Wednesday, January 27, 2021

ಬೇಸರವಿಲ್ಲದ ಜೀವನ ಉಂಟೆ? (Besaravillada Jivana Unte?)

ಲೇಖಕಿ: ಪದ್ಮಿನಿ ಶ್ರೀನಿವಾಸನ್

(ಪ್ರತಿಕ್ರಿಯಿಸಿರಿ lekhana@ayvm.in)


 

 

ಬೇಸರವೆಂಬುದು ಜೀವನದಲ್ಲಿ ನಾವೆಲ್ಲರೂ ಅನುಭವಿಸಿರುವ ಒಂದು ಸಹಜವಾದ ಭಾವನೆ. ಕಾರಣಗಳು ಹಲವಾರು - ಆಪ್ತರ ಅಗಲಿಕೆ, ಧನವ್ಯಯ, ಅನಾರೋಗ್ಯ, ವೃತ್ತಿ/ಸಂಸಾರಗಳ ಒತ್ತಡ ಇತ್ಯಾದಿ. ನಮ್ಮ ಉತ್ಸಾಹ/ಉತ್ತೇಜನಗಳನ್ನು ಕುಂದಿಸುವ ಸ್ಥಿತಿಯನ್ನು ಬೇಸರವೆಂದು ಕರೆದು, ಆಧುನಿಕ ಸಂಶೋಧಕರು ಹಲವಾರು ಪರಿಹಾರಗಳನ್ನು ಹೇಳಿದ್ದಾರೆ. ನಿಮ್ಮ ಗುರಿ/ಆಸೆ/ಆಕಾಂಕ್ಷೆಗಳನ್ನು ಗುರುತಿಸಿ, ಸವಾಲು ಹಾಕಿಕೊಳ್ಳಿ, ಸಮಾಜದಲ್ಲಿ ಬೆರೆಯಿರಿ, ದಿನಚರಿಯಲ್ಲಿ ಏನಾದರೂ ಹೊಸತನ್ನು ಅಳವಡಿಸಿಕೊಳ್ಳಿ, ವಿಶ್ವ ಪರ್ಯಟನ ಮಾಡಿ, ಹೊಸ ರುಚಿಯನ್ನು ಆಸ್ವಾದಿಸಿ, ಹೊಸ ದೃಶ್ಯಗಳನ್ನು ನೋಡಿ/ಟೀವಿ /ಚಲನ ಚಿತ್ರ ವೀಕ್ಷಿಸಿ, ಹವ್ಯಾಸಗಳು/ಕ್ರೀಡೆ/ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಿ, ಸಂತೋಷದ ಸನ್ನಿವೇಶಗಳನ್ನು ಮೆಲುಕು ಹಾಕುತ್ತಿರಿ ಇತ್ಯಾದಿ ನಾನಾ ರೀತಿಯ ಸಲಹೆಗಳು ಬರುತ್ತವೆ. ಮನಸ್ಸಿನ ಸಾತ್ತ್ವಿಕ ಪ್ರಚೋದನೆಗಳನ್ನು ಪುಷ್ಟೀಕರಿಸಿ, ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವುದರ ಮೂಲಕ, ಬೇಸರವನ್ನು ಹೋಗಲಾಡಿಸಿಕೊಳ್ಳಿ ಎನ್ನುವುದು ಮನೋವಿಜ್ಞಾನಿಗಳ  ಅಭಿಪ್ರಾಯ.


ಸಂತೋಷವನ್ನು  ಕೊಡುವುದಾಗಿ ನಾವು ಭಾವಿಸುವ ಸಂಗತಿಗಳು ನಮ್ಮಲ್ಲಿನ ಸಂತೋಷದ ಬಲ್ಬಿನ  'ಸ್ವಿಚ್ ಆನ್' ಮಾಡುತ್ತವೆ ಅಷ್ಟೇ. ಕಾಲವು ಉರುಳುತ್ತಾ, ಸ್ವಿಚ್ಚುಗಳ ಹಿಂದಿನ ತಂತಿಗಳು ಹಳತಾಗಿ ಕೆಟ್ಟು ಹೋಗುವುದು ಸಹಜ. ಆದರೆ ವಸ್ತುಸ್ಥಿತಿ ಅರಿಯದೆ ನಾವು ಹೊಸ ಹೊಸ ಆಸೆಗಳನ್ನು ಮನದುಂಬಿಕೊಂಡು 'ಸ್ವಿಚ್-ಆನ್' ಮಾಡುವ ವ್ಯರ್ಥಪ್ರಯತ್ನ ಮಾಡುತ್ತೇವೆ.  ಕಾಲವು ಆಡುತ್ತಿದೆ; ಆಯುಸ್ಸು ಕಳೆಯುತ್ತಿದೆ; ಆದರೆ ಆಶಾವಾಯುವು ಮಾತ್ರ ಬಿಟ್ಟುಹೋಗದಲ್ಲ!" ಎಂದು ಶಂಕರಭಗವತ್ಪಾದರು ಹೇಳಿರುವಂತೆ, ಜೀವನವೆಲ್ಲ  ತೀರದ  ಆಸೆ, ಬಾರದ ತೃಪ್ತಿ. ಆದರೆ ಸಂತೋಷದ 'ಬಲ್ಬಿ'ಗೆ ಗುಪ್ತವಾದ ಮತ್ತೊಂದು 'ಸ್ವಿಚ್' ಉಂಟು.    


