Monday, June 8, 2020

ಯುದ್ಧದಲ್ಲಿ ಕಾರುಣ್ಯಕ್ಕೆ ಎಡೆಯಿದೆಯೇ? (Yuddhadalli Karunyakke Edeyideye?)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)
  

ಯುದ್ಧದಲ್ಲಿ ಇನ್ನೇನು ಶತ್ರು ಸಂಹಾರ ಮಾಡಿಬಿಡುವ ಹಂತ. ವೀರಯೋಧನು "ಇದೋ ನೋಡು! ನಾನು ಹೂಡಿರುವ ಬಾಣ ನಿನ್ನನ್ನು ಕೊಲ್ಲುತ್ತದೆ. ನಿನ್ನ ಇಷ್ಟ ದೇವತೆಯನ್ನು ಪ್ರಾರ್ಥಿಸಿಕೋ" ಎಂಬುದಾಗಿ  ನುಡಿಯುತ್ತಾನೆ. ಆಡಿದ ಮಾತಿನ೦ತೆಯೇ ಬಿಟ್ಟ ಬಾಣವು, ಶತ್ರುವನ್ನು ಮೃತ್ಯುಕೂಪಕ್ಕೆ ತಳ್ಳುತ್ತದೆ. ವೀರನು ಹೇಳುವ ಈ ಮಾತುಗಳು, ತನ್ನ ಸಾಮರ್ಥ್ಯದ ಮೇಲಿನ ಅಪಾರ ನಂಬಿಕೆಯೋ ಅಥವಾ ಅಹಂಕಾರದ ಮಾತುಗಳೋ ಎನಿಸುವಂತಿರುತ್ತದೆ. ಮಹಾಭಾರತ ಮುಂತಾದ ಮಹಾಕಾವ್ಯಗಳಲ್ಲಿ ಇಂತಹ ಮಾತುಗಳು ಅಲ್ಲಲ್ಲಿ ಕಾಣಸಿಗುತ್ತವೆ.  
      
ಕಾಲಿಗೆ ಒಂದು ಮುಳ್ಳು ಚುಚ್ಚಿದರೆ, ಮುಳ್ಳನ್ನು ತೆಗೆಯುತ್ತೇವೆ. ಗ್ಯಾಂಗ್ರೀನ್ ನಂತಹ ರೋಗ ಕಾಲಿನ ಬೆರಳಿಗೆ ಬಂದರೆ, ಬೆರಳು ತೆಗೆಯುವುದು ಸೂಕ್ತ. ಅದೇ ಇಡೀ ಪಾದ ಮತ್ತು ಪೂರ್ತಿ ಕಾಲಿಗೆ ಹರಡಿದರೆ, ಇಡೀ ದೇಹಕ್ಕೆ ಹರಡದಂತೆ ನಿಯಂತ್ರಿಸಲು ಕಾಲನ್ನು ಕತ್ತರಿಸುವುದು ಜಾಣತನವೆನಿಸಿಕೊಳ್ಳುತ್ತದೆ. ಹಾಗೆಯೇ ಅಧರ್ಮದ ನಡೆ ಚಿಕ್ಕದಾಗಿದ್ದಾಗ ತುಳಿಯದಿದ್ದರೆ, ಅದು ಬೆಳೆದು ಮಾನವನ ತ್ರಿಕರಣಗಳನ್ನೂ ವ್ಯಾಪಿಸಿ ಅಧರ್ಮಿಯನನ್ನಾಗಿ ಮಾಡಿಬಿಡುತ್ತದೆ. ಅಂತಹ ಅಧರ್ಮಿಯು ರಾಜನಾದರೆ ಪ್ರಜೆಗಳ ಗತಿಯೇನು? ಧರ್ಮಕ್ಕೆ ಆ ರಾಜ್ಯದಲ್ಲಿ ಜಾಗವೆಲ್ಲಿ?

