Sunday, January 17, 2021

ಆರ್ಯಸಂಸ್ಕೃತಿ ದರ್ಶನ - 26 (Arya Samskruti Darshana - 26)

ಓಂ ಶ್ರೀಃ
 " ಐಶ್ವರ್ಯ"-ಒಂದು  ಪದವಿವೇಚನೆ
ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ

  

ಪ್ರತಿಪದವೂ ಒಂದು ಅರ್ಥವನ್ನು ಹಿಂದಿಟ್ಟುಕೊಂಡೇ ಹುಟ್ಟುತ್ತದೆ. ಆ ಅರ್ಥವೇ ಪದದ ಜೀವ. ಅಂತೆಯೇ "ಭಾವ ಉಸಿರು: ಭಾಷೆ ಒಡಲು" ಎಂಬ ಮಾತು ಸಿದ್ಧವಾಗಿದೆ. ಪದದ ಹುಟ್ಟಿಗೆ ಕಾರಣವಾದ ಭಾವವು ಆ ಭಾವವನ್ನು ತಳೆದ ಮನಸ್ಸಿನ ಎತ್ತರವನ್ನು ಸೂಚಿಸುತ್ತದೆ. ಉದಾಹರಣೆಗೆ ಊಟಮಾಡು, ಅನ್ನ ತಿನ್ನು, ಎಂಬ ಪದಗಳು ಆಹಾರವನ್ನು ಸ್ವೀಕರಿಸು ಎಂಬ ಅಭಿಪ್ರಾಯವನ್ನು ಮಾತ್ರ ಹೇಳುತ್ತದೆ. ಅದೇ ಪ್ರಸಾದವನ್ನು ಸ್ವೀಕರಿಸು, ದೇವರ ಪೂಜೆಮಾಡು ಎಂಬ ವ್ಯವಹಾರವು ಆಹಾರ ಸ್ವೀಕಾರವು ಕೇವಲ ಹೊಟ್ಟೆ ತುಂಬುವುದಕ್ಕಷ್ಟೇ ಅಲ್ಲ, ಮನಸ್ಸನ್ನೂ ಪ್ರಸನ್ನತೆಯಿಂದ ತುಂಬುವ ಪ್ರಸಾದವೂ ಆಗಿದೆ. ಶರೀರವನ್ನು ಬೆಳೆಸುವುದಷ್ಟೇ ಆಹಾರದ ಗುರಿಯಲ್ಲ, ಶರೀರವನ್ನು ತುಂಬಿ ಆಡಿಸುವ ಚೈತನ್ಯದ ನೆಲೆಯಾದ ದೇವನ ಪ್ರೀತಿಯಲ್ಲಿ ನಿಲ್ಲುವುದು ಆಹಾರ ಸ್ವೀಕಾರದ ಲಕ್ಷ್ಯ ಎಂಬಷ್ಟು ಆಳವಾದ ಭಾವವನ್ನು ಸಾರುತ್ತದೆ. ಆದ್ದರಿಂದಲೇ ಮಾತು ಒಂದು ದೇಶದಲ್ಲಿ ಬೆಳೆದ ಸಂಸ್ಕೃತಿಯ ಕೈಗನ್ನಡಿಯೂ ಆಗಿದೆ ಎಂಬುದನ್ನು ಭಾಷಾತಜ್ಞರು ಸಾರುತ್ತಾರೆ.

ಭಾರತರಾದ ಜ್ಞಾನಿಗಳ ಕಡೆಯಿಂದ ಬಳಕೆಗೆ ಬಂದಿರುವ "ಐಶ್ವರ್ಯ" ಎಂಬ ಪದವು ವ್ಯವಹಾರದಲ್ಲಿ ಧನ-ಕನಕ-ವಸ್ತು-ವಾಹನಾದಿ ಸಮೃದ್ಧಿಯನ್ನು  ಹೇಳುವಂತೆ ಉಳಿದಿದ್ದರೂ, ಹುಡುಕಿ ನೋಡಿದಾಗ ಅವರ ಜ್ಞಾನ ಭಾವದ ಔನ್ನತ್ಯದೆಡೆಗೂ ಒಯ್ಯತಕ್ಕದ್ದಾಗಿದೆ. ಸಂಪತ್ತನ್ನು ತಿಳಿಸಲು rich, Wealth, ಹಣ, ಮೊದಲಾದ ಪದಗಳು ಬಳಕೆಯಲ್ಲಿದೆ ನಿಜ. ಆದರೆ ಅವು ಭೌತಿಕವಾದ ಸಮೃದ್ಧಿಯನ್ನು ಮಾತ್ರ ಸೂಚಿಸುತ್ತವೆ.

ಐಶ್ವರ್ಯ ಎನ್ನುವ ಪದದಾದರೋ "ಈಶ್ವರನ ಸಂಬಂಧವಾದುದು-ಈಶ್ವರ ಭಾವವುಳ್ಳದ್ದು" ಎಂಬ ಅರ್ಥವನ್ನೊಳಗೊಂಡಿದೆ. ಈಶ್ವರ ಎನ್ನುವ ಪದವು ವಿಶ್ವವನ್ನಾಳುವ ಶಕ್ತಿ, ವಿಶ್ವವನ್ನು ವಿಸ್ತರಿಸಿದ ಶಕ್ತಿ ಎಂಬ ಅರ್ಥವನ್ನೊಳಗೊಂಡಿದೆ. ನಿಸರ್ಗದಲ್ಲಿ ತುಂಬಿರುವ ಎಲ್ಲ ಸಂಪತ್ತೂ ಈಶ್ವರನದು ಎನ್ನುವ ಭಾವವನ್ನು "ಐಶ್ವರ್ಯ" ಎಂಬುದು ಸಾರುತ್ತದೆ. ಇದನ್ನೇ ಈಶಾವಾಸ್ಯೋಪನಿಷತ್ತಿನ ಮೊದಲನೆಯ ಮಂತ್ರವು ಹೀಗೆ ಸಾರುತ್ತದೆ.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀಥಾಃ ಮಾಗೃಧಃ ಕಸ್ಯಸ್ವಿದ್ಧನಮ್||

(ಈ ಜಗತ್ತಿನಲ್ಲಿ ಯಾವುದಿದೆಯೋ ಆ ಎಲ್ಲವೂ ಈಶನ ವಾಸದ ಎಡೆ. ಅವನು ಯಾವುದನ್ನು ಕೊಟ್ಟಿದ್ದಾನೆಯೋ ಅದನ್ನು ಅನುಭವಿಸಿ. ಯಾರಧನವನ್ನೂ ಬಯಸ ಬೇಡಿ). ಅಂತೆಯೇ ಸೃಷ್ಟಿಯ ಸಮಸ್ತ ವಸ್ತುಗಳೂ ಯಜ್ಞಕ್ಕಾಗಿ (ಈಶನ ಪೂಜೆಗಾಗಿ) ಸೃಷ್ಟಿಯಾಗಿವೆ ಎಂಬುದು ಜ್ಞಾನಿಗಳ ನೋಟ. ಜ್ಞಾನಿಗಳ ದೃಷ್ಟಿಯಿಂದ ಈಶ್ವರನಿಂದ ಬೆಳೆದ ಸೃಷ್ಟಿಯೆಲ್ಲವೂ ಐಶ್ವರ್ಯವೇ. ಅದು ಕೇವಲ ಭೌತಿಕ ಸಂಪತ್ತಲ್ಲ. ಭೋಗವೂ ಹೇಗೆ ಐಶ್ವರ್ಯವೋ, ಯೋಗವೋ ಅವರ ದೃಷ್ಟಿಯಿಂದ  ಐಶ್ವರ್ಯ. ಅಂತೆಯೇ ಶ್ರೀಕೃಷ್ಣನು ಯೋಗೇಶ್ವರ. ಶಿವನು ಯೋಗೀಶ್ವರ.

ನಿಸರ್ಗವು-ಭೋಗೈಶ್ವರ್ಯ ಮತ್ತು ಯೋಗೈಶ್ವರ್ಯಗಳಿಂದ ತುಂಬಿದ ಭಂಡಾರ. ಅಂತೆಯೇ ಆ ಪ್ರಕೃತಿ ಮಾತೆಯು ಮಹಾಲಕ್ಷ್ಮಿ-- ಸಂಪತ್ತಿನ ಅಧಿದೇವತೆ. ನಿಸರ್ಗದ ಹೊರಮೈ ಮಾತ್ರ ಸಂಪತ್ತಲ್ಲ. ಅದರ ಒಳಮೈಯೂ ಸಂಪದ್ಭರಿತ.  ಪ್ರಕೃತಿಮಾತೆಯ ಬಸಿರಿನಿಂದಲೇ ಮೈತಳೆದ ಜ್ಞಾನಿಗಳು ಜೀವಲೋಕದ ಒಳಗೆ ನಿಗೂಢವಾಗಿ ಆಕೆಯು ಇಟ್ಟಿರುವ ಯೋಗೈಶ್ವರ್ಯದ ಭಂಡಾರದ ಕೀಲಿಕೈಯನ್ನೂ ಹುಡುಕಿ ಪಡೆದರು. ಅಂತೆಯೇ "ಶ್ರೀ" "ಶ್ರಯಣೀಯಳು"-ಆಶ್ರಯಿಸಬೇಕಾದವಳು ಎಂಬರ್ಥದಲ್ಲಿ ಆತ್ಮಶ್ರೀ ಭರಿತಳಾದ ಲಕ್ಷ್ಮಿಯನ್ನು ನರರಿಗೆ ಅಯನನಾಗಿ ನೆಲೆಯಾಗಿರುವ ನಾರಾಯಣನ ಮಡದಿ ಎಂದ ಗುರುತಿಸಿದರು.

