Monday, June 8, 2020

ಸ್ಮರಣೆ- ನಾರಾಯಣಸ್ಮರಣೆ - ನಾರಾಯಣನಾಮಸ್ಮರಣೆ (Smarane- Narayanasmarane - Narayananamasmarane)

ಲೇಖಕರು: ಶ್ರೀಮತಿ. ಮೈಥಿಲೀ ರಾಘವನ್. 
 (ಪ್ರತಿಕ್ರಿಯಿಸಿರಿ lekhana@ayvm.in)


  
ಒಮ್ಮೆ ಶ್ರೀರಂಗಮಹಾಗುರುಗಳ ಬಳಿಗೆ ಶಿಷ್ಯರೊಬ್ಬರು ಯೋಗಶಾಸ್ತ್ರದ ಪಾಠಕ್ಕಾಗಿ ಬಂದರು. ಪಾಠದಲ್ಲಿ ಪ್ರಾಣಾಯಾಮದ ಮಹತ್ತ್ವವನ್ನು ತಿಳಿಸುವುದರ ಜೊತೆಗೆ ಅದು ಎಷ್ಟು ದುಸ್ತರವಾದ ಮಾರ್ಗವೆಂಬುದನ್ನೂ ಶ್ರೀಗುರುವು ತಿಳಿಸಿದರು. ಆಗ ಶಿಷ್ಯರು  "ಭಗವಂತನನ್ನು ಪಡೆಯಲು ಇಷ್ಟು ಕಷ್ಟಕರವಾದ ಮಾರ್ಗವನ್ನು ಆಶ್ರಯಿಸುವುದರ ಬದಲು ಹರಿಕಥೆದಾಸರು ಹೇಳಿದ ಸುಲಭೋಪಾಯವೇ ಮೇಲಲ್ಲವೇ? ಅವರು ಕಲಿಯುಗದಲ್ಲಿ ಭಕ್ತಿಯಿಂದ ನಾರಾಯಣಸ್ಮರಣೆ ಮಾಡಿದರೆ ಸಾಕು, ಮುಕ್ತಿ ಸಿಗುತ್ತದೆ ಎಂದರಲ್ಲ?" ಎಂದು   ಗುರುವಿನಲ್ಲಿ ನಿವೇದಿಸಿಕೊಂಡರು. ಇದಕ್ಕೆ ಉತ್ತರವಾಗಿ ಶ್ರೀಗುರುವು ನೀಡಿದ ವಿವರಣೆಗಳು ಲೋಕದ ಕಣ್ತೆರೆಸುವ ಅದ್ಭುತ ಪಾಠವಾಗಿದೆ. ಆ ವಿವರಗಳ ಸಾರಾಂಶವನ್ನು ಈ ಕೆಳಗೆ ಸ್ಮರಿಸಿಕೊಳ್ಳುತ್ತೇವೆ.  
'ಭಕ್ತಿಯಿಂದ ನಾರಾಯಣಸ್ಮರಣೆ' - ಇದು ಅಷ್ಟೇನೂ ಸುಲಭವಲ್ಲ. "ಅನುಭೂತವಿಷಯಾಸಮ್ಪ್ರಮೋಷಃ  ಸ್ಮೃತಿ:" ಎಂದು ಯೋಗಶಾಸ್ತ್ರವು ಸಾರುವಂತೆ ಅನುಭವಿಸಿದ ವಿಷಯವು ಕಸಿಯಲ್ಪಡದೆ ಇರುವುದೇ ಸ್ಮೃತಿ. ಉದಾಹರಣೆಗೆ ಒಬ್ಬ ವ್ಯಕ್ತಿಯು ಅಂಬೊಡೆಯನ್ನು ಆಸ್ವಾದಿಸಿ ತಿಂದರೆ ಆ ಅನುಭವವು  ಆತನ ಬುದ್ಧಿಯಲ್ಲಿ  ವಾಸನಾ(ಸಂಸ್ಕಾರ)ರೂಪದಲ್ಲಿ  ಮುದ್ರಿತವಾಗುತ್ತದೆ. ಅದರ ಮೇಲೆ ಇನ್ನಿತರ ಸಂಸ್ಕಾರಗಳೂ ಸೇರುತ್ತವೆ. ಅವುಗಳ ಮಧ್ಯದಿಂದ ವಡೆಯ ಅನುಭವವನ್ನು ಬುದ್ಧಿಯು ಜಾಗೃತಗೊಳಿಸಿಕೊಂಡಾಗ ಅದನ್ನು 'ವಡೆಯ ಸ್ಮರಣೆ'ಯೆನ್ನ ಬಹುದು.

