ವಿವರಿಸಲು ಯತ್ನಿಸುತ್ತೇವೆ. ಅಂತಹ ಜೀವನವನ್ನು ಮಾಡಲು ಸಹಾಯ ಮಾಡುವುದರಲ್ಲಿ ಈ  ಮಂಗಳಾಭರಣಗಳ ಪಾತ್ರ ತುಂಬ. ಅವುಗಳನ್ನು ಹಾಕಿಕೊಳ್ಳುವ ಸ್ಥಾನಗಳೆಲ್ಲವೂ ಶರೀರದ ಮುಖ್ಯವಾದ ಮರ್ಮಸ್ಥಾನಗಳು. ಯೋಗಿಯಾದವನು ಬಂಧ, ಮುದ್ರೆ ಮುಂತಾದ ಯೋಗಕ್ರಿಯೆಗಳಿಂದ ಏನನ್ನು ಸಾಧಿಸುತ್ತಾನೆಯೋ ಅದನ್ನು ಸಾಧ್ವೀಮಣಿಯಾದ ಸ್ತ್ರೀಯು ಆಯಾ ಮರ್ಮಸ್ಥಾನಗಳಲ್ಲಿ ಧರಿಸಿದ ತನ್ನ ಆಭರಣಗಳಿಂದ ಸಾಧಿಸುತ್ತಾಳೆ. " ಪತಿಯೇ ಪರದೈವ" ಎಂಬ ಮಾತನ್ನು ಕೇಳುತ್ತೇವೆ. ತನಗೆ, ತನ್ನ ಪತಿಗೆ ಹಾಗೇ ಎಲ್ಲರಿಗೂ ದೇವನಾದ ಪ್ರಭುವು ತಾನೆ ನಿಜವಾದ ಪರದೈವ. ಪತಿಯನ್ನೇ ಪರದೈವವಾಗಿ ಭಾವಿಸುವುದರ ಮೂಲಕ ಅವಳು ಪರದೈವವನ್ನೇ ಕಡೆಗೆ ಸಾಕ್ಷಾತ್ಕರಿಸಿಕೊಳ್ಲುವ ದಾರಿಯಲ್ಲಿ ಹೋಗುವ ನಾರೀಮಣಿಯಾಗಿರುತ್ತಾಳೆ. ಅವಳು ಧರಿಸುವ ಕುಂಕುಮ, ಅರಿಶಿನ, ತ್ರಿವೇಣಿ, ಬೈತಲೆ, ಮಂಗಳಾಭರಣ ಇತ್ಯಾದಿಗಳೆಲ್ಲವೂ ಆ ದಾರಿಯನ್ನೇ ಸೂಚಿಸುತ್ತವೆ. ಅದರ ಸ್ಮರಣೆಯನ್ನು ಹೊಂದಿರುತ್ತವೆ. ಆ ದಾರಿಯಲ್ಲಿರಬೇಕಾದರೆ ಆವಶ್ಯಕವಾದ ಶಾರೀರಿಕ ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಉಂಟುಮಾಡುತ್ತವೆ. ಅವಳ ಶರೀರ ಸೌಂದರ್ಯದ ಜೊತೆಗೆ ಅವಳ ಆತ್ಮ ಸೌಂದರ್ಯವನ್ನು ಎತ್ತಿ ಹೇಳುತ್ತವೆ. ಒಟ್ಟಿನಲ್ಲಿ ಅವು ಕೇವಲ ಶರೀರ ಸೌಂದರ್ಯವನ್ನೇ ಇಟ್ಟುಕೊಂಡು ಮಾಡಿಕೊಳ್ಳುವ ಅಲಂಕಾರಗಳಲ್ಲ.

