ಲೇಖಕರು: ಡಾII ನಂಜನಗೂಡು ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)
ಕರುಣರಸವು ಶ್ರೀಮದ್ರಾಮಾಯಣದಲ್ಲಿ ಹಾಸುಹೊಕ್ಕಾಗಿರುವುದನ್ನು ನಾವು ಕಾಣಬಹುದು. ಮಕ್ಕಳಿಲ್ಲದ ದಶರಥನ ವಿಲಾಪ, ಕೈಕೇಯಿಯ ವರದ ಕಾರಣ ದಶರಥನಾದಿಯಾಗಿ ಪೌರರೆಲ್ಲರ ಗೋಳಾಟ, ಸೀತಾಪಹರಣವಾದಾಗ ಶ್ರೀರಾಮಚಂದ್ರನ ಅಸಹಾಯಕತೆ, ಶ್ರೀರಾಮನಿಲ್ಲದೆ ಸೀತೆ ಪರಿತಪಿಸಿದ್ದು, ಶಕ್ತ್ಯಾಯುಧವು ಲಕ್ಷ್ಮಣನನ್ನು ಕೆಳಕ್ಕುರುಳಿಸಿದಾಗ ಶ್ರೀರಾಮನ ಚೀತ್ಕಾರ, ಅಗ್ನಿಪರೀಕ್ಷೆಯ ವೇಳೆಯಲ್ಲಿನ ಸಂತಾಪ, ಸೀತಾಪರಿತ್ಯಾಗ, ಶಂಬೂಕ ವಧೆಗಾಗಿ ಜನಸ್ಥಾನಕ್ಕೆ ಬಂದ ಶ್ರೀರಾಮ, ಸೀತೆಯೊಡನೆ ಕಳೆದ ದಿನಗಳನ್ನು ನೆನಪಿಸಿಕೊಂಡು ಪರಿತಪಿಸಿದ್ದು –ಹೀಗೆ ಅನೇಕ ಸಂದರ್ಭಗಳಲ್ಲಿ ಕಾರುಣ್ಯರಸವು ಉಕ್ಕಿ ಹರಿದಿರುವುದನ್ನು ನೋಡುತ್ತೇವೆ.
ವನವಾಸದಲ್ಲಿ ಸೀತೆಯೊಡನೆ ವಿಹರಿಸುತ್ತಿದ್ದ ಶ್ರೀರಾಮ, ಬಳಲಿ ಸೀತೆಯ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತಾನೆ. ಕಾಗೆಯ ರೂಪದಲ್ಲಿ ಅಲ್ಲಿಗೆ ಬಂದ ಇಂದ್ರನ ಮಗ ಜಯಂತ, ಸೀತಾರಾಮರನ್ನು ಶ್ರೀಸಾಮಾನ್ಯರೆಂದು ಪರಿಗಣಿಸಿ, ಸೀತೆಯ ವಕ್ಷಸ್ಥಳವನ್ನು ತನ್ನ ಕೊಕ್ಕಿನಿಂದು ಕೊಕ್ಕಿ ಅಪಚಾರವೆಸಗುತ್ತಾನೆ. ನಿದ್ರೆಯಿಂದೆಚ್ಚೆತ್ತ ಶ್ರೀರಾಮನು, ವಿಷಯವನ್ನು ತಿಳಿದು, ಕೋಪಗೊಂಡು, ಅಲ್ಲಿಯೇ ಇದ್ದ ದರ್ಭೆಯಲ್ಲಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ, ಕಾಗೆಯ ಮೇಲೆ ಪ್ರಯೋಗಿಸುತ್ತಾನೆ. ಮೂರೂ ಲೋಕಗಳಲ್ಲೂ ರಕ್ಷಣೆ ಸಿಗದ ಕಾಕ ಮತ್ತೆ ರಾಮನಲ್ಲೇ ಶರಣುಹೊಂದುತ್ತಾನೆ. ಅಪಚಾರವೆಸಗಿದ್ದರೂ ಶ್ರೀರಾಮನು ಅತ್ಯಂತ ಕರುಣೆಯಿಂದ ಕಾಗೆಯನ್ನು ಕ್ಷಮಿಸಿ, ಕಾಪಾಡುತ್ತಾನೆ.