ಅಂತೆಯೇ ನಾರಾಯಣಸ್ಮರಣೆ ಎಂದರೆ ನಾರಾಯಣನನ್ನು ಕಂಡು ಅನುಭವಿಸಿ ಆ  ಅನುಭವವನ್ನು ಮತ್ತೆ ಜಾಗೃತಗೊಳಿಸಿಕೊಳ್ಳುವುದು. ನಾರಾಯಣನನ್ನು ಕಂಡವರು ಮಾತ್ರವಲ್ಲವೇ ಆತನ ಸ್ಮರಣೆ ಮಾಡಬಲ್ಲರು? ಎಂದು ಪ್ರಶ್ನಿಸಿದಾಗ ಶಿಷ್ಯರಿಗೆ ನಾರಾಯಣಸ್ಮರಣೆಯು ಅತಿ ಕಷ್ಟಕರವೆಂಬುದು ಖಚಿತವಾಯಿತು.

ಇನ್ನು ಭಕ್ತಿಯಿಂದ ಸ್ಮರಣೆ!  ಭಕ್ತಿಗೆ ಶ್ರೀ ಗುರುವು ನೀಡಿದ ಅರ್ಥವೆಂದರೆ ಅದು ವಿಭಕ್ತಿಯ ವಿರುದ್ಧಪದ. ಅಂದರೆ ಬೇರೆಯಾಗಿರದೆ ಒಂದಾಗಿರುವುದು - ಭಗವಂತನೊಡನೆ ಮನಸ್ಸು ಒಂದಾಗುವುದು. ಅವನನ್ನೇ ನೆನೆದು ಅವನ ತಾದಾತ್ಮ್ಯವನ್ನು ಸಾಧಿಸುವುದು. ಅದು ಸುಲಭವೇ?! ಅಂತಹ  ಭಕ್ತಿಯು ಖಂಡಿತವಾಗಿಯೂ ಸುಲಭವಲ್ಲ.

ಶಿಷ್ಯರು ಈಗ ಮತ್ತೊಂದು ವಾದವನ್ನು ಮಂಡಿಸುತ್ತಾರೆ.
"ಕಲಿಯುಗದಲ್ಲಿ ಸುಲಭವಾಗಿ ಮುಕ್ತಿಪಡೆಯಲು ಭಗವಂತನ ನಾಮಸ್ಮರಣೆ ಒಂದೇ ಸಾಕೆನ್ನುತ್ತಾರಲ್ಲ? ಭಗವಂತನ ನಾಮವನ್ನು ಶ್ರದ್ಧೆಯಿಂದಲೋ ಅಶ್ರದ್ಧೆಯಿಂದಲೋ  ಹೇಗೆ  ಸೇವಿಸಿದರೂ ಅದು ಪಾಪಪರಿಹಾರಮಾಡುತ್ತದೆ" ಎಂಬ ಮಹಾತ್ಮರ ಮಾತನ್ನು ನೆನಪಿಸಿ, ಅದನ್ನು ಪುಷ್ಟಿಕರಿಸಲು ಅಜಾಮಿಳನ ಕಥೆಯನ್ನು ಸ್ಮರಿಸಿಕೊಳ್ಳುತ್ತಾರೆ. ಬೆಂಕಿಯು ತಿಳಿದೋ -ತಿಳಿಯದೆಯೋ ಹೇಗೆ ಮುಟ್ಟಿದರೂ ಸುಟ್ಟೆಸುಡುವುದಲ್ಲವೇ? "ನಾರಾಯಣನಾಮವನ್ನು ಸಂಕೇತಕ್ಕಾಗಲಿ, ವಿನೋದಕ್ಕಾಗಲಿ ಅವಹೇಳನದಿಂದಾಗಲಿ ಯಾವ ಕಾರಣದಿಂದಲಾದರೂ ಹೇಳಿದರೇ, ಕೆಳಿದರೆ  ಸರ್ವಪಾಪಗಳೂ ಪರಿಹಾರವಾಗುತ್ತವೆ  ಎಂದು ಭಾಗವತವೂ  ಹೇಳುತ್ತದೆಯಲ್ಲವೇ?" ಎಂದರು.

