Sunday, June 7, 2020

ಧ್ಯೇಯ ಸಾಧನೆಯ ಹುಚ್ಚು ಹಿಡಿಯಲಿ (Dhyeya Sadhaneya Huccu hidiyali)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ lekhana@ayvm.in)

  

ಅವನೊಬ್ಬ ಹನ್ನೆರಡು ವರ್ಷದ ಬಾಲಕ. ಅವನ ತಂದೆ ಆಕ್ರಮಣಕಾರೀ ಮೊಗಲ್ ಬಾದಶಹ ಅದಿಲ ಶಾ ನ ಒಬ್ಬ ಸಾಮಂತ ಸರದಾರ. ಈ ಮಗುವನ್ನು ಬಾದಶಹನಿಗೆ ಮುಜರೆ ಸಲ್ಲಿಸಲು ಬಿಜಾಪುರದ ದರಬಾರಿಗೆ ಕರೆದೊಯ್ಯುತ್ತಾನೆ. ದರಬಾರಿನಲ್ಲಿ ಎಲ್ಲರೂ ಬಾದಶಹನ ಸಿಂಹಾಸನದೆಡೆಗೆ ತಲೆಬಾಗಿ ಮೂರು ಬಾರಿ ಕುರ್ನಿಸಾತ್ ಮಾಡಿ ಕುಳಿತುಕೊಳ್ಳುತ್ತಿದ್ದರು. ಇವನ ತಂದೆಯ ಸರದಿಯೂ ಆಯಿತು. ಈಗ ಈ ಬಾಲಕನ ಸರದಿ. ತಂದೆಯು "ಮಗು, ಬೇಗ ಮುಜರೆ ಸಲ್ಲಿಸು ಮಹಾರಾಜರಿಗೆ ಕುರ್ನಿಸಾತ್ ಮಾಡು" ಎಂದು ಅನೇಕಬಾರಿ ಹೇಳಿ ನೋಡಿದರು. ಆದರೆ ಹುಡುಗ ನೇರವಾಗಿ ನಿಂತಿದ್ದ. ತಂದೆಯನ್ನು ನೋಡಿ "ನಿಮಗೆ, ತಾಯಿಗೆ, ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ, ಆದರೆ ಈ ಆಕ್ರಮಣಕಾರ, ನಮ್ಮ ಸಂಸ್ಕೃತಿಯನ್ನು ವಿನಾಶಗೈಯಲು ಬಂದ ಈ ಪರಕೀಯನಿಗೆ ಎಂದೂ ತಲೆಬಾಗೆನು" ಎಂದುಬಿಟ್ಟನು. 

