Tuesday, November 17, 2020

ನಿತ್ಯ ಜೀವನದಲ್ಲಿ ಅಹಿಂಸೆ (Nitya Jivanadalli Ahinse)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)



ಭಾರತೀಯ ಸಂಸ್ಕೃತಿಯಲ್ಲಿ ಅಹಿಂಸೆಯನ್ನು ಹಾಸುಹೊಕ್ಕಾಗಿ ಅಳವಡಿಸಿದ್ದಾರೆ. ನಮ್ಮ ಹಳೆಯ ತಲೆಮಾರಿನವರು ಯಾವುದಾದರೂ ಖಾಯಿಲೆ ಬಂದು ನೋವು ಅನುಭವಿಸುವಾಗ, ನಮ್ಮ ಶತ್ರುವಿಗೂ ಇಂಥ ನೋವು ಬೇಡಪ್ಪಾ! ಎಂದು ಭಗವಂತನಲ್ಲಿ ಮೊರೆಯಿಡುವ ರೂಢಿಯನ್ನು ಶ್ರೀರಂಗಮಹಾಗುರುಗಳು ಎತ್ತಿ ತೋರಿಸುತ್ತಿದ್ದರು. ಅಹಿಂಸೆಯನ್ನು ನಿತ್ಯ ಜೀವನದಲ್ಲಿ ಕ್ರಮೇಣ, ಯಥಾಶಕ್ತಿ ರೂಢಿಸಿಕೊಳ್ಳಬೇಕಾದರೆ, ಹಿಂಸೆಯ ಮೂಲವಾದ ಕ್ರೋಧದ ಮೇಲೆ ಕ್ರಮೇಣ ಹತೋಟಿಯನ್ನು ಸಾಧಿಸಬೇಕಾಗುತ್ತದೆ.

ಕ್ರೋಧವು ನಮ್ಮ ಪ್ರಾಣಶಕ್ತಿಯು ನಷ್ಟವಾಗುವುದಕ್ಕೆ ಮುಖ್ಯದ್ವಾರವಾಗಿರುತ್ತದೆ. ಒಮ್ಮೆ ವ್ಯಕ್ತಿಯೊಬ್ಬರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಕಛೇರಿಯವರು ಇವರನ್ನು ಬಹಳ ಅಲೆದಾಡಿಸಿದ ನಂತರವೂ ಕೆಲಸವಾಗದಿದ್ದಾಗ ಇವರಿಗೆ ಪ್ರಚಂಡವಾದ ಕೋಪ ಬಂದುಬಿಟ್ಟಿತು. ಅವರ ಉದ್ದೇಶ ಅಲ್ಲಿಯ ಅಧಿಕಾರಿ-ನೌಕರರ ಮೇಲೆ ಗಲಾಟೆ ಮಾಡಿಯಾದರೂ ಕಾರ್ಯಸಾಧನೆಯಾಗಬೇಕು ಎನ್ನುವುದು. ಆದರೆ ಅವರಿಗೆ ಎಷ್ಟು ಕೋಪ ಬಂದಿತ್ತೆಂದರೆ, ಅವರ ಬೆನ್ನುಲುಬಿನಲ್ಲಿ ಒಂದು ನಡುಕ ಶುರುವಾಗಿ, ಮಾತೇ ಹೊರಡದೆ, ಇನ್ನು ಅಲ್ಲಿಯೇ ಇದ್ದರೆ ತಲೆತಿರುಗಿ ಬೀಳಬೇಕಾಗುತ್ತದೆ ಅನ್ನುವ ಪರಿಸ್ಥಿತಿಯುಂಟಾಗಿ ಕೊನೆಗೆ ಯಾವ ಮಾತೂ ಆಡದೇ ಮನೆಗೆ ಬಂದು ಬಿಟ್ಟರು ಮತ್ತು ಅವರ ಕೆಲಸ ಆಗಲೇ ಇಲ್ಲ. ಹೀಗೆ, ಕ್ರೋಧಕ್ಕೆ ಒಳಗಾದರೆ, ಗೀತೆಯ "ಕ್ರೋಧಾತ್ ಭವತಿ ಸಮ್ಮೋಹಃ..."  ಎನ್ನುವ ವಾಣಿಯಂತೆ, ಕ್ರೋಧವು ನಮ್ಮನ್ನೇ ನಾಶ ಮಾಡುತ್ತದೆ ಮತ್ತು ಅಂದುಕೊಂಡ ಕೆಲಸವೂ ಆಗುವುದಿಲ್ಲ.