ಈ ವಾದವನ್ನು ಖಂಡಿತವಾಗಿಯೂ ಒಪ್ಪುವರೆಂಬ ಭರವಸೆಯಿಂದ ಕೂಡಿದ್ದ ಶಿಷ್ಯರಿಗೆ ಮತ್ತೆ ಅನಿರೀಕ್ಷಿತ ಪ್ರತಿಕ್ರಿಯೆ!

ಶ್ರೀಗುರುವು ಬೆಂಕಿಯ ಉದಾಹರಣೆಗೆ "ವ್ಯಾಧಿಯು ಔಷಧಿಯನ್ನು  ಸೇವಿಸಿದಾಗಮಾತ್ರವೇ ನೀಗುವುದು,  ಔಷಧಿಶಬ್ದದ ಉಚ್ಚಾರಣೆಯಿಂದಲ್ಲ" ಎಂಬ  ಶಂಕರಭಾಗವತ್ಪಾದರ ಮಾತನ್ನು ಪ್ರತ್ಯುದಾಹರಣೆಯನ್ನಾಗಿ ಮುಂದಿಟ್ಟರು. ಆದ್ದರಿಂದ ಬರಿ ಉದಾಹರಣೆಗಳಿಂದಲೇ ಯಾವುದೇ ವಿಷಯವನ್ನು ಸ್ಥಾಪಿಸವುದು ಸರಿಯಲ್ಲ ಎಂಬುದನ್ನು ಸ್ಪಷ್ಠಪಡಿಸಿದರು.

ವ್ಯಾಖ್ಯಾನವನ್ನು ಮುಂದುವರಿಸುತ್ತ,  ನಾರಾಯಣಶಬ್ದಕ್ಕೆ ಅನೇಕ ಅರ್ಥಗಳಿದ್ದರೂ ಒಟ್ಟಾರೆ  ಅದು ಪರಮಾತ್ಮನನ್ನೇ ಸೂಚಿಸುತ್ತದೆ ಎಂಬುದನ್ನು ತಿಳಿಯ ಪಡಿಸಿದರು.   ಶಬ್ದವು ಉಚ್ಚಾರಣಾಕ್ರಮವನ್ನು ಅನುಸರಿಸಿ ಅರ್ಥವನ್ನು ಪಡೆಯುತ್ತದೆ ಎನ್ನುವುದನ್ನು ಸ್ಪಷ್ಠಪಡಿಸುತ್ತಾರೆ. ತಮ್ಮ ಬಂಧುಗಳೊಬ್ಬರು ವಾತರೋಗದಿಂದ ನರಳುತ್ತಿದ್ದಾಗ ಅವರು 'ನಾರಾಯಣ' ಎಂದರೆ ಅದಕ್ಕೆ  'ನೋವಿಗೆ ಎಣ್ಣೆ ಹಚ್ಚು' ಎಂಬರ್ಥವಾಗುತ್ತಿತ್ತು ಎಂದರು. ಕಳ್ಳನೊಬ್ಬ ಮನೆಬಾಗಿಲಲ್ಲಿ ನಿಂತು ಭಿಕ್ಷೆಬೇಡಲು 'ನಾರಾಯಣ' ಎಂದರೆ ಅದರ ಅರ್ಥ 'ಕಳ್ಳತನ', ಅಷ್ಟೇ! ಲೋಕವ್ಯವಹಾರದಲ್ಲಿ  ಒಬ್ಬನನ್ನು 'ನಾರಾಯಣ' ಎಂದರೆ ಅದು  ವ್ಯಾವಹಾರಿಕವಾದ  ಸಂಜ್ಞಾರ್ಥವಷ್ಟೇ.    

ಆದರೆ ಬ್ರಹ್ಮಜ್ಞಾನಿಯೊಬ್ಬ ನಾರಾಯಣಶಬ್ದವನ್ನು ಹೇಳಿದಾಗ ಅಲ್ಲಿ ಮೂಡಿಬರುವ ಭಾವ, ಶ್ರುತಿ, ಧ್ವನಿಗಳೆಲ್ಲವೂ ಕೂಡ ವಿಶಿಷ್ಟವಾಗಿರುತ್ತವೆ. ಅದು ಪರಬ್ರಹ್ಮವನ್ನು ಸೂಚಿಸುವ ಶಬ್ದವಾಗುತ್ತದೆ. ಅಂತಹವರಿಗೆ ಮಾತ್ರವೇ ನಾರಾಯಣ ನಾಮಸ್ಮರಣೆಯಿಂದ ಮುಕ್ತಿ ದೊರಕುವುದು. ದುಷ್ಕೃತ್ಯಕ್ಕೆ ಅದನ್ನು ಬಳಸುವವರು  ದಂಡನೆಗೆ ಮಾತ್ರವೇ ಅರ್ಹರಾಗುತ್ತಾರೆ.

