Friday, June 26, 2020

ಮೂರು ಶಿಕ್ಷಣ ಪದ್ಧತಿಗಳು (Muru Sikshana Paddhatigalu )

ಲೇಖಕರು: ಡಾ ।। ಮೋಹನ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)



ರಾ
ಮದಾಸ-ಶ್ರೇಷ್ಠಿಗೆ ಮೂವರು ಗಂಡು ಮಕ್ಕಳು. ಮೂವರೂ ಚುರುಕು ಬುದ್ಧಿಯುಳ್ಳವರೂ, ವಿದ್ಯಾವಂತರಾದರೂ ಸ್ನೇಹಿತರೊಡನೆ ಅಡ್ಡಾಡುತ್ತಾ ಬೇಜವಾಬ್ದಾರಿಯಿಂದ ಕಾಲ ಕಳೆಯುತ್ತಿದ್ದರು. ತಂದೆ-ತಾಯಿಯರನ್ನು ವಯೋಧರ್ಮ ಬಾಧಿಸುತ್ತಿತ್ತು. ಅಂಗಡಿ ವ್ಯಾಪಾರ, ಹೊಲ ಗದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತಾ ಬಂತು. ಚಿಂತಾಕ್ರಾಂತರಾಗಿ, ಮಕ್ಕಳನ್ನು ಸದ್ಧರ್ಮದೆಡೆಗೆ ಕರೆತರುವ ಬಗೆಯ ಹುಡುಕ ತೊಡಗಿದರು. ಒಮ್ಮೆ ಶ್ರೇಷ್ಠಿಗಳು ಮೂವರನ್ನೂ ಕರೆದು, ವರ್ಷದ ಕರ-ಮತ್ತಿತರ ಕಾಣಿಕೆಗಳನ್ನು ರಾಜನಿಗೆ ತಲುಪಿಸಿ ಬರಲು ನೇಮಿಸಿದರು. ಕಪ್ಪಕಾಣಿಕೆಗಳನ್ನು ಸ್ವೀಕರಿಸಿ, ರಾಜನು ಪ್ರಸಿದ್ಧವಾದ ಶ್ರೇಷ್ಠಿಗಳ ಕುಶಲ ಸಮಾಚಾರ, ಅಂತೆಯೇ ಮಕ್ಕಳ ಆಗುಹೋಗುಗಳನ್ನು ವಿಚಾರಿಸಿಕೊಂಡ. 'ವಾರ್ಧಕ್ಯದಲ್ಲಿ ತಂದೆತಾಯಿಯರನ್ನು ಸಲಹುವುದು ಧರ್ಮ. ನಮ್ಮ ರಾಜ್ಯದ ನಿಯಮ ಕೂಡ. ಕೂಡಲೇ  ವೃತ್ತಿಜೀವನದಲ್ಲಿ ಉದ್ಯುಕ್ತರಾಗಿ !' ಎಂಬಆದೇಶವನ್ನಿತ್ತ. ಹಿರಿಯ ಮಗ ರಾಜಾಜ್ಞೆಗೆ ಬಾಗಿ ಮರುದಿನದಿಂದಲೇ ಮನೆಯ ಜವಾಬ್ದಾರಿಗಳಲ್ಲಿ ಪಾಲ್ಗೊಂಡನು. ಆದರೆ ತಮ್ಮಂದಿರಿಬ್ಬರು ಬೇಜವಾಬ್ದಾರಿಯನ್ನು ಮುಂದುವರೆಸಿದರು. ಅಣ್ಣನು ತಮ್ಮಂದಿರನ್ನು ಪ್ರತ್ಯೇಕವಾಗಿ ಕರೆದು "ಅಂತೂ ಒಂದು ವಿಷಯ ಹೇಳಬೇಕು ಕಣ್ರಪ್ಪಾ. ! ವ್ಯಾಪಾರ ನಡೆಸುವುದು ಏನೋ ಬೇಜಾರು ಕೆಲಸ ಅಂದುಕೊಂಡುಬಿಟ್ಟಿದ್ದೆ. ಆದರೆ ತುಂಬಾ ಸ್ವಾರಸ್ಯ ಇದು! ಈಗ ನನಗೆ ಸಿಗುವ ಮರ್ಯಾದೆ ಅಪಾರ  ! ನೀವುಗಳು ಒಳ್ಳೆಯ ಅವಕಾಶ ಕಳೆದುಕೊಂಡ್ರಿ. ನಾನು ಅಣ್ಣನಾಗಿ ಅಲ್ಲ, ನಿಮ್ಮೊಡನೆ ಅಡ್ಡಾಡುತ್ತಿದ್ದ ಮಿತ್ರನಾಗಿ ಹೇಳುತ್ತೇನೆ".ಎಂದನು. ಮರುದಿನವೇ ತಮ್ಮನೊಬ್ಬನು ಅಂಗಡಿಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡ. ಆದರೆ ಕೊನೆಯ ತಮ್ಮ ತಿದ್ದುಕೊಳ್ಳದೇ,  ಜೂಜು, ಮದ್ದು ಮುಂತಾದ ಚಟಗಳಲ್ಲಿ ಇನ್ನೂ ಆಳಕ್ಕೆ ಮುಳುಗಿದ. ತಾಯಿಯು ಅವನಿಗೆ  ಒಂದು ಹುಡುಗಿಯನ್ನು ತೋರಿಸಿ ಮದುವೆಯಾಗುವೆಯಾ? ಎಂದು ಕೇಳಿದರು. ಆಕೆಯ ಸೌಂದರ್ಯಕ್ಕೆ ಬೆರಗಾಗಿ ಒಪ್ಪಿಕೊಂಡ. ಹೆಂಡತಿ ಮೃದು-ಸೌಮ್ಯ ಸ್ವಭಾವದವಳು, ಬಹಳ ಚತುರೆ ಕೂಡ. ಸುಲಭವಾಗಿ ಗಂಡನನ್ನ ವಶಕ್ಕೆ ತೆಗೆದುಕೊಂಡಳು. ಆಕೆಯ ಮಾತು ತಳ್ಳಿಹಾಕಲಾರದೆ ಕ್ರಮೇಣ ನೇರ ದಾರಿಯನ್ನ ಹಿಡಿದ. ತಂದೆ-ತಾಯಿಯರು ನೆಮ್ಮದಿಯಿಂದ ಕೊನೆಯ ಕಾಲವನ್ನು ತೃಪ್ತಿ-ಸಂತೋಷದಿಂದ ಜಪ-ತಪಾದಿಯಲ್ಲಿ ಕಳೆದರು.