ಆದರೆ ಕ್ರೋಧವನ್ನು ವಶದಲ್ಲಿಟ್ಟುಕೊಂಡಿದ್ದು, ಧರ್ಮರಕ್ಷಣೆಗಾಗಿ ಪ್ರಯೋಗಿಸಿದರೆ, ಉದ್ದೇಶಿತ ಕಾರ್ಯವು ನೆರವೇರುತ್ತದೆ. ಅಹಿಂಸಾ ವ್ರತ ಎಂದರೆ, ಎಂದಿಗೂ ಯಾವ ರೀತಿಯ ಹಿಂಸೆಯನ್ನೂ ಮಾಡಬಾರದೆಂದರ್ಥವಲ್ಲ. ಕೆಲವೊಮ್ಮೆ ದೊಡ್ಡ ಮಟ್ಟದ ಹಿಂಸೆಯನ್ನು ತಪ್ಪಿಸುವುದಕ್ಕಾಗಿ ಸಣ್ಣ ಹಿಂಸೆ ಮಾಡುವುದು ಅಹಿಂಸೆಯೇ ಆಗುತ್ತದೆ. ರಾವಣ ಅಧರ್ಮಿಯಾಗಿದ್ದು ಅನೇಕ ವಿಧದ ಹಿಂಸೆಯಲ್ಲಿ ತೊಡಗಿದ್ದ. ಶ್ರೀರಾಮಚಂದ್ರನು ರಾವಣನನ್ನು ಕೊಂದು ಅಧರ್ಮವನ್ನು ತಪ್ಪಿಸಿದ್ದು  ಸಹ ಅಹಿಂಸೆಯೆಂದೇ ಪರಿಗಣಿಸಲ್ಪಡುತ್ತದೆ. ಶ್ರೀರಂಗ ಮಹಾಗುರುಗಳು "ಸಮುದ್ರದಂತಹಾ  ಕೋಪವನ್ನು ತಂದುಕೊಂಡ" ಎಂದು ಹೇಳಿ ಶ್ರೀರಾಮನು ಹೇಗೆ ಕ್ರೋಧಕ್ಕೆ ವಶನಾಗದೇ, ತಾನು ಕ್ರೋಧವನ್ನು ವಶದಲ್ಲಿಟ್ಟುಕೊಂಡು ರಾವಣನ ಮೇಲೆ ಪ್ರಯೋಗ ಮಾಡಿದ ಎಂದು ಶ್ರೀರಾಮನ ಆದರ್ಶ ವ್ಯಕ್ತಿತ್ವವನ್ನು ತೋರಿಸಿಕೊಡುತ್ತಿದ್ದರು.

ಹೀಗೆ, ಕ್ರೋಧದ ಮೇಲೆ ಹತೋಟಿ ಸಾಧಿಸಿ, ನವವಿಧ ಹಿಂಸೆಗಳ ಬಗ್ಗೆ ಎಚ್ಚರದಿಂದ್ದರೆ, ನಮ್ಮ ಪ್ರಾಣಶಕ್ತಿಯು ಸಂರಕ್ಷಿಸಲ್ಪಟ್ಟು ಯೋಗ ಹಾಗೂ ಲೌಕಿಕ ಸಾಧನೆಗಳೆರಡಕ್ಕೂ ಅನುಕೂಲವುಂಟಾಗುತ್ತದೆ.

ಸೂಚನೆ: 14/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.