ಇಲ್ಲಿ ಶ್ರೀರಂಗಗುರುವು ಹೇಳಿದ ಒಂದು ಸಂಗತಿ ನಮಗೆ ಜ್ಞಾಪಕಕ್ಕೆ ಬರುತ್ತದೆ. ಶ್ರೀರಂಗ ಗುರುವಿನ ಜೀವನ ಬಡತನದಲ್ಲಿಯೇ ಕಳೆದ ಜೀವನವಾಗಿದ್ದಿತು. ಅವರು ತಮ್ಮ ಪತ್ನಿಗೆ ಆಭರಣಾದಿಗಳನ್ನು ಮಾಡಿಸಿ ಕೊಡುವ ಸ್ಥಿತಿಯಲ್ಲಿರಲಿಲ್ಲ. ಪ್ರತಿಯಾಗಿ ಅನೇಕ ಬಾರಿ ತಂದೆಯ ಮನೆಯಲ್ಲಿ ಅವರಿಗೆ ಹಾಕಿದ್ದ ಬಳೆ ಇತ್ಯಾದಿಗಳನ್ನು ಅಡವಿಟ್ಟು ಸಾಲ ಪಡೆದು ಜೀವನ ಮಾಡಬೇಕಾಗುತ್ತಿದ್ದಿತು. ಯಾವುದೋ ಸಂದರ್ಭದಲ್ಲಿ ಅವರು ತಮ್ಮ ಪತಿಯು ತಮಗೆ ಒಡವೆ ಇತ್ಯಾದಿಗಳನ್ನು ಮಾಡಿಸಿಕೊಡದಿದ್ದ ವಿಷಯವನ್ನು ಹೇಳಿದರು ಎಂದು ಕಾಣುತ್ತೆ. ಶ್ರೀರಂಗಗುರುವು ಯೋಗ ಮಾರ್ಗದ ಕೊನೆಯನ್ನು ಮುಟ್ಟಿದ್ದ ಅವರಿಗೆ "ನಿನ್ನ ಒಳಗೆ ನೋಡಿಕೋ. ಆ ಒಳಆಭರಣಗಳಿರುವಾಗ ಹೊರ ಆಭರಣಗಳೇಕೆ" ಎಂದರಂತೆ. ಅವರು ನಕ್ಕುಬಿಟ್ಟು ಮತ್ತೆ ಆಭರಣಗಳನ್ನು ಕೇಳಲಿಲ್ಲವೆಂದು ಅನೇಕ ವರ್ಷಗಳ ಹಿಂದೆ ಗುರುಭಗವಂತರು ನಮಗೆ ಹೇಳಿದರು.                                      
ಈ ಮಂಗಳಾಭರಣಗಳು ಯೋಗದಿಂದ ಪ್ರಾಪ್ತವಾದ ತಿಳಿವಳಿಕೆಯಿಂದ ಹಾಸು ಹೊಕ್ಕಾಗಿ ಣೆಯಲ್ಪಟ್ಟಿರುತ್ತವೆ. ಅವು ಅತ್ಯಂತ ಶುದ್ಧವಾದ ನೀತಿ ಮತ್ತು ನಡತೆಗಳ ಕುರುಹಾಗಿರುತ್ತವೆ. ಅವುಗಳಲ್ಲಿ ಸಂಯಮಶೀಲತೆ ಇದೆ. ಪತಿ ಪತ್ನಿಯರಲ್ಲಿ ಐಕಮತ್ಯವನ್ನು ಸಾಧಿಸುವ ಮರ್ಮವಿರುತ್ತದೆ.  ಆದುದರಿಂದಲೇ ಸಂಯಮ ಶೀಲರಾದ ನಮ್ಮ ಪೂರ್ವಿಕರು  ಅವಕ್ಕೆ ಅಷ್ಟು ಮಹತ್ವ ಕೊಟ್ಟರು.

ನಮ್ಮದು ಅಸಂಯಮಶೀಲವಾದ ನಾಗರಿಕತೆಯ ಯುಗ. ಆದುದರಿಂದಲೇ ಸಂಯಮಶೀಲರ ಕಡೆಯಿಂದ ನಮಗೆ ದೊರೆತ ಉಡಿಗೆತೊಡಿಗೆಗಳೆಲ್ಲವನ್ನೂ ನಾವು ಒಂದೊಂದಾಗಿ ಕಳೆದುಹಾಕುತ್ತಿದ್ದೇವೆ. 

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ:೦೮ ಏಪ್ರಿಲ್: ೧೯೮೨  ತಿಂಗಳಲ್ಲಿ  ಪ್ರಕಟವಾಗಿದೆ.