Saturday, June 27, 2020

ಭಾರತೀಯರ ಸಂವಹನ ಮಾಧ್ಯಮ (Bharathiyara Sanvahana Madhyama)

ಲೇಖಕರು: ಶ್ರೀ ನರಸಿಂಹ ಭಟ್ಟ 
(ಪ್ರತಿಕ್ರಿಯಿಸಿರಿ lekhana@ayvm.in)ಇಂದು ನಾವು ಪ್ರಪಂಚದ ಯಾವುದೇ ಮೂಲೆಮೂಲೆಯಲ್ಲಿರುವ ಸುದ್ದಿಯನ್ನು ಕ್ಷಣಾರ್ಧದಲ್ಲಿ ವಾರ್ತಾಪತ್ರಿಕೆ, ದೂರದರ್ಶನ ಮತ್ತು ಅಂತರ್ಜಾಲದ ವ್ಯವಸ್ಥೆಗಳಿಂದ ಪಡೆಯುತ್ತಿದ್ದೇವೆ. ಹಾಗಾದರೆ ಇದಕ್ಕೂ ಹಿಂದೆ ಒಂದು ಕಡೆಯಿಂದ ಇನ್ನೊಂದು ಕಡೆ ಸುದ್ದಿ ತಲುಪುತ್ತಿರಲಿಲ್ಲವೇ? ಅಂದಿನ ಜನರು ಯಾವ ಮಾಧ್ಯಮವನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದರು? ಅಥವಾ ಇರಲೇ ಇಲ್ಲವೇ? ಇತ್ಯಾದಿ ಸಂಶಯಗಳು ಬರುತ್ತವೆ. ಹಿಂದೆಯೂ ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರಿಗೆ ತಿಳಿಸುತ್ತಿದ್ದರು ಎಂಬುದಕ್ಕೆ  ನಮಗೆ ಅನೇಕ ಪುರಾಣ, ಇತಿಹಾಸಕಥೆಗಳು ಸಿಗುತ್ತವೆ.

ಅಭಿಪ್ರಾಯವನ್ನು ತಲುಪಿಸಲು ಅನೇಕ ಮಾಧ್ಯಮಗಳಿವೆ. ಇಂದು ಅವುಗಳು ರೂಪಾಂತರ ಹೊಂದಿವೆ ಅಷ್ಟೇ. ಹಿಂದಿನ ಕಾಲದಲ್ಲಿ ಅತ್ಯಂತ ಸ್ಪಷ್ಟವಾಗಿ ಸುದ್ದಿಯನ್ನು ರವಾನಿಸುತ್ತಿದ್ದರು. ಅದರಿಂದ ನಿಖರವಾಗಿ ವ್ಯವಹಾರವನ್ನೂ ಮಾಡುತ್ತಿದ್ದರು.

ಇತಿಹಾಸ, ಕಾವ್ಯ, ಪುರಾಣಾದಿಗಳಲ್ಲಿ ಇವುಗಳ ಬಗ್ಗೆ ಅನೇಕ ಕಥೆಗಳು ಉಪಲಬ್ಧವಿದೆ. ಚಾಣಕ್ಯನ ಕಾಲದಲ್ಲಿ ಪಕ್ಷಿಯ ಕಾಲಿಗೆ ಪತ್ರವನ್ನು ಕಟ್ಟಿ  ಕಳುಹಿಸುತ್ತಿದ್ದರು ಎಂಬುದು ಒಂದು ಇತಿಹಾಸ. ಕಾವ್ಯಗಳಲ್ಲಿ ಶುಕಸಂದೇಶ, ಹಂಸಸಂದೇಶ, ಮೇಘಸಂದೇಶ ಇತ್ಯಾದಿ ಸಂದೇಶಮಾಧ್ಯಮಗಳ ಉಲ್ಲೇಖ ಸಿಗುತ್ತವೆ.
ಇವುಗಳನ್ನು ನಾವು ಕವಿಸಮಯ ಎಂದು ಭಾವಿಸಿದರೂ ಅಲ್ಲೊಂದು ಸಂವಹನವನ್ನು ಒಪ್ಪಲೇಬೇಕು. ಉದಾಹರಣೆಗೆ ವೇದಾಂತದೇಶಿಕರು 'ಹಂಸಸಂದೇಶ' ಎಂಬ ಕಾವ್ಯವನ್ನು ಬರೆದರು. ಅದರಲ್ಲಿ ಹಂಸದ ಮೂಲಕ, ರಾಮನು ತನ್ನ ಮಡದಿ ಸೀತೆಗೆ ಸಂದೇಶವನ್ನು ಕಳಿಸುವ ಸಾಹಿತ್ಯ ಸಿಗುತ್ತದೆ. ಇನ್ನೂ ಒಂದು ಪ್ರಸಿದ್ಧವಾದ ಕಾಳಿದಾಸನ ಮೇಘದೂತ ಕಾವ್ಯ. ಇಲ್ಲಿ ಪತ್ನೀವಿರಹದಿಂದ ಬಳಲಿದ ಒಬ್ಬ ಯಕ್ಷನು ತನ್ನ ಅಭಿಪ್ರಾಯವನ್ನು ಒಂದು ಮೋಡದ ಮೂಲಕ ತಿಳಿಸುವುದು ಅದ್ಭುತ. ಇಲ್ಲೂ ಕೂಡ ಮಾರ್ಗವನ್ನು ತಿಳಿಸುತ್ತಾ ತನ್ನ ವಿರಹಸಂದೇಶವನ್ನು ಮತ್ತು ಪತ್ನಿಯಿಂದ ಪ್ರತಿಸಂದೇಶವನ್ನೂ ತಿಳಿಸುವ ಭಾಗವನ್ನು ನಾವು ತಿಳಿಯಬಹುದು.

