Saturday, January 16, 2021

ಆಸನ (Asana)

ಲೇಖಕರು: ಶ್ರೀ ಜಿ ನಾಗರಾಜ

(ಪ್ರತಿಕ್ರಿಯಿಸಿರಿ lekhana@ayvm.in)




ಪತಂಜಲಿಗಳ ಯೋಗಸೂತ್ರವು, ಸ್ಥಿರವೂ ಸುಖಕರವೂ ಆದುದು ಆಸನ ಎಂದು ಹೇಳುತ್ತದೆ. ಅಷ್ಟಾಂಗಯೋಗದ ಅಂತಿಮ ಲಕ್ಷ್ಯವಾದ ಸಮಾಧಿಸ್ಥಿತಿಯು, ಶರೀರವು ದೀರ್ಘಕಾಲ ಒಂದೇ ಸ್ಥಿತಿಯಲ್ಲಿರುವುದನ್ನು ಅಪೇಕ್ಷಿಸುತ್ತದೆ. ಆಸನಾಭ್ಯಾಸವು ಶರೀರಕ್ಕೆ ಬಹಳ ಹೊತ್ತು ಒಂದು ಭಂಗಿಯಲ್ಲಿರುವ ಸಾಮರ್ಥ್ಯವನ್ನು ತಂದುಕೊಡುತ್ತದೆ.

ಸೂರ್ಯನಮಸ್ಕಾರ, ಪಶ್ಚಿಮತಾನಾಸನ, ಪದ್ಮಾಸನ ಮುಂತಾದವು ಇಂದು ಪ್ರಸಿದ್ಧವಾಗಿರುವ ಆಸನಗಳಾಗಿವೆ. ಪ್ರಪಂಚದಲ್ಲಿ ಎಷ್ಟು ಬಗೆಯ ಜೀವಜಾತಿಗಳುಂಟೋ ಅಷ್ಟುಬಗೆಯ ಆಸನಗಳುಂಟೆಂಬ ಶಾಸ್ತ್ರವಾಕ್ಯವನ್ನು ಶ್ರೀರಂಗಮಹಾಗುರುಗಳು ವಿಶೇಷವಾಗಿ ಉಲ್ಲೇಖ ಮಾಡುತ್ತಿದ್ದರು. ಪರಂಪರೆಯಲ್ಲಿ ಜೀವಜಾತಿಗಳು 84 ಲಕ್ಷ ಎಂದು ಪ್ರಸಿದ್ಧವಾಗಿದೆ ಮತ್ತು ಇವುಗಳಲ್ಲಿ 84 ಆಸನಗಳು ಅಭ್ಯಾಸಕ್ಕೆ ಪ್ರಶಸ್ತವಾದ ಆಸನಗಳು ಎಂದು ಯೋಗೋಪನಿಷತ್ತು ಹೇಳುತ್ತದೆ. ಮತ್ತು ಬಾಲಕರಿಗೆ ಸುಲಭಸಾಧ್ಯವೂ, ವಯಸ್ಕರಿಗೆ ಸ್ವಲ್ಪ ಶ್ರಮಸಾಧ್ಯವೂ ಆಗಿರುವ ಆಸನಾಭ್ಯಾಸಕ್ಕೆ ಮತ್ತಾವುದೇ ದ್ರವ್ಯ ಅಥವಾ ಪದಾರ್ಥವನ್ನು ವ್ಯಯ ಮಾಡಬೇಕಾಗಿಲ್ಲದಿರುವುದರಿಂದ ಆಸನಗಳು ಪ್ರತಿಯೊಬ್ಬರೂ ಅಭ್ಯಸಿಸತಕ್ಕುದ್ದಾಗಿದೆ ಎಂದು ಆಸನಗಳನ್ನು ಪ್ರಶಂಸಿಸುತ್ತಿದ್ದರು.

