Thursday, November 5, 2020

ಆಹಾರದಿಂದ ಆರೋಗ್ಯ, ಜೀವಹಿತ (Aharadinda Arogya, jivahita)

ಲೇಖಕರು: ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)ಆಹಾರವು ಜೀವಿಗಳ ದೇಹಪೋಷಣೆ-ರಕ್ಷಣೆಗಳಿಗೆ ಅತ್ಯಗತ್ಯವೆನ್ನುವುದು ಸಾಮಾನ್ಯಜ್ಞಾನ. ಅದು ಶಕ್ತಿರೂಪವಾಗಿ ಪರಿವರ್ತನೆಗೊಂಡು ಜೀವಕಣಗಳನ್ನೂ, ಅಂಗಾಂಗಗಳನ್ನೂ ರಕ್ಷಿಸುವಬಗೆಯನ್ನು ಶಾಲಾಮಕ್ಕಳು ಸಹ ತಿಳಿದಿರುತ್ತಾರೆ. ಪ್ರತಿಯೊಂದು ಆಹಾರಪದಾರ್ಥವೂ ದೇಹದ ಯಾವ ಭಾಗಕ್ಕೆ ಯಾವ ಪೌಷ್ಟಿಕಾಂಶವನ್ನು ನೀಡಿ ಪುಷ್ಟಿಗೊಳಿಸುತ್ತದೆ, ವಯೋಮಾನಕ್ಕೆ ಅನುಗುಣವಾಗಿ ಯಾರಿಗೆ ಯಾವ ಪೌಷ್ಟಿಕಾಂಶಗಳು ಎಷ್ಟು ಪ್ರಮಾಣದಲ್ಲಿರಬೇಕು ಮುಂತಾದ ವಿವರಗಳು ಇಂದು ಲಭ್ಯವಿದೆ. ಹೊಸಹೊಸ ಆಹಾರಪದಾರ್ಥಗಳೂ, ತಯಾರಿಕೆಯ ಕ್ರಮಗಳೂ ಹುಟ್ಟಿಕೊಳ್ಳುತ್ತಿದ್ದಂತೆ ಆ ಬಗೆಗಿನ ಸಂಶೋಧನೆಗಳೂ ಮುಂದುವರಿಯುತ್ತಿವೆ. ಈ ಸಂಶೋಧನೆಗಳು ಆಹಾರಕ್ಕೂ ಭೌತಿಕಶರೀರಕ್ಕೂ ಇರುವ ಸಂಬಂಧವನ್ನು ಸಮಗ್ರವಾಗಿ ಅಳೆಯಬಲ್ಲವು. ಇಷ್ಟಾದರೂ ಭಾರತೀಯಮಹರ್ಷಿಗಳ ದೃಷ್ಟಿಯಲ್ಲಿ ಇವೆಲ್ಲವೂ ಆಹಾರದ ಪ್ರಯೋಜನ, ಪರಿಣಾಮಗಳ ಅಳತೆಯ ಏಕದೇಶಮಾತ್ರವಾಗುವುದು.

ಮಹರ್ಷಿದೃಷ್ಟಿ
ಭಾರತೀಯಮಹರ್ಷಿಗಳು ತಮ್ಮ ತಪಸ್ಯೆಯಿಂದ ಸ್ಥೂಲವಾದ, ಅಳಿದುಹೋಗುವ ದೇಹದೊಳಗೆ ಅಳಿಯದೆ, ಅಮರವಾಗಿರುವ ಬದುಕಾದ ಪರಂಜ್ಯೋತಿಯನ್ನು ಕಂಡವರು. ಅದರ ವಿಭೂತಿಗಳಾದ ಅನೇಕಾನೇಕ ದಿವ್ಯಶಕ್ತಿಗಳನ್ನೂ(ದೇವತೆಗಳನ್ನೂ)ಕಂಡರು. ದೇಹದೊಳಗಿನ ದೇವತಾಸ್ಥಾನಗಳನ್ನು ದೇವತಾಕೇಂದ್ರಗಳೆಂಬುದಾಗಿ ಹೆಸರಿಸಿದರು. ದೇಹವನ್ನು ಮೂಳೆ-ಮಾಂಸಗಳ ತಣಿಕೆಯಾಗಿ ಮಾತ್ರವೇ ನೋಡದೆ ದೇವಾಲಯವಾಗಿಯೇ ಕಂಡರು. ಅವರ ವೈಜ್ಞಾನಿಕಮತಿಯು ಆಹಾರ ಪದಾರ್ಥಗಳ ಪೌಷ್ಟಿಕಾಂಶಗಳನ್ನು ಗುರುತಿಸುವುದರ ಜೊತೆಗೆ ಅವು ದೇಹದಲ್ಲಿನ ದೈವಿಕ-ಆಧ್ಯಾತ್ಮಿಕ(ಪರಂಜ್ಯೋತಿಯನ್ನು ತಲುಪುವ ಮಾರ್ಗ) ಕೇಂದ್ರಗಳ ಮೇಲೆ ಮಾಡುವ ಪರಿಣಾಮವನ್ನೂ ಸಹ ನಿಖರವಾಗಿ ಅಳೆದು ವ್ಯಕ್ತಪಡಿಸಿತು.