ಇನ್ನು ಪುರಾಣಗಳಲ್ಲಿ ಬಂದರೆ ನಳ- ದಮಯಂತಿಯರ ಮಧ್ಯೆ ಪ್ರೇಮಪತ್ರದ ರವಾನೆ ಒಂದು ಪಾರಿವಾಳದ ಮೂಲಕ ನಡೆದಿತ್ತು. ಇಲ್ಲಿ ಒಂದು ಪಕ್ಷಿಯನ್ನು ಮಾಧ್ಯಮವಾಗಿ ಸ್ವೀಕರಿಸಿದರು. ಇನ್ನು ಕೆಲವು ಕಡೆ ಒಬ್ಬ ವ್ಯಕ್ತಿಯನ್ನೋ, ಪ್ರಾಣಿಯನ್ನೋ, ಕಳಿಸುತ್ತಿದ್ದರು. ಇವೆಲ್ಲವೂ ಸಂದೇಶವನ್ನು ಕಳುಹಿಸಲು ಬಳಸುತ್ತಿದ್ದ ಲೌಕಿಕಮಾಧ್ಯಮ. ಅಂದರೆ ಇತಿಹಾಸದಲ್ಲಾಗಲಿ ಕವಿಸಮಯದಲ್ಲಾಗಲಿ ಮತ್ತು ಪುರಾಣದಲ್ಲಾಗಲಿ ಎಲ್ಲಾ ಕಡೆಗೂ ಒಂದು ಮೂರ್ತರೂಪವನ್ನು ಬಳಸುತ್ತಿದ್ದರೆ, ಇಂದಿನ ಸಂವಹನಮಾಧ್ಯಮ ಇದಕ್ಕೆ ಹೊರತಲ್ಲ. ಇಷ್ಟರಿಂದಲೇ ಪ್ರಾಚೀನ ಭಾರತೀಯರ ಸಂವಹನದ ಹಿರಿಮೆಯನ್ನು ಹೇಳಿದಂತಾಗುವುದಿಲ್ಲ. ಇವಕ್ಕೆಲ್ಲ ಕಳಶಪ್ರಾಯವಾದ ಇನ್ನೊಂದು ಅತ್ಯಂತ ಶ್ರೇಷ್ಠವಾದ ಮಾಧ್ಯಮವಿದೆ. ಇಲ್ಲಿ  ಯಾವುದೇ ಮೂರ್ತರೂಪ ಇಲ್ಲ.  ಅಲೌಕಿಕ ಸಂವಹನ. ಇದನ್ನೇ ಯೋಗಜಪ್ರತ್ಯಕ್ಷ,  ದಿವ್ಯದೃಷ್ಟಿಪ್ರದಾನ ಇತ್ಯಾದಿ ಶಬ್ದಗಳಿಂದ ನಾವು ಹೇಳಬಹುದು. ಒಬ್ಬ ಯೋಗಿಯಾದವನು ತನ್ನ ಮನಸ್ಸನ್ನು ಎಲ್ಲಿಗೆ ಬೇಕಾದರೂ ಕಳುಹಿಸಿ ಅಲ್ಲಿನ ಸಮಾಚಾರವನ್ನು ಕೂತಲ್ಲೇ ತಿಳಿದುಕೊಳ್ಳಬಹುದು. ಇದಕ್ಕೆ ಮಹಾಭಾರತ ಮುಂತಾದ ಕಡೆ ಉದಾಹರಣೆಯನ್ನು ನೋಡಬಹುದು. ಇದಕ್ಕೆ ಕಾರಣ ಅವರಲ್ಲಿದ್ದ ದಿವ್ಯದೃಷ್ಟಿಯ ಪ್ರಭಾವದಿಂದ ಅವರು ಬಯಸಿದ ಎಲ್ಲ ಪದಾರ್ಥದ ಆಮೂಲಾಗ್ರ ಪರಿಚಯವನ್ನು ಪಡೆಯಬಹುದಿತ್ತು. ಇದೊಂದು ನಿಖರವಾದ ಮಾಹಿತಿಯಾಗಿ ಇಂದಿಗೂ ಅಳಿಯದೇ ನಮ್ಮವರೆಗೂ ಬಂದಿದೆ ಎಂಬುದು ಅದ್ಭುತ. ಹಾಗೆ ಹುಟ್ಟಿರುವುದೇ ವೇದ,ಶಾಸ್ತ್ರ, ಪುರಾಣ, ಇತಿಹಾಸಗ್ರಂಥಗಳು. ಒಂದು ಉದಾಹರಣೆಯನ್ನು ನೋಡುವುದಾದರೆ ಮಹಾಭಾರತದಲ್ಲಿ, ಸಂಜಯನು ತನಗೆ ಅನುಗ್ರಹಿತವಾದ ದಿವ್ಯದೃಷ್ಟಿಯ ಪ್ರಭಾವದಿಂದ ಧೃತರಾಷ್ಟ್ರನಿಗೆ ಯುದ್ಧದ ವಾರ್ತೆಯನ್ನು ಸಮಗ್ರವಾಗಿ ತಿಳಿಸುತ್ತಿದ್ದನು. ಈ  ಕಾರಣಕ್ಕೆ ಪ್ರಾಚೀನ ಕಾಲದಲ್ಲಿ ಅಷ್ಟೊಂದು ಮೂರ್ತಸಂವಹನ ಮಾಧ್ಯಮ ಇರಲಿಲ್ಲವಾದರೂ ಅದಕ್ಕಿಂತ ಬಲಿಷ್ಠವಾದ ಅಭಿಪ್ರಾಯ ಸಂವಹನವನ್ನು ನಾವು ವೇದೋಪನಿಷತ್ತುಗಳಲ್ಲಿ ಕಾಣಬಹುದು. ಶಂಕರ ಭಗವತ್ಪಾದರ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ತಿಳಿಸಿದಂತೆ ಗುರು ದಕ್ಷಿಣಾಮೂರ್ತಿ ಮೌನದಿಂದಲೇ ಪರತತ್ತ್ವವನ್ನು ವ್ಯಾಖ್ಯಾನಿಸಿ ಶಿಷ್ಯರ ಸಂಶಯಗಳನ್ನು ನಿವಾರಣೆ ಮಾಡಿದ್ದರ ಆದರ್ಶವುಂಟು. " ನಾವು ಮಾಡುವ ಕೆಲಸವೆಲ್ಲವೂ ಇಂದ್ರಿಯಗಳಿಗೆ ಸಂಬಂಧಿಸಿದುದು.ಆದರೆ ಮಹರ್ಷಿಗಳ ಜೀವನ ಆತ್ಮಾವಲಂಬಿ ಜೀವನ. ನಾವು ಇಂದ್ರಿಯಗಳಿಂದ ಇಂದ್ರಿಯಗಳಿಗೆ ಬೇಕಾದ ವಿಷಯಗಳನ್ನು ಹೇಗೆ ಗ್ರಹಿಸುತ್ತೇವೆಯೋ ಹಾಗೆ ಅವರು ಆತ್ಮನ ಮೂಲಕ ಜೀವನಕ್ಕೆ ಬೇಕಾದ ಎಲ್ಲ ವಿಷಯಗಳನ್ನೂ ಅರಿಯುತ್ತಾರೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಋಷಿ ಸಂವಹನವನ್ನು ಋಷಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲವೇ ಪೂರ್ವಾಗ್ರಹ ರಹಿತರಾಗಿ ಅವರ ಸಾಹಿತ್ಯದಿಂದ ಅರ್ಥಮಾಡಿಕೊಳ್ಳಬೇಕು.   

ಸೂಚನೆ:  27/06/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