ಯೋಗವೂ ಐಶ್ವರ್ಯ-ಭೋಗವೂ ಐಶ್ವರ್ಯ ಎಂದು ಸರಿಯಾಗಿ ಗುರುತಿಸಿದ ಅವರು ಆತ್ಮಕಲ್ಯಾಣ-ಇಂದ್ರಿಯ ಕಲ್ಯಾಣಗಳೆರಡನ್ನೂ ತುಂಬಿ ಯೋಗ –ಭೋಗ ಸಮೃದ್ಧಿಯಿಂದ ಬಾಳಿದರು.
ಹೀಗೆ ಐಶ್ವರ್ಯ ಎಂಬ ಪದವು ಈಶ್ವರನಿಂದ ಅರಳಿದ ನಿಸರ್ಗದಲ್ಲಿ ತುಂಬಿರುವ ಎಲ್ಲ ಬಗೆಯ ಸಂಪತ್ತುಗಳಿಗೂ ಅನ್ವಯಿಸುವ ವ್ಯಾಪಕ ಪದವಾಗಿದೆ. ಪಂಚಭೂತಗಳ ಪ್ರಪಂಚವನ್ನು ಮಾತ್ರ ನೋಡದೇ ಆತ್ಮ ಪ್ರಪಂಚವನ್ನೂ ತುಂಬಿಕೊಂಡು ಹರಿದಿದೆ ಅವರ ಸಂಸ್ಕೃತಿ ಎಂಬುದಕ್ಕೆ "ಐಶ್ವರ್ಯ" ಎಂಬ ಪದವೂ ಸಮರ್ಥವಾದ ಸಾಕ್ಷಿಯಾಗಿದೆ.

ಕೇವಲ ಭೋಗಕ್ಕೆ ಕಾರಣವಾದ ಸಂಪತ್ತನ್ನು ಪಡೆದವನು ಲೌಕಿಕ ದೃಷ್ಟಿಯಿಂದ ಹಣವಂತನಾದರೂ ಜ್ಞಾನಿಗಳ ದೃಷ್ಟಿಯಿಂದ ಐಶ್ವರ್ಯವಂತನಾಗಲಾರ. ಆತ್ಮಶ್ರೀ ದೃಷ್ಟಿಯಿಂದ ಆತ ದರಿದ್ರನೇ. ಆತ್ಮ ಲಾಭವೇ ಜೀವನದ ಪರಮ ಲಾಭವೆಂದು ಎತ್ತಿ ಸಾರುವ  ಜ್ಞಾನಿಗಳ ಮಾತು ಆತ್ಮೈಶ್ವರ್ಯದ ಹಿರಿಮೆಯನ್ನು ಸಾರುತ್ತದೆ. ಆದರೆ ಅದೇ ಆತ್ಮಶ್ರೀಯನ್ನು ಪಡೆದವನು ಹೊರದೃಷ್ಟಿಯಿಂದ ದರಿದ್ರನಾದರೂ, ಜೀವವನ್ನಾಳುವ ಈಶ್ವರ ಭಾವವನ್ನು ಗುರುತಿಸಿದವನಾದ ಕಾರಣ, ಜ್ಞಾನಿಗಳ ದೃಷ್ಟಿಯಿಂದ ಐಶ್ವರ್ಯವಂತನೇ ಸರಿ. " ನಾನೇಕೆ ಬಡವನೋ ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕ" ಎಂಬ ಪುರಂದರದಾಸರ ಮಾತೂ ಈ ಭಾವವನ್ನೇ ಸಾರುತ್ತದೆ.

ಪರಿಪೂರ್ಣ ಮನೋಗತಿಯುಳ್ಳ ಜ್ಞಾನಿಗಳಿಗೆ ತಮ್ಮ ಎಲ್ಲ ಐಶ್ವರ್ಯದ ಭಂಡಾರ ಅನುಗ್ರಹಿಸಿದ ಮಹಾಲಕ್ಷ್ಮಿಗೂ, ಲಕ್ಷ್ಮೀಪತಿಯಾಗಿ ಐಶ್ವರ್ಯಕ್ಕೆ ಮೂಲನಾದ ನಾರಾಯಣನಿಗೂ ನಮಿಸಿ, ಈ ಬರಹಕ್ಕೆ ಕಾರಣರಾದ, ವಿವೇಕ ಸಂಪತ್ತನ್ನು ಅನುಗ್ರಹಿಸಿದ ಆತ್ಮ ಶ್ರೀನಿವಾಸನಾದ ಶ್ರೀ ರಂಗಮಹಾಗುರುವಿಗೆ, ಅವನೊಳಗಿನ ಈಶ್ವರೀ ಶಕ್ತಿಗೆ ಈ ಬರಹವನ್ನರ್ಪಿಸುತ್ತೇನೆ.  

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ  ಫೆಬ್ರವರಿ ೧೯೮೨ ಸಂಪುಟ :೦೪ ಸಂಚಿಕೆ : ೦೪ ರಲ್ಲಿ ಪ್ರಕಟವಾಗಿದೆ.