ಅಶೋಕವನದಲ್ಲಿ ಸೀತೆಯನ್ನು ಸಂತೈಸಿ ಮಾತನಾಡುತ್ತಾ ಹನುಮಂತನು ಶ್ರೀರಾಮನ ಪರಿಸ್ಥಿತಿಯನ್ನು ವಿವರಿಸುತ್ತಾ ' ನಿನ್ನ ಶೋಕದಲ್ಲಿ ಮುಳುಗಿರುವ ಶ್ರೀರಾಮನಿಗೆ ನಿದ್ರೆಯೇ ಬಾರದಾಗಿದೆ. ತನ್ನನ್ನೇ ತಾನು ಮರೆಯುತ್ತಾನೆ. ತನ್ನ ದೇಹವನ್ನು ಕಚ್ಚುವ ಸೊಳ್ಳೆಗಳನ್ನಾಗಲೀ, ಕೀಟಗಳನ್ನಾಗಲೀ, ಚೇಳುಗಳನ್ನಾಗಲೀ ತನ್ನ ದೇಹದಿಂದ ಓಡಿಸುವುದಿಲ್ಲ' ಎಂದು ಹೇಳುತ್ತಾನೆ.
ಮಹಾಕವಿ ಕಾಳಿದಾಸ ಸೀತಾ ಪರಿತ್ಯಾಗವನ್ನು ಮಾಡಿದ ಶ್ರೀರಾಮನನ್ನು ವರ್ಣಿಸುತ್ತಾ 'ಶ್ರೀರಾಮನು ಲೋಕಾಪವಾದ ಭಯದಿಂದಷ್ಟೇ ಸೀತೆಯನ್ನು ಮನೆಯಿಂದ ಕಳುಹಿಸಿದನೇ ಹೊರತು ತನ್ನ ಮನದಿಂದಲ್ಲ' ಎಂದು ಹೇಳುತ್ತಾನೆ.
ಶಂಬೂಕ ವಧೆಯಾದ ನಂತರ ಜನಸ್ಥಾನಕ್ಕೆ ಬಂದ ಶ್ರೀರಾಮ, ಸೀತೆಯೊಡನೆ ಕಳೆದ ತನ್ನ ಸುಖದಿನಗಳನ್ನು ಜ್ಞಾಪಿಸಿಕೊಂಡು, ದೇವಯಜನಸಂಭವೆಯಾದ ಸೀತೆಯನ್ನು ನೆನೆದು ಪರಿತಪಿಸುವುದನ್ನು ಭವಭೂತಿಯು ತನ್ನ ಉತ್ತರರಾಮಚರಿತೆಯಲ್ಲಿ ಚಿತ್ರಿಸಿದ್ದಾನೆ. ಆ ಹೃದಯದ್ರಾವಕವಾದ ಸನ್ನಿವೇಶವನ್ನು ಕಂಡ 'ಮಹಾತ್ಮರ ಮನಸ್ಸನ್ನು ಯಾರು ತಾನೇ ಅರಿಯಲು ಸಾಧ್ಯ? ಅದು ವಜ್ರಕ್ಕಿಂತಲೂ ಕಠೋರ ಮತ್ತು ಕುಸುಮಕ್ಕಿಂತಲೂ ಮೃದು'ವೆಂಬ ವನದೇವತೆಗಳ ಮಾತು ಎಷ್ಟು ನೈಜ!. ಭಗವಂತನ ಗುಣಗಳಲ್ಲಿ ಕರುಣೆ ಎಂಬುದು ಅತ್ಯಮೂಲ್ಯ ಗುಣವಾಗಿದೆ ಎಂಬ ಶ್ರೀರಂಗ ಮಹಾಗುರುಗಳ ವಚನವನ್ನು ಇಲ್ಲಿ ಸ್ಮರಿಸಬಹುದು.