ಯೋಗೇಶ್ವರ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು :"ಭಗವಂತನ ಸಮೀಪದಲ್ಲಿದ್ದ ಚೇತನನು ಭಗವತ್ಸನ್ನಿಧಿಯಿಂದ ಬಹುದೂರ ಬಂದಿದ್ದಾನೇಪ್ಪಾ". ನಮ್ಮೆಲ್ಲ ಚಟುವಟಿಕೆಗಳ ಹಿಂದೆ ಚೈತನ್ಯ ಶಕ್ತಿಯಾಗಿರುವ ಆತ್ಮನು, ಸೃಷ್ಟಿಗಿಳಿದು,  ಅವನ ಸ್ವಧಾಮವಾದ ಭಗವಂತನ ಮಡಿಲಿಗೆ ಹಿಂತಿರುಗಲಾಗದ ಬೇಸರದಿಂದ ಕೂಡಿದ್ದಾನೆಂಬ ಅರಿವು ಅವನಿಗಾಗುತ್ತಿಲ್ಲ. ಅಮೋಘವಾದ ಸಂಶೋಧನೆಯಿಂದ, ನಮ್ಮ ಮಹರ್ಷಿಗಳು ಅಂತರಂಗದಲ್ಲಿ  ಅಡಗಿರುವ 'ಸ್ವಿಚ್'ನ್ನು ಕಂಡು, ಆತ್ಮ-ಪರಮಾತ್ಮರನ್ನು ನಿತ್ಯವೂ ಒಂದಾಗಿಸಿ ನಿತ್ಯಾನಂದ ಸ್ವರೂಪಿಯಾದ ಆ ಪರಮಾತ್ಮನ ಮೂಲದಿಂದ ಉಕ್ಕುವ ಬ್ರಹ್ಮಾನಂದವನ್ನು ಅನುಭವಿಸಿದರು. ಯೋಗ ಪ್ರಕ್ರಿಯೆಯಿಂದ ಪಡೆದ ಪರಮಾನಂದದ ಗುಟುಕುಗಳನ್ನು ಭೋಗ ಜೀವನಕ್ಕೂ ತಂದುಕೊಂಡು, ಸಮರಸ ಜೀವನ ಮಾಡಿದರು.  ಮನುಷ್ಯನ ಉದ್ಧಾರಕ್ಕಾಗಿ, ಭವ್ಯವಾದ ಸಂಸ್ಕೃತಿಯನ್ನು ಜನ ಜೀವನದಲ್ಲಿ ಹಾಸು ಹೊಕ್ಕಾಗಿ ಹೆಣೆದು ಕೊಟ್ಟು, ಆತ್ಮರಂಜನೆಯವರೆಗೆ ಮುಟ್ಟುವ ಮನೋರಂಜನೆಗಳನ್ನೂ ಕೃಪೆಯಿಂದ ತಂದುಕೊಟ್ಟರು. ಸದ್ಗುರುವಿನ ಆಶ್ರಯ ಪಡೆದು, ನಮ್ಮ ಚಿತ್ತವೃತ್ತಿಗಳನ್ನು ಶುದ್ಧಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದರೆ, ಕ್ರಮೇಣ ಆತ್ಮಾನಂದವನ್ನು  ನಾವು ಅನುಭವಿಸಬಹುದು.ಇತರ ಸುಖಗಳಿಗಿಂತ ಕೋಟಿ ಕೋಟಿ ಪಾಲು ಮಿಗಿಲಾದ ನಿರಂತರ ಆನಂದದ ಅರಿವು ನಮಗೆ ಬಂದಂತೆ, ಬೇಸರವೆನ್ನಲು ಸಮಯವೇ ಇರಲಾರದು.


ಸೂಚನೆ: 27/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.