ದೇವತಾ ಸಂಬಂಧ
ದೇಹದೊಳಗೆ ದೇವತಾಸಾನ್ನಿಧ್ಯವನ್ನನುಭವಿಸಿದ ಮಹರ್ಷಿಗಳು ಆಹಾರಗಳಿಗೂ ದೇವತೆಗಳಿಗೂ ಇರುವ ಸಂಬಂಧವನ್ನೂ ಕಂಡುಕೊಂಡರು. ಯಾವ ಪದಾರ್ಥವು ಯಾವ ದೇವತಾಕೇಂದ್ರವನ್ನು ತೆರೆಯಿಸುತ್ತದೆನ್ನುವುದರ ಆಧಾರದ ಮೇಲೆ ದೇವತಾನೈವೇದ್ಯಕ್ಕೆ ಆಹಾರಪದಾರ್ಥಗಳ ಆಯ್ಕೆಮಾಡಿದರು. ಉದಾಹರಣೆಗೆ ಮೂಲಾಧಾರಸ್ಥಾನದಲ್ಲಿ ಬೆಳಗುವ ಗಣೇಶನ ದರ್ಶನಕ್ಕೆ ಕಾಯಿತುರಿ, ಬೆಲ್ಲದಿಂದ ತಯಾರಿಸುವ ಕಡುಬು ಸಹಾಯಕವಾಗುತ್ತದೆಂಬುದನ್ನರಿತರು. ಆದ್ದರಿಂದ ಆತನಿಗೆ ಅದನ್ನು ನೈವೇದ್ಯಮಾಡಿ ಪ್ರಸಾದವಾಗಿ ಸ್ವೀಕರಿಸುವ ಯೋಜನೆಯನ್ನು ಅಳವಡಿಸಿದರು. ಅದನ್ನೇ "ಗಣೇಶನಿಗೆ ಪ್ರಿಯ"ವೆಂಬ ಭಾಷೆಯಿಂದ ಪೂಜಾಪದ್ಧತಿಯಲ್ಲಿ ಗುರುತಿಸಿದ್ದಾರೆ. ಅಂತೆಯೇ ಇನ್ನಿತರ ದೇವತೆಗಳ ವಿಷಯದಲ್ಲೂ ವಿಧಿಸಿರುವುದನ್ನು ಕಾಣಬಹುದಾಗಿದೆ.

ಆಹಾರ ವಿಭಾಗ  
ಆಹಾರಪದಾರ್ಥಗಳು ಸೇವಿಸುವವರಲ್ಲಿ ಯಾವ ಗುಣವನ್ನು ಪ್ರಚೋದಿಸುತ್ತವೆ ಎಂಬುದನ್ನೂ ಗುರುತಿಸಿ ಅದರ ಆಧಾರದ ಮೇಲೆ ಮಹರ್ಷಿಗಳು ಅವುಗಳನ್ನು ಸಾತ್ತ್ವಿಕ-ರಾಜಸಿಕ-ತಾಮಸಿಕ ಆಹಾರಗಳೆಂಬುದಾಗಿ ವಿಭಾಗಿಸಿದ್ದಾರೆ. ಈ ತ್ರಿಗುಣಗಳೇ ಮಾನವನ ಮನೋವೃತ್ತಿಗಳನ್ನು ನಿಯಂತ್ರಿಸುವುದರಿಂದ ಆತ್ಮಸಾಧನೆಯನ್ನು ಮಾಡುವವರಿಗೆ ಸಾತ್ವಿಕ ಆಹಾರಗಳು ಪ್ರಶಸ್ತ, ತಾಮಸಿಕ ಆಹಾರಗಳು ವರ್ಜ್ಯ; ಧೂಳಿನಲ್ಲಿ ಕೆಲಸಮಾಡುವವರಿಗೆ ಅದರಿಂದಾಗುವ ತೊಡಕಿನ ನಿವಾರಣೆಗಾಗಿ ತಾಮಸಿಕವಾದರೂ ಈರುಳ್ಳಿ ಇತ್ಯಾದಿಗಳು ಸೇವ್ಯ ಮುಂತಾದ ವಿಧಿನಿಷೇಧಗಳನ್ನೂ ಹೇಳಿರುವುದುಂಟು.  