ಇದು ಭಾರತೀಯ ಶಿಕ್ಷಣ ಪದ್ಧತಿಯ ಒಂದು ಕಥೆಯಾಗಿದೆ. ಭಾರತದ ಮಹರ್ಷಿಗಳು ತಪೋಧನರು. ಅಪಾರವಾದ ಸಂತೋಷದ ಗಣಿಯನ್ನು ತಮ್ಮೊಳಗೇ ಕಂಡುಕೊಂಡಿದ್ದರು. ಜೊತೆಯಲ್ಲಿ ವಸುಧೆಯು ಕೊಡಲು ಬಯಸುವ ಸಂಪತ್ತನ್ನು ಅನುಭವಿಸುವ ವಿಧಾನವನ್ನೂ, ಕಾಮನೆಗಳನ್ನು ಈಡೇರಿಸಿಕೋಳ್ಳುವ ವಿಧಾನಗಳನ್ನೂ ಹಾಕಿಕೊಟ್ಟಿದ್ದರು. ಒಳಧರ್ಮ ಮತ್ತು ಅರ್ಥ-ಕಾಮದ ಸೌಖ್ಯ ಎರಡನ್ನೂ ತೂಗಿಸಿಕೊಂಡು ಹೋಗುವುದೇ ಅವರ ಮಂತ್ರ. ಅಂತಹ ಜೀವನಶೈಲಿ ತಾವೂ ನಡೆಸಿ, ಜೀವನ-ಸಮಾಜ-ರಾಷ್ಟ್ರದಲ್ಲೂ ಬೆಳಸಿದರು. ಇದೇ ಸನಾತನ ಭಾರತದ ಸಾರ. ಇಂತಹ ವ್ಯವಸ್ಥೆಯನ್ನು ದೇಶದ ಉದ್ದ-ಅಗಲಕ್ಕೂ ಜಾರಿಗೊಳಿಸಬೇಕಾದರೆ ಸೂಕ್ತ ಶಿಕ್ಷಣಪದ್ಧತಿ ಬೇಕು. ನಾನಾ ಅಭಿರುಚಿಗಳಿಂದ ಕೂಡಿದ ಜನರನ್ನೂ, ಅವರ ಮನಸ್ಸನ್ನೂ ಪರಿವರ್ತಿಸಬೇಕು. ಆತ್ಮಧರ್ಮದ ಮಾರ್ಗಕ್ಕೆ ತರಬೇಕು.

