Thursday, June 11, 2020

ಸ್ತ್ರೀಯರಿಗೆ ಮಾತ್ರ ಪ್ರವೇಶ (Striyarige Matra Pravesa)

ಲೇಖಕರು: ಶ್ರೀಮತಿ. ಮೈಥಿಲೀ ರಾಘವನ್. 
 (ಪ್ರತಿಕ್ರಿಯಿಸಿರಿ lekhana@ayvm.in)



ಯದುವಂಶದ  ಕುಲಗುರು ಗರ್ಗಾಚಾರ್ಯರು ಶ್ರೀಕೃಷ್ಣನ ರಾಸಕ್ರೀಡೆಗೆ ಸಂಬಂಧಿಸಿದಂತೆ ವಿಚಿತ್ರಘಟನೆಯೊಂದನ್ನು ವಿವರಿಸುತ್ತಾರೆ. ಕೃಷ್ಣಭಕ್ತರೂ ಮಹಾತಪಸ್ವಿಯೂ ಆದ ಮಹರ್ಷಿಗಳೊಬ್ಬರು ಶ್ರೀಕೃಷ್ಣನ ದರ್ಶನಕ್ಕಾಗಿ ಹಾತೊರೆಯುತ್ತಮಹಾದೇವನೊಡನೆ ಬೃಂದಾವನಕ್ಕೆ ತೆರಳುತ್ತಾರೆ. ರಾಸಕ್ರೀಡೆಯನ್ನು ಕಣ್ತುಂಬನೋಡಿ ಆನಂದಿಸಬಯಸಿ  ಬಂದವರಿಗೆ ಅಚ್ಚರಿ ಕಾದಿತ್ತು. ಅಲ್ಲಿಯ ವೃಕ್ಷಗಳು ಗೋಪಿಕೆಯರ ರೂಪ ತಳೆದು ಕಾವಲಿಗೆ ನಿಂತಿದ್ದರು. ಇವರಿಬ್ಬರನ್ನೂ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ. "ಬೃಂದಾವನದಲ್ಲಿ ಸ್ತ್ರೀಯರಿಗೆ ಮಾತ್ರವೇ ಪ್ರವೇಶವುಂಟು. ಶ್ರೀಕೃಷ್ಣನೊಬ್ಬನೇ ಇಲ್ಲಿ ಪುರುಷ. ಆದ್ದರಿಂದ ನೀವುಗಳು ಸ್ತ್ರೀರೂಪತಳೆದರೆ ಮಾತ್ರ ಒಳಗೆ ಪ್ರವೇಶಿಸಬಹುದು" ಎನ್ನುತ್ತಾರೆ. ಮತ್ತೆ ಮುಂದುವರಿಸುತ್ತಾ "ಮಾನಸಸರೋವರದಲ್ಲಿ ಮುಳುಗಿ ಸ್ತ್ರೀರೂಪ ತಳೆದು ಬನ್ನಿ" ಎಂದು ಸಲಹೆ ನೀಡುತ್ತಾರೆ. ಅವರೀರ್ವರೂ ಅದರಂತೆಯೇ ಮಾನಸಸರೋವರದಲ್ಲಿ ಮುಳುಗಿ ಸ್ತ್ರೀರೂಪತಳೆದರು. ಬೃಂದಾವನವನ್ನು ಪ್ರವೇಶಿಸಿ ರಾಸಕ್ರೀಡೆಯ ವೈಭವವನ್ನು ಕಂಡು ತನ್ಮಯರಾಗಿ ಆನಂದತುಂದಿಲರಾದರು.