ಈ ಪ್ರಸಂಗದಲ್ಲಿ ತಮಾಷೆಯಾಗಿ ಶ್ರೀಗುರುವು ಹೀಗೆಂದರು - "ಹೇಗೆ ಹೇಳಿದರೂ  ಮುಕ್ತಿದೊರಕುವುದಾದರೆ ಶಾಲಾಕಾಲೇಜುಗಳ ಮೇಷ್ಟ್ರುಗಳೇ ಮುಕ್ತಿಗೆ ಅರ್ಹರಾಗುತ್ತಾರಪ್ಪ! ಅವರು ನಿತ್ಯವೂ  ಅಟೆಂಡೆನ್ಸ್  ಕೂಗುವಾಗ ಸಾಮಾನ್ಯವಾಗಿ ಎಲ್ಲ ಹೆಸರುಗಳೂ  ದೇವರ ಹೇಸುರುಗಳೇ! ನೇಮನಿಷ್ಠೆಗಳಿಂದ  ತಪಸ್ಸು ಮಾಡುವವಗಿಂತಲೂ ಇವರದೇ  ಸುಖದ ದಾರಿ ಎಂದಾದರೆ ಅದೆಷ್ಟು ವಿಪರ್ಯಾಸ?!"

ಈ ವಿವರಣೆಯು ಸರಿಯಾಗಿರುವಪಕ್ಷೆ  ಅಜಮಿಳನು  ಮಗನನ್ನು ಕರೆದಮಾತ್ರಕ್ಕೆ ಹೇಗೆ ವೈಕುಂಠಪ್ರಾಪ್ತಿಯಾಯಿತು? ಎಂಬ ಪ್ರಶ್ನೆ ಏಳುವುದು ಸಹಜವಲ್ಲವೇ? ಭಾಗವತವೇ ಹೇಳುವಂತೆ ಅಜಮಿಳನು ಹಿಂದೆ ಶ್ರೋತ್ರಿಯನೂ, ಸದಾಚಾರ್ರಸಂಪನ್ನನೂ  ಆಗಿದ್ದನು. ಕೊನೆಯಕಾಲದಲ್ಲಿ ಮಗನನ್ನು ಕರೆಯುವಾಗ ಆತನಿಗೇ ತಿಳಿಯದೆ ಹಿಂದಿನ ಸಂಸ್ಕಾರವು ಪ್ರಬೋಧಗೊಂಡು ಅವನಿಂದ ಹೊರಟ ನಾರಾಯಣ ನಾಮೋಚ್ಚಾರಣೆಯು ಹಿಂದೆ ಆಗುತ್ತಿದ್ದಂತೆ ಸಕ್ರಮವಾಗಿಯೇ ಮೂಡಿಬಂದಿತು. ಅದರ ಫಲವಾಗಿ ವಿಷ್ಣುದೂತರು ಆತನನ್ನು ಯಮಭಟರಿಂದ ರಕ್ಷಿಸಲು ಬಂದರೆಂಬುದು ಸತ್ಯವಾದರೂ, ಕೂಡಲೇ ಆತನನ್ನು ವೈಕುಂಠಕ್ಕೊಯ್ದರು ಎಂದು ಭಾಗವತವು ಹೇಳುತ್ತಿಲ್ಲ ಎಂಬಂಶದಕಡೆ ಗಮನವನ್ನು ಸೆಳೆಯುತ್ತಾರೆ ಶ್ರೀಗುರು. ಆತನು ಮತ್ತೆ ಗಂಗಾತೀರದಲ್ಲಿ ತಪಸ್ಯೆಯನ್ನಾಚರಿಸಿ ಯೋಗಸಮಾಧಿಯನ್ನೇರಿದ ನಂತರವೇ ವೈಕುಂಠಪ್ರಾಪ್ತಿಯಾಯಿತು. "ಕಥೆಯ ಮಧ್ಯಭಾಗವನ್ನು ಮಾತ್ರ ತೆಗೆದುಕೊಂಡು 'ಸೌಲಭ್ಯಸಿಂಧು'ವಿನ ಸುಳ್ಳುಸಿದ್ಧಾಂತ ಮಾಡಬಾರದು" ಎಂದು ಶ್ರೀಗುರುವು ಎಚ್ಚರಿಸಿದರು. 'ಹಾಗಾದರೆ ಭಗವನ್ನಾಮವನ್ನು ಹೇಗೆ ಉಚ್ಛರಿಸಿದರೂ ಒಳ್ಳೆಯದೆಂಬ ಭಕ್ತರ ಮಾತಿಗೆ ಅರ್ಥವೇನು? ನಾರಾಯಣನಾಮಸ್ಮರಣೆಗೂ ಭಾಗವತ್ಪ್ರಾಪ್ತಿಗೂ ಬಹಳ ದೂರದ ಸಂಬಂಧವೇ?' ಎಂಬ ಸಂಶಯವನ್ನು ಶಿಷ್ಯರು ವ್ಯಕ್ತಪಡಿಸಿದರು.