ಈ ಜನಸಮೂಹವು ಶ್ರೇಷ್ಠಿಯ ಮೂರು ಮಕ್ಕಳಂತೆ. ಅವರಿಗೆ ವೇದ, ಉಪನಿಷತ್ತು, ಶಾಸ್ತ್ರಗಳ ಮೂಲಕ ಧರ್ಮಶಿಕ್ಷಣ ನೀಡುತ್ತಿದ್ದರು. ಉಪನಿಷದ್ವಾಣಿಯು ಧೀರಗಂಭೀರವಾಗಿ, ರಾಜಾಜ್ಞೆಯಂತೆ ಒಳತಪೋಭೂಮಿಯ ಸಮಾಚಾರವನ್ನು ಸಾರುತ್ತದೆ. "ಸತ್ಯಂ ವದ ! ಧರ್ಮಮ್ ಚರ ! ಸ್ವಾಧ್ಯಾಯಾನ್ಮಾಪ್ರಮದ:" ಸತ್ಯವನ್ನೇ ನುಡಿ, ಧರ್ಮಮಾರ್ಗದಲ್ಲಿ ಚರಿಸು ಎಂದು ಅಪ್ಪಣೆ ಮಾಡುತ್ತದೆ. ಸ್ವಾಧ್ಯಾಯದ ಮಾರ್ಗದಿಂದ ವಿಮುಖವಾಗಬೇಡ ಎಂಬ ಎಚ್ಚರಿಕೆ ಇಲ್ಲಿದೆ. "ಏಷ ಆದೇಶ: ಏಷ ಉಪದೇಶ:" ಆದೇಶ, ಉಪದೇಶದ ಧ್ವನಿ ಇಲ್ಲಿದೆ. ಇದು ರಾಜನ ಆಜ್ಞೆಯಂತೆ ಗಂಭೀರವಾಗಿ ಮೊಳಗುತ್ತದೆ. ಜನರ ಮನಸ್ಸಿನಲ್ಲಿ ಸ್ಥಬ್ಧತೆಯನ್ನುಂಟುಮಾಡುತ್ತದೆ. ವಿಸ್ಮಯದ ಒಂದು ರಸನಿಮಿಷದಲ್ಲಿ ಜನರ ಮನಗಳನ್ನು ಸೆಳೆದೊಯ್ಯುತ್ತದೆ. ಆದರಿಂದಲೇ ವೇದೋಪನಿಷತ್ತು ಮತ್ತು ಶಾಸ್ತ್ರಗಳನ್ನು ಪ್ರಭುಸಮ್ಮಿತ ಎಂದು ಕರೆಯುತ್ತಾರೆ. ಹಿರೇಮಗನಂತೆ ರಾಜಾಜ್ಞೆಯನ್ನು ಪಾಲಿಸುವರು ಕೆಲವರು.