ಮೇಲಿನ ಘಟನೆ ವಿಚಿತ್ರವಾಗಿ ಕಾಣುತ್ತಿದೆ. ಸ್ತ್ರೀಯರೇ ಏಕೆ ಆಗಿರಬೇಕು? ಮಾನಸಸರೋವರಕ್ಕೆ ತೀರ್ಥಯಾತ್ರೆ ಮಾಡಿಬಂದವರನೇಕ ಪುರುಷರುಂಟು. ಅವರಲ್ಲಿ ಯಾರೂ ಸ್ತ್ರೀಯಾಗಿ ಪರಿವರ್ತನೆಗೊಂಡ ಸುದ್ದಿ ಇಲ್ಲಿವರೆಗೆ ತಿಳಿದುಬಂದಿಲ್ಲ. ಆದ್ದರಿಂದ ಮೇಲಿನ ಘಟನೆ ಕಾಲ್ಪನಿಕವೇ ಹೌದು ಎಂದೆನಿಸುತ್ತದೆ. ಪುರಾಣಗಳು ಮುಂತಾದ ಋಷಿಪ್ರಣೀತವಾದ ಗ್ರಂಥಗಳಲ್ಲಿ ಅನೇಕ ಘಟನೆಗಳು ತತ್ತ್ವಾರ್ಥಗರ್ಭಿತವಾಗಿರುತ್ತವೆ, ಕೆಲವು ಕ್ಲಿಷ್ಷವಾದ ತತ್ತ್ವಗಳನ್ನು ಸುಲಭವಾಗಿ ಮನವರಿಕೆಮಾಡಿಕೊಡಲು ಅಥವಾ ಸೂಚನಾಮಾತ್ರವಾಗಿ ತಿಳಿಸಿಕೊಡಲು ಕಥಾರೂಪದಲ್ಲಿ ವಿವರಿಸಿರುವುದುಂಟು.

ಮೇಲಿನ ಘಟನೆಯೂ ಸಹ ಉತ್ಕೃಷ್ಟವಾದ ವಿಚಾರವನ್ನೇ ತಿಳಿಸುತ್ತಿದೆ. ಇಲ್ಲಿ ಸ್ತ್ರೀರೂಪವೆನ್ನುವುದು ಹೊರ ರೂಪವಲ್ಲ. ಸೃಷ್ಟೀಶನಾದ ಭಗವಂತನೊಬ್ಬನೇ ಪುರುಷ-ಪರಮಪುರುಷ. ಇತರರೆಲ್ಲರೂ ಶ್ರೀಪತಿಯಾದ ಆತನನ್ನೇ ತಮ್ಮ ಪತಿಯಾಗಿ-ಸ್ವಾಮಿಯಾಗಿ ಭಾವಿಸಿ ಆತನಲ್ಲಿ ತನ್ಮಯರಾಗುವುದನ್ನು ಸ್ತ್ರೀಭಾವವೆಂಬುದಾಗಿ ಹೇಳಬಹುದಾಗಿದೆ. ಅಂತಹ ಸ್ತ್ರೀರೂಪ-ಭಾವವನ್ನು ತಾಳಿದಾಗ ಅಂತರಂಗದಲ್ಲಿ ರಮಿಸುವ ಭಗವಂತನ ದರ್ಶನ ಸಾಧ್ಯವೆಂಬ ಸತ್ಯವನ್ನೇ ಸಾರುತ್ತಿದೆ ಈ ಕಥೆ.
ಇನ್ನು ಮಾನಸಸರೋವರವೆಂಬುದು ಹಿಮಾಲಯಪ್ರಾಂತ್ಯದಲ್ಲಿನ ಒಂದು ಸರೋವರ. ಪವಿತ್ರವಾದ ಯಾತ್ರಾಸ್ಥಳ. ಈ ಹೊರ ಸರೋವರವು ನಮ್ಮ ಮನಸ್ಸಿನಾಳದಲ್ಲಿನ ಪವಿತ್ರಸ್ಥಾನದ ಹೊರನಕ್ಷೆ.  ಜ್ಞಾನಿಗಳ ಅನುಭವ - ಇಂತಹ ಸ್ತ್ರೀಭಾವವನ್ನು ಎಲ್ಲರೂ ತಳೆದು ಭಗವಂತನನ್ನು ಅನುಭವಿಸಬಹುದಾಗಿದೆ. 

ಸೂಚನೆ: 10/06/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.