ಮಹರ್ಷಿಗಳು ಯೋಗಾಭ್ಯಾಸದಲ್ಲಷ್ಟೇ ಅಲ್ಲದೇ ನಿತ್ಯಜೀವನದಲ್ಲಿಯೂ ಆಸನ ವಿಜ್ಞಾನದ ಮರ್ಮವನ್ನು ಹಾಸುಹೊಕ್ಕಾಗಿ ಅಳವಡಿಸಿದ್ದಾರೆ. ಯಾವ ಯಾವ ಶರೀರವಿನ್ಯಾಸವು ಯಾವ ಯಾವ ನಾಡಿಗಳಲ್ಲಿ ಪ್ರಾಣಶಕ್ತಿಯು ಹರಿಯುವಂತೆ ಮಾಡುತ್ತದೆ ಎನ್ನುವುದರ ಆಧಾರದ ಮೇಲೆ ಬೇರೆ ಬೇರೆ ಕಾರ್ಯಗಳಿಗೆ ಬೇರೆ ಬೇರೆ ಆಸನಗಳನ್ನು ನಿರ್ದೇಶಿಸಿದ್ದಾರೆ.

ರಾತ್ರಿ ನಿದ್ರಿಸಬೇಕಾದರೆ ಎಡಮಗ್ಗುಲಿಗೆ ತಿರುಗಿ ಮಲಗಬೇಕು, ಮತ್ತು ಏಳಬೇಕಾದರೆ ಬಲಮಗ್ಗುಲಿಗೆ ತಿರುಗಿ ಏಳಬೇಕು ಎನ್ನುವ ಪರಂಪರಾಗತ ರೂಢಿಯು ಆಸನಗಳ ವಿಜ್ಞಾನದ ಆಧಾರದ ಮೇಲೆ ರೂಪಿತವಾಗಿದೆ. ಒಂದೆರಡು ದಶಕಗಳ ಹಿಂದಿನವರೆವಿಗೂ ಹಿರಿಯರು, ಮಕ್ಕಳ ನಿಲುವಿನ ಅಥವಾ ನಡೆಯುವ ಭಂಗಿಗಳನ್ನು ತಿದ್ದುತ್ತಿದ್ದರು. ಯಾರಾದರೂ ಸೊಟ್ಟಗೆ ನಿಂತಿದ್ದರೆ ನೆಟ್ಟಗೆ ನಿಂತುಕೋ ಎಂದೋ ಅಥವಾ ಗೂನಿಕೊಂಡು ನಡೆಯುತ್ತಿದ್ದರೆ ಬೆನ್ನು ನೆಟ್ಟಗಿಟ್ಟುಕೊಂಡು ನಡೆ ಎಂದು ಬೆನ್ನುಮೂಳೆ ನೇರವಾಗಿರುವ ಶರೀರವಿನ್ಯಾಸವನ್ನು ರೂಢಿ ಮಾಡಿಸುತ್ತಿದ್ದರು.

ಇಂದು, ಅಡಿಗೆಯ ಬಹುತೇಕ ಕೆಲಸಗಳನ್ನು ನಿಂತುಕೊಂಡು ಮಾಡುತ್ತಿರುವುದರಿಂದ ಕಾಲುಗಳ ಮತ್ತು ಬೆನ್ನುಮೂಳೆಯ ಕೆಳಭಾಗದ, ಆಧಾರ ವ್ಯವಸ್ಥೆಯ ಹೊರೆ ಜಾಸ್ತಿಯಾಗಿ ಮಧ್ಯವಯಸ್ಕ ಮಹಿಳೆಯರಿಗೆ ಸೊಂಟ ನೋವು, ಬೆನ್ನು ನೋವು ಮತ್ತು ಮಂಡಿ ನೋವುಗಳು ಹೆಚ್ಚಾಗುತ್ತಿವೆಯೆಂದು ಆಧುನಿಕ ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಹಿಂದಿನವರು ಅಡಿಗೆ ಮಾಡಬೇಕಾದರೆ ಕುಳಿತೇ ಬಹುತೇಕ ಕೆಲಸಗಳನ್ನು ಮಾಡುತ್ತಿದ್ದಾಗ ಈ ಸಮಸ್ಯೆಗಳು ಹೆಚ್ಚಿರಲಿಲ್ಲ.

ಹೀಗೆ, ಆಸನ ವಿಜ್ಞಾನವು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಅಳವಡಿಸಲ್ಪಟ್ಟಿವೆ.

ಸೂಚನೆ : 16/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.