ಆದರೆ ಕಿರಿಯ ಇಬ್ಬರು ಮಕ್ಕಳಂತೆ ಅನೇಕರಿಗೆ ಇದು ರುಚಿಸುವುದಿಲ್ಲ. ಅವರು ಬಂಡಾಯ ಏಳುತ್ತಾರೆ. ನೇರವಾಗಿ ಉಪದೇಶ ಮಾಡದೆ, ಪರೋಕ್ಷವಾಗಿ ಕಥೆ-ಉಪಾಖ್ಯಾನಗಳ ಮಾಧ್ಯಮದಿಂದ ಧರ್ಮಮಾರ್ಗದ ಸೌಖ್ಯವನ್ನು ಹೇಳಬೇಕು. ಅಧರ್ಮದ ದುಷ್ಪರಿಣಾಮವನ್ನು ತಿಳಿಸಬೇಕು. ಮಿತ್ರನಂತೆ ಉಪಾಯವಾಗಿ ಈ ಕೆಲಸವನ್ನು ಮಾಡುವುದರಿಂದ ಪುರಾಣ-ಇತಿಹಾಸಗಳನ್ನು ಮಿತ್ರಸಮ್ಮಿತವೆಂದು ಕರೆಯುತ್ತಾರೆ. ಹಿರಣ್ಯಕಶಿಪುವಿನ ಅಧರ್ಮ - ಪ್ರಹ್ಲಾದನ ಭಕ್ತಿ; ಕೌರವರ ದುರಹಂಕಾರ - ಪಾಂಡವರ ಧರ್ಮನಿಷ್ಠೆ; ನಹುಷನ ಪತನ - ಅಜಾಮಿಳನ ಉದ್ಧಾರ; ಅನೇಕ ಉದಾಹರಣೆಗಳು ಕಂಡುಬರುತ್ತವೆ. ಅನೇಕ ಕಥೆಗಳಲ್ಲಿ ಗುಪ್ತವಾಗಿ ತತ್ತ್ವಾರ್ಥಗಳನ್ನು ಹೆಣೆದಿರುತ್ತಾರೆ. ಧ್ರುವ ಐದು ವರ್ಷದ ಹುಡುಗನಾಗಿ ಘೋರ ತಪಸ್ಯೆ ಮಾಡಿ ನಾರಾಯಣನನ್ನು ಒಲಿಸಿಕೊಂಡ. ಅವನ ತಾಯೀ ಸುನೀತಿ. ಆದರೆ ಅವನತಂದೆಗೆ ಸುರುಚಿ ಎಂಬ ರಾಣಿಯಲ್ಲಿ ಹೆಚ್ಚು ಒಲವು. ಆದರಿಂದ ಸುನೀತಿಯ ಮಗನಾದ ಧ್ರುವನಿಗೆ ಅನ್ಯಾಯವಾಗುತ್ತಿತು. ಅನ್ಯಾಯವನ್ನು ಸಹಿಸದೆ ಮನೆ ಬಿಟ್ಟು ನಾರದ ಮಹರ್ಷಿಗಳಿಂದ ಉಪದೇಶ ಪಡೆದು ತಪಸ್ಯೆ ಕೈಗೊಳ್ಳುತ್ತಾನೆ. ನಾರಾಯಣನ ಅನುಗ್ರಹ ಪಡೆಯುತ್ತಾನೆ. ಶ್ರೀರಂಗಮಹಾಗುರುಗಳು ಈ ಕಥೆಯ ಮೂಲಕ ಮಹರ್ಷಿಗಳ ಪರೋಕ್ಷವಾದ ತತ್ತ್ವಸಂಯೋಜನೆಯ ನಿದರ್ಶನ ನೀಡುತ್ತಿದ್ದರು. ನಮಗೆ ಒಳ್ಳೆಯ ನೀತಿ - ಧರ್ಮಕ್ಕಿಂತ, ರುಚಿಯೇ ಹೆಚ್ಚು ಪ್ರಿಯ. ಸಕ್ಕರೆ ಖಾಯಿಲೆ ಇದ್ದವನಿಗೆ, ಸಂಯಮದ ಸುನೀತಿಗಿಂತ, ರುಚಿಯೇ ದೊಡ್ಡದಾದರೆ ಅನಾಹುತವೇ ಫಲ. ಸುನೀತಿಯನ್ನು ತೊರೆದ ರುಚಿ  ನಮ್ಮ ಮನೆಯಾದ ಶರೀರದಲ್ಲಿ ಅಲ್ಲೋಲಕಲ್ಲೋಲ ತರುತ್ತದೆ. ನೆಮ್ಮದಿ ಧ್ರುವ - ನಿಶ್ಚಲ ಮನಸ್ಸಿನಿಂದಬರುತ್ತೆ. ಧೃತಿ ಸುನೀತಿ- ಸದ್ಬುದ್ಧಿಯಿಂದಲೇ ಬರುತ್ತೆ. ಮನಸ್ತತ್ತ್ವ ಪ್ರತೀಕವಾದ ನಾರದರೇ ಮಾರ್ಗದರ್ಶಕರು. ಚಿತ್ತವು ಧ್ರುವವಾಗಿ ಪರಮಪುರುಷನಲ್ಲಿ ನೆಲೆಸಿದರೆ, ನಾರಾಯಣನ ದರ್ಶನ, ಶಾಶ್ವತವಾಗಿ ಅವನ ಸಾನ್ನಿಧ್ಯ. ಇದರ ಫಲ ದೊರೆಯಬೇಕಾದರೆ ಗುರುಮುಖೇನ ಮಿತ್ರಸಮ್ಮಿತಗಳ ಅಧ್ಯಯನ ಅವಶ್ಯಕ.