ಆಹಾರ ಮತ್ತು ಮನಸ್ಸು
ಆಹಾರದಲ್ಲಿನ ಸ್ಥೂಲವಾದ ಭಾಗ ಮತ್ತು ಸೂಕ್ಷ್ಮವಾದ ಸಾರಭಾಗಗಳನ್ನು ಆಧುನಿಕ ವಿಜ್ಞಾನವು ತಿಳಿಸುತ್ತದೆ. ಆದರೆ ಋಷಿದೃಷ್ಟಿಯು ಇವೆರಡಲ್ಲದೆ ಸೂಕ್ಷ್ಮಾತಿಸೂಕ್ಷ್ಮವಾದ(ಅಣಿಷ್ಠ) ಒಂದಂಶವೂ ಉಂಟು, ಅದು ಮನಸ್ಸನ್ನು ಸೇರುತ್ತದೆ ಎಂಬ ಸತ್ಯವನ್ನು ಗುರುತಿಸಿತು. ಪಾಕಮಾಡುವವರ, ಬಡಿಸುವವರ ಮನೋಭಾವಗಳು ಆಹಾರದಲ್ಲಿ ಬೆರೆತು ಊಟಮಾಡುವವರ ಮನಸ್ಸನ್ನು ಸೇರಿ ಪರಿಣಾಮವನ್ನುಂಟುಮಾಡುತ್ತದೆ. ಆದ್ದರಿಂದಲೇ ಪಾಕಮಾಡುವವರು ಭಗವತ್ಸ್ಮರಣೆಯೊಂದಿಗೇ ಮಾಡಬೇಕು, ಬಡಿಸುವಾಗಲೂ ಭಗವಂತನ ಸ್ಮರಣೆಯಿಂದ ಪ್ರಸನ್ನಮನಸ್ಕರಾಗಿಯೇ ಬಡಿಸಬೇಕೆಂಬ ವಿಧಿ. ಇದು ಪಾಕಮಾಡಿ ಬಡಿಸುವವರ ಜವಾಬ್ದಾರಿಯ ಕಡೆಗೆ ಗಮನಸೆಳೆಯುತ್ತದೆ. ಈ ನಿಯಮಗಳು ಭೋಜನ ಮಾಡುವವರಿಗೂ ಅನ್ವಯಿಸುವುದೆಂಬುದರಲ್ಲಿ ಸಂಶಯವಿಲ್ಲ.

ಆಹಾರಸೇವನೆಗೆ ಬೇಕಾದ ವಸ್ತ್ರನಿಯಮ, ಸೇವನಾಕ್ರಮ ಮುಂತಾದ ಪ್ರತಿಯೊಂದಂಶದಲ್ಲೂ ಸಹ ವೈಜ್ಞಾನಿಕವಾದ ನಿಯಮಗಳನ್ನು ಮಹರ್ಷಿದೃಷ್ಟಿಯು ಸೂಚಿಸಿದೆ. ಈ ವಿಚಾರಗಳೆಲ್ಲದರ ಮರ್ಮವನ್ನೂ ಸ್ವಾನುಭವದಿಂದ ಅರಿತಿದ್ದ ಶ್ರೀರಂಗಮಹಾಗುರುಗಳು ಅವುಗಳಲ್ಲಿನ ಮರ್ಮವನ್ನು ಪ್ರಾಯೌಗಿಕವಾಗಿಯೂ ನಿರೂಪಿಸಿದ್ದರು. "ಅಡಿಗಡಿಗೆ ಭಗವತ್ಸ್ಮರಣೆಯನ್ನು ತಂದುಕೊಡುವ ಅಡುಗೆಯೇ ಅಡುಗೆ" ಎಂಬ ಅವರ ವಾಣಿಯು  ಉಲ್ಲೇಖಾರ್ಹವಾಗಿದೆ.

ದೇಹಾರೋಗ್ಯವನ್ನು ಪಡೆಯುವುದರ ಜೊತೆಗೆ ಜೀವನು ದೇವನೊಡಗೂಡಿ ನಲಿದು ಆನಂದಿಸಲೂ, ಆಧಿ(ಮನಸ್ಸಿನದೋಷ)-ವ್ಯಾಧಿ(ಶರೀರದಲ್ಲಿನದೋಷ)ಗಳ ನಿವಾರಣೆಗೂ ಪೋಷಕವಾಗುವಂತೆ ಆಹಾರಸ್ವೀಕಾರದ ಕ್ರಮವನ್ನು ವ್ಯವಸ್ಥೆಗೊಳಿಸಿದ ಮಹರ್ಷಿಗಳ ಮೇಧೆಗೂ, ಕರುಣೆಗೂ ನಮೋನಮಃ

ಸೂಚನೆ: 05/11/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.