ಗುರುಗಳು  "ನಾರಾಯಣನಾಮಸ್ಮರಣೆಯನ್ನು ಸದ್ಗುರುವಿನ ಉಪದೇಶದಂತೆ ನಿಷ್ಠೆಯಿಂದ ವಿಧಿ-ವಿಜ್ಞಾನಸಹಿತವಾಗಿ ಮಾಡಿದಾಗ ಅದು ಮಂತ್ರಯೋಗವಾಗುವುದು. ಆಗಮ ಶಾಸ್ತ್ರಕ್ಕನುಗುಣವಾದ ಮಾಟ, ನೋಟ, ಅಳತೆಗಳಿಂದ ಕೂಡಿ,  ಜ್ಞಾನಿಗಳಿಂದ ಪ್ರತಿಷ್ಠಿತವಾಗಿ ಚೈತನ್ಯತುಂಬಿಸಲ್ಪಟ್ಟ  ಭಗವಂತನ ಮೂರ್ತಿಗೆ ನಿತ್ಯವೂ ವಿಧಿಪೂರ್ವಕ ಪೂಜಾದಿಗಳು ನಡೆಯುವಪಕ್ಷಕ್ಕೆ  ಅಂತಹ ಮೂರ್ತಿಯಸ್ಮರಣೆಯು ಮನಸ್ಸಿನಲ್ಲಿ ಏಕಾಗ್ರತೆಯನ್ನು ಮೂಡಿಸಿ ಭಾಗವತ್ಪ್ರಾಪ್ತಿಗೆ ಸಾಧನವಾಗುವುದು.  ಸಾಮಾನ್ಯರೂ ಇದನ್ನು ಅನುಸರಿಸಬಹುದಾಗಿದೆ. ಆದ್ದರಿಂದಲೇ ಇದು ಸುಲಭೋಪಾಯವೆನಿಸಿಕೊಂಡಿದೆ. ಇದು ಅಷ್ಟಾಂಗಯೋಗಕ್ಕೆ ಉತ್ತಮವಾದ ಸಾಧನವಾಗಿದೆ" ಎಂಬುದಾಗಿ ತಿಳಿಸಿ ಸಾಧುಸಂತರ ಮಾತನ್ನು ಗ್ರಹಿಸಲು ಬೇಕಾದ ದೃಷ್ಟಿಕೋನವನ್ನು ಕರುಣಿಸಿದರು.  ಈ ಗುಟ್ಟು ತಿಳಿಯದೆ  ಸ್ವಚ್ಚಂದವರ್ತನೆಯಿಂದಿದ್ದು ಮಧ್ಯೆ-ಮಧ್ಯೆ ಕಾರಣಾಂತರದಿಂದ ಮಾಡುವ ನಾರಾಯಣನಾಮಸ್ಮರಣೆಯೇ  ಮುಕ್ತಿನೀಡುತ್ತದೆ ಎಂದುಕೊಳ್ಳುವುದು ಸರ್ವಥಾ ಸರಿಯಲ್ಲ ಎಂಬುದನ್ನು ಉದಾಹರಣೆಗಳ ಮೂಲಕವೂ ಶಾಸ್ತ್ರವಾಕ್ಯಗಳ ಆಧಾರದಮೂಲಕವೂ ವಿಚಾರಪರತೆ ಯಿಂದ ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದರು.

ಸೂಚನೆ: 19/05/2020 ರಂದು ಈ ಲೇಖನ ವಿಜಯವಾಣಿ ಲ್ಲಿ ಪ್ರಕಟವಾಗಿದೆ.