ಮೂರನೆಯ ಮಗ ಯಾವುದಕ್ಕೂ ಬಗ್ಗುವುದಿಲ್ಲ. ಲೋಭ, ಮೋಹ ಮದಗಳಿಗೆ ವಶನಾಗಿದ್ದಾನೆ. ಮದಿಸಿದ ಆನೆಯನ್ನು ಹಿಡಿಯಲು ಪಳಗಿದ ಆನೆ ಒಂದು ಬೇಕು ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಂಥವನನ್ನು ಛಲದಿಂದ ವಶಿಸಬೇಕು. ಸ್ತ್ರೀ ಪುರುಷನನ್ನು ವಶದಲ್ಲಿ ಮಾಡಿಕೊಳ್ಳುವ ಹಾಗೆ. ಈ ಉಪಾಯವನ್ನು ಬಳಸುವ ಕಾವ್ಯಗಳು ಕಾಂತಾಸಮ್ಮಿತೆಯೆಂದು ಪ್ರಸಿದ್ಧವಾಗಿವೆ. ಆದರೆ ಶೃಂಗಾರಾದಿ ರಸಗಳಿಂದ ಜನರ ಮನಗಳನ್ನು ಆಕರ್ಷಿಸಿ ಶಾಂತರಸದಲ್ಲೇ ನಿಲ್ಲಿಸುತ್ತವೆ. ನಾಯಕ-ನಾಯಕಿಯರ ಗುಣ-ಭಾವಗಳು ನಮ್ಮಲ್ಲಿ ಸಂಕ್ರಮಿಸುತ್ತವೆ. ಶ್ರೀಮದ್ರಾಮಾಯಣ ಆದಿಕಾವ್ಯವ ಆದರ್ಶಕಾವ್ಯವೆಂದೂ ಪ್ರಸಿದ್ಧ. ಸೀತಾರಾಮರ ಶೃಂಗಾರ, ರಾಮನ ವೀರ, ಅಗಲಿಕೆಯ ಕರುಣಾ ರಸ, ಯುದ್ಧದ ಭಯಾನಕ, ಬೀಭತ್ಸ, ರೌದ್ರ ರಸಗಳಿದ್ದರೂ, ಶ್ರೀರಾಮನ ಗಂಭೀರವೂ ಧೀರ-ಶಾಂತ ವ್ಯಕ್ತಿತ್ವವೂ ಪಲ್ಲವಿಯಂತೆ ಕಾವ್ಯದುದ್ದಕ್ಕೂ ಪ್ರಭಾವ ಬೀರುತ್ತದೆ. ರಾಮನ ವಿನಯ, ಭೂತದಯೆ, ನಮಗೇ ತಿಳಿಯದ೦ತೆ ನಮ್ಮಂತರಂಗದಲ್ಲಿ ಸದ್ಧರ್ಮದ ಬೀಜವನ್ನು ಬಿತ್ತರಿಸುತ್ತದೆ. ನಾರದ-ವಾಲ್ಮೀಕಿಗಳ ತಪಸ್ಸ್ವಾಧ್ಯಾಯದಲ್ಲಿ ಪ್ರಾರಂಭವಾದ ಕಾವ್ಯವು ಶಾಂತರಸದಲ್ಲೇ ಮಂಗಲಗೊಳ್ಳುತ್ತದೆ.

ಮಹರ್ಷಿಭಾರತದಲ್ಲಿ  ಧರ್ಮ-ಅರ್ಥ-ಕಾಮ-ಮೋಕ್ಷರೂಪವಾದ ಪುರುಷಾರ್ಥಗಳೇ ಜೀವನದ ಗುರಿ. ಅತ್ತ ಸಾಗಲಿಕ್ಕೆ ಮಾರ್ಗ ಮೂರು: ಪ್ರಭು-ಮಿತ್ರ-ಕಾಂತಾ ಸಮ್ಮಿತಗಳು. ಭಾರತ ಶಿಕ್ಷಣ ಪದ್ಧತಿಯ ಈ ಅನರ್ಘ್ಯರತ್ನಗಳನ್ನು ಬಳಸಿ ಬೆಳೆಸಿ ಬಾಳನ್ನು ಬೆಳಗಿಸಿಕೊಳ್ಳೋಣ.  

ಸೂಚನೆ: 25/06/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.