ಹಿಂದಿನ ಕಾಲದಲ್ಲಿ ಯುದ್ಧವು ಸಾಮ್ರಾಜ್ಯ ವಿಸ್ತಾರಕ್ಕಾಗಲೀ, ಸಾಮರ್ಥ್ಯ ಪ್ರದರ್ಶನಕ್ಕಾಗಲೀ ಅಥವಾ ಧನಕನಕ ವೃದ್ಧಿಗಾಗಲೀ ಅಷ್ಟೇ ಅಲ್ಲದೆ, ಪ್ರಮುಖವಾಗಿ ಧರ್ಮ ಸಂಸ್ಥಾಪನೆಗಾಗಿ ನಡೆಯುತ್ತಿತ್ತು. ಧರ್ಮಹೀನನ ಅಥವಾ ಅಧರ್ಮಿ ರಾಜನ ಮೇಲೆ ಧರ್ಮಿಷ್ಠನಾದ ರಾಜ, ಯುದ್ಧ ಸಾರುತ್ತಿದ್ದ. ಇಡೀ ದೇಹದಲ್ಲಿ ಅಧರ್ಮವನ್ನೇ ತುಂಬಿಕೊಂಡು, ಲೋಕಕಂಟಕನಾಗಿರುವ ವ್ಯಕ್ತಿಯ, ಪ್ರವೃತ್ತಿಯನ್ನು ತಿದ್ದುವುದು ಬಹಳ ಕಷ್ಟದ ಕೆಲಸ. ತ್ರಿಕರಣಪೂರ್ವಕವಾಗಿ ಕೆಟ್ಟದ್ದನ್ನೇ ಮಾಡುವ ಆಶಯವಿದ್ದರೆ, ಅಂತಹ ಕೆಲಸಗಳಿಂದ ಈ ಜನ್ಮದಲ್ಲಿ, ವಿಷಮವಾದ ಪಾಪಗಳನ್ನು ಕಟ್ಟಿಕೊಳ್ಳುವ ಬದಲು, ಮುಂದಿನ ಜನ್ಮದಲ್ಲಾದರೂ ಉತ್ಕೃಷ್ಟ ಸಂಸ್ಕಾರ ಸಿಕ್ಕಿ, ಉದ್ಧಾರವಾಗಲಿ ಎಂಬುದು ಜ್ಞಾನಿಗಳ ಆಶಯ. "ಮುಳ್ಳುಗಳು, ಶರಣಾಗತರಾಗಿದ್ದೇವೆ. ಪಾದಸೇವೆ ಮಾಡುತ್ತೇವೆಂದರೆ, ಇರಲಿ ಎಂದು ಬಿಡುವುದು ಕಾಲಿಗೆ ಅಪಾಯ. ಆದ್ದರಿಂದ ಧರ್ಮ ಉಳಿಸಲು ಧರ್ಮಕಂಟಕರನ್ನು ಅಳಿಸಲೇಬೇಕು" ಎಂಬುದಾಗಿ ಶ್ರೀರಂಗ ಮಹಾಗುರುಗಳು ಎಚ್ಚರಿಸುತ್ತಿದ್ದರು. ಹಾಗಾಗಿ ಸಂಹಾರ ಅನಿವಾರ್ಯ.

ಪ್ರಾಣ ಹೋಗುವ ಮುನ್ನ ಜೀವ ಏನು ಬಯಸುತ್ತದೋ, ಅದು ಜೀವಿಯ ಮುಂದಿನ ಜನ್ಮದ ಯೋನಿಗೆ ದಾರಿಯಾಗುತ್ತದೆ. ಹಾಗಾಗಿ ಕೊಲ್ಲುವ ಮುನ್ನ, ಶತ್ರುವಿಗೆ "ಈ ಬಾಣದಿಂದ ಹತನಾಗುವೆ" ಎಂಬ ಎಚ್ಚರಿಕೆ ನೀಡಿ, ಇಷ್ಟದೇವರ ಪ್ರಾರ್ಥನೆಗೆ ಅವಕಾಶ ನೀಡುವುದು ವೀರರ ಲಕ್ಷಣ. ಯುದ್ಧದ ನಿಯಮಗಳಲ್ಲೊಂದು. ಹಾಗೆಯೇ ಭಯದಿಂದಿರುವ, ನಿಶಸ್ತ್ರನಾದ ಮತ್ತು ಶರಣಾಗತನಾದ ಶತ್ರುವನ್ನು ಕೊಲ್ಲುವ ಹಾಗಿಲ್ಲ ಎಂಬ ನಿಯಮವೂ, ಇದೇ ಆಶಯದಿಂದ ಕೂಡಿದೆ.  ಬಿಲ್ವಿದ್ಯಾ ಪಾರಂಗತರಿಗೆ, ಯಾವ ಮರ್ಮಸ್ಥಾನಕ್ಕೆ ಹೊಡೆದರೆ, ಜೀವವು ಅನಾಯಾಸವಾಗಿ ಮತ್ತು ಉದ್ಧಾರವಾಗುವಂತೆ ಪ್ರಾಣ ತ್ಯಜಿಸುತ್ತದೆ ಎಂಬ ಅರಿವಿರುತ್ತಿತ್ತು. ಆದ್ದರಿಂದಲೇ ಭೀಷ್ಮಾರ್ಜುನರ ಬಾಣದಿಂದ ಹತರಾಗಬೇಕು, ಎಂಬ ಆಶಯದಿಂದ ಇದ್ದವರನ್ನು ಮಹಾಭಾರತದಲ್ಲಿ ಕಾಣುತ್ತೇವೆ. ಇದು ಭಾರತೀಯ ವಿದ್ಯೆಗಳಲ್ಲೊಂದಾದ ಬಿಲ್ವಿದ್ಯೆಯ ವೈಶಿಷ್ಟ್ಯವೂ ಹೌದು. ಹೀಗಾಗಿ ಹಿಂಸೆಯೇ ಪ್ರಧಾನ ಎಂಬುದಾಗಿ ಮೇಲ್ನೋಟಕ್ಕೆ ಕಂಡರೂ, ಧರ್ಮದ ರಕ್ಷಣೆ ಮತ್ತು ಜೀವಿಯ ಮೇಲಿನ ಕರುಣೆ, ಯುದ್ಧದ ಭಾಗವಾಗಿದೆ ಎಂದು ತಿಳಿದಾಗ ಮಹರ್ಷಿಗಳು ಕೊಟ್ಟ ಯುದ್ಧ ನಿಯಮಗಳು ಮತ್ತು ಧರ್ಮ ರಕ್ಷಣೆಯ ಚಿಂತನೆ ಎಷ್ಟು ಸೊಗಸಾಗಿದೆ ಎನಿಸುತ್ತದಲ್ಲವೇ?  

ಸೂಚನೆ: 8/06/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.