ಈ ಬಾಲಕನೇ ಮುಂದೊಂದು ದಿನ ಇಡೀ ಮೊಗಲ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗುತ್ತಾನೆ ಎಂಬುದರ ಅರಿವು ಆಗ ಆ ಬಾದಶಹನಿಗೆ ಆಗಿರಲಿಲ್ಲ. ಆ ಧೀರ ಬಾಲಕನೇ ಈ ದೇಶದ ಆದರ್ಶ ಪುರುಷ ಛತ್ರಪತಿ ಶಿವಾಜಿ ಮಹಾರಾಜರು. ಶಿವಾಜಿ ಇದ್ದ ಕಾಲವಾದರೂ ಎಂತಹದು! ಸುತ್ತಲೂ ಸನಾತನ ಧರ್ಮ ಸಂಸ್ಕೃತಿಯ ಶತ್ರುಗಳು. ನಮ್ಮ ದೇಶದ ರಾಜರೆಲ್ಲರಿಗೂ ಪರಸ್ಪರ ವೈಮನಸ್ಯ. ಸಣ್ಣ ಸಣ್ಣ ಕುಟುಂಬದ ಸಮಸ್ಯೆಗಳಿಗಾಗಿ ಒಬ್ಬರನ್ನೊಬ್ಬರು ಬಲಿಕೊಡಲು ಸಿದ್ಧರಿದ್ದ ಆತಂಕಕಾರಿ ಮಾನಸಿಕತೆ. ಸ್ವತಃ ಶಿವಾಜಿಯ ತಂದೆಯೇ ಅನಿವಾರ್ಯವಾಗಿ ಮೊಗಲರ ಸರದಾರ. ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ನಮ್ಮ ಧರ್ಮ ರಕ್ಷಣೆ, ನಮ್ಮ ಅಸ್ಮಿತೆಯ ಸ್ಥಾಪನೆ ಸ್ವರಾಜ್ಯದ ಘೋಷಣೆ ಕನಸಿನ ಮಾತಾಗಿತ್ತು. ಅರೆಬೆತ್ತಲೆ ಮಾವಳಿ ಜನಾಂಗವನ್ನು ಸಂಘಟಿಸಿ ಅವರಿಗೆ ಅರ್ಥವಾಗುವಂತೆ ದೇಶ, ಧರ್ಮಗಳ, ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ತಿಳಿಹೇಳಿ ಅದಕ್ಕಾಗಿ ಅವರ ಜೀವನವನ್ನೇ ಮುಡುಪಿಡುವ ಸಂಕಲ್ಪವನ್ನು ಅವರೆಲ್ಲ ಮಾಡುವಂತೆ ಅವರನ್ನು ತಯಾರು ಮಾಡಲು ಎಂತಹ ದೂರದೃಷ್ಟಿ, ಧೈರ್ಯ ಇರಬೇಕು! ಇಂತಹ ನಿಷ್ಠಾವಂತರ ಸೈನ್ಯವನ್ನೇ ನಿರ್ಮಿಸಿ ನಮ್ಮ ಧರ್ಮ ಸಂಸ್ಕೃತಿಗಳನ್ನು ಕಾಪಾಡಿದ ಶ್ರೇಯಸ್ಸು ಶಿವಾಜಿಯದು. ಶ್ರೀರಂಗ ಮಹಾಗುರುಗಳು ತಿಳಿಸಿದಂತೆ -"ಧರ್ಮಕ್ಕಾಗಿ ತಪಸ್ಯೆ ಮಾಡಿದ ಭೂಮಿ ಭಾರತ. ಧರ್ಮಚ್ಯುತರಾಗುವ ಬದಲು ಹತರಾದರೂ ಪರವಾಗಿಲ್ಲ ಎಂಬ ಸತ್ಯಸಂಗರವನ್ನು ಹೊಂದಿದ ನಾಡಿದಾಗಿದೆ" ಈ ಸತ್ಯಾರ್ಥವನ್ನು ಅಕ್ಷರಶಃ ಪಾಲಿಸಿ ಜೀವನದುದ್ದಕ್ಕೂ ಕಷ್ಟ ಪರಂಪರೆಯನ್ನೇ ಎದುರಿಸಿ ತಾನು ಸಂಕಲ್ಪಿಸಿದ ಸ್ವರಾಜ್ಯ, ಸನಾತನ ಧರ್ಮ ರಕ್ಷಣೆ, ಸ್ವಾತಂತ್ರ್ಯ ಎಲ್ಲವನ್ನೂ ಶಿವಾಜಿ ಸಾಧಿಸಿ ತೋರಿಸಿದ್ದು ಈಗ ವೈಭವದ ಇತಿಹಾಸ.

ಎಂತಹ ವಿಷಮ ಪರಿಸ್ಥಿತಿಯಲ್ಲೂ ತಮ್ಮ ಜೀವನ ಧ್ಯೇಯವನ್ನು ಮರೆಯದೇ ಸಾಧಿಸುವ ಛಲ ಹಾಗೂ ಸಾಧಿಸಲೇಬೇಕಂಬ ಹುಚ್ಚು ಇರುವವರೇ ಚರಿತ್ರೆಯನ್ನು ನಿರ್ಮಾಣ ಮಾಡಬಲ್ಲರು. ಶಿವಾಜಿಯ ಜೀವನ ಇದಕ್ಕೊಂದು ಸಾಕ್ಷಿ. ನಾವು ನಮ್ಮ ಜೀವನದ ಸಣ್ಣ ಸಣ್ಣ ಸೋಲುಗಳಿಗೆ ಹತಾಶರಾಗುತ್ತೇವೆ. ನಮಗೆ ಕಣ್ಣು ಕತ್ತಲಿಡುತ್ತದೆ. ಅದಿಲ್ಲದೇ ಶಿವಾಜಿಯಂತೆ ಪರಿಸ್ಥಿತಿ ಏನೇ ಇರಲಿ. ನಾವೆಲ್ಲರೂ, ಈ ದೇಶದ ಋಷಿ ಮುನಿಗಳು ಕಂಡರುಹಿದ ಸನಾತನವಾದ ಲೋಕದ ನೆಮ್ಮದಿಗೆ ಕಾರಣವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಬೆಳಗಿಸುವ ಸಂಕಲ್ಪ ಮಾಡುವಂತಾದರೆ ಮಾತ್ರವೇ ನಾವು ನಮ್ಮೆಲ್ಲ ಪೂರ್ವಜರ ವಾರಸುದಾರರಾಗುತ್ತೇವೆ.

ಸೂಚನೆ: 16/05/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.